CONNECT WITH US  

ನಿಜವಾಗಿಯೂ ನಾವು ಆಸ್ತಿಕರೋ ಪರಮ ನಾಸ್ತಿಕರೋ?

ತತ್ವಜ್ಞಾನಿ ಚಾರ್ವಾಕ ತತ್ವಶಾಸ್ತ್ರದಲ್ಲೇ ಪರಿಣತಿ ಪಡೆದು ಕೊನೆಗೆ ತನ್ನನ್ನು ತಾನು ನಾಸ್ತಿಕನೆಂದು ಕರೆದುಕೊಂಡ. ಅದನ್ನು ಸಮರ್ಥಿಸಿಕೊಳ್ಳುವಷ್ಟು ಜ್ಞಾನವನ್ನು ಅವನು ಹೊಂದಿದ್ದ. ಆದರೆ ಯಾವ ವಿಷಯವನ್ನೂ ಆಳವಾಗಿ ಅರಿಯದೆ ನಾಸ್ತಿಕನೆಂಬ ನಿರ್ಧಾರಕ್ಕೆ ಬರುವುದು ನಮ್ಮ ಅಲ್ಪಜ್ಞಾನ...

ಇತ್ತೀಚೆಗಂತೂ ಆಸ್ತಿಕತೆ- ನಾಸ್ತಿಕತೆಯ ಬಗ್ಗೆ ಜನ ಚರ್ಚೆ ಮಾಡುತ್ತಲೇ ಇರುತ್ತಾರೆ. ಕೊನೆಗೆ ಯಾರೂ ಗೆಲ್ಲುವುದಿಲ್ಲ. ಯಾರೂ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಕೆಲವರು ಅಲ್ಲಿ ಇಲ್ಲಿ ಸ್ವಲ್ಪ ವಿಚಾರಗಳನ್ನು ಓದಿ, ಅದೇ ಸರಿ ಎಂದು ವಾದಿಸುತ್ತಾ ಮುಂದಿರುವ ವ್ಯಕ್ತಿಯ ಬಾಯಿ ಮುಚ್ಚಿಸುತ್ತಾರೆ. ಯಾವುದೇ ವಿಚಾರ ತೆಗೆದುಕೊಂಡರೂ ಆ ವಿಷಯದ ಬಗ್ಗೆ ಆಳವಾದ ಅಧ್ಯಯನ, ಸಂಶೋಧನೆ, ಅಭ್ಯಾಸ ಮತ್ತು ಅಳವಡಿಕೆ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಸಿಗುವ ಅನುಭವವೇ ಪಾಂಡಿತ್ಯ ಮತ್ತು ಅದು ಮಾತ್ರ ಪಾಂಡಿತ್ಯ.

ಈ ಪಾಂಡಿತ್ಯ ಲಭಿಸಲು ನಾವು ಮೊದಲು ಒಳ್ಳೆಯ ಕೇಳುಗರಾಗಬೇಕು. ಒಳ್ಳೆಯ ಕೇಳುಗರಾಗಲು ನಮ್ಮ ಮುಂದಿ ರುವ ವ್ಯಕ್ತಿ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳುವ ಕೆಲಸವನ್ನು ಮೆದುಳಿಗೆ ಕೊಡಬೇಕು. ಅವರು ಹೇಳಿದ್ದೆಲ್ಲ ಸರಿ ಎಂದು ಒಪ್ಪಿಕೊಳ್ಳುವ ಆವಶ್ಯಕತೆ ನಮಗಿಲ್ಲ. ಆದರೆ, ಎದುರಿಗಿರುವ ವ್ಯಕ್ತಿ ಯಾವ ವಿಚಾರವನ್ನು ಚರ್ಚಿಸಲು ಇಷ್ಟಪಡುತ್ತಾನೆ ಎಂದು ತಿಳಿದುಕೊಳ್ಳಬೇಕು. ಎಷ್ಟು ಜನ್ಮಗಳನ್ನು ಎತ್ತಿ ಬಂದರೂ ಅತಿ ಕಷ್ಟಕರವಾದ ಕೆಲಸ ಅಂದರೆ ಪರಮಾತ್ಮ ನನ್ನು ಕಂಡುಕೊಳ್ಳುವುದು! ಪದವಿ ಪಡೆಯುವುದರಿಂದ, ವೇದಾಧ್ಯಯನ ಮಾಡುವುದರಿಂದ, ಬುದ್ಧಿಜೀವಿ ಎಂದು ಕರೆಸಿಕೊಳ್ಳುವುದರಿಂದ, ಆಗರ್ಭ ಶ್ರೀಮಂತನಾಗುವುದರಿಂದ, ಯೋಗ ಮಾಡುವುದರಿಂದ, ಸನ್ಯಾಸತ್ವ ತೆಗೆದುಕೊಳ್ಳುವುದ ರಿಂದ, ಧಾರ್ಮಿಕ ವಿಷಯಗಳಲ್ಲಿ ಜಿಜ್ಞಾಸುಗಳಾಗಿ ಚರ್ಚೆ ಮಾಡುವುದರಿಂದ, ಮಂತ್ರಗಳನ್ನು ಹೇಳುವುದರಿಂದ ಮಾತ್ರ ಬ್ರಹ್ಮಜ್ಞಾನವನ್ನು ಅರಿತುಕೊಳ್ಳುತ್ತೇವೆಂದು ಹೇಳಿದರೆ ತಪ್ಪಾಗುತ್ತದೆ. ಯಾರಿಗೆ ಯಾವುದನ್ನು ಅರಿತುಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತದೆಯೋ ಅವರು ಅದು ಸರಿಯಾಗಿಲ್ಲ ಎಂದು ವಾದಿಸುತ್ತಾರೆ. ತನಗೆ ಅದನ್ನು ತಿಳಿದುಕೊಳ್ಳಲು ಕಷ್ಟ ಆಗುತ್ತಿದೆ ಎಂದು ಒಪ್ಪಿಕೊಳ್ಳಲು ಅವರ ಸ್ವಾಭಿಮಾನ ಅಡ್ಡಬರುತ್ತದೆಯೇನೋ.

ಮನುಷ್ಯನಿಗೆ ಯಾವುದು ಸುಲಭವಾಗಿ ಸಿಗತ್ತದೆಯೋ ಅದನ್ನು ಅವನು ಬೇಗ ಬಾಚಿ ತನ್ನದಾಗಿಸಿಕೊಳ್ಳುತ್ತಾನೆ. ಆದರೆ, ಸುಲಭವಾಗಿ ಸಿಗುವುದ್ಯಾವುದೂ ಶಾಶ್ವತವಾಗಿರುವುದಿಲ್ಲ ಅನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ನೀವೆಲ್ಲ ಗಮನಿಸಿರಬಹುದು... ಕೆಲವರು ಮತಾಂತರ ಹೊಂದುತ್ತಾರೆ, ಯಾಕೆ? ಯಾವ ಮತಕ್ಕೆ ಹೋದರೂ ನಡೆಸುವ ಜೀವನ ಒಂದೇ ಅಲ್ಲವೇ? ಆಚರಣೆಗಳು ಮತ್ತು ವ್ಯವಸ್ಥೆಗಳು ಮಾತ್ರ ಬೇರೆ ಇರುತ್ತವೆ. ಜನರು ಯಾವುದೋ ಒಂದು ನಂಬಿಕೆ ಯಿಟ್ಟುಕೊಂಡು ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ. ಎಷ್ಟು ವರ್ಷ ಗಳಾದರೂ ಅವರು ಅಂದುಕೊಂಡ ಕೆಲಸ ನೆರವೇರುವುದಿಲ್ಲ. ಅದೇ ಸಮಯಕ್ಕೆ ಯಾರೋ ಅನ್ಯಧರ್ಮವೊಂದರ ಆರಾಧನಾ ಕ್ರಮ ಅನುಸರಿಸಲು ಪ್ರೇರೇಪಿಸುತ್ತಾರೆ. ಕೆಲವರಿಗೆ ಅದೇ ಸಮಯಕ್ಕೆ ಅವರು ಅಂದುಕೊಂಡ ಕೆಲಸ ನಡೆದುಹೋಗುತ್ತದೆ. ಆಗ ಅವರು ಆ ಆರಾಧನೆಯೇ ತಮ್ಮ ಯಶಸ್ಸಿಗೆ ಕಾರಣ ಎಂದು ಭಾವಿಸಿ ಮತಾಂತರವಾಗುತ್ತಾರೆ. ಹೀಗೆ ಮತಾಂತರ ಗೊಂಡ ಕೆಲವರಿಗೆ ಕೆಲವಾರು ವರ್ಷಗಳ ಅನಂತರ ಅದೇನಾಗುತ್ತದೆಯೋ ಏನೋ, ಮರಳಿ ಮೂಲ ಧರ್ಮಕ್ಕೆ ಬರುತ್ತಾರೆ. ಒಟ್ಟಿನಲ್ಲಿ ನಾವು ಎಲ್ಲಿ ಹೋಗಿ ಬೇಡಿಕೊಂಡರೂ ತತ್‌ಕ್ಷಣ ವರ ಸಿಗಬೇಕು, ಇಲ್ಲವಾದರೆ ಅವನು ದೇವರೇ ಅಲ್ಲ! ಕಣ್ಣಿಗೆ ಕಾಣುತ್ತಿರುವುದೆಲ್ಲ ವಿಜ್ಞಾನ ಎಂದು ನಮ್ಮ ಬುದ್ಧಿಗೆ ನಾವೇ ಅಡ್ಡಗೋಡೆ ಕಟ್ಟಿಕೊಳ್ಳುತ್ತೇವೆ. 

ಯಾರಿಗೆ ಯಾವುದರ ಬಗ್ಗೆ ಪೂರ್ಣವಾಗಿ ಗೊತ್ತಿರುವುದಿ ಲ್ಲವೋ ಅವರು ಬಾಯಿಗೆ ಬಂದಂತೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಉತ್ತಮ ಅಲ್ಲವೇ? ನಾಸ್ತಿಕೋ ವೇದ ನಿಂದಕಃ -ಆದಿ ಶಂಕರರ ಪ್ರಕಾರ ವೇದ ಭಾಷ್ಯವನ್ನು ಯಾರು ಪ್ರಮಾಣಿಸುವುದಿಲ್ಲವೋ ಅವನು ನಾಸ್ತಿಕ. ಆಸ್ತಿಕ ಎಂದರೆ ದೈವತ್ವವನ್ನು ಹೊಂದಿರುವ ವ್ಯಕ್ತಿ, ನ+ಅಸ್ತಿ=ದೈವತ್ವವನ್ನು ಹೊಂದದೇ ಇರುವುದು. ಅಂತಹವನು ನಾಸ್ತಿಕ. ಪ್ರತೀ ಜೀವದಲ್ಲೂ ದೈವತ್ವ ತಾನಾಗಿಯೇ ಇರುತ್ತದೆ. ಪ್ರತಿಯೊಬ್ಬನೂ ಆಸ್ತಿಕನಾಗಿಯೇ ಹುಟ್ಟಿರುತ್ತಾನೆ. ವಯಸ್ಸು ಬೆಳೆಯುತ್ತಿದ್ದಂತೆ ಬುದ್ಧಿ ಬೆಳೆಸಿಕೊಳ್ಳುವ ಪ್ರಯತ್ನ ಮಾಡುವ ಅವಸರದಲ್ಲಿ ಕೆಲವರು ತಮ್ಮನ್ನು ತಾವು ನಾಸ್ತಿಕರೆಂದು ಕರೆದುಕೊಳ್ಳುತ್ತಾರೆ. ಮತ್ತೆ ಜೀವನದಲ್ಲಿ ಸಂಕಷ್ಟ ಬಂದಾಗ ಅಥವಾ ಪ್ರಾಣ ಹೋಗುವ ಕೊನೆ ಕ್ಷಣಗಳಲ್ಲಿ ಆ ಪರಮ ಚೈತನ್ಯವನ್ನು ಬೇಡುತ್ತಾ ಆಸ್ತಿಕರಾಗುವ ಪ್ರಯತ್ನ ಮಾಡುತ್ತಾರೆ. ಮನುಷ್ಯ ತಾನು ನಾಸ್ತಿಕ, ತಾನು ನಾಸ್ತಿಕ ಎಂದು ಸಾರಿಕೊಳ್ಳುವ ಮೊದಲು ಆಸ್ತಿಕನಾಗಿಯೇ ಇದ್ದಿರಬೇಕಲ್ಲವೇ!

ಸಮಾಜದಲ್ಲಿ ಸಂಶೋಧನೆ ನಡೆಸಿದಾಗ ತಾವು ನಾಸ್ತಿಕರು ಎಂದುಕೊಳ್ಳುವ ಅತಿ ಹೆಚ್ಚು ಜನರು ಗಂಡಸರು. ಒಂದಷ್ಟು ಜನ ಮಾತನಾಡುವುದನ್ನು ಕೇಳಿದರೆ ತಮಾಷೆಯೆನ್ನಿಸುತ್ತದೆ- "ನನಗೆ ಗಣೇಶ ಮಾತ್ರ ದೇವರು ಅನ್ನಿಸುತ್ತಾನೆ', "ಅದೇನೋಪ್ಪ ಸರಸ್ವತಿ ಒಬ್ಬಳೇ ನನ್ನ ಕಣ್ಣಿಗೆ ದೇವರಾಗಿ ಕಾಣೊದು...' ಹೀಗೆ.

ಕೆಲವರಿಗೆ ಅರ್ಥ ತಿಳಿದುಕೊಳ್ಳುವ ತಾಳ್ಮೆಯೂ ಇರುವುದಿಲ್ಲ. ಆದರೆ ದೊಡ್ಡ ದೊಡ್ಡ ಪದಗಳನ್ನು ಬಳಸಿ ಬುದ್ಧಿ ಜೀವಿಗಳು ಅನ್ನಿಸಿಕೊಳ್ಳಬೇಕು ಅಂತ ಆಸೆ ಪಡುತ್ತಾರೆ. ತಪ್ಪೇ ನಿಲ್ಲ, ಎಲ್ಲರಿಗೂ ಎಲ್ಲವನ್ನೂ ಒಂದೇ ಜನ್ಮದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ.
ನಾಸ್ತಿಕನೆನ್ನಿಸಿಕೊಂಡ ತತ್ವಜ್ಞಾನಿ ಚಾರ್ವಾಕ ಎಲ್ಲವನ್ನೂ ಓದಿ, ತಿಳಿದು, ಅರಿತು ತತ್ವಶಾಸ್ತ್ರದಲ್ಲೇ ಪರಿಣತಿ ಪಡೆದು ಕೊನೆಗೆ ತನ್ನನ್ನು ತಾನು ನಾಸ್ತಿಕನೆಂದು ಕರೆದುಕೊಂಡ. ಅದನ್ನು ಸಮರ್ಥಿಸಿಕೊಳ್ಳುವಷ್ಟು ಜ್ಞಾನವನ್ನು ಅವನು ಹೊಂದಿದ್ದ. ಆದರೆ ಯಾವ ವಿಷಯವನ್ನೂ ಆಳವಾಗಿ ಅರಿಯದೆ ನಾಸ್ತಿಕನೆಂಬ ನಿಧಾರಕ್ಕೆ ಬರುವುದು ನಮ್ಮ ಅಲ್ಪಜ್ಞಾನವನ್ನು ನಾವೇ ಎತ್ತಿ  ತೋರಿಸಿದಂತಾಗುತ್ತದೆ. ನಾಸ್ತಿಕರೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಕೇಳುವ ಮೊದಲ ಪ್ರಶ್ನೆಯೇ "ಓ ... ದೇವರೆಲ್ಲಿದ್ದಾನೆ ತೋರಿಸಿ ನೋಡೋಣ' ಎಂಬುದು. ದೇವರು "ಅಯ್ಯೋ ನಾನಿಲ್ಲೇ ಇದ್ದೇನೆ, ನಾನು ಸತ್ಯ' ಅಂತ ಮನುಷ್ಯನಿಗೆ ಮನುಷ್ಯ ರೂಪದಲ್ಲೇ ದರ್ಶನ ಕೊಡಲು ಸಾಧ್ಯವೇ? ದೇವರು ದರ್ಶನ ಕೊಟ್ಟರೂ ಮನುಷ್ಯ ತನ್ನ ಎದುರಿರುವ ದೇವರನ್ನು ನಂಬುತ್ತಾನೆ ಅನ್ನುವುದಕ್ಕೆ ಯಾವ ಗ್ಯಾರಂಟಿ? ಮುಂದಿನ ವಾರ ಈ ವಿಚಾರ ಚರ್ಚಿಸೊಣ.

ಇಷ್ಟಕ್ಕೂ ದೇವರಿದ್ದಾನೋ ಇಲ್ಲವೋ ಎಂಬ ಚರ್ಚೆ ಅಥವಾ ವಿವಾದದಲ್ಲಿ ದೇವರಿಗೆ ಯಾವ ನಷ್ಟವೂ ಇಲ್ಲ, ಲಾಭವೂ ಇಲ್ಲ! ಅದೆಲ್ಲವೂ ನಮಗೇ.


Trending videos

Back to Top