CONNECT WITH US  

ಹೊಸ ವರ್ಷದ ಸಂಭ್ರಮ ಎಲ್ಲೆಲ್ಲಿ ಹೇಗಿದೆ?

ಅಸ್ಸಾಂನಲ್ಲಿ ಬಿಸು, ಪಂಜಾಬ್‌ನಲ್ಲಿ ಬೈಸಾಖೀ, ಕೇರಳದಲ್ಲಿ ವಿಷು!

ಕ್ರೈಸ್ತ ಕ್ಯಾಲೆಂಡರ್‌ ಪ್ರಕಾರ ಜನವರಿ 1ರಂದು ದೇಶದೆಲ್ಲೆಡೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂಗಳು ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಗೆ ಹೊಸ ವರ್ಷ ಆಚರಿಸುತ್ತಾರೆ. ದೇಶದ ವಿವಿಧೆಡೆ ಇದರ ಆಚರಣೆ ಇದ್ದು, ವಿಶಿಷ್ಟ ಸಂಪ್ರಾಯದ ಇದರಲ್ಲಿ ಮಿಳಿತವಾಗಿದೆ. ಕೃಷಿ
ಪ್ರಧಾನ ರಾಷ್ಟ್ರವಾದ್ದರಿಂದ ಇಲ್ಲಿನ ಆಚರಣೆಗಳಿಗೆ ವಿಶೇಷ ಮಹತ್ವವೂ ಇದೆ. ಈ ನಿಟ್ಟಿನಲ್ಲಿ ವಿವಿಧ ಆಚರಣೆಗಳು ಹಾಸುಹೊಕ್ಕಾಗಿವೆ. ಮೊದಲ ಕೊಯ್ಲು, ಬಿತ್ತನೆಗೆ ಈ ಸಂದರ್ಭ ಚಾಲನೆ ನೀಡಲಾಗುತ್ತದೆ.

ಅದಕ್ಕೆ ತಕ್ಕಂತೆ ಗುಡಿಪಾಡ್ವ, ಬೈಸಾಖೀ, ಚೈರೋಬಾ, ಮರ್ವರಿ ಹೀಗೆ ಹಲವು ಹೆಸರುಗಳಿಂದ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ.

ಗುಡಿಪಾಡ್ವ- ಮಹಾರಾಷ್ಟ್ರ
ಗುಡಿಪಾಡ್ವ ಎಂಬ ಹೆಸರಿನಿಂದ ಮಹಾರಾಷ್ಟ್ರದವರು ಹಾಗೂ ಕೊಂಕಣಿ ಭಾಷಿಕರು ಚೈತ್ರ ಮಾಸದ ಮೊದಲ ದಿನ ಆಚರಿಸುತ್ತಾರೆ. ಈ ದಿನ ಮನೆಯ ಮುಂದಿನ ಬಾಗಿಲಿನ ಬಲಭಾಗದಲ್ಲಿ ಬಿದಿರಿನ ಕೋಲನ್ನು ಹಾಕಿ ಅದಕ್ಕೆ ಹಳದಿ ಬಣ್ಣದ ಬಟ್ಟೆಯನ್ನು ಹಾಕಿ ಅದಕ್ಕೆ ಸಕ್ಕರೆಯ ಹಾರವನ್ನು ಮಾಡಿ ಅದರ ಮೇಲೆ ತಾಮ್ರದ ಚೆಂಬನ್ನು ಕಂಕಣಿ ಹಾಕುವುದು ಇಲ್ಲಿನ ಸಂಪ್ರದಾಯ.

ಬೈಸಾಖೀ- ಪಂಜಾಬ್‌
ಉತ್ತರ ಭಾರತದ ಅತಿ ದೊಡ್ಡ ಹಬ್ಬವೆಂದೇ ಕರೆಯುವ ಅದರಲ್ಲೂ 5 ನದಿಗಳ ಪ್ರದೇಶವಾದ ಪಂಜಾಬ್‌ನಲ್ಲಿ ಬೈಸಾಖೀ ಎಪ್ರಿಲ್‌ 13 ಅಥವಾ 14ರಂದು ಆಚರಿಸಲಾಗುತ್ತದೆ. ಮಾತ್ರವಲ್ಲದೆ ಸಿಕ್ಖ್ ಕಲ್ಸ ಎನ್ನುವ ಮೂಲಕ ಆಚರಿಸುವುದಿದೆ. ಕಲ್ಸ ಹಾಗೂ ಅಮೃತಸರದ ಗೋಲ್ಡನ್‌ ಟೆಂಪಲ್‌ ತಲ್ವಟಿ ಸಬೊ ಪ್ರದೇಶದಲ್ಲಿ ಈ ಆಚರಣೆಗೆ ನಾಂದಿ ಆಯಿತು ಎಂಬ ಇತಿಹಾಸ. ಆದರೆ ಯುನೈಟೆಡ್‌ ಸ್ಟೇಟ್‌, ಕೆನಡಾ ಹಾಗೂ ಯುನೈಟೆಡ್‌ ಕಿಂಗ್‌ ಡಮ್‌ನಲ್ಲಿಯೂ ಆಚರಿಸಲಾಗುತ್ತಿದೆ.

ಪುಥಂಡು- ತಮಿಳುನಾಡು
ತಮಿಳುನಾಡಿನಲ್ಲಿ ಎಪ್ರಿಲ್‌ 13 ಅಥವಾ 14ರಂದು ಅಂದರೆ ಚೈತಿರೈ ತಿಂಗಳ ಮೊದಲ ದಿನವನ್ನು ಪುಥಂಡು ವಾಲ್ತುಕಲ್‌ ಎಂದು ಹೇಳಿ ಒಬ್ಬರಿಂದೊಬ್ಬರಿಗೆ ಶುಭಕೋರುತ್ತ ಹೊಸ ವರ್ಷವನ್ನು ಆಚರಿಸುತ್ತಾರೆ. ಮಧುರೈ ಮೀನಾಕ್ಷಿ ದೇಗುಲದಲ್ಲಿ ಚಿತ್ತೆರೈ ತಿರುವೈಯ್‌ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಈ ದಿನ ಮಾವು, ಬೆಲ್ಲ, ಬೇವಿನ ಪುಷ್ಪವನ್ನು ಹಾಕಿ ಮಂಗೈ ಪಚ್ಚಡಿ ಎಂಬ ಪದಾರ್ಥವನ್ನು ತಯಾರಿಸುತ್ತಾರೆ.

ಬೊಹಾಗ್‌ ಬಿಹು- ಅಸ್ಸಾಂ
ವಸಂತ ಸಂಭ್ರಮವನ್ನು ಅಸ್ಸಾಂನಲ್ಲಿ ಎಪ್ರಿಲ್‌ ತಿಂಗಳ ಕೃಷಿ ಋತುವಿನ ಮಧ್ಯದಲ್ಲಿ ಬಿಹು ಎಂಬ ಹೆಸರಿನಿಂದ ಶ್ರದ್ಧಾ, ಭಕ್ತಿ, ನಂಬಿಕೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಒಟ್ಟು ಮೂರು ಬಿಹು ಆಚರಣೆಯನ್ನು ಮಾಡಲಾಗುತ್ತದೆ, ಅದರಲ್ಲಿ ಮಾಘ್ ಹಾಗೂ ಕಾಟಿ ಎನ್ನುವ ಮೂಲಕ ಸಂಭ್ರಮಿಸುತ್ತಾರೆ.

ಪೊಹೆಲ ಬೊಯಿಶಕ್‌- ಬೆಂಗಾಲ
ಬೆಂಗಾಲದ ಜನತೆ ನಬೋ ಬರ್‌ ಶೋ ಸಂಬ್ರಮವನ್ನು ಉತ್ಸಾಹದಿಂದ ಎಪ್ರಿಲ್‌ ತಿಂಗಳ ಮಧ್ಯದಲ್ಲಿ ಆಚರಿಸುತ್ತಾರೆ. ಈ ದಿನ ಸಾಂಸ್ಕೃತಿಕ ಕಾರ್ಯಕ್ರಮ, ಶಾಪಿಂಗ್‌, ಪ್ರಾರ್ಥನೆ ಹಾಗೂ ಮದುವೆಗೆ ಸೂಕ್ತ ಸಮಯವೆಂಬಂತೆ ಆಚರಿಸುತ್ತಾರೆ. ಪೊಹೆಲ ಬೊಯಿಶಕ್‌ ಹೆಸರಿನಿಂದ ಕರೆಯಲ್ಪಡುವ ಆಚರಣೆಯನ್ನು ತ್ರಿಪುರ ಪ್ರದೇಶದ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಆಚರಿಸುತ್ತಾರೆ.

ಬೆಸ್ಟು ವರಸ್‌- ಗುಜರಾತ್‌
ಗುಜರಾತ್‌ನಲ್ಲಿ ಸುಗ್ಗಿ ಅಥವಾ ಕಟಾವಿನ ಸಂದರ್ಭದಲ್ಲಿ ಈ ಬೆಸ್ಟು ವರಸ್‌ ಅನ್ನು ತುಂಬ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ಗುಜರಾತ್‌ ಹೊಸ ವರ್ಷಾಚರಣೆಯನ್ನು ಧಾರ್ಮಿಕವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಇಲ್ಲಿನ ಮರ್ವರಿಸ್‌ ಜನಾಂಗ ದೀಪಾವಳಿಯನ್ನು ಹೊಸ ವರ್ಷವೆಂದು ಆಚರಿಸುವ ಪದ್ಧತಿ ಇದೆ. ಇದು ಹೊಸತನ್ನು ಪ್ರಾರಂಭಿಸಲು ಸಕಾಲ ಎಂಬ ಭಾವನೆ ಅವರದ್ದು.

ವಿಷು- ಕೇರಳ
ವಿಷು ಕಣಿ ಎಂಬ ಹೆಸರಿನಿಂದ ಕೇರಳದಲ್ಲಿ ಆಚರಿಸುವ ಹೊಸ ವರ್ಷಾಚರಣೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ಮೊದಲು ನೋಡುವ ವಸ್ತು ಇದಾಗಿದೆ. ಇದು ಅತಿ ಹೆಚ್ಚು ಕೇರಳ, ಕರ್ನಾಟಕದಲ್ಲೂ ಪ್ರಚಲಿತ ದಲ್ಲಿರುವ ಸಂಪ್ರದಾಯವಾಗಿದೆ.

ಲೊಸೋಂಗ್‌- ಸಿಕ್ಕಿಂ
ವರ್ಷದ ಕೊನೆಯ ಸುಗ್ಗಿ ಅಥವಾ ಕೊಯ್ಲಿನ ಸಂದರ್ಭ ಅಂದರೆ ಡಿಸೆಂಬರ್‌ ತಿಂಗಳನ್ನು ಹೊಸ ವರ್ಷವೆಂದು ಲೊಸೋಂಗ್‌ ಎಂಬ ಸಿಕ್ಕಿಂ ಜನ ರು ಅತಿ ಪುರಾತನ ಆಚರಣೆಯನ್ನು ಆಚರಿಸುತ್ತಾರೆ. ಸೊನಂ ಲೊಸರ್‌ ಎಂದು ಕೃಷಿಕರ ಹೊಸ ವರ್ಷವೆಂದು ಕರೆಯುತ್ತಾರೆ. ಛಾಂ ನೃತ್ಯ ಆಚರಣೆಯ ಪ್ರಮುಖ ಆಕರ್ಷಣೆ.

ನವ್ರೆಹ್‌- ಕಾಶ್ಮೀರ
ಚಂದ್ರಮಾನ ಕ್ಯಾಲೆಂಡರ್‌ ಮೂಲಕ ಕಾಶ್ಮೀರಿ ಜನತೆ ಚೈತ್ರ ನವರಾತ್ರಿ ದಿನವನ್ನು ಶ್ರದ್ಧಾ ಭಕ್ತಿ, ನಂಬಿಕೆಯಿಂದ ಹಾಗೂ ಭಯದಿಂದ ಶಿವರಾತ್ರಿ ಎಂದು ಆಚರಿಸುತ್ತಾರೆ. ಮಾತ್ರವಲ್ಲದೆ ಹೊಸ ವರ್ಷವಾಗಿ ಗೌಡಿ ಪರ್ವ, ಯುಗಾದಿ ಹಾಗೂ ಚೆಟಿ ಚಂಡ್‌ ಎನ್ನುವ ಮೂಲಕ ಸಿಂಧಿ ಜನಾಂಗ ಆಚರಿಸುತ್ತಾರೆ. 

ಕರ್ನಾಟಕ, ಆಂಧ್ರದಲ್ಲಿ ಯುಗಾದಿ
ಯುಗಾದಿ ಎಂಬ ಹೆಸರಿನಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಮಾರ್ಚ್‌- ಎಪ್ರಿಲ್‌ (ಚೈತ್ರ ಮಾಸ)ತಿಂಗಳಲ್ಲಿ ಆಚರಿಸಲಾಗುತ್ತದೆ ಹಾಗೂ ಹಿಂದೂ ಸಂಪ್ರದಾಯದಂತೆ ಇದನ್ನು ನಡೆಸಲಾಗುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಇದು ದಿನ, ತಿಂಗಳುಗಳಲ್ಲಿ ಬದಲಾಗುತ್ತಿರುತ್ತದೆ. ಇದು ಹೊಸತನಕ್ಕೆ ಹೆಸರಾಗಿದೆ. ಹೊಸ ಹುರುಪಿನಿಂದ ಕೆಲಸ ಕಾರ್ಯಗಳನ್ನು ಮುಂದುವರಿಸಲು ಶುಭದಿನವಾಗಿದೆ. ಈ ಸಂದರ್ಭ ಹೊಸ ಬಟ್ಟೆ ತೊಟ್ಟು. ಹೊಸ ತಿಂಡಿ, ತಿನಸುಗಳನ್ನು ಸೇವಿಸುವುದು ವಾಡಿಕೆ.

ಭರತ್‌ರಾಜ್‌ ಕರ್ತಡ್ಕ


Trending videos

Back to Top