CONNECT WITH US  

14 ತಿಂಗಳು ಕಳೆದರೂ 14 ಲಕ್ಷ ರೂ. ಬಳಕೆಯಾಗಿಲ್ಲ

ಕೆ.ಆರ್‌.ಪೇಟೆ: ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ತಕ್ಷಣ ಕಾಮಗಾರಿ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆ ಮಾಡಿಕೊಂಡಿರುವ ಪುರಸಭೆಯವರು ಹಣ ಬಿಡುಗಡೆಯಾಗಿ ಹದಿನಾಲ್ಕು ತಿಂಗಳು ಕಳೆದಿದ್ದರೂ ಆ ಹಣವನ್ನು ಖರ್ಚು ಮಾಡಿ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಕೆಲಸ ಮಾಡಿಲ್ಲ, ಜನರು ಮಾತ್ರ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಪಟ್ಟಣಕ್ಕೆ ಕುಡಿಯುವ ನೀರನ್ನು ಸುಮಾರು ಹತ್ತು ಕಿ.ಮೀ ದೂರದ ಹೇಮಗಿರಿಯಲ್ಲಿರುವ ಹೇಮಾವತಿ ನದಿಯಿಂದ ಪಡೆದುಕೊಳ್ಳುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಬರಗಾಲದಿಂದಾಗಿ ಹೇಮಾವತಿ ನದಿ ಬತ್ತಿಹೋಗಿ ಪಟ್ಟಣದ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗಿತ್ತು. ಆಗ ಪುರಸಭೆ ಆಡಳಿತ ಮಂಡಳಿ ತುರ್ತು ಸಭೆ ಕರೆದು
ಪಟ್ಟಣದಲ್ಲಿಯೇ ಕೊಳವೆ ಬಾವಿಗಳನ್ನು ಕೊರೆಸಿ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಹಣ ಬಿಡುಗಡೆ ಮಾಡುವಂತೆ 05.06.2017 ರಂದು ಶಾಸಕರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. 

ಆ ಸಮಯದಲ್ಲಿ ಪಟ್ಟಣದ 23 ವಾರ್ಡ್‌ಗಳ ಪೈಕಿ ಮೂರು ವಾರ್ಡ್‌ಗಳಿಗೆ ಒಂದರಂತೆ ಏಳು ಕಡೆಗಳಲ್ಲಿ ಹೊಸದಾಗಿ ಬೊರ್‌ವೆಲ್‌ ಕೊರೆಸಿ ಹೊಸ ಮೋಟಾರ್‌ ಬಿಟ್ಟು ಒಂದು ನೀರಿನ ಟ್ಯಾಂಕ್‌ ಕೂರಿಸಲು 14.86 ಲಕ್ಷ ರೂ. ಮೌಲ್ಯದ ಅಂದಾಜು ಪಟ್ಟಿ ತಯಾರು ಮಾಡಲಾಗಿತ್ತು.

10 ದಿನದಲ್ಲಿ ಹಣ ಬಿಡುಗಡೆ: ಬರಗಾಲದಿಂದ ಜನರು ಕುಡಿಯುವ ನೀರಿಗೆ ಪರದಾಡುತ್ತಿರುವ ವರದಿಗಳನ್ನು ದಿನಪತ್ರಿಕೆ ಮತ್ತು ಇತರ ಮೂಲಗಳಿಂದ ಪಡೆದುಕೊಂಡಿದ್ದ ಜಿಲ್ಲಾಡಳಿತ ಮತ್ತು ಟಾಸ್ಕ್ಫೋರ್ಸ್‌ ತಂಡ ತಕ್ಷಣ ಇವರ
ಮನವಿಯನ್ನು ಪುರಸ್ಕರಿಸಿ ಹತ್ತೆ ದಿನಗಳಲ್ಲಿ ಅಂದರೆ 16.06.2017 ರಂದು ಪತ್ರ ಸಂಖ್ಯೆ (7)17/2017-18 ರಂದು ಕಾಮಗಾರಿ ಮಾಡಲು ಅನುಮೋದನೆ ನೀಡಿತ್ತು. ಹಣ ಬಿಡುಗಡೆ ಮಾಡಿಸಿಕೊಳ್ಳಲು ತೋರಿದ್ದ ಉಸ್ತುಕತೆಯನ್ನು
ಸ್ಥಳೀಯ ಪುರಸಭೆ ಅಧಿಕಾರಿಗಳು ಆ ಹಣ ಬಳಕೆಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೀಡುವಲ್ಲಿ ತೋರಲಿಲ್ಲ. ಹಣ ಬಿಡುಗಡೆಯಾಗಿ 14 ತಿಂಗಳು ಕಳೆಯುತ್ತಿದ್ದು ಒಂದೂ ಕಾಮಗಾರಿ ಮುಕ್ತಾಯ ಮಾಡಿಲ್ಲ. ಎರಡು ಕಡೆಗಳಲ್ಲಿ ಕೆಲಸ ಪ್ರಾರಂಭ ಮಾಡಿ ಮತ್ತೆ ಸ್ಥಗಿತ ಮಾಡಿರುವುದನ್ನು ಬಿಟ್ಟರೆ ಇನ್ನುಳಿದ ಐದು ಕಾಮಗಾರಿ ಆರಂಭಿಸಿಲ್ಲ. 

ಎಂಜಿನಿಯರ್‌ ನಿರ್ಲಕ್ಷ್ಯ: ಪುರಸಭೆಯಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವ ಜವಾಬ್ದಾರಿ ಹೊಂದಿದ್ದ ಕಿರಿಯ ಎಂಜಿನಿಯರ್‌ ಸೌಮ್ಯಾ ಪುರಸಭೆಗೆ ಬಂದಾಗಿನಿಂದ ಅವರು ಕೆಲಸ ಮಾಡಿದ್ದಕ್ಕಿಂತ ರಜೆಯಲ್ಲಿ ಕಾಲ ಕಳೆಯುತ್ತಿರುವುದೇ ಹೆಚ್ಚು. ಇಂಥ ನಿರ್ಲಕ್ಷ್ಯ ವ್ಯಕ್ತಿಗೆ ಸಾರ್ವಜನಿಕರಿಗೆ ಅತ್ಯವಶ್ಯ ಇರುವ ಕುಡಿಯುವ ನೀರಿನ ಸರಬರಾಜು ವಿಭಾಗ ನೀಡಿದ್ದು, ಕಾಮಗಾರಿಗೆ ಹಿನ್ನೆಡೆಯಾಗಲು ಕಾರಣವಾಗಿದೆ. ಇವರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕ ನಾರಾಯಣಗೌಡ ಲಿಖೀತ ಪತ್ರ ಬರೆದಿದ್ದರೂ ಜಿಲ್ಲಾಧಿಕಾರಿ ಸೂಕ್ತ ಕಾನೂನು ಕ್ರಮ ಜರುಗಿಸದೇ ಇರುವುದರಿಂದಲೇ ಪುರಸಭೆಯಲ್ಲಿ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಕ್ಷಣ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತುರ್ತು ಕಾಮಗಾರಿ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಇತರೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಜೊತೆಗೆ ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯವಾಗಿದೆ.

ಕುಡಿಯುವ ನೀರಿನ ಸರಬರಾಜು ಕಾಮಗಾರಿ ತುರ್ತಾಗಿ 30 ದಿನಗಳಲ್ಲಿ ಮಾಡಬೇಕಾಗಿರುವುದರಿಂದ 14 ತಿಂಗಳು
ವಿಳಂಬ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕರ ಸೇವೆ ಲಭ್ಯವಿರಬಹುದು. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ.
 ಮೂರ್ತಿ, ಪುರಸಭಾ ಮುಖ್ಯಾಧಿಕಾರಿ

ನಮ್ಮ ಬೀದಿಯಲ್ಲಿ ಒಂದು ಹನಿ ಕುಡಿಯುವ ನೀರು ಬರುತ್ತಿಲ್ಲ. ನಾವುಗಳು ಸುಮಾರು ಒಂದು ಕಿ.ಮೀ ದೂರದಲ್ಲಿರುವ ಬೀದಿ ನಲ್ಲಿಗಳಲ್ಲಿ ಅಥವಾ ಜಮೀನುಗಳಲ್ಲಿರುವ ಕೊಳವೆ ಬಾವಿಗಳಿಂದ ಕುಡಿಯುವ ನೀರು ತರುತ್ತಿದ್ದೇವೆ. ಈ ಬಗ್ಗೆ
ನಮ್ಮ ಬಡಾವಣೆಯಿಂದ ಗೆದ್ದಿರುವ ಸದಸ್ಯರನ್ನು ಕೇಳಿದರೆ ಒಂದು ವಾರದಲ್ಲಿ ಹೊಸ ನೀರಿನ ಟ್ಯಾಂಕ್‌ ನಿಮ್ಮ ರಸ್ತೆಯಲ್ಲಿ ನಿರ್ಮಾಣ ಮಾಡುತ್ತೇವೆ ಕಾಯಿರಿ ಎಂದು ಕಳೆದ ಒಂದು ವರ್ಷದಿಂದಲೂ ಹೇಳಿದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಇಲ್ಲಿಯವರೆಗೆ ನಮಗೆ ಮಾತ್ರ ನೀರು ಸಿಗುತ್ತಿಲ್ಲ.
  ದೇವಮ್ಮ, 21 ವಾರ್ಡ್‌ ನಿವಾಸಿ ಹೊಸಹೊಳಲು

ಪುರಸಭೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ. ವಾರಕ್ಕೆ ಒಂದು ದಿನವೂ ನೀರು ಬಿಡುವುದಿಲ್ಲ. ಬಿಡುವ
ನೀರಿನಲ್ಲಿಯೂ ಚರಂಡಿ ನೀರು ಮಿಶ್ರಣವಾಗಿ ಬರುತ್ತಿದೆ. ಈ ಬಗ್ಗೆ ಹತ್ತಾರೂ ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಎಂಜಿನಿಯರ್‌ ಅವರನ್ನು ಪ್ರಶ್ನಿಸಿದರೆ ನನ್ನ ವಯಸ್ಸಿಗೂ ಬೆಲೆಕೊಡದೇ ಅನಾಗರೀಕವಾಗಿ ವರ್ತಿಸುತ್ತಾರೆ. ಇಂಥ ದುರಾಡಳಿತ ಕಚೇರಿ ಕಂಡು ಬೇಸರವಾಗುತ್ತಿದೆ. 
 ಎಂ.ಶಿವಣ್ಣ , 21 ನಿವೃತ್ತ ಶಿಕ್ಷಕರು

ಅಧ್ಯಕ್ಷರೂ ಇಲ್ಲ; ಆಡಳಿತಾಧಿಕಾರಿಗೆ ಕಾಳಜಿಯೂ ಇಲ್ಲ ಮೀಸಲಾತಿ ಗೊಂದಲದಿಂದಾಗಿ ಸುಮಾರು ಎರಡು ವರ್ಷಗಳಿಂದ ಪುರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದೇ ಇರುವುದರಿಂದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಗಳು ಖಾಲಿ ಇದೆ. ಈಗ ಪಾಂಡವಪುರ ಉಪವಿಭಾಗಾಧಿಕಾರಿ ಪುರಸಭೆ ಆಡತಾಧಿಕಾರಿ ಗಳಾಗಿದ್ದಾರೆ. ಪುರಸಭಾ ಆಡಳಿತಾಧಿಕಾರಿಗಳಾಗಿದ್ದ ಆರ್‌. ಯಶೋಧಾ ಇತ್ತ ತಿರುಗಿಯೂ ನೋಡದೇ ಇರುವುದರಿಂದ ಪುರಸಭೆ ಆಡಳಿತ ಹಳ್ಳ ಹಿಡಿಯುವ ಜೊತೆಗೆ ಜನತೆಗೆ ಮೂಲ ಸೌಕರ್ಯಗಳು ಸಿಗದಂತ್ತಾಗಿದೆ. ಸಿಬ್ಬಂದಿಗೆ ಹೇಳುವವರೂ ಕೇಳುವವರೂ ಯಾರೂ ಇಲ್ಲದೇ ಕೆಲವು ಸಿಬ್ಬಂದಿ ಸರ್ವಾಧಿಕಾರಿಗಳಾಗಿ ಆಡಳಿತ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಕೆಲಸವನ್ನೇ ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಇವರಲ್ಲಿ ಕುಡಿಯುವ ನೀರು ವಿಭಾಗ ನಿರ್ವಹಣೆ ಮಾಡುತ್ತಿರುವ ಕಿರಿಯ ಎಂಜಿನಿಯರ್‌ ಸೌಮ್ಯಾ ಕೂಡಾ ಒಬ್ಬರು. ಇವರು ಅವರ ಪಾಲಿನ ಕೆಲಸ ಮಾಡುತ್ತಿಲ್ಲ, ಇದರಿಂದಾಗಿ ಸಾರ್ವಜನಿಕರಿಗೆ ಅತ್ಯವಶ್ಯ ಸೇವೆಗಳು ಸಿಗದಂತಾಗಿದೆ. 

ಎಚ್‌.ಬಿ.ಮಂಜುನಾಥ

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top