CONNECT WITH US  

ಸ್ವಾಮಿ ವಿವೇಕಾನಂದರ ಸಂದೇಶಗಳ ಸಾಕಾರ ಸಂಕಲ್ಪ

ಮಂಗಳೂರು: ಸ್ವಾಮಿ ವಿವೇಕಾನಂದರ ಜೀವನ ಆದರ್ಶ, ಅವರ ಸಂದೇಶ ದಾರಿದೀಪ. ಅವುಗಳ ಪಾಲನೆ ಮತ್ತು ಸಾಕಾರದ ದೃಢ ಸಂಕಲ್ಪವನ್ನು ಮಾಡಿ ಯುವಜನತೆ ಉತ್ಕೃಷ್ಟ ಸಾಧನೆಯ ಪಥದಲ್ಲಿ ಮುನ್ನಡೆಯಬೇಕು ಎಂದು ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ 154ನೇ ಜನ್ಮಾಚರಣೆ, ರಾಷ್ಟ್ರೀಯ ಯುವ ದಿನ ಹಾಗೂ ದ.ಕ. ಜಿಲ್ಲೆಯ ಹಳ್ಳಿಯ ಬಡಜನತೆಗೆ ಸಿದ್ಧ ಉಡುಪುಗಳ ವಿತರಣೆ ಅರ್ಪಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಯುವಶಕ್ತಿಯ ಮೇಲೆ ಸ್ವಾಮಿ ವಿವೇಕಾನಂದರು ಅಪಾರ ನಂಬಿಕೆ ಹೊಂದಿದ್ದರು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಸ್ವಾಮಿ ವಿವೇಕಾನಂದರ ಸಂದೇಶದ ಮಹತ್ವವನ್ನು ಅರಿತುಕೊಂಡು ಜ. 12ನೇ ದಿನವನ್ನು ರಾಷ್ಟ್ರೀಯ ಯುವದಿನವಾಗಿ ಘೋಷಿಸಿದ್ದರು. ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದರು ಎಂದರು.

ಶಾರೀರಿಕವಾಗಿ, ಮಾನಸಿಕವಾಗಿ, ಧಾರ್ಮಿಕವಾಗಿ ಯಾವುದೇ ಆಚಾರ-ವಿಚಾರ ತಮಗೆ ಹಾಗೂ ಸಮಾಜಕ್ಕೆ ಸಮಸ್ಯೆಯಾಗುವುದಾದರೆ ಅವುಗಳನ್ನು ವಿಷವೆಂದು ಭಾವಿಸಿ ತಿರಸ್ಕರಿಸಿ ಎಂದು ವಿವೇಕಾನಂದರು ಕರೆ ನೀಡಿದ್ದರು. ಯುವಜನತೆ ಇದನ್ನು ಮನನ ಮಾಡಿಕೊಳ್ಳಬೇಕು ಎಂದು ಪರಮೇಶ್ವರ್‌ ಕರೆ ನೀಡಿದರು.

ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಸಮಾಜ ಇಂದು ಎದುರಿಸುತ್ತಿರುವ ಆನೇಕ ಸವಾಲುಗಳಿಗೆ ಸ್ವಾಮಿ ವಿವೇಕಾನಂದ ಅವರ ಸಂದೇಶಗಳಲ್ಲಿ ಪರಿಹಾರವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಸ್ವಾಮೀಜಿ ಅವರು ಯುವಜನತೆ ಆತ್ಮವಿಶ್ವಾಸ, ವ್ಯಕ್ತಿತ್ವ ಪಾವಿತ್ರÂ, ವಿವೇಕ ಬುದ್ಧಿಯನ್ನು ರೂಢಿಸಿಕೊಂಡು ಸಶಕ್ತರಾಗಿ ಮೂಡಿಬರಬೇಕು ಎಂಬುದು ಸ್ವಾಮಿ ವಿವೇಕಾನಂದರ ಆಶಯ ವಾಗಿತ್ತು ಎಂದು ವಿವರಿಸಿದರು.

ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜಿ, ಶ್ರೀಕೃಷ್ಣ ಉಪಾಧ್ಯಾಯ, ಬೆಂಗಳೂರಿನ ಪ್ರೊ| ರಘೋತ್ತಮ್‌ ರಾವ್‌ ಅತಿಥಿಗಳಾಗಿದ್ದರು. ವಿಧಾನಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು.

ಅರ್ಪಣಾಗೆ ಚಾಲನೆ
ಸ್ವಾಮಿ ವಿವೇಕಾನಂದರ ಜನ್ಮೋತ್ಸವದ ಪ್ರಯುಕ್ತ ಜ. 12ರಿಂದ 30ರ ವರೆಗೆ ಹಮ್ಮಿಕೊಂಡಿರುವ ಹಳ್ಳಿಯ ಬಡಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳನ್ನು ವಿತರಿಸುವ ಅರ್ಪಣಾ ಕಾರ್ಯಕ್ರಮಕ್ಕೆ ಡಾ| ಜಿ. ಪರಮೇಶ್ವರ್‌ ಚಾಲನೆ ನೀಡಿದರು.

ಆಯ್ದ 30 ಹಳ್ಳಿಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಪ್ರತಿ ಊರಿನ  ಸುಮಾರು 100 ಜನ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 1.25 ಕೋಟಿ ರೂ. ಮೌಲ್ಯದ 6500 ಬ್ರ್ಯಾಂಡೆಡ್‌ ಉಡುಪುಗಳನ್ನು 15 ದಿನಗಳ ಕಾಲ ರಾಮಕೃಷ್ಣ ಮಠದ ಸನ್ಯಾಸಿಗಳು ಖುದ್ದು ಹಳ್ಳಿಗಳಿಗೆ ತೆರಳಿ ವಿತರಿಸಲಿದ್ದಾರೆ.

Trending videos

Back to Top