CONNECT WITH US  

"ಚಿನ್ನ ಕೊಡಗಿನ ನಿರಾಶ್ರಿತರಿಗೆ ಅರ್ಪಣೆ'

ಇದು ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪೂವಮ್ಮರ "ಚಿನ್ನ'ದ ಮಾತು'!

ಮಂಗಳೂರು: "ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನೆರೆಯಿಂದ ತತ್ತರಿಸಿರುವ ನನ್ನ ಊರಿನ ಜನರು ಈಗ ದುಃಖದಲ್ಲಿದ್ದಾರೆ. ಹೀಗಾಗಿ ಏಶ್ಯನ್‌ ಗೇಮ್ಸ್‌ನಲ್ಲಿ ನಾನು ಗೆದ್ದಿ ರುವ ಈ ಚಿನ್ನದ ಪದಕವನ್ನು ಈ ನನ್ನ ಕೊಡಗಿನ ನಿರಾಶ್ರಿತರಿಗಾಗಿ ಸಮರ್ಪಿಸುತ್ತಿದ್ದೇನೆ'. 

ಇದು ಗೇಮ್ಸ್‌ನ ವನಿತೆಯರ 4ಗಿ400 ಮೀ. ರಿಲೇಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಕ್ರೀಡಾಪಟು ಪೂವಮ್ಮ ಅವರ ಮಾತು. ಪೂವಮ್ಮ ಜಕಾರ್ತಾದಿಂದ ದೂರವಾಣಿ ಮೂಲಕ "ಉದಯವಾಣಿ' ಜತೆ ಮಾತನಾಡಿ ಚಿನ್ನದ ಓಟದ ಬಗ್ಗೆ ಅನುಭವ ಹಂಚಿಕೊಂಡರು. 

ಪದಕ ಗೆದ್ದ ಸಂಭ್ರಮ ಹೇಗಿತ್ತು?
ತುಂಬಾನೇ ಖುಷಿಯಾಗುತ್ತಿದೆ. ಈ ಪ್ರಶಸ್ತಿಯನ್ನು ಕೊಡಗಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅರ್ಪಿಸುತ್ತೇನೆ. ನನ್ನ ಸಾಧನೆಗೆ ತಂದೆ ರಾಜು, ತಾಯಿ ಜಾಜಿ, ಸಹೋದರ ಮಂಜು, ಸಹೋದರಿ ಲಿಖೀತಾ ಸಹಿತ ಕೋಚ್‌ ಅವರ ಬೆಂಬಲವೂ ಕಾರಣವಾಗಿದೆ.  

ಚಿನ್ನ ಗೆಲ್ಲುವ ನಿರೀಕ್ಷೆ ಇತ್ತಾ?
ಖಂಡಿತಾ ಇತ್ತು. ತಂಡ ಚಿನ್ನ ಗೆಲ್ಲುವುದರ ಹಿಂದೆ ಹಿಮಾ ದಾಸ್‌, ಸರಿತಾ ಬೆನ್‌ ಮತ್ತು ವಿಸ್ಮಯಾ ಕೊರೋತ್‌ ಅವರ ಪಾತ್ರವೂ ಹಿರಿದು.

ಅಭ್ಯಾಸ ಯಾವ ರೀತಿ ಇತ್ತು?
ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ 3 ಗಂಟೆ ಅಭ್ಯಾಸ ಮಾಡು ತ್ತಿದ್ದೆವು. ನನ್ನ ತರಬೇತುದಾರರು ವಿಶ್ವಾಸ ತುಂಬುತ್ತಿದ್ದರು.

ಕೊಡಗಿನ ಪರಿಸ್ಥಿತಿಯ ಬಗ್ಗೆ ?
ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಮೊನ್ನೆಯ ಅನಾಹುತಕ್ಕೆ ನಮ್ಮ ಕೆಲವು ಸಂಬಂಧಿಕರ ಮನೆಗಳು ನೆಲ ಸಮವಾಗಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುತ್ತೇನೆ.

ಕ್ರೀಡಾಪಟುಗಳಿಗೆ ನಿಮ್ಮ ಸಲಹೆ? 
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಜೀವನದಲ್ಲಿ ಗುರಿ, ಶಿಸ್ತು ಇದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಂಗಳೂರಿನಲ್ಲಿ ಬೆಳೆದ ನಾನೇ ಸಾಕ್ಷಿ. ಕರಾವಳಿ ನನಗಿಷ್ಟವಾದ ಊರು. ಇಲ್ಲಿನ ಕೋರಿ-ರೊಟ್ಟಿ ಎಂದರೆ ಪಂಚಪ್ರಾಣ.

4 ವರ್ಷವಾದರೂ ಸೈಟ್‌ ಸಿಕ್ಕಿಲ್ಲ
ಮಗಳು ಚಿನ್ನ ಜಯಿಸಿದ್ದಕ್ಕೆ ಪ್ರತಿ ಕ್ರಿಯಿಸಿರುವ ಪೂವಮ್ಮ ಅವರ ತಂದೆ ರಾಜು "2014ರಲ್ಲಿ ಕಾಮನ್‌ವೆಲ್ತ್‌ ಮತ್ತು ಏಶ್ಯಾಡ್‌ನ‌ಲ್ಲಿ ಪದಕ ಗಳಿಸಿದ ಎಲ್ಲ ಆ್ಯತ್ಲೀಟ್‌ಗಳಿಗೆ 2 ತಿಂಗಳೊಳಗೆ ಸರಕಾರದಿಂದ ನಿವೇಶನ ನೀಡುವ ಕುರಿತು ಅಂದಿನ ಸಿಎಂ ಸಿದ್ದರಾಮಯ್ಯ, ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ಭರವಸೆ ನೀಡಿದ್ದರು. ಆದರೆ 4 ವರ್ಷ ಕಳೆದರೂ ಸರಕಾರದಿಂದ ನಿವೇಶನ ಸಿಕ್ಕಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕಾಲು ನೋವಿದ್ದರೂ ಓಡಿದ್ದೆ..!
"ಕೆಲವು ದಿನಗಳ ಹಿಂದೆ ನಾನು ಅಭ್ಯಾಸ ನಡೆಸುತ್ತಿರುವ ಸಮಯದಲ್ಲಿ ಕಾಲು ನೋವಾಗಿತ್ತು. ಏಶ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವಾಗಲೂ ಕಾಲು ನೋವು ಹಾಗೆಯೇ ಇತ್ತು. ಆದರೆ ಭಾರತಕ್ಕೆ ಪದಕ ತಂದು ಕೊಡ ಬೇಕೆಂಬ ಛಲದ ಮುಂದೆ ನೋವು ದೊಡ್ಡದಲ್ಲ. ಕೊನೆಗೂ ಆ ಛಲದಲ್ಲಿ ಯಶಸ್ವಿಯಾಗಿರುವುದಕ್ಕೆ ತುಂಬಾ ಖುಷಿಯಿದೆ' ಎನ್ನುತ್ತಾರೆ ಪೂವಮ್ಮ.

ಮುಂದಿನ ಗುರಿ ?
ಮುಂದಿನ ವರ್ಷ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ 2020ರಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ.


Trending videos

Back to Top