CONNECT WITH US  

ಇಂಡಿಯಾ ಪೋಸ್ಟ್‌  ಪೇಮೆಂಟ್ಸ್‌  ಬ್ಯಾಂಕ್‌ಗೆ ಚಾಲನೆ

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಕಾಗದ ರಹಿತ ಖಾತೆ ವ್ಯವಸ್ಥೆ. ಪ್ರತಿ ಗ್ರಾಹಕನಿಗೆ ಕ್ಯೂಆರ್‌ ಕಾರ್ಡ್‌ ನೀಡಲಾಗುತ್ತಿದ್ದು, ಅದರ ಮೂಲಕ ವ್ಯವಹಾರ ನಡೆಯುತ್ತದೆ. ಉಳಿತಾಯ, ಚಾಲ್ತಿ ಮತ್ತು ಡಿಜಿಟಲ್‌ ಸೇವಿಂಗ್‌ ಖಾತೆಗಳನ್ನು ಶೂನ್ಯ ಬ್ಯಾಲೆನ್ಸ್‌ನಲ್ಲಿ ತೆರೆಯಬಹುದಾಗಿದೆ. 1 ಲಕ್ಷ ರೂ. ವರೆಗೆ ಗರಿಷ್ಠ ವ್ಯವಹಾರ ಮಾಡಬಹುದ್ದು, ಒಂದು ಸಲಕ್ಕೆ  5 ಸಾವಿರ ರೂ. ಹಣ ತೆಗೆಯುವ ಅವಕಾಶವಿದೆ. ಪೋಸ್ಟ್‌ ಮ್ಯಾನ್‌ ಮೂಲಕ ಮನೆ ಬಾಗಿಲಲ್ಲೇ ಖಾತೆ ತೆರೆಯುವ ಮತ್ತು ನಿರ್ವಹಿಸುವ ಕಾರ್ಯವನ್ನು ಮಾಡಬಹುದು. ಐಪಿಪಿಬಿ ತಂತ್ರಾಂಶವನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಂಡರೆ ಬಿಲ್‌ ಪಾವತಿ, ಕಾಲೇಜು ಶುಲ್ಕ ಪಾವತಿ, ಫೋನ್‌ ಮತ್ತು ಕರೆಂಟ್‌ ಬಿಲ್‌ ಪಾವತಿಯನ್ನೂ  ಮಾಡಬಹುದು.

ಎಲ್ಲೆಲ್ಲಿ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಪಾಂಡೇಶ್ವರ, ಬಲ್ಮಠ, ಕಾಟಿಪಳ್ಳ, ಕುತ್ತೆತ್ತೂರು, ಸೂರಿಂಜೆ ಸೇರಿದಂತೆ ಐದು ಕಡೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಉಡುಪಿ ಪ್ರಧಾನ ಅಂಚೆ ಕಚೇರಿ, ಬನ್ನಂಜೆ, ಉಚ್ಚಿಲ, ಬೆಳಪು ಮತ್ತು ಪಣಿಯೂರು ಉಪ ಅಂಚೆ ಕಚೇರಿಗಳಲ್ಲಿ ಐಪಿಪಿಬಿ ಕಾರ್ಯಾರಂಭ ಮಾಡಿದೆ.

ಮಂಗಳೂರು ಶಾಖೆ ಆರಂಭ
ಮಂಗಳೂರು: ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಆರ್ಥಿಕ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ರೂಪಿಸಿರುವ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಶತಮಾನದ ಮಹತ್ತರ ಯೋಜನೆ ಎಂದು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ನಗರದ ಪುರಭವನದಲ್ಲಿ ಶನಿವಾರ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕಿನ ಮಂಗಳೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು.3ಮೂವರು ಗ್ರಾಹಕರಿಗೆ ಕ್ಯೂ ಆರ್‌ ಕಾರ್ಡ್‌ ವಿತರಿಸಿದರು.
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌  ಮೂಲಕ  ಗ್ರಾಮೀಣ ಪ್ರದೇಶದಲ್ಲಿರುವ ರೈತರು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡಲು ಅನುವಾಗುವ ಇ-ಮಾರ್ಕೆಟಿಂಗ್‌ ವ್ಯವಸ್ಥೆ ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿದರು. ದಕ್ಷಿಣ ಕರ್ನಾಟಕ ವಲಯ ಪೋಸ್ಟ್‌ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಅತಿಥಿಯಾಗಿದ್ದರು. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ದಿವಾಕರ್‌, ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಗದೀಶ್‌ ಪೈ ಉಪಸ್ಥಿತರಿದ್ದರು.  ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಪೇಮೆಂಟ್ಸ್‌ ಬ್ಯಾಂಕ್‌ ಉದ್ಘಾಟನೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಉಡುಪಿ ಶಾಖೆ ಉದ್ಘಾಟನೆ

ಉಡುಪಿ: ದೇಶಾದ್ಯಂತ ಅಂಚೆ ಕಚೇರಿ ಆರಂಭಿಸಿದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಉಡುಪಿ ಶಾಖೆಯನ್ನು ಶನಿವಾರ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಉದ್ಘಾಟಿಸಿದರು. ಉಡುಪಿಯಲ್ಲಿ ಈ ಬ್ಯಾಂಕ್‌ ಯಶಸ್ವಿಯಾಗಲಿದೆ ಎಂದರು.

ದಿಲ್ಲಿಯಲ್ಲಿ ಕೇಂದ್ರ ಶಾಖೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರುವ ದೃಶ್ಯವನ್ನು ಬಿತ್ತರಿಸಲಾಯಿತು. ಅಜ್ಜರಕಾಡು ಮಹಿಳಾ ಪ್ರ. ದ. ಕಾಲೇಜಿನ ಪ್ರಾಂಶುಪಾಲ ಭಾಸ್ಕರ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಸೂರ್ಯನಾರಾಯಣ ರಾವ್‌ ಸ್ವಾಗತಿಸಿ, ಐಪಿಪಿಬಿ ವ್ಯವಸ್ಥಾಪಕ ಋತ್ವಿಕ್‌ ವಂದಿಸಿದರು. ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್‌ ಭಟ್‌ ಪ್ರಸ್ತಾವನೆಗೈದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರ್ವ ಹಿಸಿದರು. 

Trending videos

Back to Top