CONNECT WITH US  

'ಧಾರ್ಮಿಕ ನಂಬಿಕೆಗಳ ತಿಳಿವಳಿಕೆ ಅಗತ್ಯ'

109ನೇ ವರ್ಷದ ಅತ್ತಾವರ ಮೊಸರು ಕುಡಿಕೆ ಉತ್ಸವ 

ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಮಾತನಾಡಿದರು.

ಮಹಾನಗರ: ಅತ್ತಾವರ ಸಾರ್ವಜನಿಕ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ 109ನೇ ವರ್ಷದ ಅತ್ತಾವರ ಮೊಸರುಕುಡಿಕೆ ಉತ್ಸವವು ಮೊಸರು ಕುಡಿಕೆ ಕಟ್ಟೆ ಮೈದಾನದಲ್ಲಿ ಜರಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ವಹಿಸಿದ್ದರು. ಕರ್ನಾಟಕ ವಿಧಾನ ಸಭಾ ಪರಿಷತ್‌ನ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ಉತ್ಸವದ ಮೂಲಕ ಬಿಂಬಿಸಲಾಗುವ ಧಾರ್ಮಿಕ ನಂಬಿಕೆಗಳನ್ನು ಅರಿಯುವ ಅಗತ್ಯವಿದೆ ಎಂದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ಜನರಲ್ಲಿ ಉತ್ಸವದ ಮೂಲಕ ಸಾಮಾಜಿಕ ಕಳಕಳಿಯ ಎಚ್ಚರ, ಚಿಂತನೆ ಮೂಡಿ ಬರಲೆಂದು ಹಾರೈಸಿದರು.

ಯೇನಪೊಯ ವಿಶ್ವ ವಿದ್ಯಾಲಯದ ಓರಲ್‌ ಪೆಥಾಲೊಜಿ ವಿಭಾಗದ ಪ್ರೊಫೆಸರ್‌ ಡಾ| ವಿಷ್ಣುದಾಸ್‌ ಪ್ರಭು, ಫಾದರ್‌ ಮುಲ್ಲರ್‌ ಹೋಮಿಯೊಪೆತಿಕ್‌ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ, ವಿಭಾಗ ಮುಖ್ಯಸ್ಥ ಡಾ| ಶಿವಪ್ರಸಾದ್‌ ಕೆ., ಉದ್ಯಮಿ ದಿಲ್‌ರಾಜ್‌ ಆಳ್ವ ಉಪಸ್ಥಿತರಿದ್ದರು.

ಬಳಿಕ ಚಿತ್ರಾಲಿ ಅವರು ವಿವಿಧ ಪಾತ್ರಗಳ ತುಣುಕನ್ನು ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಉತ್ಸವ ಸಮಿತಿಯ ಅಧ್ಯಕ್ಷ ಎ. ಸುರೇಶ್‌ ಬಾಬು ಸ್ವಾಗತಿಸಿದರು. ಸಂಯೋಜಕ ಸುನಿಲ್‌ ಕುಮಾರ್‌ ಉತ್ಸವ ಸಮಿತಿಯ ಬಗ್ಗೆ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಮ್ಲೂರು, ಅರುಣಾ ಸುಶೀಲ್‌ ಕುಮಾರ್‌, ಪೂರ್ಣಿಮಾ ಶರತ್‌ ಕುಮಾರ್‌ ಸಮ್ಮಾನ ಪತ್ರ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ಮುದ್ದುಕೃಷ್ಣ ಸ್ಪರ್ಧೆ ಮತ್ತು ಕಾರ್ಯದರ್ಶಿ ಶರತ್‌ ಕುಮಾರ್‌ ಅತ್ತಾವರ ಕ್ರೀಡಾ ಸ್ಪರ್ಧೆಯ ವಿಜೇತರ ವಿವರವನ್ನು ಓದಿದರು. ಕಂಕನಾಡಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ದಿನೇಶ್‌ ಅಂಚನ್‌ ನಿರೂಪಿಸಿದರು. ಕಾರ್ಯದರ್ಶಿ ಶರತ್‌ ಕುಮಾರ್‌ ವಂದಿಸಿದರು.

ಶಾಮ್‌ ಅತ್ತಾವರ ಇವರ ಮ್ಯಾಕ್ಸ್‌ ಇವೆಂಟ್‌ ನೇತೃತ್ವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ನಡೆದವು. ಉಮಾಮಹೇಶ್ವರ ದೇಗುಲದ ರಥಸಹಿತ ಬೆಳ್ಳಿಮಂಟಪದಲ್ಲಿ ಸ್ವರ್ಣಮಯ ಶ್ರೀಕೃಷ್ಣ ಪರಮಾತ್ಮನ ಶೋಭಾಯಾತ್ರೆಯು ಕೋಟಿ ಚೆನ್ನಯ ವೃತ್ತದಿಂದ ಆರಂಭಗೊಂಡು ವಿವಿಧ ಸಂಘ ಸಂಸ್ಥೆಗಳ ಹುಲಿವೇಷ, ದೃಶ್ಯಾವಳಿಗಳೊಂದಿಗೆ ಮೊಸರುಕುಡಿಕೆ ಕಟ್ಟೆಯಲ್ಲಿ ಸಮಾಪನಗೊಂಡಿತು. 

ಸಮ್ಮಾನ
ಶಾಸಕ ಡಿ. ವೇದವ್ಯಾಸ ಕಾಮತ್‌ ಹಾಗೂ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ನಂದಿಗುಡ್ಡಾ ಫ್ರೆಂಡ್ಸ್‌ ಬಾಬುಗುಡ್ಡೆ ಮುಖ್ಯಸ್ಥ ಜಯಂತ ಪೂಜಾರಿ ಬಾಬುಗುಡ್ಡೆ, ಬಾಲಕೃಷ್ಣ ಕುಂದರ್‌ ಮತ್ತು ಬಾಲ ಪ್ರತಿಭೆ, ಡ್ರಾಮಾ ಜೂನಿಯರ್ 1ರ ಪ್ರಥಮ ಪ್ರಶಸ್ತಿ ವಿಜೇತೆ ಚಿತ್ರಾಲಿ ತೇಜ್‌ಪಾಲ್‌ ಅವರನ್ನು ಅಭಿನಂದಿಸಲಾಯಿತು.


Trending videos

Back to Top