CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭಾರತೀಯ ಸಂಸ್ಕೃತಿ ತಿರುಳು ಯಕ್ಷಗಾನ : ಒಡಿಯೂರು ಶ್ರೀ

ಮಂಗಳೂರು: ಖ್ಯಾತ ಭಾಗವತ ಸತೀಶ್‌ ಶೆಟ್ಟಿ ಪಟ್ಲ ಸ್ಥಾಪಕಾಧ್ಯಕ್ಷತೆಯ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಮಂಗಳೂರು ಪುರಭವನದಲ್ಲಿ ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ "ಯಕ್ಷಧ್ರುವ ಪಟ್ಲ ಸಂಭ್ರಮ' ಸಂಪನ್ನಗೊಂಡಿತು. 

ಯಕ್ಷಗಾನದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ 1 ಲಕ್ಷ ರೂ. ನಗದು, ಬೆಳ್ಳಿ ಪದಕ ಸಹಿತ "ಪಟ್ಲ ಪ್ರಶಸ್ತಿ' ಹಾಗೂ ಖ್ಯಾತ ಅರ್ಥಧಾರಿ ಜಬ್ಟಾರ್‌ ಸಮೋ ಸಂಪಾಜೆ ಅವರಿಗೆ "ಯಕ್ಷ ಗೌರವ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 15 ಮಂದಿ ಅಶಕ್ತ ಕಲಾವಿದರಿಗೆ ಹಾಗೂ ಇಬ್ಬರು ಕಲಾವಿದರಿಗೆ ಮರಣೋತ್ತರ ಗೌರವಧನವಾಗಿ ತಲಾ 50,000 ರೂ. ವಿತರಿಸಲಾಯಿತು.

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ, ಕಲಾವಿದರಿಗೆ ಅಪಘಾತ ವಿಮಾ ಯೋಜನೆಗೆ ಚಾಲನೆ ಇದೇ ವೇಳೆ ನೆರವೇರಿತು. ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯಿ ಎಸ್‌. ಅವರಿಗೆ ಬಂಗಾರದ ಪದಕ ಪ್ರದಾನ ಮಾಡಲಾಯಿತು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯ ತಿರುಳು ಯಕ್ಷಗಾನ. ಅದು ಧರ್ಮದ ನೆಲೆ ಕೂಡ ಹೌದು. ಮನುಷ್ಯನ ವ್ಯಕ್ತಿತ್ವದಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸುವ ಕಾರ್ಯ ಯಕ್ಷಗಾನದ ಮೂಲಕ ನಡೆಯುತ್ತದೆ ಎಂದರು.

ಬದುಕು ಚಲನಶೀಲವಾಗಿದ್ದು, ಕಲೆ ಕೂಡ ಚಲನಶೀಲ ಗುಣವನ್ನು ಹೊಂದಿದೆ. ಯಕ್ಷಗಾನ ಜೀವನ ಕಲೆಯನ್ನು ಅರಳಿಸುತ್ತದೆ. ಪಟ್ಲ ಸತೀಶ್‌ ಶೆಟ್ಟಿ ಅವರು ತನ್ನ ಸ್ವರ ಮಾಧುರ್ಯದ ಮೂಲಕವಾಗಿ ಜನಪ್ರೀತಿ ಗಳಿಸಿ, ಯಕ್ಷಗಾನದ ತನ್ನ ಕುಟುಂಬಿಕರನ್ನು ಗೌರವಿಸುವ ಅವರ ಬದುಕಿಗೆ ಚೈತನ್ಯವನ್ನು ನೀಡಿದ ಕಾರ್ಯ ಮಾದರಿ ಎಂದವರು ಶ್ಲಾಘಿಸಿದರು.

"ಪಟ್ಲ ಯಕ್ಷಗಾನದ ಪಠೇಲ'
ಶ್ರೀ ಸಂತೋಷ್‌ ಗುರೂಜಿ ಅವರು ಮಾತನಾಡಿ, ಯುವಕರನ್ನು ಯಕ್ಷಗಾನದತ್ತ ಆಕರ್ಷಿಸುವ ಮೂಲಕ ಈ ಕ್ಷೇತ್ರವನ್ನು ಇನ್ನಷ್ಟು ಉನ್ನತಿಗೇರಿಸುವ ನಿಟ್ಟಿನಲ್ಲಿ ಸತೀಶ್‌ ಶೆಟ್ಟಿ ಪಟ್ಲ ಅವರ ಕಾರ್ಯ ಶ್ಲಾಘನೀಯ. ಹೀಗಾಗಿ ಪಟ್ಲ ಯಕ್ಷಗಾನದ ಪಠೇಲರು ಎಂದವರು ಹೇಳಿದರು.

ಶ್ರೀ ಕ್ಷೇತ್ರ ಕಟೀಲಿನ ವೇ| ಮೂ| ವಾಸುದೇವ ಆಸ್ರಣ್ಣ, ವೇ| ಮೂ| ಅನಂತಪದ್ಮನಾಭ ಆಸ್ರಣ್ಣ , ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌, ಅಭಯಚಂದ್ರ ಜೈನ್‌, ಶಾಸಕರಾದ ಜೆ.ಆರ್‌. ಲೋಬೋ, ಮೊದಿನ್‌ ಬಾವಾ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್‌, ಬಿ. ನಾಗರಾಜ ಶೆಟ್ಟಿ, "ರಂಗೀತರಂಗ' ಚಿತ್ರದ ಅನೂಪ್‌ ಭಂಡಾರಿ, ನಿರೂಪ್‌ ಭಂಡಾರಿ, ಸುಧಾಕರ ಭಂಡಾರಿ, ಕಿರುತೆರೆ ನಟಿ ನಂದಿನಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಪ್ರಮುಖರಾದ ಯೋಗೀಂದ್ರ ಭಟ್‌ ಉಳಿ, ರವಿ ಶೆಟ್ಟಿ ಕತಾರ್‌, ಕರ್ನಿರೆ ವಿಶ್ವನಾಥ ಶೆಟ್ಟಿ, ಕುಂಬ್ಳೆ ಸುಂದರ್‌ ರಾವ್‌, ಪ್ರೊ| ಎಂ.ಬಿ. ಪುರಾಣಿಕ್‌, ರವಿ ಶೆಟ್ಟಿ ಮೂಡಂಬೈಲು, ಜಯರಾಮ ಶೇಖ, ಮಿಥುನ್‌ ರೈ, ಸುರೇಶ್‌ ಶೆಟ್ಟಿ, ಸಿ.ಎ. ಶಾಂತಾರಾಮ ಶೆಟ್ಟಿ, ಸುಲೋಚನಾ ಶೆಟ್ಟಿ, ಶ್ರೀನಿವಾಸ ದೇಶಪಾಂಡೆ, ಅಶೋಕ್‌ ರೈ, ಕೃಷ್ಣಪ್ರಸಾದ್‌ ಅಡ್ಯಂತಾಯ, ಪಿ. ಶಿವರಾಮ ಆಚಾರ್ಯ, ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ರವೀಂದ್ರನಾಥ ರೈ, ಡಾ| ಶಿಮಂತೂರು ನಾರಾಯಣ ಶೆಟ್ಟಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್‌, ಯೋಗೀಶ್‌ ಶರ್ಮ ಬಳ್ಳಪದವು, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ರಾಜಾರಾಮ್‌ ಭಟ್‌ ಮುಂತಾದವರು ಅತಿಥಿಗಳಾಗಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಾರ್ಗದರ್ಶಕ ಪಟ್ಲಗುತ್ತು ಮಹಾಬಲ ಶೆಟ್ಟಿ, ಗೌರವಾಧ್ಯಕ್ಷ ಕಲ್ಲಾಡಿ ದೇವೀಪ್ರಸಾದ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್‌ ಹಾಗೂ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ಉಚಿತ ವೈದ್ಯಕೀಯ ತಪಾಸಣೆ
"ಯಕ್ಷಧ್ರುವ ಪಟ್ಲ ಸಂಭ್ರಮ'ದಂಗವಾಗಿ ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಯಕ್ಷ ಸಂಬಂಧಿತ ವಿವಿಧ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ವತಿಯಿಂದ ಯಕ್ಷಗಾನ ಪೂರ್ವರಂಗ ನಡೆಯಿತು. ಏಳು ಮಂದಿ ಭಾಗವತರಾದ ಬಲಿಪ, ಪುತ್ತಿಗೆ, ಪುಣಿಂಚಿತ್ತಾಯ, ಸುರೇಶ್‌ ಶೆಟ್ಟಿ, ಕನ್ನಡಿಕಟ್ಟೆ, ಜನ್ಸಾಲೆ, ಕಕ್ಕೆಪದವು ಅವರಿಂದ ಅಮೋಘ ಭಾಗವತಿಕೆಯ "ಯಕ್ಷ ಸಪ್ತ ಸ್ವರ', ಮಧ್ಯಾಹ್ನ ರಕ್ಷಿತ್‌ ಶೆಟ್ಟಿ ಪಡ್ರೆ ನಿರ್ದೇಶನದಲ್ಲಿ ಸುರತ್ಕಲ್‌ನ ಶ್ರೀ ಸಿದ್ಧಿವಿನಾಯಕ ಯಕ್ಷನಾಟ್ಯ ಕಲಾಕೇಂದ್ರದ ಡಾ| ವರ್ಷಾ ಶೆಟ್ಟಿ ಹಾಗೂ ದಿಶಾ ಶೆಟ್ಟಿ ಅವರಿಂದ "ರಾಧಾ ವಿಲಾಸ' ಯಕ್ಷಗಾನ ನಾಟ್ಯ ವೈಭವ ನಡೆಯಿತು. ಅನಂತರ "ತುಳುನಾಡ ಬಲೀಂದ್ರೆ' ತುಳು ತಾಳಮದ್ದಳೆ ಸಂಪನ್ನಗೊಂಡಿತು. ರಾತ್ರಿ ಹೊಸನಗರ ಮೇಳದವರಿಂದ "ಮಾನಿಷಾದ' ಯಕ್ಷಗಾನ ಬಯಲಾಟ ನಡೆಯಿತು. ಜತೆಗೆ ಯಕ್ಷಗಾನ ಕಲಾವಿದರು ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು. ಟ್ರಸ್ಟಿನ ಸದಸ್ಯರಿಂದ ಹಾಗೂ ಯಕ್ಷಗಾನ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು.

Back to Top