CONNECT WITH US  

ರಾಮ ದಂಡು ಯಾತ್ರೆ ಮಂಗಳೂರಿಗೆ

ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ರಾಮ ದಂಡು ಯಾತ್ರೆ ಮಂಗಳೂರು ತಲುಪಿತು.

ಮಹಾನಗರ: ತಿರುಪತಿಯ ಶ್ರೀ ವೆಂಕಟ್ರಮಣ ದೇವಸ್ಥಾನಕ್ಕೆ ನೀಡುವ ಕಾಣಿಕೆಯನ್ನು ಸಂಗ್ರಹಿಸಿ ಮೂಲ್ಕಿಯ ಕಾಲ ಭೈರವ ದೇವ ದರ್ಶನದೊಂದಿಗೆ ತಿರುಪತಿಗೆ ತಲುಪಿಸುವ ರಾಮ ದಂಡು ಯಾತ್ರೆ ಮೂಲ್ಕಿಯ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಪ್ರಾರಂಭಗೊಂಡು ಮಂಗಳೂರು ತಲುಪಿತು.

ಇಲ್ಲಿಂದ ಯಾತ್ರೆಯು ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ, ಉದಯಪುರ, ನರಸಾಪುರ ಮಾರ್ಗವಾಗಿ ತಿರುಪತಿ ತಲುಪಲಿದೆ. ಯಾತ್ರೆಯು ದಾರಿಯಲ್ಲಿ ಬರುವ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಿ ತಿರುಪತಿ ವೆಂಕಟ್ರಮಣ ಸ್ವಾಮಿಗಾಗಿ ಮೀಸಲಿರಿಸಿದ ಕಾಣಿಕೆಯನ್ನು ಸ್ವೀಕರಿಸಿ ಮುಂದೆ ಸಾಗಲಿದೆ. ಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಶ್ರೀ ತಿರುಪತಿ ತಿರುಮಲ ಹಾಗೂ ಶ್ರೀ ಕಾಶೀ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು ಸುಮಾರು ಐನೂರಕ್ಕೂ ಅಧಿಕ ಮಂದಿ ಮೂಲ್ಕಿ ಹಾಗೂ ಮಂಗಳೂರಿನಿಂದ ತಿರುಪತಿಗೆ ತೆರಳಲಿದ್ದಾರೆ.

ಹರಕೆ ಅಥವಾ ಯಾವುದೇ ರೂಪದಲ್ಲಿ ತಿರುಪತಿ ವೆಂಕಟ್ರಮಣ ದೇವರಿಗಾಗಿ ಮೀಸಲಿರಿಸಿದ ಕಾಣಿಕೆಯನ್ನು ಮೂಲ್ಕಿಯ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ, ಪ್ರತೀ ಶನಿವಾರ ನಡೆಯುವ ಕಾಲ ಭೈರವ ದೇವ ದರ್ಶನದಲ್ಲಿ ಸಮರ್ಪಿಸಿ ಪ್ರಸಾದ ಸ್ವೀಕರಿಸುವ ವಾಡಿಕೆ ಇದ್ದು ಇದು ಸುಮಾರು ಐನೂರು ವರ್ಷಗಳ ಹಿಂದಿನಿಂದಲೂ ನಡೆದು ಬಂದಿದೆ. ಇದೇ ಕಾಣಿಕೆಗಾಗಿ ಮೂಲ್ಕಿಯಲ್ಲಿ ವಿಶೇಷ ಕಾಣಿಕೆ ಡಬ್ಬಿಯೊಂದು ಇರಿಸಲಾಗಿದ್ದು, ಇದರಲ್ಲಿ ಸ್ವೀಕರಿಸಿದ ಕಾಣಿಕೆಯನ್ನು ಸಾಲಿಗ್ರಾಮ, ಆಂಜನೇಯ ಹಾಗೂ ಉತ್ಸವದ ಕಾಲ ಭೈರವ ಮುದ್ರೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ತಿರುಪತಿಗೆ ಸಮರ್ಪಿಸುವ ಈ ಯಾತ್ರೆಗೆ ರಾಮ ದಂಡು ಯಾತ್ರೆ ಎಂದು ಕರೆಯಲಾಗುತ್ತದೆ. ಶ್ರೀ ಕಾಶೀ ಮಠದ ಏಳನೇಯ ಮಠಾಧಿಪತಿಗಳಾದ ಶ್ರೀಮತ್‌ ಮಾಧವೇಂದ್ರ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಕಾಲ ಭೈರವ ದರ್ಶನ ಸೇವೆ ನಡೆಯುತ್ತಿದ್ದು, ಈಗ ಶ್ರೀ ಕಾಲಭೈರವ ದೇವರ ದರ್ಶನ ನಡೆಸುವಂತೆ ಮೂಲಮುದ್ರೆಯನ್ನು ಸತ್ಯನಾರಾಯಣ ನಾಯಕ್‌ ಅವರಿಗೆ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರು 2017ನೇ ಅಕ್ಟೋಬರ್‌ನಲ್ಲಿ ಮೂಲ್ಕಿಯಲ್ಲಿ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಿದ್ದಾರೆ. 

ಯಾತ್ರೆಗೆ ಪುನಃ ಚಾಲನೆ
ಹಲವಾರು ವರ್ಷಗಳಿಂದ ಈ ಸೇವೆ ಕಾರಣಾಂತರಗಳಿಂದ ನಿಂತುಹೋಗಿದ್ದು, ತಿರುಪತಿ ದೇವಸ್ಥಾನದ ಅಧಿಕಾರಿಗಳು ಪ್ರತೀ ವರ್ಷ ಮೂಲ್ಕಿಗೆ ಬಂದು ಈ ಕಾಣಿಕೆಯನ್ನು ಸ್ವೀಕರಿಸಿ ತಿರುಪತಿ ಶ್ರೀನಿವಾಸ ದೇವರಿಗೆ ಸಮರ್ಪಿಸುತ್ತಿದ್ದು, ಈಗ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶದ ಮೇರೆಗೆ ದರ್ಶನ ಸೇವೆ ಹಾಗೂ ರಾಮ ದಂಡು ಯಾತ್ರೆಗೆ ಪುನಃ ಚಾಲನೆ ದೊರೆತಿದೆ.

Trending videos

Back to Top