ಪ್ಲಾಸ್ಟಿಕ್ ನಿಷೇಧ: ಮೂಡಬಿದಿರೆಯಲ್ಲಿ ಮುಂದುವರಿದ 'ದಂಡ' ಯಾತ್ರೆ

ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ದಂಡ ವಿಧಿಸಲಾಯಿತು.
ಮೂಡಬಿದಿರೆ: ಕೆಲವು ವಾರಗಳಿಂದ ಮೂಡಬಿದಿರೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ನಾನ್ ವೋವನ್ ಚೀಲಗಳನ್ನು ಬಳಸಬಾರದು ಎಂದು ಪುರಸಭೆಯಿಂದ ಆಂದೋಲನ ನಡೆಯುತ್ತಿದ್ದು ವಾರದ ಸಂತೆಯ ದಿನವಾದ ಶುಕ್ರವಾರ ಅಧಿಕಾರಿಗಳು ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಆಂದೋಲನದ ಬಿಸಿ ಮುಟ್ಟಿಸಿ ದಂಡ ಹಾಕಿದರು.
ಒಂದು ಹಂತದಲ್ಲಿ ಅಧಿಕಾರಿಗಳು, ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವೆ ಬಿಸಿಬಿಸಿ ಚರ್ಚೆ ನಡೆದು ಸದ್ಯದಲ್ಲೇ ಈ 'ಚರ್ಚೆ' ಪೊಲೀಸ್ ಠಾಣೆಯತ್ತ ಸಾಗುವ ಎಲ್ಲ ಲಕ್ಷಣ ಕಂಡಿದೆ. ಗ್ರಾಹಕರು ತರಕಾರಿ ಸಾಮಗ್ರಿಗಳನ್ನು ತುಂಬಿಸಿಕೊಂಡು ಹೋಗಲು ತಂದಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಂಡು ಅವರಿಗೂ ದಂಡವನ್ನು ವಿಧಿಸಿ ಬಟ್ಟೆಯ ಚೀಲಗಳನ್ನು ನೀಡಲಾಯಿತು.
ಪೊಲೀಸ್ ರಕ್ಷಣೆಯೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್., ಮಂಜುನಾಥ್, ಆನಂದಬಾಬು, ರವಿರಾಜ್, ದಾಮೋದರ್, ಜನಾರ್ದನ, ಪೌರ ಕಾರ್ಮಿಕರಿದ್ದರು.