CONNECT WITH US  

ಸ್ವಸ್ಥ ಮನಸ್ಸು-ಸ್ವಸ್ಥ ಸಮಾಜಕ್ಕಾಗಿ ಯೋಗ: ಯೋಗ ಶಿಕ್ಷಕಿ ಫಾತಿಮಾ

ಮಂಗಳೂರು: ಮೂಲತಃ ಮಂಗಳೂರಿನ ಯುವತಿ ಫಾತಿಮಾ ಶೇಖ್‌ ಅಬ್ದುಲ್‌ ಮಜೀದ್‌ ಅವರು ಭಾರತದ ಯೋಗವನ್ನು ಸೌದಿ ಅರೇಬಿಯಾದ ಜನತೆಗೆ ಪರಿಚಯಿಸುತ್ತಿದ್ದಾರೆ. ನಗರದ ಬಿಜೈ ಕಾಪಿಕಾಡ್‌ನ‌ಲ್ಲಿರುವ ಆವಿಷ್ಕಾರ್‌ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಣವನ್ನು ಪಡೆದು ಸೌದಿ ಅರೇಬಿಯಾದ ವಿವಿಧೆಡೆ ಯೋಗ ತರಬೇತಿಯನ್ನು ಕಳೆದ ಮೂರು ವರ್ಷಗಳಿಂದ ನೀಡುತ್ತಿದ್ದಾರೆ. ಆವಿಷ್ಕಾರ ಯೋಗ ಕೇಂದ್ರದಲ್ಲಿ ಉಪನ್ಯಾಸ ನೀಡಲು ಸೆ. 9ರಂದು ಆಗಮಿಸಿದ ಸಂದರ್ಭ 'ಉದಯವಾಣಿ'ಯೊಂದಿಗೆ ಯೋಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಷ್ಟು ವರ್ಷದಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ?
- ಕಳೆದ ಮೂರು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಸೌದಿ ಅರೇಬಿಯಾದಲ್ಲಿ ಇತರ ಹುಡುಗಿಯರಿಗೂ ಯೋಗ ಕಲಿಸಿಕೊಡುತ್ತಿದ್ದೇನೆ. ಸೌದಿಯ ಜೆಡ್ಡಾದಲ್ಲಿ ಅಡ್ವಾನ್ಸ್‌ ಯೋಗ ಇನ್‌ಸ್ಟ್ರಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಸೌದಿಯಲ್ಲೇ ಹುಟ್ಟಿ ಬೆಳೆದವಳು. ರಜಾ ಅವಧಿಯಲ್ಲಿ ಮಂಗಳೂರಿಗೆ ಬಂದಾಗ ಆವಿಷ್ಕಾರ್‌ ಯೋಗ ಕೇಂದ್ರದ ಕುಶಾಲಪ್ಪ ಗೌಡ ಅವರಿಂದ ತರಬೇತಿ ಪಡೆದಿದ್ದೇನೆ.

ಯೋಗದ ಆವಶ್ಯಕತೆ ಬಗ್ಗೆ...
- ಶಾಂತಿ ಮತ್ತು ಆರೋಗ್ಯಕರ ಜೀವನಕ್ಕಾಗಿ ಯೋಗದ ಪ್ರಾಮುಖ್ಯ ಬಹಳವಿದೆ. ಸ್ವಸ್ಥ ಮನಸ್ಸು, ಸ್ವಸ್ಥ ಸಮಾಜಕ್ಕಾಗಿ ಯೋಗದ ಅನಿವಾರ್ಯತೆ ಇದೆ. ಹಲವು ರೋಗಗಳ ನಿವಾರಣೆಗೂ ಇದು ಬಹಳ ಪರಿಣಾಮಕಾರಿಯಾಗಿದೆ. ವೈಯಕ್ತಿಕವಾಗಿ ನಾನೂ ಕೂಡ ಇಂದು ಯೋಗದಿಂದಾಗಿಯೇ ಹೆಚ್ಚು ಖುಷಿಯ ಜೀವನ ನಡೆಸುತ್ತಿದ್ದೇನೆ.

ವೈಜ್ಞಾನಿಕವಾಗಿಯೂ ಲಾಭ ಇದೆಯೇ?
- ಹೌದು. ವೈಜ್ಞಾನಿಕವಾಗಿಯೂ ಯೋಗದಿಂದ ಲಾಭ ಪಡೆದಿದ್ದೇನೆ. ಪ್ರಾಣಾಯಾಮದಂತಹ ಅಭ್ಯಾಸಗಳಿಂದ ಹಲವು ಲಾಭ ನನಗಾಗಿದೆ. ದೇಹಕ್ಕೆ ವ್ಯಾಯಾಮ ದೊರಕಿ ದಿನವಿಡೀ ಉಲ್ಲಾಸದಿಂದ ಇರುವಂತೆ ಸಹಕರಿಸುವಲ್ಲಿ ಯೋಗದ ಪಾತ್ರ ಮಹತ್ವದ್ದು.

ಯೋಗದ ವ್ಯಾಪಕತೆ...
- ಆರೋಗ್ಯ ಮತ್ತು ಮಾನಸಿಕ ಶಾಂತಿ ದೃಷ್ಟಿಯಿಂದ ಯೋಗ ಎಲ್ಲರಿಗೂ ಅತ್ಯಂತ ಉಪಯುಕ್ತ. ಮಾನಸಿಕ ಒತ್ತಡ ಕಡಿಮೆ ಮಾಡಿ ನಿರಾಳ ಭಾವವನ್ನು ಮೂಡಿಸುವ ಏಕೈಕ ಸಾಧನ ಇದು. ನನಗನಿಸಿದ ಪ್ರಕಾರ ಎಲ್ಲ ಮಾನಸಿಕ, ದೈಹಿಕ ಸಮಸ್ಯೆಗಳ ಉಪಶಮನಕ್ಕೆ ಯೋಗಾಭ್ಯಾಸವೇ ಮದ್ದು.

ಶಾಲೆಗಳಲ್ಲಿ ಕಲಿಸುವ ಬಗ್ಗೆ...
- ಇದು ಸ್ಪರ್ಧಾತ್ಮಕ ಯುಗ. ಈಗಿನ ಮಕ್ಕಳಿಗೆ ಎಳವೆಯಿಂದಲೇ ಒತ್ತಡಗಳು ಆರಂಭವಾಗುತ್ತವೆ. ಇಂತಹ ಸಂದರ್ಭದಲ್ಲಿ ಬುದ್ಧಿ ಶಕ್ತಿಯ ಹೆಚ್ಚಳ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಯೋಗ ಸಹಕಾರಿಯಾಗಿ ನಿಲ್ಲುತ್ತದೆ ಎಂಬ ಅಭಿಪ್ರಾಯ ನನ್ನದು. ಆವಿಷ್ಕಾರಗಳನ್ನೊಳಗೊಂಡ ಹೊಸ ವಿಧಾನದ ಯೋಗಾಭ್ಯಾಸವನ್ನು ಮಕ್ಕಳಿಗೆ ಹೇಳಿಕೊಡಬೇಕು.

ಯೋಗ ಸಂಬಂಧ ಸೇತುವಾಗಬಲ್ಲದೇ?
- ಖಂಡಿತಾ. ಇಂದಿನ ತಾಳ್ಮೆರಹಿತ, ಒತ್ತಡಭರಿತ, ಅಪನಂಬಿಕೆಗಳ ಮೇಳೈಕೆಗಳ ಯುಗದಲ್ಲಿ ಮನುಷ್ಯನಿಗೆ ತನ್ನ ದಾರಿಯ ಬಗ್ಗೆಯೇ ಸ್ಪಷ್ಟತೆ ಇಲ್ಲ. ದಂಪತಿ ನಡುವೆ ವಿರಸ, ವಿಚ್ಛೇದನ ಪ್ರಕರಣ, ಸಾಮಾಜಿಕವಾಗಿಯೂ ಪರಸ್ಪರ ಮೂಲ ನಂಬಿಕೆಗಳ ಗೊಂದಲಗಳು ಏರ್ಪಟ್ಟಿರುವುದು ಕಾಣಬಹುದು. ಆದರೆ ಇದೆಲ್ಲವನ್ನು ತಹಬಂದಿಗೆ ತಂದು ಬಾಂಧವ್ಯ, ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿಯೂ ಯೋಗಕ್ಕಿದೆ ಎಂದರೆ ಅತಿಶಯೋಕ್ತಿಯಾಗದು ಎಂಬ ಅನಿಸಿಕೆ ನನ್ನದು.

ಸೌದಿಯಲ್ಲಿ ಯೋಗದ ಒಲವು ಹೇಗಿದೆ?
- ಸೌದಿಯಲ್ಲಿ ಹಲವರು ಆಸಕ್ತಿಯಿಂದಲೇ ಯೋಗ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಜೆಡ್ಡಾ ಇಂಟರ್‌ನ್ಯಾಶನಲ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಯೋಗ ತರಗತಿ ನಡೆಸುತ್ತಾರೆ. ನಾನೇ ಸ್ವತಃ ಹದಿಹರೆಯದಿಂದ 60 ವರ್ಷದ ತನಕದ ಮಹಿಳೆಯರಿಗೆ ಯೋಗ ಕಲಿಸುತ್ತಿದ್ದೇನೆ. ನನ್ನಿಂದ ಯೋಗ ಕಲಿಸುವ ಮಂದಿ ಯೋಗದಿಂದಾಗುವ ಲಾಭಗಳನ್ನು ಹೇಳುವಾಗ ಹೆಮ್ಮೆಯಾಗುತ್ತದೆ. ಅನೇಕ ಮಂದಿ ಯುವತಿಯರು ಯೋಗ ಕಲಿಯಲು ಮುಂದೆ ಬರುವವರು ಸೌದಿಯಲ್ಲಿ ಇದ್ದಾರೆ. ಏಕೆಂದರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗದ ಪ್ರಯೋಜನವನ್ನು ಅವರು ಅರಿತುಕೊಂಡಿದ್ದಾರೆ.

-- ಧನ್ಯಾ ಬಾಳೆಕಜೆ

Trending videos

Back to Top