CONNECT WITH US  

ಕರಾವಳಿ ಅಪರಾಧ ಸುದ್ದಿಗಳು

ಅಪಘಾತ: ಗಾಯಾಳು ಬೈಕ್‌ ಸವಾರ ಸಾವು; ಅಂಗಾಂಗ ದಾನ
ಕುಂದಾಪುರ: ಹೆಮ್ಮಾಡಿಯ ಜಾಲಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.6ರಂದು ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ  ಸೋಮವಾರ ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೆಮ್ಮಾಡಿ ನಿವಾಸಿ ಸದಾನಂದ ಪೈ - ವಿಜಯಲಕ್ಷ್ಮೀ ಪೈ ಅವರ ಪುತ್ರ ವಾಸುದೇವ ಪೈ (25)  ಅವರು ಮೃತಪಟ್ಟ ವರು. ಇವರು ಡಿಪ್ಲೊಮಾ ಪದವಿ ಶಿಕ್ಷಣ ಪೂರೈಸಿ ಮಣಿಪಾಲದ ಸಂಸ್ಥೆಯೊಂದರಲ್ಲಿ ಡಿಸೈನಿಂಗ್‌ ಕೆಲಸ ಮಾಡುತ್ತಿದ್ದರು. ಮೃತರು ತಂದೆ, ತಾಯಿ, ಅಕ್ಕ ಮತ್ತು ತಂಗಿಯನ್ನು ಅಗಲಿದ್ದು, ಕುಟುಂಬದ ಏಕೈಕ ಪುತ್ರರಾಗಿದ್ದರು.


ಕಟ್‌ಬೆಲೂರು ಗ್ರಾಮದ  ಜಾಲಾಡಿಯ ಲಂಬೋದ‌ರ ವಿ. ನಾಯ್ಕ ಅವರ ಲಾರಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ವಾಸುದೇವ ಪೈ ಅವರಿಗೆ ಢಿಕ್ಕಿ ಹೊಡೆದಿತ್ತು.  ಮೃತರ ಕಣ್ಣು ಮತ್ತು ಕಿಡ್ನಿಗಳನ್ನು ಮನೆಯವರು ಕೆಎಂಸಿ ಆಸ್ಪತ್ರೆಯಲ್ಲಿ ದಾನ ಮಾಡಿದ್ದು, ಆ ಮೂಲಕ  ಸಾವಿನ ನೋವಿನಲ್ಲೂ ಕೆಲವರ ಬಾಳಿಗೆ ಬೆಳಕಾಗಿದ್ದಾರೆ.

ಮಂಡಾಡಿಜೆಡ್ಡು ಕೊಲೆ ಪ್ರಕರಣ: ಸೆರೆ
ಹೆಬ್ರಿ:  ಇಲ್ಲಿಗೆ ಸಮೀಪದ ಮಂಡಾಡಿಜೆಡ್ಡು ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರದ ಹಾಡಿಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಪ್ರಕ ರಣವು ಕೊಲೆ ಎಂದು ಸಾಬೀತಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ರಿ ಠಾಣೆಗೆ ದೂರು
ಕೊಲೆಯಾಗಿರುವ  ಚೆನ್ನಪಟ್ಟಣದ ಕಾರು ಚಾಲಕ ನಾಗರಾಜ್‌ (42)  ಅವರ ಸಹೋದರ ಹೆಬ್ರಿ ಠಾಣೆಯಲ್ಲಿ ದೂರು  ದಾಖಲಿಸಿದ್ದು, ತನ್ನ ಸಹೋದರನನ್ನು ಕೊಲೆ ಮಾಡಿ ಆರೋಪಿಗಳು ಸಾಕ್ಷಿ ನಾಶ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹೆಬ್ರಿ ಠಾಣೆಗೆ ನೀಡಿದ್ದ ದೂರನ್ನು ಚೆನ್ನಪಟ್ಟಣ ಠಾಣೆಗೆ ವರ್ಗಾಯಿಸಲಾಗಿದೆ. 

ಶಾಲೆ ವೇದಿಕೆಯಲ್ಲಿರಕ್ತದ ಕಲೆ  
ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗಿಬರುವುದಾಗಿ ಹೊರಟಿದ್ದ ಅಕ್ಷಯ ಅವರ ತಂಡ  ಮಂಡಾಡಿಜೆಡ್ಡು ತನಕ ಬಂದಿರುವುದು  ಸಂಶಯ ಮೂಡಿದೆ.ಕಾರು ಚಾಲಕ ನಾಗರಾಜ ಎಲ್ಲಿ ಕೊಲೆಯಾದ ಎಂಬ ಬಗ್ಗೆ ಜನರಿಗೆ ಸಂಶಯ ಮೂಡಿದ್ದು, ಮಂಡಾಡಿಜೆಡ್ಡು ಶಾಲಾ ವೇದಿಕೆಯಲ್ಲಿ ರಕ್ತದ ಕಲೆ ಇತ್ತು ಎನ್ನಲಾಗುತ್ತಿದೆ. ಯಾವುದಾದರೂ ಪ್ರಾಣಿಯ ರಕ್ತದ  ಕಲೆ ಆಗಿರಬಹುದು ಎಂದು ಶಾಲೆಯವರು ಅದನ್ನು ಶುಚಿಗೊಳಿಸಿದ್ದಾರೆ ಎನ್ನಲಾಗುತ್ತಿದೆ. 2 ದಿನಗಳ ಬಳಿಕ ವಾಸನೆ  ಬಂದು  ಪರಿಶೀಲಿಸಿದಾಗ ಕಾಡಿನಲ್ಲಿಶವ ಕಂಡುಬಂದಿತ್ತು.  ಅಲ್ಲಿ ನಾಯಿಯ ಶವ ಹಾಗೂ ರಾಶಿ ಬಿದ್ದ ಬಿಯರ್‌ ಬಾಟ್ಲುಗಳು ಇನ್ನಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ಹೇಳುತ್ತಾರೆ. 
ಪ್ರಕರಣಕ್ಕೆ ಸಂಬಂಧಿಸಿ ಚೆನ್ನಪಟ್ಟಣ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದು ನಾಗರಾಜ್‌ ಹೇಗೆ ಯಾಕೆ ಶವವಾದ ಎಂಬ ಬಗ್ಗೆ ತನಿಖೆಯಿಂದ ತಿಳಿಯಲಿದೆ ಎಂದು ಚೆನ್ನಪಟ್ಟಣದ ಠಾಣಾಧಿಕಾರಿ ಸತೀಶ್‌ ತಿಳಿಸಿದ್ದಾರೆ. 

ನಾಟೆಕಲ್‌: ರಸ್ತೆಗೆ  ಬಿದ್ದ ಹೈಟೆನ್ಶನ್ ತಂತಿ!
ಉಳ್ಳಾಲ:  ಹೈಟೆನ್ಶನ್ ತಂತಿಗಳಿದ್ದ ವಿದ್ಯುತ್‌ ಕಂಬಗಳು ರಸ್ತೆಗುರಳಿದ ಘಟನೆ ನಾಟೆಕಲ್‌ ಜಂಕ್ಷನ್‌ ಬಳಿ ನಡೆದಿದ್ದು, ದ್ವಿಚಕ್ರ ವಾಹನ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಭಾರತ ಬಂದ್‌ ಕಾರಣದಿಂದ ರಸ್ತೆಯಲ್ಲಿ ವಾಹನ ಸಂಚಾರ ವಿರಳವಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದ್ದು, ಉಳ್ಳಾಲದಾದ್ಯಂತ ರಾತ್ರಿ ವಿದ್ಯುತ್‌ ಕಡಿತಗೊಂಡಿದೆ. 

ಸೋಮವಾರ ಸಂಜೆ ವೇಳೆ ಇಲ್ಲಿನ ಜಂಕ್ಷನ್‌ನಲ್ಲಿ ರಸ್ತೆಬದಿಯಿದ್ದ ಎರಡು ವಿದ್ಯುತ್‌ ಕಂಬಗಳು ಏಕಾಏಕಿ  ಉರುಳಿದ್ದು, ಇನ್ನೆರೆಡುವಾಲಿ ನಿಂತಿವೆ. ಕೆಲವು ತಿಂಗಳ ಹಿಂದೆ ಈ ಭಾಗದಲ್ಲಿ ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆದಿದ್ದು, ಆ ಸಂದರ್ಭ ಸ್ಥಳಾಂತರಿಸಲಾಗಿದ್ದ ಕಂಬಗಳನ್ನು ಚರಂಡಿ ಪಕ್ಕದಲ್ಲೇ ಇದ್ದ ಮಣ್ಣಿನ ದಿಬ್ಬದ ಮೇಲೆ ಹಾಕಲಾಗಿತ್ತು. ಅವೈಜ್ಞಾನಿಕವಾಗಿ ಕಂಬವನ್ನು ಸ್ಥಳಾಂತರಿಸಿದ್ದೇ ಇಂದಿನ ಘಟನೆಗೆ ಕಾರಣವಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರುವ ಹರಿದು ಮಣ್ಣು ಸವೆತ ಉಂಟಾದ ಪರಿಣಾಮ ಕಂಬಗಳು ಬಿದ್ದಿವೆ ಎನ್ನಲಾಗಿದೆ. ಮೆಸ್ಕಾಂನಿಂದ ದುರಸ್ತಿ ಕಾರ್ಯ ನಡೆಯುತ್ತಿದೆ.

ಮಣೂರು: ಅಕ್ಕಿ ಗಿರಣಿಯಿಂದ ಪಡಿತರ ಅಕ್ಕಿ ವಶ
ಕೋಟ: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕುಂದಾಪುರ ಸಹಾಯಕ ಆಯುಕ್ತರು ಹಾಗೂ ಉಡುಪಿ ಪಡಿತರ ವಿಭಾಗದ ಸಹಾಯಕ ಉಪ ನಿರ್ದೇಶಕರು ಜಂಟಿ ದಾಳಿ ನಡೆಸಿ ಅಕ್ಕಿಗಿರಣಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 54.49 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಕೋಟ ಮಣೂರಿನ ವಿಜಯ ರೈಸ್‌ಮಿಲ್‌ನಿಂದ ಸೋಮವಾರ ವಶ ಪಡಿಸಿಕೊಂಡಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ಸೂಚನೆಯಂತೆ ಕುಂದಾಪುರ ಎ.ಸಿ. ಭೂಬಾಲನ್‌ ಮತ್ತು ಆಹಾರ ವಿಭಾಗದ ಡಿ.ಡಿ. ಎಂ.ಆರ್‌. ಭಟ್‌, ಉಡುಪಿ ತಾಲೂಕು ಆಹಾರ ನಿರೀಕ್ಷಕಿ ಪಾವರ್ತಿ ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ. ಸ್ಥಳ ದಲ್ಲಿ 54.49 ಕ್ವಿಂಟಾಲ್‌ ಪಡಿತರ‌ ಬೆಳ್ತಿಗೆ ಅಕ್ಕಿ, 44 ಪ್ಯಾಕೆಟ್‌ ಕ್ಷೀರ ಭಾಗ್ಯದ ಹಾಲಿನ ಪುಡಿ ಪತ್ತೆಯಾಗಿದೆ.
ಈ ಕುರಿತು ವಿಚಾರಿಸಿದಾಗ ಪಡಿತರ ಚೀಟಿದಾರರು ತಮಗೆ ಸಿಗುವ ಬೆಳ್ತಿಗೆ ಅಕ್ಕಿಯನ್ನು ನೀಡಿ ಕುಚ್ಚಿಗೆ ಅಕ್ಕಿಯನ್ನು ನಮ್ಮಿಂದ ಪಡೆಯುತ್ತಾರೆ ಹಾಗೂ ವಾಯಿದೆ ಮೀರಿದ ಕ್ಷೀರ ಭಾಗ್ಯದ ಹಾಲಿನ ಪುಡಿಯನ್ನು ಜಾನು ವಾರುಗಳಿಗೆ ನೀಡಲು ದಾಸ್ತಾನಿರಿಸಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಕ್ಕಿಯನ್ನು ಉಡುಪಿಯ ಟಿ.ಎ.ಪಿ.ಸಿ.ಎಂ.ಎಸ್‌.ನ ವಶಕ್ಕೆ ನೀಡ ಲಾಗಿದ್ದು, ಆರೋಪಿ ಉಮಾನಾಥ ವಿರುದ್ಧ ಕೋಟ  ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಜೀಪ್‌ ಬ್ರೇಕ್‌ಫೇಲ್‌: ತಪ್ಪಿದ ಭಾರೀ ಅನಾಹುತ
ಕೋಟ: ಕುಂದಾಪುರದ ಕಡೆಗೆ ಸಾಗುತ್ತಿದ್ದ ಮಹೇಂದ್ರ ಜೀಪ್‌ ಬ್ರೇಕ್‌ ಫೇಲಾಗಿ ಡಿವೈಡರ್‌ ಮೇಲೇರಿ  ಸ್ವಲ್ಪ ದೂರ  ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದೆ. ಅನಂತರ ನಿಯಂತ್ರಣಕ್ಕೆ ಬಂದ ಕಾರಣ ಸಂಭಾವ್ಯ ಭಾರೀ ಅನಾಹುತ ತಪ್ಪಿದ ಘಟನೆ ಸೋಮವಾರ ಕೋಟದಲ್ಲಿ ಸಂಭವಿಸಿದೆ. ಕೋಟದ ಸಿದ್ಧಿ ಮೆಡಿಕಲ್‌ ಎದುರು ಈ ಘಟನೆ ನಡೆದಿದೆ.  ಸೋಮವಾರ ಬಂದ್‌ ಇದ್ದಕಾರಣ ವಾಹನ ಸಂಚಾರ ಕಡಿಮೆಯಿದ್ದು, ದೊಡ್ಡ ಅನಾಹುತ ತಪ್ಪಿದೆ. ಜೀಪ್‌ನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಪೊಲೀಸ್‌ಗೆ ಹಲ್ಲೆ:  ನ್ಯಾಯಾಂಗ ಬಂಧನ 
ಮಂಗಳೂರು:
ಬಜಪೆಯಲ್ಲಿ ರವಿವಾರ ಕರ್ತವ್ಯ ನಿರತ ಪೊಲೀಸ್‌ ದೇವಪ್ಪ ಜಿ.ಹೊಸಮನಿ ಮೇಲೆ ಹಲ್ಲೆ ನಡೆಸಿದ  ಕುಲಶೇಖರದ ಸುಜಿತ್‌ ಆಳ್ವನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುಜಿತ್‌ ಆಳ್ವ  ಬಜಪೆ  ಪೇಟೆಯಲ್ಲಿ ಆಟೋ ಚಾಲಕರೊಬ್ಬರ ಜತೆ ವಾಗ್ವಾದ ನಡೆಸುತ್ತಿದ್ದಾಗ ಸಾಗರ ಕವಚ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು.  ಪಾನಮತ್ತನಾಗಿ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿದ ಕಾರಣ ಸುಜಿತ್‌ನನ್ನು ವೈದ್ಯಕೀಯ ತಪಾಸಣೆ ನಡೆಸಲು ಪೊಲೀಸರು ಆತನ ಕೈ ಹಿಡಿದೆಳೆದಾಗ ಆತ  ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಪರಿಣಾಮ ದೇವಪ್ಪ ಅವರ ಮೂಗಿಗೆ ಗಾಯವಾಗಿ, ರಕ್ತ ಸುರಿಯಲಾರಂಭಿಸಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಯುವಕ  ನೀರುಪಾಲು
ಮಂಜೇಶ್ವರ:
ಹೊಳೆ ದಾಟುತ್ತಿದ್ದ ಯುವಕ ನೀರುಪಾಲಾದ ಘಟನೆ ಸೋಮವಾರ ಸಂಭವಿಸಿದ್ದು, ಸಾಯಂಕಾಲ  ಮೃತ ದೇಹವನ್ನು ಮೇಲಕ್ಕೆತ್ತಲಾಯಿತು. ಮೀಯಪದವು ಮೂಡಂಬೈಲಿನ ಅಜ್ಜಿಹಿತ್ಲು ನಿವಾಸಿ ಮನೋಜ್‌ ಕುಮಾರ್‌ (27) ಮೃತಪಟ್ಟವರು. ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತೀವ್ರ ಶೋಧದ ಬಳಿಕ ಸಂಜೆ 6.30ರ ಹೊತ್ತಿಗೆ ಮೃತದೇಹ ಪತ್ತೆಯಾಯಿತು.ಇವರು ಅವಿವಾಹಿತರಾಗಿದ್ದು, ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ  ಊರಿಗೆ ಬಂದಿದ್ದರು. ತಂದೆ ರಾಮ ಅವರು ಎರಡು ವರ್ಷಗಳ ಹಿಂದೆ ತೀರಿ ಹೋಗಿದ್ದರು.


Trending videos

Back to Top