CONNECT WITH US  

ಆಧುನಿಕತೆಯ ಮಧ್ಯೆ ಪುರಾಣ, ಉಪನಿಷತ್ತುಗಳತ್ತ ತಿರುಗು-ನೋಟ

ವೇದ, ಉಪನಿಷತ್ತು, ಬ್ರಾಹ್ಮಣ, ಅರಣ್ಯಕ ಹಾಗೂ ಪುರಾಣಗಳಲ್ಲಿ ನಮಗೆ ಬದುಕಲು ಕಲಿಸಿಕೊಡುವ ರಹಸ್ಯಗಳಿವೆ. ಎಲ್ಲ ಗ್ರಂಥಗಳನ್ನೂ ಓದುವುದಕ್ಕೆ ಸಾಧ್ಯವಿಲ್ಲ, ಯಾವುದನ್ನು ಓದಿ ಅರ್ಥೈಸಿ ಕೊಳ್ಳಲು ಸಾಧ್ಯವಿದೆಯೋ ಅಷ್ಟನ್ನಾದರೂ ಓದಿದರೆ  ಸಾಕಷ್ಟು ಹೊಸ ವಿಷಯಗಳು ತಿಳಿಯುತ್ತವೆ.

ಪರಮಾತ್ಮನನ್ನು ಅರಿಯುವ ಆಧ್ಯಾತ್ಮ ಜ್ಞಾನ ಸಾಮಾನ್ಯ ಮನುಷ್ಯನನ್ನು ತಲುಪಲು ಋಷಿಮುನಿಗಳೇ ಕಾರಣ. ಅನೇಕ ಋಷಿಗಳನ್ನು ಬ್ರಹ್ಮನ ಮಾನಸ ಪುತ್ರರೆಂದು ಕರೆಯುತ್ತಾರೆ. ಅವರು ಸಾಮಾನ್ಯ ಗಂಡು-ಹೆಣ್ಣಿನ ಮಿಲನದಿಂದ ಜನಿಸದೆ ಬ್ರಹ್ಮನ ಮನಸ್ಸಿನಿಂದ ಸೃಷ್ಟಿಯಾದವರು. ಅವರಿಗೆಲ್ಲ ನಮ್ಮಂತೆ ಬಿಸಿನೆಸ್‌ ಮಾಡಬೇಕು, ಹಣ ಸಂಪಾದಿಸಬೇಕು, ಸ್ವಂತ ಮನೆ ಕಟ್ಟಿ ಕೊಳ್ಳಬೇಕು, ನಾನೇ ದೇಶ ಆಳಬೇಕು ಎನ್ನುವ ತಾತ್ಕಾಲಿಕ ಲೌಕಿಕ ಆಸೆಗಳಿರಲಿಲ್ಲ. ಜ್ಞಾನ ಸಂಪಾದನೆ, ಸದಾಕಾಲ ಪರಮಾತ್ಮನನ್ನು ಅರಿಯುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ವುದು ಹಾಗೂ ಜನಸಾಮಾನ್ಯರ ಬದುಕಿಗೆ ನೆಮ್ಮದಿ ನೀಡುವುದು ಅವರ ಗುರಿಯಾಗಿತ್ತು. ಅವರು ತ್ಯಾಗ-ತಪಸ್ಸಿನ ಮೂಲಕ ಅಶರೀರ ವಾಣಿಯಿಂದ ಗ್ರಹಿಸಿಕೊಂಡ ಗೌಪ್ಯ ವಿಚಾರಗಳನ್ನು ಬೇರೆ ಬೇರೆ ಉಪನಿಷತ್ತುಗಳನ್ನಾಗಿಸಿ ಮುಂದಿನ ಪೀಳಿಗೆಗೆ ಬ್ರಹ್ಮ ಸತ್ಯ-ಜಗತ್‌ ಮಿಥ್ಯ ಎಂಬ ಸಂದೇಶದಡಿ ನೀಡಿದ್ದಾರೆ. ಸಾಮಾನ್ಯ ಮನುಷ್ಯನ ತಲೆಯಲ್ಲಿ ಹೊರಳಾಡುವ ಅನೇಕ ಗೊಂದಲಗಳಿಗೆ ಈ ಉಪನಿಷತ್ತುಗಳಲ್ಲೇ ಉತ್ತರಗಳನ್ನೂ ಬರೆದಿಟ್ಟಿದ್ದಾರೆ.

ಸಪ್ತ ಋಷಿಗಳ ಪರಂಪರೆ
ಮೊತ್ತಮದಲು ಜೈಮಿನೀಯ ಬ್ರಾಹ್ಮಣದಲ್ಲಿ ವಸಿಷ್ಠ, ಭಾರ ದ್ವಾಜ, ಜಮದಗ್ನಿ, ಗೌತಮ, ಅತ್ರಿ ವಿಶ್ವಾಮಿತ್ರ ಮತ್ತು ಅಗಸ್ತರನ್ನು ಸಪ್ತ ಋಷಿಗಳೆಂದು ಪರಿಗಣಿಸಲಾಗಿದೆ. ಹಾಗೇ ಬೃಹದಾರಣ್ಯಕ ಉಪನಿಷತ್‌ನಲ್ಲಿ ಸ್ವಲ್ಪ ಬದಲಾವಣೆ ಇದೆ, ಅಗಸ್ತ ಮತ್ತು ಅತ್ರಿಯ ಬದಲಾಗಿ ಕಶ್ಯಪ ಮತ್ತು ಭೃಗು ಮಹರ್ಷಿಗಳು ಸಪ್ತ ಋಷಿಗಳಲ್ಲಿ ಸೇರಿದ್ದಾರೋ ಇಲ್ಲವೋ ಎಂಬುದು ಅವರಿಗೆ ಹಾಗೂ ಅವರ ಬಗೆಗಿನ ನಂಬಿಕೆಗೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಆ ಕಾಲದಲ್ಲಿ ಎಲ್ಲ ಋಷಿಗಳಿಗೂ ಅವರದೇ ಆದ ಮಹತ್ವವಿತ್ತು ಅವರ ಜ್ಞಾನ ಸ್ಪರ್ಧೆಯ ವಿಷಯವಾಗಿರಲಿಲ್ಲ. ಒಬ್ಬೊಬ್ಬರಲ್ಲೂ ಒಂದೊಂದು ವಿಶೇಷತೆ ಇತ್ತು.

ನಾವು ರಾತ್ರಿ ಹೊತ್ತು ಆಕಾಶವನ್ನು ನೋಡುತ್ತಾ ಸಪ್ತರ್ಷಿ ಮಂಡಲ ಕಾಣುತ್ತದೆಯೇ ಎಂಬುದಾಗಿ ಹುಡುಕುತ್ತೇವೆ. ಕೋಟ್ಯಂತರ ನಕ್ಷತ್ರಗಳಿದ್ದರೂ ಈ ಏಳು ನಕ್ಷತ್ರಗಳು ಗುಂಪಾಗಿದ್ದು ಹೆಚ್ಚು ಪ್ರಕಾಶಮಾನವಾಗಿ ಗೋಚರವಾಗುತ್ತವೆ. ಈ ಏಳು ನಕ್ಷತ್ರಗಳ ಹೆಸರು-ವಸಿಷ್ಠ, ಮರೀಚಿ, ಪುಲಸ್ತ$Â, ಪುಲಹಾ, ಅತ್ರಿ, ಅಂಗೀರಸ ಮತ್ತು ಕ್ರತು. ಈ ಏಳು ನಕ್ಷತ್ರಗಳ ಜತೆಯಲ್ಲೇ ಮತ್ತೂಂದು ನಕ್ಷತ್ರ ಮಿನುಗುತ್ತಿರುತ್ತದೆ. ಅದೇ ಅರುಂಧತಿ ನಕ್ಷತ್ರ. ಅರುಂಧತಿ, ವಸಿಷ್ಠ ಮಹಾಮುನಿಗಳ ಧರ್ಮಪತ್ನಿ. ಸಾಮಾನ್ಯವಾಗಿ ಮದುವೆಯ ದಿನ ಗಂಡು ಹೆಣ್ಣನ್ನು ಕಲ್ಯಾಣ ಮಂಟಪದಿಂದ ಹೊರಗೆ ಕರೆದುಕೊಂಡು ಬಂದು ಅರುಂಧತಿ ನಕ್ಷತ್ರ ತೋರಿಸುತ್ತಾರೆ.

ದೇವರಿಗಿಂತ ಶಕ್ತಿಶಾಲಿ ಋಷಿಗಳು
ಮೂಲ ಸಪ್ತ ಋಷಿಗಳಿಂದಲೇ ವೇದ, ಬ್ರಾಹ್ಮಣ (ಜಾತಿಯಲ್ಲ), ಉಪನಿಷತ್ತುಗಳು ರಚನೆಯಾಗಿದ್ದು ಹಾಗೂ ಹೇಳಲ್ಪಟ್ಟದ್ದು. ಅವರ್ಯಾರೂ ವೇದ, ಉಪನಿಷತ್ತುಗಳನ್ನು ಬರೆದಿಡಲಿಲ್ಲ. ಅವು ಗಳನ್ನು ಮೌಖೀಕವಾಗಿ ಶಿಷ್ಯರಿಗೆ ಉಪದೇಶ ಮಾಡಿದರು. ಮೌಖೀಕವಾಗಿಯೇ ಅವು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿದು ಬಂದವು. ಕಾಲಾಂತರದಲ್ಲಿ ಅವುಗಳನ್ನು ಲಿಖೀತವಾಗಿ ದಾಖಲಿಸುವ ಪದ್ಧತಿ ಪ್ರಾರಂಭವಾಯಿತು. 

ಅನಂತರದ ಮನ್ವಂತರದಲ್ಲಿ ಬಂದ ಸಪ್ತ ಋಷಿಗಳು ದೀಪ್ತಿಮತ್‌, ಗಾಲವ, ಪರಶುರಾಮ, ಕೃಪಾ, ಅಶ್ವತ್ಥಾಮ, ವ್ಯಾಸ ಮತ್ತು ಋಷ್ಯಶೃಂಗ. ಹೀಗೆ ಪ್ರತಿ ಮನ್ವಂತರದಲ್ಲೂ, ಪ್ರತಿ ಯುಗದಲ್ಲೂ ಸಪ್ತ ಋಷಿಗಳು ಬದಲಾಗುತ್ತಿರುತ್ತಾರೆ. ನಮ್ಮ ಕಲಿಯುಗಕ್ಕೆ 4,32,000 ವರ್ಷಗಳ ಆಯಸ್ಸು ಇದೆ. ಈಗ 2015ಕ್ಕೆ 5,106 ವರ್ಷಗಳು ಕಳೆದಿವೆ. ದ್ವಾಪರ ಯುಗವು ಕಲಿಯುಗದ ಎರಡರಷ್ಟು ಕಾಲ, ತ್ರೇತಾಯುಗವು ಕಲಿಯುಗದ ಮೂರರಷ್ಟು ಕಾಲ, ಕೃತ/ಸತ್ಯಯುಗವು ಕಲಿಯುಗದ ನಾಲ್ಕರಷ್ಟು ಕಾಲ- ಹೀಗೆ ಎಲ್ಲ ಸೇರಿ 4.32 ಕೋಟಿ ವರ್ಷಗಳನ್ನು ಒಂದು ಚತುರ್ಯುಗ ಎನ್ನಲಾಗುತ್ತದೆ. ಸಾವಿರ ಚತುರ್ಯುಗಗಳು ಸೇರಿದರೆ ಬ್ರಹ್ಮನಿಗೆ ಒಂದು ದಿನ. 

ಋಷಿಮುನಿಗಳ ಜಗತ್ತಿನ ಎನರ್ಜಿಯನ್ನು ತಮ್ಮೊಳಗೆ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಅವರು ಹಠಕ್ಕೆ ಬಿದ್ದು ತಪಸ್ಸಿಗೆ ಕುಳಿತರೆ ದೇವರೇ ಪ್ರತ್ಯಕ್ಷನಾಗಿ ಕುಶಲೋಪರಿ ವಿಚಾರಿಸುತ್ತಿದ್ದ ಎಂಬ ನಂಬಿಕೆಯಿದೆ. ಇನ್ನು ಅನೇಕ ಋಷಿಗಳು ತಾವೇ ದೇವರ ಬಳಿಗೆ ಹೋಗಿ ಮಾತನಾಡಿಬರುತ್ತಿದ್ದರು. ಭೃಗುಮಹರ್ಷಿ ನಾರಾಯಣನ ಎದೆಗೆ ಒದ್ದರೂ ನಾರಾಯಣ ಕೋಪ ಮಾಡಿಕೊಳ್ಳದೆ "ನನ್ನ ಹೃದಯದಲ್ಲಿರುವ ಭಕ್ತನಿಗೆ ನನ್ನನ್ನು ಪ್ರೀತಿಸಲೂ ಅರ್ಹತೆ ಇದೆ, ಮಗುವಿನಂತೆ ಒದೆಯಲೂ ಅರ್ಹತೆ ಇದೆ' ಎಂದಿದ್ದ ಎಂದು ಪುರಾಣದ ಕತೆಗಳು ಹೇಳುತ್ತವೆ. ಇಂತಹ ದೈವೀ ಪುರುಷರು ನಮಗಾಗಿ ಉಳಿಸಿಟ್ಟಿರುವ ಜ್ಞಾನದ ಸಂಹಿತೆಯನ್ನು ಓದಿ ತಿಳಿದುಕೊಂಡು-ಅಳವಡಿಸಿಕೊಳ್ಳುವುದೂ ನಮ್ಮ ಜೀವನದ ಮೂಲ ಧ್ಯೇಯಗಳಲ್ಲಿ ಒಂದಾಗಬೇಕು.

ಹೆಣ್ಮಕ್ಕಳು ಗಾಯತ್ರೀ ಮಂತ್ರ ಜಪಿಸಬಾರದೆ?
ವಿಶ್ವಾಮಿತ್ರ ಪರಮಾತ್ಮ ಹಾಗೂ ಪ್ರಕೃತಿಯ ಸರ್ವಶಕ್ತಿಯನ್ನು ಗಾಯತ್ರಿ ಮಂತ್ರವನ್ನಾಗಿ ಜೋಡಿಸಿಕೊಟ್ಟಿದ್ದಾರೆ. ಇದು ಶಕ್ತಿಯನ್ನು ಗಳಿಸುವ ಮಂತ್ರ. ಹೆಣ್ಣುಮಕ್ಕಳು ಗಾಯತ್ರಿ ಮಂತ್ರ ಹೇಳಬಾರದು, ಬೇರೆ ಜಾತಿಯವರು ಈ ಮಂತ್ರವನ್ನು ಉಚ್ಚರಿಸಬಾರದು ಎಂದು ಯಾರಾದರೂ ಹೇಳಿದರೆ ಅದನ್ನು ನಂಬಬೇಕಿಲ್ಲ. ಜಗತ್ತಿನ ಶಕ್ತಿ ಎಲ್ಲರ ಸ್ವತ್ತು. ಪರಮಾತ್ಮ ನಾವು ಬೇಕು ಅಂದರೂ, ಬೇಡ ಅಂದರೂ ನಮ್ಮೊಳಗೆ ನೆಲೆಸಿದ್ದಾನೆ. ಪರಮಾತ್ಮನಿಂದ ನಮ್ಮನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಗೌರೀ ವ್ರತ, ಲಕ್ಷ್ಮೀವ್ರತ, ದುರ್ಗಾ ಪೂಜೆ ಮಾಡುವಾಗ ಷೋಡಶೋಪಚಾರದಲ್ಲಿ ಅವಳಿಗೂ ಜನಿವಾರ ಹಾಕುತ್ತೇವೆ. ಎಲ್ಲ ಪೂಜೆಗಳು, ಎಲ್ಲ ಮಂತ್ರಗಳು ಪರಮಾತ್ಮನಿಗೆ ಅರ್ಪಣೆ ಯಾಗುವುದರಿಂದ ಭಕ್ತಿಗೆ ಯಾರ ಅಪ್ಪಣೆಯನ್ನೂ ಪಡೆಯ ಬೇಕಾಗಿಲ್ಲ. ಯಾರ ವ್ಯಂಗ್ಯಕ್ಕೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. 

ವಿಶ್ವಾಮಿತ್ರರಿಗೆ ಎಷ್ಟು ಶಕ್ತಿಯಿತ್ತೆಂದರೆ, ತ್ರಿಶಂಕುವಿಗಾಗಿ ಒಂದು ಸ್ವರ್ಗವನ್ನೇ ಅವರು ನಿರ್ಮಿಸಿದರು. ತ್ರಿಶಂಕು ಮಹಾರಾಜ ಸದೇಹಿಯಾಗಿ ಸ್ವರ್ಗಕ್ಕೆ ಹೋಗುವುದಕ್ಕೆ ದೇವಾನುದೇವತೆಗಳು ನಿರಾಕರಿಸಿದ್ದರಿಂದ ವಿಶ್ವಾಮಿತ್ರರು ಕೋಪಗೊಂಡು ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿ, ಹೊಸ ಬ್ರಹ್ಮನನ್ನೂ ಸೃಷ್ಟಿಸಿದ್ದರು. ಅನಂತರ ಬೃಹಸ್ಪತಿಯ ಆಜ್ಞೆಯನ್ನು ಒಪ್ಪಕೊಂಡು ಹೊಸ ವಿಶ್ವದ ಸೃಷ್ಟಿ ಯನ್ನು ಅಲ್ಲಿಗೇ ನಿಲ್ಲಿಸಿದರು. ಇದರರ್ಥ, ಋಷಿಮುನಿಗಳು 
ತಮ್ಮ ತಪಸ್ಸಿನಿಂದ ಗಳಿಸಿಕೊಂಡ ಶಕ್ತಿಯಿಂದಾಗಿ ದೇವರಿಗಿಂತಲೂ ಹೆಚ್ಚು ಪ್ರಬಲರಾಗಿದ್ದರು.

ವ್ಯಾಸ-ವಾಲ್ಮೀಕಿ-ಕೌಶಿಕ-ಶ್ರೀವತ್ಸ-ಕುತ್ಸಾ-ವಾಮದೇವ ಪ್ರಜಾಪತಿ ಹೀಗೆ 356 ಋಷಿಗಳ ಹೆಸರುಗಳು ಮಾತ್ರ ನಮಗೆ ಸಿಕ್ಕಿವೆ. ಅನೇಕ ಋಷಿ ಮಹಿಳೆಯರನ್ನು ದೈವಿಕ ಮಹಿಳೆಯರು ಎಂದು ಕರೆಯಲಾಗುತ್ತಿತ್ತು. ವಿಶ್ವವಾರಾ, ಆಂಗೀರಸಿ, ಸರಸ್ವತಿ, ಅಪಾಲಾ, ಯಾಮೀ, ವೈವಸ್ವತಿ, ಶ್ರದ್ಧಾ, ಇಂದ್ರಾಣಿ, ಘೋಶಾ, ಮೈತ್ರೇಯಿ, ಪೌಲೋಮಿ, ಸಾಚಿ, ಗಾಗೇìಯಿ ಇವರೆಲ್ಲ ವೈದಿಕ ಗ್ರಂಥಗಳ ರಚನೆಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಈಗೇಕೆ ಹಳೆಯದರ ಗೊಡವೆ?
ಇದನ್ನೆಲ್ಲ ಏಕೆ ಹೇಳಬೇಕಾಯಿತು ಅಂದರೆ, ಇಂದಿನ ತಲೆ ಮಾರಿಗೆ ಋಷಿಮುನಿಗಳು ಅಂದರೆ ಕಾಡಿನಲ್ಲಿ ಕುಳಿತು ಗಡ್ಡ ಬಿಟ್ಟುಕೊಂಡು ತಪಸ್ಸು ಮಾಡುವ ಪೌರಾಣಿಕ ಚಿತ್ರವೊಂದು ನೆನಪಿಗೆ ಬರುವುದು ಬಿಟ್ಟರೆ ಅವರು ನೀಡಿದ ಜ್ಞಾನಭಂಡಾರದ ಬಗ್ಗೆ ಗೊತ್ತಿಲ್ಲ. ವೇದ, ಉಪನಿಷತ್ತು, ಬ್ರಾಹ್ಮಣ, ಅರಣ್ಯಕ ಹಾಗೂ ಪುರಾಣಗಳಲ್ಲಿ ನಮಗೆ ಬದುಕಲು ಕಲಿಸಿಕೊಡುವ ಹಾಗೂ ನಮ್ಮೊಳಗಿನ ಶಕ್ತಿಯನ್ನು ಉದ್ದೀಪಿಸಿಕೊಂಡು ಮೇಲೆ ಬರುವ ಸಾಕಷ್ಟು ರಹಸ್ಯಗಳಿವೆ. ಎಲ್ಲ ಪ್ರಾಚೀನ ಗ್ರಂಥಗಳನ್ನೂ ನಮಗೆ ಓದುವುದಕ್ಕೆ ಸಾಧ್ಯವಿಲ್ಲವಾದರೂ, ಯಾವುದನ್ನು ಓದಿ ಅರ್ಥೈಸಿ ಕೊಳ್ಳಲು ಸಾಧ್ಯವಿದೆಯೋ ಅಷ್ಟನ್ನಾದರೂ ಓದಿದರೆ ಅವುಗಳಿಂದ ಸಾಕಷ್ಟು ಹೊಸ ವಿಷಯಗಳು ತಿಳಿಯುತ್ತವೆ. 

ಜಗತ್ತೇ ಇಂದು ಭಾರತದ ಪುರಾತನ ಜ್ಞಾನಭಂಡಾರದಲ್ಲಿ ಏನೇನಿದೆ ಎಂದು ಕೆದಕಿ ನೋಡುತ್ತಿರುವಾಗ ನಾವು ಮಾತ್ರ ಇವುಗಳನ್ನೆಲ್ಲ ಕಡೆಗಣಿಸಿ ಲೌಕಿಕ ಪಾಶ್ಚಾತ್ಯ ಬದುಕಿನ ಹಿಂದೆ ಬಿದ್ದಿದ್ದೇವೆ. ಹೊಸಹೊಸತನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ. ಆದರೆ ಹಳೆಯದನ್ನು ಯಾವ ಕಾರಣಕ್ಕೂ ಕಡೆಗಣಿಸಬಾರದು; ಅದರಲ್ಲೂ ಋಷಿಮುನಿಗಳು ನಮಗೆ ಕೊಟ್ಟ ಜ್ಞಾನಭಂಡಾರವನ್ನು ಕಡೆಗಣಿಸಿದರೆ ನಮಗೇ ನಷ್ಟ.

Trending videos

Back to Top