CONNECT WITH US  

ಕರಾವಳಿ ಭಾಗದ ಅಪರಾಧ ಸುದ್ದಿಗಳು

ಉಣ್ಣಿಕೃಷ್ಣನ್‌ ಕೊಲೆ ಪ್ರಕರಣ: ಇಬ್ಬರ ಬಂಧನ ; ಗೆಳೆಯರ ಪತ್ನಿಯರ ಮೇಲೆ ಕಣ್ಣು ಹಾಕಿದ್ದೇ ಕೊಲೆಗೆ ಪ್ರಮುಖ ಕಾರಣ
ಉಪ್ಪಿನಂಗಡಿ: ಕೇ
ರಳದ ವ್ಯಕ್ತಿಯನ್ನು ಕೊಂದು ಶವವನ್ನು ಕುಪ್ಪೆಟ್ಟಿಯಲ್ಲಿ ಎಸೆದು ಹೋಗಿದ್ದ ಇಬ್ಬರನ್ನು ದ.ಕ. ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ಎರ್ನಾಕುಲಂ ಜಿಲ್ಲೆಯ ಆಲುವಾದ ಕಂಬಿನಿಪ್ಪಡಿ ಕೊಟ್ಟಕ್ಕಾಕಾತ್‌ ಮನೆಯ ಔರಂಗಜೇಬ್‌ (37) ಹಾಗೂ ಪಾಲಕ್ಕಾಡು ಜಿಲ್ಲೆಯ ಅಲೆತ್ತೂರು ತಾಲೂಕಿನ ಚುಂದಕಾಡು ಕಾವಶ್ಯೆàರಿ ಗ್ರಾಮದ ಕೊಕ್ರತ್ತಲ್‌ ನಿವಾಸಿ ಮಹಮ್ಮದ್‌ ಶಮನಾಝ್ (23) ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ಅಪ್ಪ ಯಾನೆ ಉಣ್ಣಿ ಹಾಗೂ ಸೊಹೈಲ್‌ ಅವರ ಬಂಧನವಾಗಬೇಕಿದೆ.

ಘಟನೆಯ ವಿವರ

ಎರ್ನಾಕುಲಂನಲ್ಲಿ ಅನಾಸ್‌ ಎಂಬಾತ ದೊಡ್ಡ ರೌಡಿಯಾಗಿದ್ದು, ಈತನ ಬಲಗೈ ಬಂಟನಂತಿದ್ದ ಉಣ್ಣಿಕೃಷ್ಣನ್‌ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಇದೇ ತಂಡದಲ್ಲಿ ಔರಂಗಜೇಬ, ಅಪ್ಪು ಯಾನೆ ಉಣ್ಣಿ, ಮಹಮ್ಮದ್‌ ಶನಾಝ್ ಹಾಗೂ ಸೊಹೈಲ್‌ ಕೂಡ ಇದ್ದರು. ಅನಾಸ್‌ ನೇತೃತ್ವದಲ್ಲಿ ಈ ತಂಡ ದ.ಕ. ಜಿಲ್ಲೆಯಲ್ಲಿಯೂ ಜಾಗದ ವ್ಯವಹಾರ ನಡೆಸುತ್ತಿತ್ತು. ಹಣದ ವಸೂಲಿಗೆ ಉಣ್ಣಿಕೃಷ್ಣನ್‌ ಬಂದು ಹೋಗುತ್ತಿದ್ದ. ಜಾಗದ ವ್ಯವಹಾರವೊಂದಕ್ಕೆ ಸಂಬಂಧಿಸಿ ಅನಾಸ್‌ಗೆ 25 ಲ. ರೂ. ಬರಲು ಬಾಕಿಯಿದ್ದು, ಅದರ ವಸೂಲಿಗಾಗಿ ಉಣ್ಣಿಕೃಷ್ಣನ್‌ ಈ ನಾಲ್ವರನ್ನು ಸೇರಿಸಿಕೊಂಡು ಆ.30ರಂದು ರಾತ್ರಿ ಎರ್ನಾಕುಲಂನಿಂದ ಇನ್ನೋವಾ ಕಾರಿನಲ್ಲಿ ಉಪ್ಪಿನಂಗಡಿಗೆ ಬಂದು ಇಲ್ಲಿನ ಆದಿತ್ಯ ಲಾಡ್ಜ್ ನಲ್ಲಿ ತಂಗಿದ್ದ. ಸೆ.1ರ ಮುಂಜಾನೆ 1:45ರ ಸಮಯದಲ್ಲಿ ರೂಮಿನಿಂದ ಕಾರಿನಲ್ಲಿ ನೆಲ್ಯಾಡಿ ಕಡೆಗೆ ತೆರಳಿದ್ದರು. ಬಳಿಕ ದಾರಿ ತಪ್ಪಿತೆಂದು ರಾ.ಹೆದ್ದಾರಿಯಲ್ಲಿ ವಾಪಸ್‌ ಬರುತ್ತಿದ್ದರು. ಆಗ ಕಾರಿನ ಎದುರಿನ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿದ್ದ ಉಣ್ಣಿಕೃಷ್ಣನ್‌ನ ಕೊರಳಿಗೆ ಹಿಂದಿನಿಂದ ಮಹಮ್ಮದ್‌ ಶನಾಝ್ ನೈಲಾನ್‌ ಹಗ್ಗದಿಂದ ಬಿಗಿದಿದ್ದ. ಔರಂಗಜೇಬ ಹಾಗೂ ಅಪ್ಪು ಯಾನೆ ಉಣ್ಣಿ ಚಾಕುವಿನಿಂದ ಇರಿದು ಕೊಂದಿದ್ದರು. ಬಳಿಕ ಮೃತ ದೇಹವನ್ನು ಕಾರಿನಲ್ಲಿಟ್ಟುಕೊಂಡು ಉಪ್ಪಿನಂಗಡಿ ಮೂಲಕ ಗುರುವಾಯನಕೆರೆ ರಸ್ತೆಯಲ್ಲಿ ಸಾಗಿದ್ದು, ಕುಪ್ಪೆಟ್ಟಿ ಸೇತುವೆ ಸಮೀಪದ ಹೊಳೆಯಲ್ಲಿ ಎಸೆದು ಕಾರಿನಲ್ಲಿ ಪರಾರಿಯಾಗಿದ್ದರು.

ಹೊಳೆಯಲ್ಲಿ ಸಿಕ್ಕಿತ್ತು ಮೃತದೇಹ
ಉಣ್ಣಿಕೃಷ್ಣನ್‌ನ ಮೃತದೇಹವು ಕುಪ್ಪೆಟ್ಟಿ ಸೇತುವೆಯ ಬಳಿಯಲ್ಲಿ ಸೆ.3ರಂದು ಸಂಜೆ ಸ್ಥಳೀಯರಿಗೆ ಕಂಡು ಬಂದಿದೆ. ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಶವದಲ್ಲಿದ್ದ ಆಧಾರ್‌ ಕಾರ್ಡ್‌ನಿಂದಾಗಿ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಮೃತದೇಹದಲ್ಲಿ ಗಾಯದ ಗುರುತು ಕಂಡು ಬಂದ ಕಾರಣ  ಪೊಲೀಸರು 174(ಸಿ) ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ, ಆತನ ಮನೆಯವರಿಗೆ ಮಾಹಿತಿ ನೀಡಿದ್ದರು. ಕುಟುಂಬಿಕರು ಇದೊಂದು ಕೊಲೆ ಎಂದು ಆರೋಪಿಸಿದ್ದರಿಂದ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮೃತದೇಹವನ್ನು ಉಪ್ಪಿನಂಗಡಿಯಲ್ಲಿರುವ ನೇತ್ರಾವತಿ ಸೇತುವೆಯ ಕೆಳಗೆ ಬಿಸಾಡಲು ಯೋಜನೆ ಹಾಕಿಕೊಂಡು ತೆರಳಿದ್ದರು. ಅಲ್ಲಿ ಕಾರು ನಿಲ್ಲಿಸಿದಾಗ ನದಿಯಲ್ಲಿ ವ್ಯಕ್ತಿಯೋರ್ವ ಗಾಳ ಹಾಕುತ್ತಿರುವುದನ್ನು ಕಂಡು ಮುಂದಕ್ಕೆ ಹೋಗಿ ಕುಪ್ಪೆಟ್ಟಿ ಹೊಳೆಯಲ್ಲಿ ಎಸೆದಿದ್ದರು ಎನ್ನಲಾಗಿದೆ. ಆರೋಪಿಗಳು ಹಾಗೂ ಇನ್ನೋವಾ ಕಾರನ್ನು ಸೆ.6ರಂದು ಕಾಸರಗೋಡಿನಿಂದ ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.  ಸ್ಥಳ ಮಹಜರು ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ  ಡಾ| ರವೀಕಾಂತೇ ಗೌಡ, ಹೆಚ್ಚುವರಿ ಎಸ್ಪಿ ಸಜಿತ್‌ ವಿ.ಜೆ. ಅವರ ನಿರ್ದೇಶನದಂತೆ ಡಿ.ಸಿ.ಐ.ಬಿ. ಪೊಲೀಸ್‌ ನಿರೀಕ್ಷಕ ಸುನೀಲ್‌ ವೈ. ನಾಯಕ್‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ತಂಡದಲ್ಲಿ ಸಿಬಂದಿ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಇಕ್ಬಾಲ್‌ ಎ.ಇ., ಉದಯ ರೈ, ಪ್ರವೀಣ್‌ ಎಂ., ತಾರಾನಾಥ್‌, ಉದಯ ಗೌಡ, ಪ್ರವೀಣ ರೈ ಮತ್ತು ಸುರೇಶ್‌ ಪೂಜಾರಿ ಭಾಗವಹಿಸಿದ್ದಾರೆ. ಈ ತಂಡಕ್ಕೆ ಎಸ್‌ಪಿ ಬಹುಮಾನ ಘೋಷಿಸಿರುತ್ತಾರೆ.

ಅತಿಯಾದ ಸ್ತ್ರೀಮೋಹ ಮುಳುವಾಯಿತು
ಉಣ್ಣಿಕೃಷ್ಣನ್‌ಗೆ ಮದುವೆಯಾಗಿದ್ದರೂ ಅತಿಯಾದ ಹೆಣ್ಣಿನ ವ್ಯಾಮೋಹ ಹೊಂದಿದ್ದ ಎನ್ನಲಾಗಿದೆ. ತನ್ನ  ಜತೆಗಿದ್ದ ಮಹಮ್ಮದ್‌ ಶನಾಝ್ ಹಿಂದೂ ಹುಡುಗಿಯನ್ನು ಪ್ರೀತಿಸಿದ್ದು, ಮೂರು ತಿಂಗಳ ಹಿಂದೆ ಮದುವೆಯಾಗಿ ಇಸ್ಲಾಂಗೆ ಮತಾಂತರಿಸಿದ್ದ. ಈ ನಡುವೆ ಮಹಮ್ಮದ್‌ ಶನಾಝ್ ಗೆ ಉಣ್ಣಿಕೃಷ್ಣನ್‌ ವಿಶೇಷ ಆಸ್ಥೆ ವಹಿಸಿ ವೀಸಾ ದೊರಕಿಸಿಕೊಟ್ಟು ವಿದೇಶಕ್ಕೆ ಕಳುಹಿಸಿದ್ದ. ಬಳಿಕ ಆತನ ಪತ್ನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಇದನ್ನು ಸ್ನೇಹಿತನೋರ್ವ ಮಹಮ್ಮದ್‌ ಶನಾಝ್ ಗೆ ತಿಳಿಸಿದ್ದ. ಈ ಬಗ್ಗೆ ಶನಾಝ್ ಉಣ್ಣಿಕೃಷ್ಣನ್‌ನನ್ನು ಪ್ರಶ್ನಿಸಿದಾಗ ಆತ ತನ್ನ  ಕೃತ್ಯವನ್ನು ಸಮರ್ಥಿಸಿಕೊಂಡು ಉಡಾಫೆಯಾಗಿ ಉತ್ತರಿಸಿದ್ದ. ಈ ಕಾರಣದಿಂದ ಶನಾಝ್ ಗೆ ಈತನ ಮೇಲೆ ದ್ವೇಷ ಬೆಳೆದಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದ. ಉಣ್ಣಿಕೃಷ್ಣನ್‌, ಗೆಳೆಯ ಔರಂಗಜೇಬ್‌ನ ಪತ್ನಿಗೂ ಉಪಟಳ ನೀಡಿದ್ದರಿಂದ ಆತನೂ ಈತನೊಂದಿಗೆ  ದ್ವೇಷ ಬೆಳೆಸಿಕೊಂಡಿದ್ದ. ಈ ನಡುವೆ ಉಣ್ಣಿಕೃಷ್ಣನ್‌ ತನ್ನ ಅಕ್ರಮ ದಂಧೆಯಲ್ಲಿ ಎತ್ತರಕ್ಕೆ ಬೆಳೆದು ಪ್ರಾಬಲ್ಯ ಸ್ಥಾಪಿಸಿದ್ದ. ಇದು ಕೂಡ ಜತೆಗಿದ್ದವರಿಗೆ ಅಸೂಯೆ ತಂದಿತ್ತು. ಈ ಎಲ್ಲ ಕಾರಣದಿಂದ ಆತನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟೋರಿಯಸ್‌ ಕ್ರಿಮಿನಲ್‌ಗ‌ಳು
ಔರಂಗಝೀಬ್‌ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ ಪ್ರಕರಣ ಸಹಿತ  ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಉಣ್ಣಿಕೃಷ್ಣನ್‌ ಮೇಲೆ 16 ಪ್ರಕರಣಗಳಿವೆ.

ಪಿಸ್ತೂಲ್‌ ಮರೆತು ಬಂದಿದ್ದ
ಉಣ್ಣಿಕೃಷ್ಣನ್‌ನ ಕೊಲೆಗೆ ಈ ಹಿಂದೆಯೇ ಸ್ಕೆಚ್‌ ಹಾಕಲಾಗಿತ್ತಾದರೂ ಸಫ‌ಲವಾಗಿರಲಿಲ್ಲ. ಆತ ಯಾವತ್ತೂ ಪಿಸ್ತೂಲ್‌ ಇಟ್ಟುಕೊಂಡೇ ತಿರುಗುತ್ತಿದ್ದ. ಆದರೆ ಮೊನ್ನೆ ಉಪ್ಪಿನಂಗಡಿಗೆ ಬರುವಾಗ ಪಿಸ್ತೂಲ್‌ ತಂದಿರಲಿಲ್ಲ. ತಾನು ಪಿಸ್ತೂಲ್‌ ಮರೆತು ಬಂದುದನ್ನು ಜತೆಗಿದ್ದವರಲ್ಲೂ ತಿಳಿಸಿದ್ದ. ಈತ ಪ್ರಯಾಣ ಮಾಡುವಾಗ ನಿದ್ದೆ ಮಾಡುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದು, ಅವೆಲ್ಲವೂ ಕೊಲೆಗೆ ಪೂರಕವಾಯಿತು.

ಬೈಕಿಗೆ ಟಿಪ್ಪರ್‌ ಢಿಕ್ಕಿ; ಕಾಲೇಜು ವಿದ್ಯಾರ್ಥಿ ಸಾವು

ಕಿನ್ನಿಗೋಳಿ :
ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಮೂರುಕಾವೇರಿಯಲ್ಲಿ ಶುಕ್ರವಾರ ದ್ವಿಚಕ್ರ ವಾಹನಕ್ಕೆ ಟಿಪ್ಪರ್‌ ಢಿಕ್ಕಿ ಹೊಡೆದು ಹಿಂಬದಿ ಸವಾರರಾಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಪೋಂಪೈ ಪದವಿ ಕಾಲೇಜಿನ ಅಂತಿಮ ವರ್ಷದ ಬಿ.ಬಿ.ಎಂ. ವಿದ್ಯಾರ್ಥಿ ವರ್ಷಿತ್‌ (20) ಶುಕ್ರವಾರ ಮಧ್ಯಾಹ್ನ ಸಹಪಾಠಿ ಡೇರಿಕ್‌ ಡೆಲ್ಸನ್‌ ಡಿ'ಸೋಜಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮೂರು ಕಾವೇರಿ ಕಡೆಗೆ ಸಂಚರಿಸುವಾಗ ದುರಂತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ವರ್ಷಿತ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ಸವಾರ ಡೇರಿಕ್‌ ಡೆಲ್ಸನ್‌ ಡಿ' ಸೋಜಾ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಗೆ ಬಿದ್ದ ರಭಸಕ್ಕೆ ಡೇರಿಕ್‌ ಡೆಲ್ಸನ್‌ ಅವರ ಹೆಲ್ಮೆಟ್‌ ಒಡೆದು ಹೋಗಿದೆ. ಸುರತ್ಕಲ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ ಕುಟುಂಬ 
ಶ್ರೀಕ್ಷೇತ್ರ ಕಾರ್ನಾಡು ಧರ್ಮಸ್ಥಾನದ ಅರ್ಚಕರಾಗಿದ್ದ ದಿ| ನಾರಾಯಣ ಪೂಜಾರಿ ಅವರ ಪುತ್ರ ಗೋವಿಂದ ಪೂಜಾರಿ ಅವರ ಇಬ್ಬರು ಮಕ್ಕಳಲ್ಲಿ ಎರಡನೆಯನಾಗಿದ್ದ ವರ್ಷಿತ್‌ ಪ್ರತಿಭಾವಂತನಾಗಿ ಎಲ್ಲರ ಪ್ರೀತಿ ಗಳಿಸಿದ್ದ. ತಂದೆ ಪೈಂಟಿಂಗ್‌ ಕೆಲಸ ಮಾಡುತ್ತಿದ್ದು, ತಾಯಿ ಬೀಡಿ ಕಟ್ಟುತ್ತಿರುವ ಬಡ ಕುಟುಂಬ ಈತನದ್ದು. ಈತನಿಗೆ ಓರ್ವ ಅಕ್ಕ ಇದ್ದಾರೆ. ಆತ ಯಾವತ್ತೂ ಬೈಕ್‌ ಓಡಿಸಿದವನಲ್ಲ ಎಂದು ಪರಿಸರದವರು ದುಃಖದಿಂದ ಹೇಳುತ್ತಿದ್ದಾರೆ.

ಜಾಗದ ಕನ್ವರ್ಶನ್‌ಗೆ ಲಂಚ : ಅಧಿಕಾರಿಗೆ 4 ವರ್ಷ ಜೈಲು
ಕುಂದಾಪುರ:
ಎಂಟು ವರ್ಷಗಳ ಹಿಂದೆ ಭೂ ಪರಿವರ್ತನೆ (ಕನ್ವರ್ಶನ್‌) ಮಾಡಿ ಕೊಡಲು 3 ಸಾ.ರೂ. ಲಂಚ ಸ್ವೀಕರಿಸಿದ್ದ ಅಧಿಕಾರಿಗೆ 4 ವರ್ಷ ಕಠಿನ ಸಜೆ ಹಾಗೂ 70 ಸಾ.ರೂ. ದಂಡ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್‌ ಖಂಡೇರಿ ತೀರ್ಪು ನೀಡಿದ್ದಾರೆ. 2010ರಲ್ಲಿ ಕುಂದಾಪುರ ನಗರ ಯೋಜನೆ ಪ್ರಾಧಿಕಾರದ ನಗರ ಯೋಜಕ ಹಾಗೂ ಪ್ರಭಾರ ನಗರ ಮತ್ತು ಗ್ರಾ. ಯೋಜನಾ ಸಹಾಯಕ ನಿರ್ದೇಶಕರಾಗಿದ್ದ ಅಶೋಕ್‌ ಕುಮಾರ್‌ ಶಿಕ್ಷೆಗೊಳಗಾದವರು.

ಪ್ರಕರಣದ ಹಿನ್ನೆಲೆ
2010ರ ಸೆ. 1ರಂದು ಕುಂದಾಪುರದ ಹಂಗಳೂರು ಗ್ರಾಮದ ಮಹಮ್ಮದ್‌ ಯೂಸುಫ್‌ ಅವರ ಜಾಗಕ್ಕೆ ಸಂಬಂಧಿಸಿ ಸತೀಶ್‌ ಕುಮಾರ್‌ ಜಿಪಿಎ ಪಡೆದು, ಆ ಜಾಗದಲ್ಲಿ ಮನೆ ನಿರ್ಮಿಸಲು ಭೂಪರಿವರ್ತನೆಗಾಗಿ ನಗರ ಯೋಜನೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಅಧಿಕಾರಿಯಾಗಿದ್ದ ಅಶೋಕ್‌ ಕುಮಾರ್‌, ನಿರಾಕ್ಷೇಪಣಾ ಪತ್ರ ನೀಡಲು 3 ಸಾ. ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಸತೀಶ್‌ ಅದೇ ದಿನ ಉಡುಪಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅಂದಿನ ಉಡುಪಿ ಲೋಕಾಯುಕ್ತ ಠಾಣೆಯ ಇನ್ಸ್‌ಪೆಕ್ಟರ್‌ ಬಿ.ಪಿ. ದಿನೇಶ್‌ ಕುಮಾರ್‌  ಅವರು ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಲಂಚ ನಿರೋಧ ಕಾಯ್ದೆಯ ಕಲಂ 7ರಡಿಯಲ್ಲಿ 1 ವರ್ಷ ಕಠಿನ ಜೈಲು ಶಿಕ್ಷೆ ಹಾಗೂ 30  ಸಾ.ರೂ. ದಂಡ, ಕಲಂರಡಿಯಲ್ಲಿ 13 (1), 13 (2) 4 ವರ್ಷ ಕಠಿನ ಸಜೆ ಮತ್ತು 40 ಸಾ. ರೂ.ದಂಡ ವಿಧಿಸಿದ್ದಾರೆ. ಜೈಲು ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸಬಹುದೆಂದು ತಿಳಿಸಲಾಗಿದೆ. ಉಡುಪಿ ಲೋಕಾಯುಕ್ತ ಹಾಗೂ ಎಸಿಬಿಯ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಜಯಕುಮಾರ್‌ ಶೆಟ್ಟಿ ಇಂದ್ರಾಳಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.

ಮೊದಲ ತೀರ್ಪು
ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ನ್ಯಾಯಾ ಲಯದಲ್ಲಿ ಹಲವು ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿದ್ದರೂ, ಕುಂದಾಪುರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಲೋಕಾಯುಕ್ತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಿಕ್ಷೆ ನೀಡುತ್ತಿರುವುದು ಇದು ಮೊದಲ ಬಾರಿಯಾಗಿದೆ.

ಬಸ್ಸಿನಲ್ಲಿ ಸಿಕ್ಕಿದ ಪರ್ಸ್‌ ಮರಳಿಸಿದ ನಿರ್ವಾಹಕ

ಕುಂಬಳೆ:
ಬಸ್ಸಿನಲ್ಲಿ ಸಿಕ್ಕಿದ್ದ ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗನ್ನು ಕಂಡಕ್ಟರ್‌ ಪೊಲೀಸರಿಗೊಪ್ಪಿಸಿದ್ದಾರೆ. ಕುಂಬಳೆ - ಕಳತ್ತೂರು ನಡುವೆ ಸಂಚರಿಸುವ ವಿಠಲ ಶೆಟ್ಟಿ ಮಾಲಕತ್ವದ ಮಹಾಲಕ್ಷ್ಮೀ (ಸಂಪಿಗೆ) ಬಸ್ಸಿನಲ್ಲಿ ಬುಧವಾರ ಪರ್ಸೊಂದು ಪತ್ತೆಯಾಗಿದ್ದು, ಅದನ್ನು ಕಂಡಕ್ಟರ್‌ ಉದಯ ಅವರು ಕುಂಬಳೆ ಪೊಲೀಸರಿಗೆ ಒಪ್ಪಿಸಿದರು.

ಸ್ವಲ್ಪ ಹೊತ್ತು ಕಳೆದು ಬಂಬ್ರಾಣದ ಆಯಿಷಾ ಪರ್ಸ್‌ ಕಳೆದುಕೊಂಡಿರುವ ಬಗ್ಗೆ ದೂರು ನೀಡಲು ಠಾಣೆಗೆ ಬಂದರು. ಆಗ ಪರ್ಸ್‌ನ ಮಾಹಿತಿ ಕೇಳಿ, ಕಂಡಕ್ಟರ್‌ ಒಪ್ಪಿಸಿದ ಪರ್ಸ್‌ ಈ ಮಹಿಳೆಯದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡರು. ಬಳಿಕ  ಉದಯ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಅವರ ಮೂಲಕವೇ ಮಹಿಳೆಗೆ ಪರ್ಸ್‌ ಅನ್ನು ಕೊಡಿಸಿದ್ದಾರೆ. ಪರ್ಸ್‌ನಲ್ಲಿ ಸುಮಾರು 5 ಪವನ್‌ ತೂಕದ ವಿವಿಧ ರೀತಿಯ ಆಭರಣಗಳು ಮತ್ತು 4 ಸಾ. ರೂ. ಇತ್ತು.

ಸ್ವೈಪ್‌ ಮೆಷಿನ್‌ ವಂಚನೆ : ಪ್ರಕರಣ ದಾಖಲು
ಉಡುಪಿ: ಮ
ಣಿಪಾಲದ ಸ್ಕೆಚರ್ ಸ್ಟೋರ್‌ನಲ್ಲಿ ಸ್ವೈಪ್‌ ಮೆಷಿನ್‌ ಮೂಲಕ ಗ್ರಾಹಕರಿಗೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಛತ್ತೀಸ್‌ಗಡದ ಡಾ| ಪ್ರಭಾತ್‌ ಕುಮಾರ್‌ ಶ್ರೀವಾತ್ಸವ ಅವರ ಪತ್ನಿ ನೀತಾ ಜು.12ರಂದು ಮಣಿಪಾಲದ ಸ್ಕೆಚರ್ಸ್‌ ಸ್ಟೋರ್ಸ್‌ನಲ್ಲಿ ಶೂ ಖರೀ ದಿಸಿ ಹಣ ಪಾವತಿ ಮಾಡಲು ಎಸ್‌ಬಿಎಂ ಎಟಿಎಂ ಕಾರ್ಡ್‌ ನೀಡಿದರು. ಸ್ಟೋರ್‌ನ ಕೌಂಟರ್‌ನಲ್ಲಿದ್ದ ವ್ಯಕ್ತಿ ಒಂದು ಸ್ವೈಪ್‌ ಮೆಷಿನ್‌ಗೆ ಕಾರ್ಡನ್ನು ಎರಡು ಬಾರಿ ಸ್ವೈಪ್‌ ಮಾಡಿ ಬಳಿಕ ಇನ್ನೊಂದರಲ್ಲಿ ಸ್ವೈಪ್‌ ಮಾಡಿಸಿದ್ದಾನೆ. ಆ.13ರಂದು ನೀತಾ ಛತ್ತೀಸ್‌ಗಡದಲ್ಲಿದ್ದಾಗ ಅವರ ಖಾತೆಯಿಂದ 80,000 ರೂ. ವಿದ್‌ ಡ್ರಾ ಮಾಡಲಾಗಿತ್ತು.  ಉಡುಪಿ ಟೌನ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

ಜರ್ಕಿನ್‌ ಕದ್ದವ ಮಾಲಕನ ಕಾರನ್ನೇರಿ  ಸಿಕ್ಕಿಬಿದ್ದ!
ಉಪ್ಪಿನಂಗಡಿ: ಜ
ವುಳಿ ಅಂಗಡಿಯಲ್ಲಿ ಪ್ರದರ್ಶನಕ್ಕೆಂದು ಇರಿಸಲಾಗಿದ್ದ ಜರ್ಕಿನ್‌ ಅನ್ನು (ಚಳಿಗೆ ಧರಿಸುವ ಉಡುಪು) ಕದ್ದವ ಹೆದ್ದಾರಿಯಲ್ಲಿ ಬರುತ್ತಿದ್ದ ವಾಹನಕ್ಕೆ ಕೈ ತೋರಿಸಿ ನಿಲ್ಲಿಸಿ ಸುಲಭವಾಗಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ. ಈತ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ್ದ ಕಾರು ಜರ್ಕಿನ್‌ ಕಳವಾದ ಅಂಗಡಿ ಮಾಲಕನದ್ದಾಗಿತ್ತು!

ಪ್ರಕರಣದ ವಿವರ 
ಅಬೂಬಕ್ಕರ್‌ ಕೆ. ಅವರ ಮಾಲಕತ್ವದ ಉಪ್ಪಿನಂಗಡಿಯ 'ನಿಹಾ ಡ್ರೆಸ್ಸೆಸ್‌' ಹೆಸರಿನ ಜವುಳಿ ಅಂಗಡಿಯಲ್ಲಿ ಜರ್ಕಿನ್‌ ಅನ್ನು ತೂಗುಹಾಕಿದ್ದರು. ಜನಸಂದಣಿಯ ಸಂದರ್ಭದಲ್ಲಿ ಅದನ್ನು ಕಳ್ಳನೋರ್ವ ಕದ್ದು ಪರಾರಿಯಾಗಿದ್ದ. ಕಳವಾಗಿರುವುದು ಗಮನಕ್ಕೆ ಬಂದ ಕೂಡಲೇ ಮಾಲಕ ಸಿಸಿ ಕೆಮರಾ ಪರಿಶೀಲಿಸಿದಾಗ ಅಪರಿಚಿತನೋರ್ವ ಕದ್ದಿರುವುದು ತಿಳಿದುಬಂತು. ರಾತ್ರಿ ಅಂಗಡಿ ಮುಚ್ಚಿ ಕರುವೇಲಿನ ತನ್ನ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಜರ್ಕಿನ್‌ ಕದ್ದವ ಕಾರಿಗೆ ಕೈ ಹಿಡಿದಿದ್ದ. ಆತ ಕದ್ದಿದ್ದ ಜರ್ಕಿನ್‌ ಅನ್ನು ಧರಿಸಿದ್ದ. ಈತನನ್ನು ಗುರುತಿಸಿದ ಅಂಗಡಿ ಮಾಲಕ ಕಾರು ನಿಲ್ಲಿಸಿ ಎಲ್ಲಿಗೆ ಹೋಗಬೇಕಾಗಿತ್ತೆಂದು ಕೇಳಿದಾಗ, 'ಸತ್ತಿಕಲ್ಲಿಗೆ ಹೋಗಲಿಕ್ಕಿದೆ' ಎಂದು ತಿಳಿಸಿ ಕಾರನ್ನೇರಿದ. ಆಗ ಬುದ್ಧಿವಂತಿಕೆ  ಮೆರೆದ ಅಂಗಡಿ ಮಾಲಕ ಅಬೂಬಕ್ಕರ್‌, ತಾನು ಮನೆಗೆ ಕೊಂಡೊಯ್ಯಲು ಖರೀದಿಸಿದ ವಸ್ತು ಉಪ್ಪಿನಂಗಡಿಯಲ್ಲಿ ಬಾಕಿಯಾಗಿದೆ ಎಂದು ತಿಳಿಸಿ ಕಾರನ್ನು ನೇರವಾಗಿ ಉಪ್ಪಿನಂಗಡಿ  ಠಾಣೆಗೆ ತಂದು ನಿಲ್ಲಿಸಿದರು.

ಲಾರಿಗಳು ಢಿಕ್ಕಿ
ಉಡುಪಿ:
ರಾ.ಹೆದ್ದಾರಿ 66ರ ಆಶೀರ್ವಾದ್‌ ಚಿತ್ರಮಂದಿರದ ಬಳಿ ಸೆ. 7ರಂದು ಸಂಭವಿಸಿದ ಅಪಘಾತದಲ್ಲಿ ಎರಡು ಲಾರಿಗಳು ಜಖಂಗೊಂಡಿವೆ. ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಇನ್ನೊಂದು ಲಾರಿ ಢಿಕ್ಕಿ ಹೊಡೆದಿದೆ.

ಅಪರಿಚಿತ ಗಾಯಾಳು ಆಸ್ಪತ್ರೆಗೆ ದಾಖಲು  
ಉಡುಪಿ:
ಇಲ್ಲಿನ ನಗರಸಭೆ ಮುಂಭಾಗದ ಬಸ್‌ ನಿಲ್ದಾಣದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಸುಮಾರು 65 ವರ್ಷದವರಾಗಿದ್ದು, ಹಣೆಗೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಸಾಮಾಜಿಕ ಕಾರ್ಯಕರ್ತರು ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Trending videos

Back to Top