CONNECT WITH US  

ತುಳು ಚಲನಚಿತ್ರೋತ್ಸವ ಸಮಾರೋಪ

'ತುಳು ಸಿನೆಮಾರಂಗದ ಸಮಸ್ಯೆಗೆ ಸ್ಪಂದಿಸಿ'

ಎ. ಸದಾನಂದ ಶೆಟ್ಟಿ ಅವರು ಸಮಾರೋಪ ಸಮಾರಂಭ ಉದ್ಘಾಟಿಸಿದರು.

ಮಹಾನಗರ: ತುಳು ಸಿನೆಮಾ ರಂಗದಲ್ಲಿರುವ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಶ್ರೀದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.

ಸಿಟಿಸೆಂಟರ್‌ನ ಸಿನೆಪೊಲೀಸ್‌ನಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಆಶ್ರಯದಲ್ಲಿ ನಡೆದ ತುಳು ಫಿಲ್ಮ್ ಫೆಸ್ಟಿವಲ್‌ 2018ರ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಳು ಸಿನೆಮಾಗಳಿಗೆ ಸಬ್ಸಿಡಿ, ಜತೆಗೆ ಜಿಲ್ಲೆಯಲ್ಲಿ ಚಿತ್ರಮಂದಿರಗಳ ಕೊರತೆ ಇದ್ದು ಅವುಗಳೆಲ್ಲವನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರ ತುಳು ಚಿತ್ರರಂಗದ ಏಳಿಗೆಗೆ ಪ್ರಯತ್ನಿಸಬೇಕು ಎಂದರು. 

ಚಿಂತನೆ ಅಗತ್ಯ
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ಸಂಘವು ಹಮ್ಮಿಕೊಂಡ ತುಳು ಚಲನಚಿತ್ರೋತ್ಸವ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಸಂಘವು ಥಿಯೇಟರ್‌ ಸಮಸ್ಯೆ ಮತ್ತು ಕೆಲವು
ಥಿಯೇಟರ್‌ನಿಂದ ನಿರ್ಮಾಪಕರಿಗೆ ಹಣ ವಾಪಾಸು ಬಾರದಿರುವ ಕುರಿತು ಗಂಭೀರ ಚಿಂತನೆ ನಡೆಸಬೇಕೆಂದರು.

ಸಮ್ಮಾನ
ಈ ಸಂದರ್ಭ ಸಿನೆಮಾಗಳಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ, ನಿರ್ದೇಶಕರನ್ನು ಸಮ್ಮಾನಿಸಲಾಯಿತು. ಡಾ| ರಿಚರ್ಡ್‌ ಕ್ಯಾಸ್ಟಲಿನೊ ಸಮ್ಮಾನ ಸ್ವೀಕರಿಸಿ, ತುಳು ಭಾಷೆಯ ಜತೆಗೆ ಕರ್ನಾಟಕ ಇತರ ಉಪ ಭಾಷೆಗಳಾದ ಕೊಂಕಣಿ, ಕೊಡವ, ಲಂಬಾಣಿ, ಬ್ಯಾರಿ ಭಾಷೆಯ ಚಿತ್ರಗಳನ್ನು ಸೇರಿಸಿ ಸಬ್ಸಿಡಿಗಾಗಿ ಚಿತ್ರ ನಿರ್ಮಾಪಕರ ಸಂಘ ಪ್ರಯತ್ನಿಸಲಿ. ಈಗ ಒಟ್ಟು 125 ಸಿನೆಮಾಗಳಿಗೆ ಸಬ್ಸಿಡಿ ದೊರೆಯುತ್ತದೆ. ಹೀಗಾಗಿ 25 ಪ್ರಾದೇಶಿಕ ಭಾಷಾ ಚಿತ್ರದಲ್ಲಿ ತಯಾರಾಗುವ ಸಿನೆಮಾಗಳಿಗೆ ಸಬ್ಸಿಡಿ ನೀಡುವಂತಹ ಕೆಲಸ ಆಗಬೇಕು ಎಂದರು.

ಸಿನೆಪೊಲಿಸ್‌ ಸಂಸ್ಥೆಯ ಮ್ಯಾನೇಜರ್‌ ಕೀರ್ತನ್‌ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌, ಕಾರ್ಯದರ್ಶಿ ಸಚಿನ್‌ ಎಎಸ್‌ ಉಪ್ಪಿನಂಗಡಿ, ಕೋಶಾಧಿಕಾರಿ ಕಿಶೋರ್‌ ಕೊಟ್ಟಾರಿ, ಪ್ರೀತಂ, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಮೇಗಿನಮನೆ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಮಾಹಿತಿಯ ಕೊರತೆ
ಸಿನೆಮಾರಂಗಕ್ಕೆ ಬರುವ ನಿರ್ಮಾಪಕರಿಗೆ ಮಾಹಿತಿಯ ಕೊರತೆ ಇದೆ. ತುಳು ಚಿತ್ರರಂಗದ ಮಾರುಕಟ್ಟೆ ಮತ್ತು ಸಿನೆಮಾರಂಗದ ಒಂದಷ್ಟು ವಿಚಾರಗಳನ್ನು ತಿಳಿಸುವ ಅಗತ್ಯ ನಿರ್ಮಾಪಕರಿಗೆ ಇದೆ. ಈ ಕೆಲಸವನ್ನು ನಿರ್ಮಾಪಕರ ಸಂಘ ಮಾಡಬೇಕು.
- ಶಿವಧ್ವಜ್‌, ನಿರ್ದೇಶಕ

Trending videos

Back to Top