CONNECT WITH US  

ಕರಾವಳಿ ಅಪರಾಧ ಸುದ್ದಿಗಳು

 ಕೆಟ್ಟು ನಿಂತ ಲಾರಿಗೆ ಈಶರ್‌ ಢಿಕ್ಕಿ: ಇಬ್ಬರಿಗೆ ಗಾಯ
ತೆಕ್ಕಟ್ಟೆ:
ಇಲ್ಲಿನ ಕನ್ನುಕೆರೆ ರಾಘವೇಂದ್ರ ಸ್ವಾಮಿ ಮಠದ ಸಮೀಪ ಮಂಗಳವಾರ ರಾ.ಹೆ.66 ರಲ್ಲಿ ಟಯರ್‌ ಸಿಡಿದು ಕೆಟ್ಟು ನಿಂತ ಲಾರಿಗೆ ಹಿಂದಿನಿಂದ ಬಂದ ಈಶರ್‌ ವಾಹನ ಢಿಕ್ಕಿಯಾಗಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಕುಂದಾ ಪುರದ ಕಡೆಗೆ ಟೈಲ್ಸ್‌ ತುಂಬಿಕೊಂಡು ಸಾಗುತ್ತಿದ್ದ ಲಾರಿ ಬೆಳಗ್ಗೆ ಟಯರ್‌ ಸಿಡಿದು ಕೆಟ್ಟು ನಿಂತಿತ್ತು.

ಸಂಜೆ ವೇಳೆಗೆ ಮಹಾರಾಷ್ಟ್ರದ ಕಡೆಗೆ ಸಾಗುತ್ತಿದ್ದ ಈಶರ್‌ ವಾಹನ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಈಚರ್‌ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಚಾಲಕನ ಎಡಭಾಗದಲ್ಲಿ ಕುಳಿತಿದ್ದ ಸಹ ಚಾಲಕ ಸುಲ್ತಾನ್‌ (38) ವಾಹನದ ನಡುವೆ ಸಿಲುಕಿದ್ದು, ಬಲ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಈಶರ್‌ ವಾಹನದ ಚಾಲಕ ಕರೀಂ (37) ತಲೆ ಮತ್ತು ಬೆನ್ನಿಗೆ ಗಾಯಗಳಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ತೆಕ್ಕಟ್ಟೆ ಫ್ರೆಂಡ್ಸ್‌ ಆ್ಯಂಬುಲೆನ್ಸ್‌ ಮೂಲಕ ಗಾಯಾಳುಗಳನ್ನು ತತ್‌ಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳೀಯ ಯುವಕರ ಸ್ಪಂದನ 
ಅಪಘಾತದಿಂದಾಗಿ ರಾ.ಹೆ.66 ರಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆಯಾಗಿ ಅವಘಡಗಳು ಸಂಭವಿಸುವ ಸಾಧ್ಯತೆಯನ್ನು ಅರಿತ ಕನ್ನುಕೆರೆ ಯುವಕರಾದ ಭರತ್‌, ಮುನ್ನ, ರಾಜೇಶ್‌, ಲಕ್ಷ್ಮಣ, ಹರೀಶ್‌ ಟಯರ್‌ ಸಿಡಿದು ಕೆಟ್ಟು ನಿಂತ ಲಾರಿಗೆ ಪರ್ಯಾಯ ಟಯರ್‌ ಅಳವಡಿಸುವ ಮೂಲಕ  ವಾಹನ ತೆರವು ಕಾರ್ಯದಲ್ಲಿ ಸ್ಪಂದಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ
ಬೆಳಗ್ಗೆಯಿಂದಲೇ ರಾ.ಹೆ.66 ರಸ್ತೆಯ ಮಧ್ಯದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದು ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಹೆದ್ದಾರಿ ನಿರ್ವಹಣೆ ಮಾಡುವ ನವಯುಗ ಕಂಪೆನಿ ಹಾಗೂ ಹೆದ್ದಾರಿ ಗಸ್ತು ಪೊಲೀಸ್‌ (ಹೈವೇ ಪಾಟ್ರೋಲ್‌) ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷé ತಾಳಿದ್ದಾರೆ. ಇದು ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ ಪೊಲೀಸ್‌ ಠಾಣಾಧಿಕಾರಿ ನರಸಿಂಹ ಶೆಟ್ಟಿ, ಸಿಬಂದಿ ಪ್ರದೀಪ್‌ ನಾಯಕ್‌, ಮಂಜುನಾಥ, ಸೂರ್ಯ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಶಾಲೆಬಾಗಿಲು: ಕಲ್ಲು ಸಾಗಾಟದ ಲಾರಿ ಅಂಗಡಿಗೆ ಢಿಕ್ಕಿ

ಉಪ್ಪುಂದ: ಇಲ್ಲಿನ ಶಾಲೆಬಾಗಿಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಿನಿ ಲಾರಿಯೊಂದು ರಸ್ತೆಯ ಸಮೀಪದ ಅಂಗಡಿಗೆ ನುಗ್ಗಿ ಢಿಕ್ಕಿ ಹೊಡೆದಿರುವ ಘಟನೆ ಸೆ. 11ರಂದು ಮಧ್ಯಾಹ್ನ ಸಂಭವಿಸಿದೆ.
ಕೆಂಪು ಕಲ್ಲುಗಳನ್ನು ತುಂಬಿಕೊಂಡು ಬೈಂದೂರಿನಿಂದ ಉಪ್ಪುಂದದ ಕಡೆಗೆ ಬರುತ್ತಿರುವಾಗ ಶಾಲೆಬಾಗಿಲು ಬಳಿ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಬಲ ಬದಿಗೆ ತಿರುಗಿಸಿದಾಗ ಲಾರಿ ನಿಯಂತ್ರಣಕ್ಕೆ ಸಿಗದೆ ಸ್ಥಳೀಯ ಅಂಗಡಿಗೆ ನುಗ್ಗಿದೆ. ಕಲ್ಲುಗಳು ರಸ್ತೆಯ ಮೇಲೆ ಬಿದ್ದವು. ಚಾಲಕ ಮತ್ತು ಸಹಾಯಕ ಅಪಾಯದಿಂದ ಪಾರಾಗಿದ್ದಾರೆ.
ರಾ.ಹೆದ್ದಾರಿಯಲ್ಲಿ ಲಾರಿಯೊಂದು ಯು-ಟರ್ನ್ ಪಡೆಯುತ್ತಿರುವಾಗ ಈ ಸಂದರ್ಭದಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ಕಾರು ತತ್‌ಕ್ಷಣ ನಿಲ್ಲಿಸಿದ್ದು, ಇದನ್ನು ಗಮನಿಸದ ಲಾರಿ ಚಾಲಕ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ತೀರ ಬಲ ಬದಿಗೆ ತಿರುಗಿಸಿದಾಗ ಲಾರಿ ಒಳ ರಸ್ತೆಯನ್ನು ಪ್ರವೇಶಿಸಿ ಪೇಟೆ ರಸ್ತೆಯಲ್ಲಿರುವ ಬೇಕರಿಯ ಎತ್ತರದ ಮೂರು ಮೆಟ್ಟಿಲುಗಳನ್ನು ಹತ್ತಿ, ಪಕ್ಕದ ಅಂಗಡಿಯ ಸಿಮೆಂಟ್‌ ಕಂಬಗಳಿಗೆ ಢಿಕ್ಕಿಯಾಗಿ ಮುನ್ನುಗ್ಗಿ ಮತ್ತೂಂದು ಅಂಗಡಿಯ ಕಲ್ಲಿನ ಗೋಡೆ ಹಾಗೂ ಕಂಬಕ್ಕೂ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಸಿಮೆಂಟ್‌ ಕಂಬಗಳು ಬುಡ ಸಹಿತ ಕಿತ್ತು ಹೋಗಿವೆ. 

ಬೈಕ್‌, ಸೈಕಲ್‌ಗೆ ಹಾನಿ
ಚತುಷ್ಪಥ ಕಾಮಗಾರಿಯಿಂದಾಗಿ ರಾ. ಹೆದ್ದಾರಿ ಪೇಟೆ ರಸ್ತೆಗಿಂತ ಎತ್ತರದಲಿದ್ದು, ಕೆಳಗಿಳಿದು ಬಂದ ಲಾರಿ ವಿದ್ಯುತ್‌ ಕಂಬ ಮತ್ತು ಬೈಕ್‌ನಲ್ಲಿರುವ ವ್ಯಕ್ತಿಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಅಂಗಡಿಗೆ ಢಿಕ್ಕಿಯಾಗಿದೆ. ಬೇಕರಿ ಅಂಗಡಿಯ ಆಸನದ ವ್ಯವಸ್ಥೆಯ ಸಾಮಗ್ರಿಗಳು ಪುಡಿಪುಡಿಯಾಗಿವೆ. ಹಾಗೂ ದಿನಸಿ ಅಂಗಡಿಯ ಶಟರ್‌, ಮಹಡಿಯ ತಗಡುಗಳು ಮುರಿದು ಬಿದ್ದಿವೆ. ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿರುವ ಮೂರು ಬೈಕ್‌ ಹಾಗೂ ಸೈಕಲ್‌ಗ‌ಳಿಗೆ ಹಾನಿಯಾಗಿದೆ.
ತಪ್ಪಿದ ದುರಂತ
ಅಪಘಾತ ಸಂಭವಿಸುವ ಸಮಯದಲ್ಲಿ ದಿನಸಿ ಅಂಗಡಿ ತೆರೆದಿರುತ್ತಿತ್ತು. ಈ ಸಮಯದಲ್ಲಿ ಪಕ್ಕದ ರಿಕ್ಷಾ ಚಾಲಕರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಈ ದಿನ ಅಂಗಡಿಯವರು ಬರುವುದು ವಿಳಂಬವಾಗಿದರಿಂದ ಇಲ್ಲಿ ಯಾರು ಇರಲಿಲ್ಲ. ಕಲ್ಲುಗಳು ರಸ್ತೆಯಲ್ಲಿ ಉರುಳಿ ಬಿದ್ದವು ರಸ್ತೆಯಲ್ಲಿ ಸಾರ್ವಜನಿಕರು ಇರಲಿಲ್ಲ. ಪಕ್ಕದಲ್ಲಿ ಆಸ್ಪತ್ರೆ ಇದ್ದು ಇಲ್ಲಿ ಜನರ ಓಡಾಟ ಅಧಿಕವಾಗಿರುತಿತ್ತು 

ಸಿಟಿ ಬಸ್‌ ಮಗುಚಿ 14 ಮಂದಿಗೆ ಗಾಯ 
ಅತೀ ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಚಾಲಕ

ಸುರತ್ಕಲ್‌:
ಅತೀ ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಸಿಟಿ ಬಸ್ಸೊಂದು ಬೈಕಂಪಾಡಿ ಬಳಿ ಮಗುಚಿಬಿದ್ದು, 14 ಮಂದಿ ಗಾಯಗೊಂಡ ಘಟನೆ ಮಂಗಳ‌ವಾರ ಸಂಭವಿಸಿದೆ. ಬೆಳಗ್ಗೆ 7.15ರ ಟ್ರಪ್‌ ಕೃಷ್ಣಾಪುರದಿಂದ ಮಂಗಳೂರು ಕಡೆ ಹೋಗುವ ಜನರಿಂದ ತುಂಬಿದ್ದ ಸೈಂಟ್‌ ಆ್ಯಂಟನಿ ಹೆಸರಿನ 45 ನಂಬರಿನ ಬಸ್‌  ಬೈಕಂಪಾಡಿ ಬಳಿ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡಿತ್ತು. 
ಬಸ್‌ನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಬಸ್‌ ಬೋರಲಾಗಿ ಬಿದ್ದಿತ್ತು. ಬಸ್ಸಿನೊಳಗಿಂದ ಆತಂಕದಿಂದ ಚೀರಾಟ ಕೇಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಸವಾರರು  ನೆರವಿಗೆ ಧಾವಿಸಿದರು.
ಸ್ಥಳೀಯರು ಪ್ರಯಾಣಿಕರನ್ನು ಹೊರತರಲು ಶ್ರಮಿಸಿದರು. ಬೈಕಂಪಾಡಿಯಲ್ಲಿರುವ ಮಂಗಳೂರು ಉತ್ತರ ಸಂಚಾರ ಠಾಣೆಯ ಅ ಧಿಕಾರಿಗಳು ಸಿಬಂದಿ ಧಾವಿಸಿ ಟ್ರಾಫಿಕ್‌ ಜಾಮ್‌ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲೂ ನೆರವಾದರು. ಇಬ್ಬರು ಪ್ರಯಾಣಿಕರು ಮೂಳೆ ಮುರಿತಕ್ಕೊಳಗಾದರೆ ಮಗು ಸಹಿತ  ಹನ್ನೊಂದು ಮಂದಿಗೆ ಬಸ್ಸಿನ ರಾಡ್‌ ತಾಗಿದ ಗಾಯಗಳಾಗಿವೆ.
ಗಾಯಾಳುಗಳು
ಬಸ್‌ ಅಪಘಾತದಲ್ಲಿ ಅಲೋಶಿಯಸ್‌ ವಿದ್ಯಾರ್ಥಿ ನಿಶಾಂತ್‌(17) ಎಡಗೈ ಮೂಳೆ ಮುರಿತ, ಚನ್ನಯ್ಯ(48) ಅವರಿಗೆ ಎದೆಗೆ ಗುದ್ದಿದ ಗಾಯ  ಗಂಭೀರ ಗಾಯವಾದರೆ, ಜಯಪ್ಪ, ಸುಶೀಲ್‌, ಅರುಣ್‌, ವಿನೋದ್‌, ಅರ್ಶದ್‌, ಸರಿತಾ, ಸಾಲಿಲ್‌, ಶಂಕರ್‌ ಶೆಟ್ಟಿ,ಬಾಬು, ಪ್ರೇಮ ಟೆಲ್ಲಿಸ್‌ ಅವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 
ಚಾಲಕ ಸಫಾನ್‌ (36) ವಿರುದ್ಧ ಕೇಸು ದಾಖಲಾಗಿದೆ. ಡಿಸಿಪಿ ಉಮಾ ಪ್ರಶಾಂತ್‌, ಮಂಜುನಾಥ್‌ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಚಾಲಕನ ಅತೀ ವೇಗ ನಿರ್ಲಕ್ಷ್ಯ ಕಂಡು ಬಂದರೆ ಚಾಲನಾ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ಹದಗೆಟ್ಟ ರಸ್ತೆ
ಬಸ್‌ ಅಪಘಾತದ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೂಳೂರು ಸೇತುವೆವರೆಗೆ ವಾಹನಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಚಾಲನೆ ಮಾಡುವ ದುಃಸ್ಥಿತಿಯಿದೆ. ಇದು ದ್ವಿಚಕ್ರ ವಾಹನ ಸಹಿತ ಎಲ್ಲ ವಾಹನಗಳ‌ ಅಪಘಾತಗಳಿಗೆ ಕಾರಣವಾಗುತ್ತಿವೆ.

ಕಡಬ: ಚಾಲಕರಿಬ್ಬರ ಹೊಡೆದಾಟ
ಕಡಬ:
 ಕ್ಯೂ ವಿಚಾರಕ್ಕೆ ಸಂಬಂಧಿಸಿ ತೂಫಾನ್‌ ಚಾಲಕರಿಬ್ಬರು ಹೊಡೆದಾಡಿಕೊಂಡು ಓರ್ವ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.  ಜಬ್ಟಾರ್‌ ಗಾಯಗೊಂಡ ಚಾಲಕ. ಜಬ್ಟಾರ್‌ ಹಾಗೂ ಅಬ್ದುಲ್‌ ರಹಿಮಾನ್‌ ನಡುವೆ ಕಡಬ-ಉಪ್ಪಿನಂಗಡಿ ಕ್ಯೂ ವಿಚಾರದಲ್ಲಿ ಉಂಟಾದ ಮಾತು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಆ ಕ್ಷಣದಲ್ಲಿ ಜಬ್ಟಾರ್‌ ತನ್ನ ವಾಹನದಿಂದ ಚೈನನ್ನು ತೆಗೆದುಕೊಂಡು ಬಂದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಇತರ ಚಾಲಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಅಬ್ದುಲ್‌ ರಹಿಮಾನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಬ್ಟಾರ್‌ನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾತಿನಿಂದನೆ, ಹಲ್ಲೆ: ಆರೋಪಿ ಬಂಧ‌ನ
ಕುಂದಾಪುರ: ಕುಂಭಾಶಿಯ ಕೊರವಡಿಯ ಮಂಜು ಕೆ. ಅವರಿಗೆ ಜಾತಿ ನಿಂದನೆಗೈದು ಹಲ್ಲೆ ಮಾಡಿದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಗೋಪಾಡಿ  ವೈನ್‌ ಶಾಪ್‌ ಬಳಿ ಸುಧೀರ ಭಂಡಾರಿ, ಪ್ರಸನ್ನ ದೇವಾಡಿಗ ಕುಂಭಾಶಿ,  ಮನು ಬೀಜಾಡಿ ಅವರು ಬೈದು ಹಲ್ಲೆ ಮಾಡಿ ಜಾತಿ ನಿಂದಿಸಿ ಬೆದರಿಕೆ ಹಾಕಿದ್ದರು. ಈ ಪೈಕಿ ಮನು ಬೀಜಾಡಿಯನ್ನು ಡಿವೈಎಸ್‌ಪಿ ಅವರ ತಂಡ ಹಾಗೂ ಎಸ್‌ಐ ನೇತೃತ್ವದ ತಂಡದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉಡುಪಿ ವಿಶೇಷ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಪುತ್ತೂರು: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಪ್ಪೆಪದವಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಿಸೆಯಿಂದ 10 ಸಾವಿರ ರೂ. ದೋಚಿ, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ಮಂಗಳೂರು 2ನೇ ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2018 ಆಗಸ್ಟ್‌ 18ರಂದು ಕುಪ್ಪೆಪದವು ಚರ್ಚ್‌ ರಸ್ತೆಯಲ್ಲಿ ಘಟನೆ ಸಂಭವಿಸಿತ್ತು. ಕುಪ್ಪೆಪದವು ಕೆಲಿಂಜಾರು ನಿವಾಸಿಗಳಾದ ಎನ್‌.ಎ. ಖಾದರ್‌, ಸಾಹುಲ್‌ ಹಮೀದ್‌, ಶೇಖ್‌ ಅಬ್ದುಲ್ಲ, ಬೆಳ್ತಂಗಡಿ ಕರಿಮಣೆಲು ಅಬ್ದುಲ್‌ ಹಕೀಂ ಆರೋಪಿಗಳು. ಆರೋಪಿಗಳ ಪರ ಪ್ರಸಾದ್‌ ಕುಮಾರ್‌ ರೈ ಉಪ್ಪಿನಂಗಡಿ, ಸುರಕ್ಷಿತ್‌ ಸಿ.ಎಚ್‌., ಕೃಷ್ಣದೇವ ವಾದಿಸಿದ್ದರು.

ಅಪರಿಚಿತ ಗಂಡಸಿನ ಶವ ಪತ್ತೆ
ಮಂಗಳೂರು,:  ತೋಕೂರು ಗ್ರಾಮದ ಜೋಕಟ್ಟೆ  ಕೆಬಿಎಸ್‌ ಸಮೀಪ ಇರುವ ತಾರಕ್‌ ಕಂಪೆನಿಯ ಕಾಮಗಾರಿ ನಡೆಯುತ್ತಿರುವ ಬ್ರಿಜ್‌ ಕೆಳಗೆ ಹರಿಯುವ ನೀರಿನಲ್ಲಿ ಸಮಾರು 35ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ  ಸೆ. 9ರಂದು ಪತ್ತೆಯಾಗಿದೆ.
ಆಕಸ್ಮಿಕವಾಗಿ ನೀರಿಗೆ ಬಿದ್ದು ಅಥವಾ ಇನ್ಯಾವುದೋ ಕಾರಣದಿಂದ ನೀರಿನಲ್ಲಿ  ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.ಸುಮಾರು 5.6 ಅಡಿ ಎತ್ತರ ವಿದ್ದು, ಮೃತದೇಹದ ಮೇಲೆ ಉದ್ದತೋಳಿನ ಬಿಳಿ ಮತ್ತು ಕಂದು ಬಣ್ಣದ ಉದ್ದ ಅಗಲ ಗೆರೆಗಳಿರುವ ಶರ್ಟ್‌ ಇದೆ. ಮುಖವು ಸಂಪೂರ್ಣ ಕೊಳೆತಿದೆ. ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಪಣಂಬೂರು ಪೊಲೀಸ್‌ ಠಾಣೆಗೆ ಮಾಹಿತಿ ನೀಡು ವಂತೆ  ಠಾಣಾಧಿಕಾರಿ ಪ್ರಕಟನೆಯಲ್ಲಿ ಕೋರಿದ್ದಾರೆ.


Trending videos

Back to Top