CONNECT WITH US  

ಮಾರುಕಟ್ಟೆಯಲ್ಲಿ ತರಕಾರಿ ಕೊರತೆ

ಇಂದು ಮೊಂತಿ ಫೆಸ್ತ್ 

ಖರೀದಿಯಲ್ಲಿ ತೊಡಗಿದ ಗ್ರಾಹಕರು.

ಮಹಾನಗರ: ಕೆಥೋಲಿಕ್‌ ಕ್ರೈಸ್ತರ ತೆನೆ ಹಬ್ಬ 'ಮೊಂತಿ ಫೆಸ್ತ್' ಗೆ ಈ ವರ್ಷ ಹರಿವೆ, ಅಲಸಂಡೆ, ಹರಿವೆ ದಂಟು, ಕೆಸುವುದಂಟು ವಿರಳವಾಗಿದ್ದು, ಮಾರುಕಟ್ಟೆಯಲ್ಲಿ ಈ ನಾಲ್ಕು ತರಕಾರಿಗಳ ತೀವ್ರ ಕೊರತೆ ಕಂಡು ಬಂದಿದೆ. ಮಳೆ ಜಾಸ್ತಿ ಬಂದು ಬೆಳೆ ನಾಶವಾದ ಕಾರಣ ಹಾಗೂ ಅಳಿದುಳಿದ ಗಿಡಗಳಲ್ಲಿ ಫಸಲು ಕಡಿಮೆಯಾದ ಹಿನ್ನೆಲೆಯಲ್ಲಿ ಅಲಸಂಡೆ ಮತ್ತು ಹರಿವೆಯ ಅಭಾವ ಕಂಡು ಬಂದಿದೆ ಎನ್ನಲಾಗಿದೆ. ಕೆಸುವು ದಂಟಿಗೆ ಹೆಚ್ಚು ಬೇಡಿಕೆ ಇರಲಾರದೆಂಬ ಭಾವನೆ ಇದ್ದ ಕಾರಣ ಅದು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಕೆಥೋಲಿಕರು ಸೆ. 8ರಂದು ಆಚರಿಸುವ ತೆನೆ ಹಬ್ಬ ಎಂದರೆ ಅದು ಶಾಕಾಹಾರಿಯ ಹಬ್ಬ. ಅಂದು ಹಸಿರು ತರಕಾರಿಯ ಖಾದ್ಯಗಳೇ ಪ್ರಧಾನ. ಐದು, ಏಳು ಅಥವಾ ಒಂಬತ್ತು ಬಗೆಯ ತರಕಾರಿ ಪದಾರ್ಥಗಳನ್ನು ತಯಾರಿಸುವುದು ರೂಢಿ. ಆದರೆ ಈ ವರ್ಷ ಕೆಲವು ತರಕಾರಿಗಳೇ ವಿರಳವಾಗಿವೆ.

ಸ್ಥಳೀಯ ಬೆಂಡೆ ಬೆಲೆ ಏರಿಕೆ
ಪ್ರತಿ ವರ್ಷದಂತೆ ಈ ವರ್ಷ ಕೂಡ ಸ್ಥಳೀಯ ಬೆಂಡೆ ದುಬಾರಿಯಾಗಿದೆ; ಸಾಮಾನ್ಯವಾಗಿ ಸ್ಥಳೀಯ ಬೆಂಡೆ ಕೆ.ಜಿ.ಗೆ 50- 60 ರೂ. ಬೆಲೆ ಇರುತ್ತಿದ್ದು, ತೆನೆ ಹಬ್ಬದ ಮುಂಚಿನ ದಿನವಾದ ಶುಕ್ರವಾರ ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಇದರ ಬೆಲೆ 120 ರೂ. ಇತ್ತು. ಸ್ಥಳೀಯ ಮುಳ್ಳು ಸೌತೆ (60 ರೂ.) ಮತ್ತು ಸ್ಥಳೀಯ ಹೀರೆ ಕಾಯಿ (50 ರೂ.)ಗೆ ಎಂದಿನ ದರಕ್ಕಿಂತ ತಲಾ 10 ರೂ. ಜಾಸ್ತಿಯಾಗಿದೆ. ಹರಿವೆ ದಂಟು ಬೆಲೆ 50 ರೂ. ಗಳಷ್ಟಿವೆ.

ಕೃಷ್ಣಾಷ್ಟಮಿ, ತೆನೆ ಹಬ್ಬ ಮತ್ತು ಚೌತಿ ಹಬ್ಬಗಳು ಕೆಲವು ದಿನಗಳ ಅಂತರದಲ್ಲಿ ಬಂದಿರುವುದರಿಂದ ಹಾಗೂ ಕೇರಳದಲ್ಲಿ ಪ್ರವಾಹದ ಕಾರಣ ಓಣಂ ಆಚರಣೆ ಇಲ್ಲದಿರುವುದರಿಂದ ಈ ವರ್ಷ ತರಕಾರಿಗಳ ಬೆಲೆ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಖರೀದಿ ಭರಾಟೆ 
ತೆನೆ ಹಬ್ಬದ ಪ್ರಯುಕ್ತ ಶುಕ್ರವಾರ ಮಾರುಕಟ್ಟೆಯಲ್ಲಿ ತರಕಾರಿಗಳ ಖರೀದಿಯ ಭರಾಟೆ ಕಂಡು ಬಂದಿತ್ತು. ಕೆಲವೊಂದು ತರಕಾರಿಗಳ ಕೊರತೆ ಇದ್ದ ಕಾರಣ ಈ ತರಕಾರಿಗಳು ಇರುವ ಅಂಗಡಿಗಳಲ್ಲಿ ಗ್ರಾಹಕರ ಒತ್ತಡ ಜಾಸ್ತಿ ಇತ್ತು. 

Trending videos

Back to Top