CONNECT WITH US  

ಕೋಸ್ಟಲ್‌ ಹಾಡಿಗೆ ತಲೆತೂಗಿದ ಸ್ಯಾಂಡಲ್‌ವುಡ್‌ ಸ್ಟಾರ್!

ತುಳು ಸಿನೆಮಾ ಇಂದು ಕೋಸ್ಟಲ್‌ ಭಾಗಕ್ಕಷ್ಟೇ ಸೀಮಿತವಾಗಿಲ್ಲ. ಕೋಸ್ಟಲ್‌ ಗಡಿಯನ್ನು ದಾಟಿ ಮಿಂಚುತ್ತಿದೆ. ತುಳುವೇತರರು ಇರುವ ಜಾಗದಲ್ಲೂ ತುಳು ಸಿನೆಮಾ ಎದ್ದು ನಿಲ್ಲುವಷ್ಟರ ಮಟ್ಟಿಗೆ ಸಿನೆಮಾ ರೆಡಿಯಾಗಿದೆ ಎಂಬ ಹೆಮ್ಮೆ ಕೋಸ್ಟಲ್‌ವುಡ್‌ನ‌ದ್ದು. ಇಂತಹ ಅಪರೂಪದ ಸನ್ನಿವೇಶದ ಮಧ್ಯೆಯೇ ತುಳು ಸಿನೆಮಾವನ್ನು ಕೋಸ್ಟಲ್‌ವುಡ್‌ ಸ್ಟಾರ್ ಕೂಡ ಮೆಚ್ಚಿ ಕೊಂಡಾಡುತ್ತಿರುವುದು ಇನ್ನೊಂದು ಹೆಮ್ಮೆಯ ಸಂಗತಿ.

ಚಿತ್ರನಟರಾದ ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌ ಈಗಾಗಲೇ ತುಳು ಸಿನೆಮಾವನ್ನು ಕೊಂಡಾಡಿದ್ದಾರೆ. ತುಳುವಿನ ಮೂರು ಸಿನೆಮಾದ ಆಡಿಯೋ ರಿಲೀಸ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ನಟರು ತುಳು ಸಿನೆಮಾವನ್ನು ಮೆಚ್ಚಿದ್ದಾರೆ. ಇದು ತುಳು ಸಿನೆಮಾದ ಐಡೆಂಟಿಟಿಯನ್ನು ಹೆಚ್ಚು ಮಾಡಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸೂರಜ್‌ ಶೆಟ್ಟಿ ನಿರ್ದೇಶನದ 'ಅಮ್ಮೆರ್‌ ಪೊಲೀಸಾ' ಚಿತ್ರ ರಿಲೀಸ್‌ನ ಹೊಸ್ತಿಲಲ್ಲಿದೆ. 

ಈಗ ಈ ಸಿನೆಮಾದ ಆಡಿಯೋ ರಿಲೀಸ್‌ ಸುದ್ದಿ ಇಲ್ಲದೆ ಮಾಡಿ ಮುಗಿಸಲಾಗಿದೆ. ವಿಶೇಷವೆಂದರೆ, ಚಿತ್ರನಟ ದರ್ಶನ್‌ ಅವರೇ 'ಅಮ್ಮೆರ್‌ ಪೊಲೀಸಾ' ಚಿತ್ರದ ಆಡಿಯೋ ರಿಲೀಸ್‌ ಮಾಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಈ ಸಿನೆಮಾದ ಆಡಿಯೋ ರಿಲೀಸ್‌ ಆಗಿದೆ.

ಕೆಲವು ದಿನದ ಹಿಂದೆಯಷ್ಟೇ, ರಾಜೇಶ್‌ ಬ್ರಹ್ಮಾವರ ನಿರ್ಮಾಣದ ಜೆ.ಪಿ. ತೂಮಿನಾಡು ನಿರ್ದೇಶನದ 'ಕಟಪಾಡಿ ಕಟ್ಟಪ್ಪೆ' ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಕಿಚ್ಚ ಸುದೀಪ್‌ ಮಂಗಳೂರಿನಲ್ಲಿ ನಡೆಸಿದ್ದರು. ಮಂಗಳೂರಿನ ಪುರಭವನದಲ್ಲಿ ನಡೆದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಿದ್ದರು.

'ತುಳು ಸಿನೆಮಾಗಳ ಬಗ್ಗೆ ನಾನು ಕೇಳಿದ್ದೇನೆ. ಬಹಳಷ್ಟು ಕಲಾವಿದರು- ತಂತ್ರಜ್ಞರಿಗೆ ಇಲ್ಲಿ ಅವಕಾಶ ದೊರೆಯುತ್ತಿದೆ. ಮುಂದೆ ಆವಶ್ಯಕತೆ ಇದ್ದರೆ ನಾನೂ ಕೂಡ ತುಳು ಸಿನೆಮಾ ಬಗ್ಗೆ ಆಸಕ್ತಿ ಹೊಂದಿದ್ದೇನೆ' ಎಂದು ಹೇಳುವ ಮೂಲಕ ತುಳು ಸಿನೆಮಾ ಬಗ್ಗೆ ವಿಶೇಷ ಆಸಕ್ತಿಯನ್ನು ಸುದೀಪ್‌ ವ್ಯಕ್ತಪಡಿಸಿದ್ದರು. ಇದು ತುಳು ಸಿನೆಮಾ ಪಾಲಿಗೆ ಹೊಸ ಚೈತನ್ಯ ನೀಡಿದಂತಾಗಿತ್ತು.

ಅದಾಗಿ ಕೆಲವೇ ದಿನದಲ್ಲಿ ಮತ್ತೂಂದು ಸಿನೆಮಾ ಸ್ಯಾಂಡಲ್‌ವುಡ್‌ ಹೀರೋ ಕೈಯಲ್ಲಿಯೇ ಆಡಿಯೋ ರಿಲೀಸ್‌ ಮಾಡುವ ಸನ್ನಿವೇಶ ಕಾಣುವಂತಾಯಿತು. ಕೋಸ್ಟಲ್‌ವುಡ್‌ನ‌ ಬಹುನಿರೀಕ್ಷಿತ 'ದಗಲ್‌ ಬಾಜಿಲು' ಸಿನೆಮಾದ ಆಡಿಯೋವನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಬೆಂಗಳೂರಿನಲ್ಲಿ ನಡೆಸಿದರು.

ಸುರೇಶ್‌ ಅಂಚನ್‌ ಮೂಡಬಿದಿರೆ ಕಥೆ ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಬರೆದ ಎ.ಎಸ್‌. ಪ್ರಶಾಂತ್‌ ನಿರ್ದೇಶನದ ಈ ಸಿನೆಮಾವನ್ನು ಕುಂಬ್ಳೆ ಸಂತೋಷ್‌ ಶೆಟ್ಟಿ ಹಾಗೂ ಸ್ನೇಹಿತರು ನಿರ್ಮಿಸಿದ್ದಾರೆ. ಅನುಗ್ರಹ ಫಿಲಂಸ್‌ ಬ್ಯಾನರ್‌ನಡಿ ಮೂಡಿಬಂದ ಈ ಸಿನೆಮಾಕ್ಕೆ ಆರ್‌.ಡಿ. ವರ್ಮನ್‌ ಹಾಗೂ ಸಂದೇಶ್‌ ಬಾಬು ಸಂಗೀತ ಒದಗಿಸಿದ್ದಾರೆ.

ವಿಘ್ನೇಶ್‌ ಹಾಗೂ ರಶ್ಮಿಕಾ ಮುಖ್ಯ ತಾರಾಗಣದ ಈ ಸಿನೆಮಾದಲ್ಲಿ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ, ಸತೀಶ್‌ ಬಂದಳೆ, ಉಮೇಶ್‌ ಮಿಜಾರ್‌ ಮುಂತಾದವರಿದ್ದಾರೆ. 

Trending videos

Back to Top