CONNECT WITH US  

25 ವರ್ಷದ ಹರ್ಷ : 'ಬೆಳ್ಳಿ ಹಬ್ಬ'ದ ಸಂಭ್ರಮದಲ್ಲಿರುವ ಗಣೇಶೋತ್ಸವಗಳು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಗುರುವಾಯನಕೆರೆ ಗಣೇಶೋತ್ಸವ

ಬೆಳ್ತಂಗಡಿ:
ಕಳೆದ 25 ವರ್ಷಗಳ ಹಿಂದೆ ಗುರುವಾಯನಕೆರೆಯ ಶ್ರೀ ಪಾಡುರಂಗ ಮಂದಿರದಲ್ಲಿ ಸೋಮನಾಥ ನಾಯಕ್‌ ಅವರಿಂದ ಆರಂಭಗೊಂಡ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ ಬೆಳ್ಳಿಹಬ್ಬದ ಸಂಭ್ರಮ. ಈ ಉತ್ಸವವು ಮಂದಿರದಲ್ಲಿ ಆರಂಭಗೊಂಡರೂ ಬಳಿಕ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಮುಂದುವರಿದಿತ್ತು. ಆದರೆ ಈ ವರ್ಷ ಬೆಳ್ಳಿಹಬ್ಬದ ವಿಶೇಷ ಕಾರ್ಯ ಕ್ರಮಗಳು ಇರುವುದರಿಂದ ಹವ್ಯಕ ಮಂದಿರದಲ್ಲಿ ನಡೆಯಲಿದೆ. ಕುಲಾಲ ಮಂದಿರದ ದುರಸ್ತಿಯ ಹಿನ್ನೆಲೆಯಲ್ಲಿ ಒಂದು ವರ್ಷ ಬಂಟರ ಭವನದಲ್ಲಿ ನಡೆದಿತ್ತು.

ದೇವಸ್ಯ ಮಹಾಬಲ ಶೆಟ್ಟಿ, ವಿಠ್ಠಲ ಭಟ್‌, ಶಾಂತಪ್ಪ ಮೂಲ್ಯ, ರಾಜೇಂದ್ರ ನಾಯರ್‌, ಗೋಪಿನಾಥ ನಾಯಕ್‌, ಗೋವಿಂದ ಮೂಲ್ಯ, ಶಶಿಧರ ನಾಯಕ್‌ ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿ ಶಶಿರಾಜ್‌ ಶೆಟ್ಟಿ  ಗಣೇಶೋತ್ಸವವನ್ನು ಮುನ್ನಡೆಸುತ್ತಿದ್ದಾರೆ. ಊರವರ ಸಹಕಾರದಿಂದ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತಾ ಬಂದಿದೆ. ಪ್ರತಿವರ್ಷ ಒಂದೇ ದಿನ ಉತ್ಸವ ನಡೆಯುತ್ತಿದ್ದು, ಈ ಬಾರಿ ಬೆಳ್ಳಿಹಬ್ಬ ವಿಶೇಷವಾಗಿ ಸೆ. 13 ಮತ್ತು 14ರಂದು ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ. 14ರಂದು ಗುರುವಾಯನಕೆ‌ರೆಯ ಕೆರೆಯಲ್ಲಿ ವಿಗ್ರಹದ ವಿಸರ್ಜನೆ ನಡೆಯಲಿದೆ.

ಬೊಂಡಾಲ ಯುವ ಸಂಗಮ

ಬಂಟ್ವಾಳ:
ಬೊಂಡಾಲ ಯುವ ಸಂಗಮ ಸೇವಾ ಟ್ರಸ್ಟ್‌ ಆಶ್ರಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಸ್ತುತ 25ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಬೆಳ್ಳಿಹಬ್ಬದ ಸುಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವರಿಗೆ 8 ರಿಂದ 10ಲಕ್ಷ ರೂ. ಮೌಲ್ಯದ ರಜತ ಪ್ರಭಾವಳಿ ಸಮರ್ಪಿಸಲು ತೀರ್ಮಾನಿಸಲಾಗಿದೆ.

ದಿ| ಬೊಂಡಾಲ ಜಗನ್ನಾಥ ಶೆಟ್ಟಿ ಮುಂದಾಳತ್ವದಲ್ಲಿ 1993ರಲ್ಲಿ ಊರ ಜನತೆ ಮತ್ತು ಯುವಕರ ಸಹಭಾಗಿತ್ವದಲ್ಲಿ ಇಲ್ಲಿನ ಯುವಸಂಗಮ ಸಮುದಾಯ ಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭವಾಗಿತ್ತು. ಸಾರ್ವಜನಿಕ ಗಣೇಶೋತ್ಸವ ನಡೆಸಲು ಸ್ವಂತ ಕಟ್ಟಡವನ್ನು ನಿರ್ಮಾಣ, ಸಂಘದ ಆಶ್ರಯದಲ್ಲಿ ಅಂಗನವಾಡಿ, ಪಾಣೆಮಂಗಳೂರು - ಶಂಭೂರು ರಸ್ತೆ ವಿಸ್ತರಣೆ, ಹೆಚ್ಚುವರಿ ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು ಊರಿನ ಹಾಗೂ ಯುವಕರ ಮತ್ತು ಹಿರಿಯರ ಜತೆಗೂಡಿ ದಿ| ಬೊಂಡಾಲ ಜಗನ್ನಾಥ ಶೆಟ್ಟಿ ಅವರು ಯುವ ಸಂಗಮ ಯುವಕ ಮಂಡಲದ ಮುಖೇನ ಮಾಡಿದ್ದರು.

ಯುವ ಸಂಗಮ ಸೇವಾ ಟ್ರಸ್ಟ್‌ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪ್ರ. ಕಾರ್ಯದರ್ಶಿ ಪಿ. ಕೇಶವ ನಾಯ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ  ಕೇಶವ ಅಂಚನ್‌ ಪದವು, ಸಂಚಾಲಕ ಯಶೋಧರ ಬಂಗೇರ ಕೊಲ್ಲೂರು, ಪ್ರ. ಕಾರ್ಯದರ್ಶಿ ಸುಧೀರ್‌ ನಿರ್ಮಲ್‌, ಮೊದಲಾದವರು ಪ್ರಸ್ತುತ ಸಂಘದ ನೇತೃತ್ವ ವಹಿಸಿದ್ದಾರೆ.

ಅಂಡಿಂಜೆ ಶ್ರೀ ಗಣೇಶೋತ್ಸವ

ವೇಣೂರು:
ಅಂಡಿಂಜೆಯಲ್ಲಿ ಆಚರಿಸಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ಬಾರಿ ಬೆಳ್ಳಿಹಬ್ಬದ ಸಂಭ್ರಮ. ಕಳೆದ 15 ವರ್ಷಗಳಿಂದ ಅಂಡಿಂಜೆ ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಉತ್ಸವವನ್ನು ನಡೆಸಿಕೊಂಡು ಬರಲಾಗಿತ್ತು.  ಬಳಿಕ ಶಾಲೆಯ ಬಯಲು ಮಂದಿರದಲ್ಲಿ ಮುಂದುವರಿಸಲಾಯಿತು. ಒಂದೇ ದಿನದ ಆಚರಣೆಯಲ್ಲಿ ಸಂಜೆ ವೇಳೆಗೆ ದಂಡಿಗೆಯಲ್ಲಿ ಮೆರವಣಿಗೆ ಮೂಲಕ ಗಣಪನನ್ನು ನದಿಯಲ್ಲಿ ವಿಸರ್ಜಿಸಲಾಗುತ್ತಿತ್ತು. ಆ ಬಳಿಕ ಸುಮಾರು 10 ವರ್ಷ ಟಿಲ್ಲರ್‌ನಲ್ಲಿ ಮೆರವಣಿಗೆ ಹೋಗಿ ವಿಸರ್ಜನೆ ಮಾಡಲಾಗುತ್ತಿತ್ತು. ಆ ಬಳಿಕದ 10 ವರ್ಷಗಳಿಂದ ಟೆಂಪೋದಲ್ಲಿ ಟ್ಯಾಬ್ಲೋ ಸಹಿತ ಮೆರವಣಿಗೆ ನಡೆಸಿ ವಿಸರ್ಜಿಸಲಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣದ ಉದ್ದೇಶದಿಂದ 5 ಸೆಂಟ್ಸ್‌ ಜಾಗ ಖರೀದಿಸಿ ಸುಮಾರು ರೂ. 20 ಲಕ್ಷ ವೆಚ್ಚದ ಬಯಲು ರಂಗಮಂದಿರ ಹಾಗೂ ಸಭಾಭವನ ನಿರ್ಮಿಸಲಾಗಿದೆ. ಇನ್ನೂ ರೂ. 10 ಲಕ್ಷ  ಬೇಕಿದೆ. ಮುಂದಿನ ಬಾರಿ ಸಭಾಭವನವನ್ನು ಲೋಕೋರ್ಪಣೆಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಾರಂಭದಲ್ಲಿ ಸುರೇಶ್‌ ಗೋರೆ ಪಂಡಿಜೆವಾಳ್ಯ ನಿರ್ಮಿಸಿದ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಬಳಿಕ ಕಾರ್ಕಳದಿಂದ, ಪ್ರಸ್ತುತ ಉಜಿರೆಯ ಶಿವಕುಮಾರ್‌ ಅವರಿಂದ ವಿಗ್ರಹವನ್ನು ಪಡೆದು ಪೂಜಿಸಲಾಗುತ್ತಿದೆ. ಸಭಾಭವನ ನಿರ್ಮಾಣ ಕಾರ್ಯದ ಕೆಲಸಕ್ಕೂ ಸಮಿತಿಯನ್ನು ರಚಿಸಲಾಗಿದ್ದು, ಎರಡೂ ಸಮಿತಿಗಳು ಸೇರಿ ಬೆಳ್ಳಿಹಬ್ಬವನ್ನು ಆಚರಿಸಲು ಅಣಿಯಾಗಿವೆ.

ಜಟ್ಟಿಪಳ್ಳ ಗಣೇಶೋತ್ಸವ

ಸುಳ್ಯ:
ನಗರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಜಟ್ಟಿಪಳ್ಳದಲ್ಲಿ 25 ವರ್ಷದ ಹಿಂದೆ ಯುವಕ ಮಂಡಲ ಆಶ್ರಯದಲ್ಲಿ ಗಣೇಶೋತ್ಸವ ಪ್ರಾರಂಭಗೊಂಡಿತ್ತು. ಪ್ರಾರಂಭಗೊಂಡ ಹತ್ತು ವರ್ಷದ ಆನಂತರ ಜಟ್ಟಿಪಳ್ಳದಲ್ಲಿ ಚೆನ್ನಕೇಶವ ದೇವರಕಟ್ಟೆ ನಿರ್ಮಾಣವಾಯಿತು. ಆಗ ಶ್ರೀರಾಮ ಭಜನ ಸಂಘ ಸ್ಥಾಪನೆಗೊಂಡು, ಗಣೇಶೋತ್ಸವವು ಕೂಡ ಈ ಸಂಘದ ಮುಖೇನ ಆಚರಣೆಗೆ ಒಳಪಟ್ಟಿದೆ. ಜಾತಿ, ಮತ ಮೀರಿದ ಸಹಬಾಳ್ವೆಯ ಕಲ್ಪನೆಯ ಇಲ್ಲಿನ ಆಚರಣೆ ಈ ವರ್ಷ ಎರಡು ದಿನ ನಡೆಯಲಿದೆ. ಶೋಭಾಯಾತ್ರೆ ನಡೆದು ಆನಂತರ ಕೋಡಿಯಾಲು ಬೈಲಿನ ಹೊಳೆಯಲ್ಲಿ ಜಲಸ್ತಂಭನಗೊಳ್ಳಲಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಹೇರೂರು ಗಣೇಶೋತ್ಸವ: ರಜತ ಸಂಭ್ರಮ

ಬ್ರಹ್ಮಾವರ:
ಇಲ್ಲಿನ ಹೇರೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.13ರಿಂದ 17ರವರೆಗೆ ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ದಿ| ನಾಗೇಂದ್ರ ಕೆ. ಸಭಾಂಗಣದಲ್ಲಿ ಜರಗಲಿದೆ.

ಧಾರ್ಮಿಕ ನೆಲೆಯಲ್ಲಿ ಒಗ್ಗೂಡುವ ದೃಷ್ಟಿಯಿಂದ 1994ರಲ್ಲಿ ಹೇರೂರಿನಲ್ಲಿ ಗಣೇಶೋತ್ಸವ ಪ್ರಾರಂಭಗೊಂಡಿತು. ಆರಂಭದಿಂದಲೂ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಆಚರಿಸಲಾಗುತ್ತಿದೆ. ಗಣೇಶೋತ್ಸವದ 10ನೇ, 15ನೇ, 20ನೇ ವರ್ಷವನ್ನು ವಿಶಿಷ್ಟವಾಗಿ ಆಚರಿಸಲಾಗಿತ್ತು. ಸಮಿತಿಯಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೊಡುಗೆ, ಅಶಕ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಶಾಲಾ ಮಕ್ಕಳಿಗೆ ಪ್ರೋತ್ಸಾಹ, ಸಾಮಾಜಿಕ ಸ್ಪಂದನೆಗೆ ಇಲ್ಲಿನ ಸಮಿತಿ ನೆರವಾಗುತ್ತಿದೆ. ಪ್ರತಿ ವರ್ಷ ಕ್ರೀಡಾಕೂಟವನ್ನೂ ಆಯೋಜಿಸಲಾಗುತ್ತದೆ. ರಜತ ಸಂಭ್ರಮ ಪ್ರಯುಕ್ತ ಪ್ರತಿನಿತ್ಯ ಗಣಹೋಮ, ರಂಗಪೂಜೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ ನಡೆಯಲಿದೆ. ಸೆ.16ರಂದು ಮಹಾ ಅನ್ನಸಂತರ್ಪಣೆ, ಸೆ.17ರಂದು ವೈಭವದ ವಿಸರ್ಜನಾ ಮೆರವಣಿಗೆ, ಜಲಸ್ತಂಭನ ಜರಗಲಿದೆ.

ರಜತ ಸಂಭ್ರಮದಲ್ಲಿ ಪಕ್ಷಿಕೆರೆ ಗಣೇಶೋತ್ಸವ

ಪಕ್ಷಿಕೆರೆ:
24 ವರ್ಷಗಳ ಹಿಂದೆ ಪಕ್ಷಿಕೆರೆ ಹಿರಿಯರ-ಕಿರಿಯರ ಕೂಡುವಿಕೆಯಲ್ಲಿ ಆರಂಭಗೊಂಡ ಗಣೇಶನ ಹಬ್ಬ ಈ ವರ್ಷ ರಜತ ಸಂಭ್ರಮ ಆಚರಿಸುತ್ತಿದೆ. 2017ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಆರಂಭಗೊಂಡ ರಜತ ವರ್ಷದ ಕಾರ್ಯಕ್ರಮದಡಿ ಪ್ರತಿ ತಿಂಗಳು ಒಂದೊಂದು ವಿಶೇಷ ಜನಪರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಿಸರ ಜಾಗೃತಿ, ಕನ್ನಡ ಅಭಿಮಾನ, ಭಾವೈಕ್ಯತೆ, ವೈದ್ಯಕೀಯ ಶಿಬಿರ, ಪ್ರತಿಭಾ ಪುರಸ್ಕಾರ, ಯುವ ಜನತೆ ಸಂಘಟನೆಗೆ ಒತ್ತು, ಗುರು ಹಿರಿಯರನ್ನು ಗೌರವಿಸುವ ಕೆಲಸ, ಗ್ರಾಮೀಣ ಕ್ರೀಡೆ ಉಳಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸೆ. 13 ರಂದು ಬೆಳಗ್ಗೆ ವಿಗ್ರಹ ಪ್ರತಿಷ್ಠೆ, ಸಹಸ್ರ ಕದಳಿಯಾಗ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಸೆ. 14 ರಂದು ಬೆಳಗ್ಗೆ ಸಹಸ್ರ ಮೋದಕ ಯಾಗ, ಅನ್ನಸಂತರ್ಪಣೆ, ಭಜನೆ, ಯಕ್ಷಗಾನ ಬಯಲಾಟ, ಸಾಂಸ್ಕೃತಿಕ ಕಾರ್ಯಕ್ರಮ, ಸೆ. 15 ರಂದು ಬೆಳಗ್ಗೆ ಸಹಸ್ರ ಅಪೂರ್ವಯಾಗ, ಪೂರ್ಣಾಹುತಿ, ಮುದ್ದು ಕೃಷ್ಣ ಪ್ರದರ್ಶನ, ಭಜನೆ, ರಜತ ಸಂಭ್ರಮ ಸಮಾರೋಪ, ಸಂಜೆ 4 ರಿಂದ ವಿಸರ್ಜನ ಪೂಜೆ, ಶೋಭಾ ಯಾತ್ರೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಮಾಂಟ್ರಾಡಿ ಸಾರ್ವಜನಿಕ ಗಣೇಶೋತ್ಸವ

ಮೂಡಬಿದಿರೆ:
ಮಾಂಟ್ರಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಇದೀಗ ರಜತ ಸಂಭ್ರಮ. ಮಾಂಟ್ರಾಡಿ ಹೊಂಪೆಟ್ಟು ಮಹಾವೀರ ನಗರದ ಶ್ರೀ ಗಣಪತಿ ಕಟ್ಟೆಯಲ್ಲಿ ಸೆ. 13ರಿಂದ ನಾಲ್ಕು ದಿನಗಳ ಧಾರ್ಮಿಕ, ಸಾಂಸ್ಕೃತಿಕ ಉತ್ಸವ ನಡೆಯಲಿದೆ. 24 ವರ್ಷಗಳ ಹಿಂದೆ ಮಾಂಟ್ರಾಡಿಯ ಮುನಿರಾಜ ಜೈನ್‌ ಅವರು ಸಮಾನಾಸಕ್ತರೊಂದಿಗೆ ಸೇರಿಕೊಂಡು ಮಾಂಟ್ರಾಡಿ ಶಾಲೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭಿಸಿದ್ದರು. ಮುಂದೆ ಧನಂಜಯ ಆಳ್ವ, ಹರೀಶ್‌ ಬಿ. ಬಳಂಜ, ಸುಂದರ ಪೂಜಾರಿ ಕಳ್ಯರಡ್ಡ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ 21 ವರ್ಷಗಳಲ್ಲಿ ಧನಂಜಯ ಆಳ್ವರ ಅಧ್ಯಕ್ಷತೆಯಲ್ಲಿ ಉತ್ಸವ ಸಾಂಗವಾಗಿ ನಡೆಯುತ್ತ ಬಂದಿದೆ. ರಜತ ಮಹೋತ್ಸವ ವರ್ಷದಲ್ಲಿ ಗಣಪತಿ ದೇವರ ಪೂಜಾ ಸಾಮಗ್ರಿ ಇರಿಸಲು ನೂತನ ಕೊಠಡಿ ರಚಿಸಲಾಗಿದ್ದು ಗಣಪತಿ ದೇವರಿಗೆ ತಾಮ್ರ ಮಡಾಯಿಸಿದ ಪೀಠ ರೂಪಿಸಿ, ಗಣಪತಿ ಕಟ್ಟೆಯನ್ನು ನವೀಕರಿಸಲಾಗಿದೆ.

ಮೂರೂ ದಿನಗಳಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಪ್ರತಿದಿನ ಧಾರ್ಮಿಕ ಸಭೆಗಳನ್ನು ಆಯೋಜಿಸಲಾಗಿದೆ. ಗುರುವಾರ ರಾತ್ರಿ ಭಜನೆ, ಶುಕ್ರವಾರ ರಾತ್ರಿ ಸುಖದಾ ಬರ್ವೆ ಅವರ ಆರಾಧನಾ ನೃತ್ಯ ತಂಡದವರಿಂದ ನೃತ್ಯ ಸಿಂಚನ, ಶನಿವಾರ ಟ್ಯಾಲೆಂಟ್‌ ಗ್ರೂಪ್‌ ರಾಜೇಶ್‌ ಭಟ್‌ ತಂಡದವರಿಂದ ನೃತ್ಯ, ಪ್ರಸಿದ್ಧ ಕಲಾವಿದರಿಂದ 'ಚಂದ್ರಾವಳಿ ವಿಲಾಸ' ಯಕ್ಷಗಾನ, ರವಿವಾರ ತುಳು ನಾಟಕ, ಸಾಧಕರಿಗೆ ಸಮ್ಮಾನ ಸಂಯೋಜಿಸಲಾಗಿದೆ. ಸೆ. 16ರಂದು ಆಕರ್ಷಕ ಶೋಭಾಯಾತ್ರೆ ನಡೆದು ಹೊಸ್ಮಾರು ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ಕಾರ್ಯಕ್ರಮ ನಡೆಯಲಿದೆ.


Trending videos

Back to Top