CONNECT WITH US  

ನಾಡಿನೆಲ್ಲೆಡೆ ಚೌತಿ ಸಂಭ್ರಮ : ಪರಿಸರ ಸ್ನೇಹಿ ಹಬ್ಬ ಆಚರಿಸೋಣ

ಕಲಾವಿದ ಮುಂಡ್ಕೂರು ಕಾಮತ್‌ ರಥಬೀದಿ ಅವರು ನಿರ್ಮಿಸಿದ ಎರಡು ಇಂಚಿನ ಪರಿಸರಸ್ನೇಹಿ ಗಣೇಶನ ಮೂರ್ತಿ.

ಮಹಾನಗರ: ಇಂದಿನಿಂದ ಎಲ್ಲೆಡೆ ಚೌತಿಯ ಸಂಭ್ರಮ. ಗಣೇಶನ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತವೆ. ಎಲ್ಲೆಡೆ ಪರಿಸರ ಮಾಲಿನ್ಯದ ಅವಾಂತರಗಳು ಜಾಸ್ತಿಯಾಗುತ್ತಿರಬೇಕಾದರೆ ಭಕ್ತಿ- ಸಂಭ್ರಮದೊಂದಿಗೆ ಪರಿಸರ ಸ್ನೇಹಿ ಚೌತಿ ಆಚರಿಸುವುದು ಈ ಹೊತ್ತಿನ ಆವಶ್ಯಕ ಹಾಗೂ ಎಲ್ಲರ ಹೊಣೆಯೂ ಹೌದು.

ನಗರದಲ್ಲಿ ನಾಲ್ಕು ವರ್ಷಗಳಿಂದ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣಪನ ಮೂರ್ತಿ ಬಳಕೆಯಾಗುತ್ತಿಲ್ಲ. ಜನತೆಯಲ್ಲಿಯೂ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದ್ದು, ಹಲವು ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ಬಾರಿಯಂತೂ ಆವೆ ಮಣ್ಣಿನಲ್ಲಿ ತಯಾರಿಸಿದ ಗಣಪನ ಮೂರ್ತಿಗಳೇ ನಗರಾದ್ಯಂತ ಆರಾಧನೆಗೊಳ್ಳುತ್ತಿವೆ. ಗಣೇಶನ ಮೂರ್ತಿ ತಯಾರಿಸುವ ಸ್ಥಳಗಳಿಗೆ ಜಂಟಿ ಭೇಟಿ ಹಮ್ಮಿಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳೇ ಇದನ್ನು ಸ್ಪಷ್ಟಪಡಿಸಿದ್ದು, ನಗರಾದ್ಯಂತ ಎಲ್ಲಿಯೂ ಪಿಒಪಿ ಮಾದರಿಯ ಮೂರ್ತಿಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಒಮ್ಮೆ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಜಿಲ್ಲೆಯಲ್ಲಿ ತಿಂಗಳ ತನಕ ಯಾರೂ ಇರಿಸಿಕೊಳ್ಳುವುದಿಲ್ಲ. ವಾರ ಅಥವಾ ಹತ್ತು ದಿನಗಳೊಳಗೆ ವಿಸರ್ಜನೆಯೂ ನಡೆಯುವುದರಿಂದ, ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿರುವ ತಿಂಗಳ ಗಡುವಿನ ಆದೇಶವೂ ನಗರದಲ್ಲಿ ತಪ್ಪದೆ ಪಾಲನೆಯಾಗುತ್ತಿದೆ.

ನಿಸರ್ಗ ಸ್ನೇಹಿಯಾಗಿರಲಿ
ಮೂರ್ತಿ ವಿಸರ್ಜನೆ ಸಂದರ್ಭದಲ್ಲಿಯೂ ಪರಿಸರಪೂರಕ ವಿಸರ್ಜನೆಯೇ ಇರಲಿ. ಮೂರ್ತಿಗೆ ಬಣ್ಣಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿದರೆ, ಜಲಮಾಲಿನ್ಯವಾಗದಂತೆ ತಡೆಯ ಬಹುದು. ಅಲ್ಲದೆ ಅಲಂಕಾರಕ್ಕೂ ಆದಷ್ಟು ಪರಿಸರಸ್ನೇಹಿ ವಸ್ತುಗಳಿಗೇ ಆದ್ಯತೆ ನೀಡಿ. ಹಬ್ಬದ ಸಂದರ್ಭ ಪಟಾಕಿ ಸಿಡಿಸುವುದನ್ನು ಕಡಿಮೆ ಮಾಡಿದರೆ ಉತ್ತಮ. ಹೂವಿನ ಹಾರ, ತಟ್ಟೆ, ಲೋಟ, ಎಲೆಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸ ವಿಲೇ ವಾಹನಕ್ಕೇ ನೀಡಿ ಎಂದು ಹಿರಿಯ ಪರಿಸರ ಅಧಿಕಾರಿ ರಾಜಶೇಖರ್‌ ಪುರಾಣಿಕ್‌ ವಿನಂತಿಸಿದ್ದಾರೆ.

ಮಕ್ಕಳನ್ನು ಕೆರೆ ಬಳಿ ಕಳಿಸದಿರಿ
ಮೂರ್ತಿ ವಿಸರ್ಜನೆ ಸಂದರ್ಭ ಚಿಕ್ಕಮಕ್ಕಳನ್ನು ಯಾವುದೇ ಕಾರಣಕ್ಕೂ ಕೆರೆ, ನದಿ ಬಳಿಗೆ ಕಳುಹಿಸದಂತೆ ಹೆತ್ತವರು ಎಚ್ಚರ ವಹಿಸುವುದು ಅತ್ಯಗತ್ಯ. ಮಳೆಯ ಅಬ್ಬರ ಈಗಷ್ಟೇ ಕಡಿಮೆಯಾಗಿದ್ದರು ಕೂಡ ಬಹುತೇಕ ನದಿಗಳಲ್ಲಿ ನೀರಿನ ಹರಿಯುವ ರಭಸ ಕಡಿಮೆಯಾಗಿಲ್ಲ. ಇನ್ನು ಕೆರೆ -ಬಾವಿಗಳಲ್ಲಿಯೂ ನೀರು ಜಾಸ್ತಿ ಇದೆ.

ಸೆಲ್ಫಿ ತೆಗೆಯುವಾಗ ಜಾಗೃತೆ
ಜನರಲ್ಲಿಯೂ ಈಗೆಲ್ಲ ಸೆಲ್ಫಿ ಗೀಳು ಅಧಿಕವಾಗಿದ್ದು, ಕೆರೆಯ ಬಳಿಯಲ್ಲಿ ಮೈಮರೆತು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳದಿರುವುದೇ ಉತ್ತಮ. ಏಕೆಂದರೆ ಕೆಲವೊಮ್ಮೆ ದುರಂತಗಳನ್ನು ನಾವು ಕೈಯಾರೆ ಆಹ್ವಾನಿಸಿದಂತಾಗುತ್ತದೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆಗಳಿರಲಿ.

ಸೌಹಾರ್ದ ಚೌತಿಯಾಗಲಿ
ಚೌತಿ ಆಚರಣೆಯ ಮೂಲ ಉದ್ದೇಶವೇ ಜನ ಸಂಘಟನೆ. ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಿ ಜನ ಸಂಘಟಿಸುವುದು ಮತ್ತು ಆ ಮೂಲಕ ದೇಶ ಕಟ್ಟುವ ಮೂಲ ಉದ್ದೇಶವನ್ನಿಟ್ಟುಕೊಂಡು ತಿಲಕರು ಆರಂಭಿಸಿದ ಗಣೇಶೊತ್ಸವ ಸೌಹಾರ್ದ ಚೌತಿಯಾಗಿ ಆಚರಣೆಗೊಳ್ಳಲಿ ಎಂಬುದೇ 'ಉದಯವಾಣಿ-ಸುದಿನ' ಕಳಕಳಿ. ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಕಡಿಮೆ ಶಬ್ಧದ ಧ್ವನಿವರ್ಧಕ ಬಳಕೆ ಮಾಡುವ ಮೂಲಕ ಪರಿಸರಸ್ನೇಹಿ ಹಾಗೂ ಸೌಹಾರ್ದ ಚೌತಿಯನ್ನು ಆಚರಿಸುವ ಮೂಲಕ ಮಾದರಿಯಾಗೋಣ ಎಂಬ ಆಶಯ ನಮ್ಮದು.

ಉತ್ತಮ ಬೆಳವಣಿಗೆ
ನಗರದಲ್ಲಿ ಯಾರೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ನಿರ್ಮಿತ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡುವುದಿಲ್ಲ. ಎಲ್ಲರೂ ಮಣ್ಣಿನಲ್ಲಿ ತಯಾರಿಸಿದ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಜನ ಪರಿಸರಪೂರಕ ಆರಾಧನೆಗೆ ಮುಂದೆಯೂ ಒತ್ತು ಕೊಡಬೇಕು. ಪಿಒಪಿ ಮೂರ್ತಿ ನಿರ್ಮಾಣ, ಮಾರಾಟಕ್ಕೆ ಸಂಬಂಧಿಸಿ ಯಾವುದೇ ಜಪ್ತಿ ಕಾರ್ಯ ನಡೆದಿಲ್ಲ.
- ಟಿ. ಆರ್‌. ಸುರೇಶ್‌, ಪೊಲೀಸ್‌ ಆಯುಕ್ತರು, ಮಂಗಳೂರು ನಗರ

ಜಾಗೃತರಾಗಿ
ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮೂರ್ತಿಗಳ ವಿಸರ್ಜನೆ ಬಳಿಕ ಜಲಮಾಲಿನ್ಯವಾಗುತ್ತಿರುವ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜನರೂ ಜಾಗೃತರಾಗಿದ್ದಾರೆ. ನಗರದಲ್ಲಿ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ತೀರಾ ಕಡಿಮೆಯಾಗಿದೆ. 
- ಜಯಪ್ರಕಾಶ್‌ ನಾಯಕ್‌, ದ.ಕ. ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ


Trending videos

Back to Top