CONNECT WITH US  

ಕರೆ ಸ್ವೀಕರಿಸದ ಕಂಟ್ರೋಲ್‌ ರೂಮ್‌: ಆಕ್ರೋಶ

ಒಂದೇ ಮಳೆಗೆ ಮಹಾನಗರ ಪಾಲಿಕೆ ಬೆತ್ತಲು

ಕೃತಕ ನೆರೆಯಿಂದ ಕುದ್ರೋಳಿಯಲ್ಲಿ ಮುದ್ರಣಾಲಯ ಜಲಾವೃತಗೊಂಡಿತು

ಮಹಾನಗರ:ಮುಂಗಾರಿನ ಮೊದಲ ಮಳೆ ಮಂಗಳವಾರ ನಗರದಲ್ಲಿ ಸೃಷ್ಟಿಸಿರುವ ಆವಾಂತರ ನೋಡಿದರೆ, ಮಳೆಗಾಲ ಎದುರಿಸುವಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಸಹಿತ ಸಂಬಂಧಪಟ್ಟ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ತೆರೆದಿಟ್ಟಿದೆ. ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೆ ಸುರಿದ ನಿರಂತರ ಮಳೆಗೆ ನಗರದಲ್ಲಿ ಹರಿಯುತ್ತಿರುವ ಬಹುತೇಕ ತೋಡು
ಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಕ್ಕ- ಪಕ್ಕದ ಮನೆ, ರಸ್ತೆಗಳಿಗೆ ನುಗ್ಗಿ ಸಾಕಷ್ಟು ಹಾನಿಗೆ ಎಡೆಮಾಡಿದೆ.

ಆ ಮೂಲಕ ಸ್ಮಾರ್ಟ್‌ ಸಿಟಿಯಾಗಲು ಸಿದ್ಧತೆ ನಡೆಸುತ್ತಿರುವ ನಗರವು ಈ ಬಾರಿಯ ಮುಂಗಾರು ಮಳೆ ಶುರುವಾಗುವುದಕ್ಕೂ ಮೊದಲೇ ತನ್ನ ವೈಫಲ್ಯಗಳ ಮೂಲಕ ನಗರ ವಾಸಿಗಳ ಮುಂದೆ ಬೆತ್ತಲಾಗಿರುವು ದು ವಿಪರ್ಯಾಸ. ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗುವ ಹಿನ್ನೆಲೆಯಲ್ಲಿ 'ಸುದಿನ'ವು 9 ದಿನಗಳಿಂದ 'ಮಳೆಗಾಲ ಮುಂಜಾಗ್ರತೆ' ಜಾಗೃತಿ ಅಭಿಯಾನವನ್ನು ಕೈಗೊಂಡು, ಪಾಲಿಕೆ ಸಹಿ ತ ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. 

ಆದರೆ, ಪಾಲಿಕೆ ಆಯುಕ್ತರಿಂದ ಹಿಡಿದು ಅಗ್ನಿಶಾಮಕದ ಘಟಕದವರೆಗೆ ಮುಂಗಾರು ಮಳೆಗೆ ನಾವು ರೆಡಿ, ಏನೇ ಅನಾಹುತ ಅಥವಾ ಕೃತಕ ನೆರೆ ಸೃಷ್ಟಿಯಾದರೂ ಅದನ್ನು ಎದುರಿಸುವುದಕ್ಕೆ ಸರ್ವ ಸನ್ನದ್ಧ ಎಂಬುದಾಗಿ ಹೇಳುತ್ತ ಬಂದಿತ್ತು. ಅದನ್ನೇ ನಗರದ ಜನತೆ ನಂಬಿ, ಧೈರ್ಯದಿಂದ ಕುಳಿತಿದ್ದರು. ಆದರೆ, ಮಂಗಳವಾರ ಒಂದೇ ದಿನ ಸುರಿದ ಧಾರಾಕಾರ ಮಳೆಗೆ ಪಾಲಿಕೆ ಅಧಿಕಾರಿಗಳು, ಕಾರ್ಪೊರೇಟರ್‌ಗಳಿಂದ ಹಿಡಿದು ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಪ್ರತಿಯೊಬ್ಬರ ಬಣ್ಣವೂ ಬಯಲಾಗಿದ್ದು, ನಗರ ಜನತೆ ಸ್ಥಳೀಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಡಳಿತದ ವೈಫಲ್ಯ
ತಮ್ಮ ಮನೆಗಳಿಗೆ ನೀರು ನುಗ್ಗುತ್ತಿದೆ, ತೋಡು ಬ್ಲಾಕ್‌ ಆಗಿ ಮಳೆ ನೀರು ನಮ್ಮ ವಠಾರಕ್ಕೆ ಬರುತ್ತಿದೆ, ಬೇಗ ಬಂದು ರಕ್ಷಣೆ ಮಾಡಿ ಎಂಬ ನಿರೀಕ್ಷೆಯೊಂದಿಗೆ ಮಹಾನಗರ ಪಾಲಿಕೆಯ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿದರೆ ಅದಕ್ಕೆ ಸ್ಪಂದಿಸುವವರೇ ಇಲ್ಲ. 

ಇತ್ತ ಸ್ಥಳೀಯ ಪಾಲಿಕೆ ಸದಸ್ಯರನ್ನು ಸಂಪರ್ಕಿಸಿದರೆ ಅವರೂ ಕೈಗೆ ಸಿಗದೆ ಕೊನೆಗೆ ಜನರು ಪತ್ರಿಕಾ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ರಕ್ಷಣೆಗೆ ಅಂಗಲಾಚುತ್ತಿದ್ದರು. ಇದು ಮಳೆ ಪರಿಸ್ಥಿತಿ ಸಮರ್ಪಕ ನಿರ್ವಹಣೆ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಯಿತು.

ಮೊದಲ ಮಳೆಗೆ ಹೀಗಾದರೆ?
ಮಂಗಳವಾರ ಸುರಿದ ಭಾರಿ ಮಳೆ ಇಡಿ ನಗರವನ್ನು ಜಲಾವೃತಗೊಳಿಸಿತ್ತು. ಅದರಲ್ಲಿಯೂ ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳು ಅಕ್ಷರಶಃ ಹೊರಗಿನ ಸಂಪರ್ಕಗಳನ್ನು ಕಡಿದುಕೊಂಡಿತ್ತು. ಮನೆಗಳಿಗೆ ನೀರು ನುಗ್ಗಿ ಆತಂಕಗೊಂಡ ನಗರವಾಸಿಗಳು 'ಸುದಿನ'ಕ್ಕೆ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದರು. ಇನ್ನು ಮಕ್ಕಳು ಶಾಲೆಯಿಂದ ಹೊರ ಬರಲಾರದೆ, ಅತ್ತ ಹೆತ್ತ ವರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುವುದಕ್ಕೆ ಶಾಲೆಗಳಿಗೆ ಹೋಗಲು ಸಾಧ್ಯವಾಗದೆ ಎರಡೂ ಕಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತು. 

ರಸ್ತೆಯೇ ತೋಡು ಆಗಿ ಪರಿವರ್ತನೆಗೊಂಡು ಅಂಗಡಿ ಮನೆಗಳಿಗೆ ನೀರು ನುಗ್ಗಿತ್ತು. ಮೊದಲ ಮಳೆಗೆ ನಗರದ ಪರಿಸ್ಥಿತಿ ಹೀಗಾದರೆ, ಇನ್ನು ಮುಂಗಾರು ಚುರುಕುಗೊಂಡರೆ, ತಮ್ಮ ಪಾಡೇನು ಎಂಬ ಚಿಂತೆ ಈಗ ಜನರ ಜನತೆಯನ್ನು ಕಾಡುತ್ತಿದೆ.

ಗಂಭೀರ ಲೋಪ
ನಗರ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಬಹುತೇಕ ಪ್ರದೇಶಗಳನ್ನು ಕೃತಕ ನೆರೆಗಳು ಎದುರಿಸುತ್ತಾ ಬಂದಿದೆ. ಜಪ್ಪಿನಮೊಗರು, ಪಂಪ್‌ ವೆಲ್‌, ಕೊಟ್ಟಾರಚೌಕಿ, ಕೋಡಿಕಲ್‌, ಮಾಲೆಮಾರ್‌, ಉಜ್ಜೋಡಿ, ಕಾರ್‌ಸ್ಟ್ರೀಟ್‌, ಜೆಪ್ಪು ಮಹಾಕಾಳಿ ಪಡ್ಪು, ಪಡೀಲ್‌, ಅಳಕೆ, ಹೊಯಿಗೆ ಬಜಾರ್‌, ಹೊಸಬೆಟ್ಟು, ಜ್ಯೋತಿ ವೃತ್ತ, ಪಡೀಲು ಮುಂತಾದ ಪ್ರದೇಶಗಳು ವರ್ಷಂಪ್ರತಿ ಕೃತಕ ನೆರೆಗೆ ತುತ್ತಾಗುವ ಪ್ರದೇಶಗಳು.

ಕಳೆದ ವರ್ಷವೂ ಈ ಪ್ರದೇಶಗಳಲ್ಲಿ ಕೃತಕ ನೆರೆ, ಹಾನಿ ಸಂಭ ವಿ ಸಿತ್ತು. ವರ್ಷಂಪ್ರತಿ ಊರು ಕೊಳ್ಳೆಹೋದ ಮೇಲೆ ಕೋಟೆ ಬಾಗಿಲು ಹಾಕುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಾ ಬಂದಿರುವ ಮಹಾನಗರ ಪಾಲಿಕೆ ಈ ವರ್ಷವೂ ಇದೇ ಪ್ರವೃತ್ತಿ ಮುಂದುವರಿಸಿಕೊಂಡು ಬಂದಿರುವುದು ಗಂಭೀರ ಲೋಪವಾಗಿದೆ.

ಸಮರ್ಪಕ ಪರಿಶೀಲನೆ ಕೊರತೆ 
ಕಳೆದ ವರ್ಷ ಕೃತಕ ನೆರೆ ಸಂಭವಿಸಿದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿ ಸಿ ಮಳೆ ನೀರು ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ನಡೆಯಬೇಕಾಗಿತ್ತು. ನಗರದ ಮುಖ್ಯ ಚರಂಡಿ, ತೋಡುಗಳಲ್ಲಿ ನೀರು ಹರಿದು ಹೋಗಲು ಇದ್ದ ಅಡಚಣೆಗಳನ್ನು ತೆರವುಗೊಳಿಸಬೇಕಿತ್ತು. ಇದನ್ನು ಅಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಖಾತ್ರಿ ಪಡಿಸಿಕೊಳ್ಳಬೇಕಾಗಿತ್ತು. ಸಮಸ್ಯೆ ಸೃಷ್ಟಿಯಾದ ಬಳಿಕ ಅವಲೋಕನ ಸಭೆ ನಡೆ ಸುವ ಬದಲು ಮೊದಲೇ ಪರಿಶೀಲನ ಸಭೆಗಳು ನಡೆದರೆ ಸಮಸ್ಯೆಗಳು ಬಾರದಂತೆ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ.

ಇನ್ನೊಂದೆಡೆ, ನಗರದಲ್ಲಿ ಎಡೆಬಿಡದೆ ಮಳೆ ಸುರಿದು ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಪಾಲಿಕೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿ ವರ್ಗ ಆಗಲಿ ತತ್‌ಕ್ಷಣಕ್ಕೆ ಎಚ್ಚೆತ್ತುಕೊಳ್ಳುತ್ತಿದ್ದರೆ ಜನರು ಇಷ್ಟೊಂದು ಆತಂಕ ಅಥವಾ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.

ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ  ಆಕ್ರೋಶ
ಮನೆಗಳು ಜಲಾವೃತಗೊಂಡು ಅಪಾಯದಲ್ಲಿ ಸಿಲುಕಿದ್ದರೂ ಕಂಟ್ರೋಲ್‌ ರೂಂ, ಜನಪ್ರತಿನಿಧಿಗಳಿಂದ ಸಕಾಲದಲ್ಲಿ ಸ್ಪಂದನೆ ದೊರಕಿಲ್ಲ ಎಂದು ಬಹುತೇಕ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರವಿಗಾಗಿ ಕಂಟ್ರೋಲ್‌ ರೂಂಗೆ ಸಂಪರ್ಕಿಸಿದರೆ ಅಲ್ಲಿ ಸ್ಪಂದನೆ ದೊರಕುತ್ತಿಲ್ಲ.  ನಪ್ರತಿನಿಧಿಗಳ ದೂರವಾಣಿ ಸ್ವಿಚ್‌ ಆಫ್‌ ಅಥವಾ ಎಂಗೇಜ್‌ ಆಗಿದೆ. ದಯವಿಟ್ಟು ನೀವು ಏನಾದರೂ ಮಾಡಿ ಎಂದು ಮನೆ ಜಲಾವೃತಗೊಂಡು ಅಪಾಯದಲ್ಲಿದ್ದ ಕೆಲವು ನಿವಾಸಿಗಳು ಪತ್ರಿಕಾ ಕಚೇರಿಗೆ ದೂರವಾಣಿ ಮಾಡುತ್ತಿದ್ದರು. ಪತ್ರಿಕಾ ಕಚೇರಿಗೆ ಬಂದಿದ್ದ 150ಕ್ಕೂ ಅಧಿಕ ಕರೆಗಳು ಬಂದಿದ್ದು, ಇದಕ್ಕೆ ನಿದರ್ಶನವಾಗಿದೆ.

 ಕೇಶವ ಕುಂದರ್‌


Trending videos

Back to Top