CONNECT WITH US  

ಧನುರ್ಮಾಸ ಶೂನ್ಯ ಮಾಸವಲ್ಲ, ಎಲ್ಲಕ್ಕಿಂತ ಶ್ರೇಷ್ಠ ಮಾಸ

ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್‌ ಮಾಸ ಎಲ್ಲ ಕೆಲಸಗಳಿಗೂ ಬಹಳ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಮಾರ್ಗಶೀರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್‌ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್‌ ಮಾಸವೆಂದು ಹೆಸರಿಸಲಾಗಿದೆ.

ಬಹಳ ಜನರು ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲ ಕೆಲಸಗಳನ್ನೂ ಪ್ರಾರಂಭಿಸುತ್ತಾರೆ. ಇನ್ನು ಕೆಲವರು ಅರ್ಧ ಆ ಕಡೆ ಇರುತ್ತಾರೆ, ಇನ್ನರ್ಧ ಈ ಕಡೆ ಇರುತ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಅನುಸರಿಸುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯ ಪುರೋಹಿತರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅವರು ರಾಹುಕಾಲ, ಯಮಗಂಡಕಾಲದಲ್ಲಿ ಕೆಲಸ ಪ್ರಾರಂಭಿಸುವುದಿಲ್ಲ, ವಾಸ್ತುಪ್ರಕಾರ ಸರಿಯಾದ ದಿಕ್ಕಿನಲ್ಲೇ ನಿಂತು/ಕುಳಿತು ಕೆಲಸ ಶುರು ಮಾಡುತ್ತಾರೆ. 

ಧನುರ್‌ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್‌ ಮಾಸ ಎಲ್ಲ ಕೆಲಸಗಳಿಗೂ ಬಹಳ ಶ್ರೇಷ್ಠವಾದ ಮಾಸ. ಧನುರ್‌ ಮಾಸವನ್ನು ಮಾರ್ಗಶೀರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್‌ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್‌ ಮಾಸವೆಂದು ಹೆಸರಿಸಲಾಗಿದೆ.

ಮಾರ್ಗಶೀರ್ಷ ಮಾಸದ ವಿಶೇಷತೆ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಶ್ರೇಷ್ಠವಾದ, ತನಗಿಷ್ಟವಾದ ಎಲ್ಲ ವಿಚಾರಗಳನ್ನು ಅರ್ಜುನನಿಗೆ ತಿಳಿಸುವಾಗ ಮಾರ್ಗಶೀರ್ಷ ಮಾಸದ ಬಗ್ಗೆಯೂ ಹೇಳಿದ್ದಾನೆ.

ಬೃಹತ್‌ ಸಾಮ ತಥಾ ಸಾಮ್ನಾಂ
ಗಾಯತ್ರೀ ಛಂದಸಾಮಹಮ್‌ |
ಮಾಸಾನಾಂ ಮಾರ್ಗಶೀರ್ಷೋಹಂ
ಋತೂನಾಂ ಕುಸುಮಾಕರಃ ||
ಸಾಮಗಳಲ್ಲಿ ಪ್ರಧಾನವಾದ ಬೃಹತ್‌ ಸಾಮವು ನಾನು. ಛಂದಸ್ಸುಗಳಲ್ಲಿ ಅತಿ ವಿಶಿಷ್ಠವಾದ ಗಾಯತ್ರಿ ಛಂದಸ್ಸು (ಗಾಯತ್ರಿ ಮಂತ್ರ) ನಾನು. ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ಚಿಗುರೊಡೆಯುವ, ಹೂ ಬಿಡುವ ಋತು ವಸಂತವೂ ನಾನೇ ಆಗಿದ್ದೇನೆ.

ಶ್ರೀಕೃಷ್ಣನಿಗೆ ಪ್ರಿಯವಾದ ಮಾಸ
ಕೃಷ್ಣನ ಪರಮ ಭಕ್ತರಿಗೆ ಇದು ತುಂಬಾ ಪ್ರಿಯವಾದ ಮಾಸ. ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ-ಅಂಡಾಳ, ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ "ಮೂವತ್ತು ಕವಿತೆಗಳು' ಎಂಬ ಪ್ರೀತಿ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀ ವೈಷ್ಣವರು ನಾಲಾಯಿರಂತಿರುಪ್ಪಾವೈ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ. ವೆಂಕಟೇಶನ ಯಾವುದೇ ದೇವಸ್ಥಾನಕ್ಕೆ ಹೋದರೂ, ತಿರುಮಲ ದೇವಸ್ಥಾನದಲ್ಲೂ, ಅಂಡಾಳ್‌ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿಯೇ ದೇವರನ್ನು ಎಬ್ಬಿಸುವುದು. ಹಾಗೇ ಅಂಡಾಳ್‌ ವೆಂಕಟೇಶನಿಗಾಗಿ ರಚಿಸಿರುವ ಲಾಲಿ ಹಾಡು ಹಾಡಿಯೇ ಅವನನ್ನು ಮಲಗಿಸುವುದು.

ಪರಮಾತ್ಮನನ್ನು ಪ್ರೀತಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಭೂದೇವಿ-ಅಂಡಾಳ್‌ ರೂಪದಲ್ಲಿ ಪ್ರತಿ ದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ದೇವರನ್ನು ಖುಷಿ ಪಡಿಸುತ್ತಿದ್ದಳು. ಅವಳು ವೆಂಕಟೇಶನನ್ನು ಪ್ರೀತಿಸಿದ ಮಾಸ ಮಾರ್ಗಶೀರ್ಷ. ಅದೇ ಮಾಸದಲ್ಲಿ ವೆಂಕಟೇಶ/ಶ್ರೀನಿವಾಸ ಅಂಡಾಳ್‌ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಮದುವೆಯಾದ. ಹಾಗಾಗಿ ಇದು ದೇವರಿಗೆ ಪ್ರಿಯವಾದ ಮಾಸ.

ದೇವತೆಗಳ ಬ್ರಾಹ್ಮಿ ಮುಹೂರ್ತ
ನಾವು ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಿದ್ದೇವೆ- ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ. ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಹಗಲು, ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ, ರಾತ್ರಿ ಮುಗಿಯುತ್ತಿರುವ ಸಮಯ. ನಾವು ಬ್ರಾಹ್ಮಿà ಮುಹೂರ್ತವೆಂದು ಯಾವ ಸಮಯವನ್ನು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ದೇವತೆಗಳಿಗೆ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮ ಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫ‌ಲಿಸುತ್ತವೆ. ಹಾಗಂತ ಈ ಸಮಯದಲ್ಲಿ ಬೇರೆ ಒಳ್ಳೆಯ ಕೆಲಸ ಮಾಡಬಾರದೂ ಅಂತಲ್ಲ. ಕೆಲವರು ಮದುವೆ, ನಾಮಕರಣ, ಬ್ರಹ್ಮೋಪದೇಶ ಅಷ್ಟೇ ಯಾಕೆ ಮನೆ-ಸೈಟು ಖರೀದಿಸುವವರು ಸಹ ಈ ಮಾಸವನ್ನು ಶೂನ್ಯ ಮಾಸವೆಂದು ಪರಿಗಣಿಸಿ ಎಲ್ಲವನ್ನೂ ಮುಂದೂಡುತ್ತಾರೆ. ಖಂಡಿತ ಹಾಗೆ ಮಾಡಬೇಕಿಲ್ಲ. 

ಶೂನ್ಯ ಮಾಸ ಯಾವುದು?
ಪುಷ್ಯಾ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ, ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫ‌ಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ.
ಶೂನ್ಯಮಾಸ ಸಾಮಾನ್ಯವಾಗಿ ಜೂನ್‌, ಜುಲೈ, ಆಗಸ್ಟ್‌ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ. ಆಷಾಢದಿಂದ ಉತ್ತರಾಯಣ ಪುಣ್ಯಕಾಲ ಮುಗಿದು ದಕ್ಷಿಣಾಯನ ಪುಣ್ಯ ಕಾಲಕ್ಕೆ ಕಾಲಿಡುತ್ತೇವೆ. 

ಇದು ವ್ಯಾಲೆಂಟೈನ್‌ ಮಾಸ !
ಮಾರ್ಗಶೀರ್ಷ ಮಾಸವನ್ನು ಮಾರ್ಗಳಿ ತಿಂಗಳೆಂದು ಕರೆಯುವುದುಂಟು. ಮಾರ್ಗಳಿ ಎಂದರೆ... ಮಳೆಗಾಲವೆಲ್ಲ ಮುಗಿದು ಹೋಗಿ, ಭೂಮಿ ತಣ್ಣಗಿನ ಸುಂದರವಾದ ವಾತಾವರಣವನ್ನು ಸೃಷ್ಠಿಸುವ ಮುನ್ಸೂಚನೆ. ಪೈರುಗಳು ಪಕ್ವವಾಗುವ ಕಾಲ ಮತ್ತು ಈ ಮಾಸಕ್ಕೆ ಅಗ್ರಹಾಯಣೀ (ವರ್ಷ ಆದಿಮಾಸ) ಎಂಬ ಹೆಸರೂ ಇತ್ತು ಎಂದು ಲೋಕಮಾನ್ಯ ತಿಲಕ್‌ ಸಹ ತಮ್ಮ ಭಾಷಣದಲ್ಲಿ ಹೇಳಿದ್ದರು. 

ಅದೇನೇ ಇರಲಿ, ದೇವರನ್ನು ಧ್ಯಾನಿಸಲು, ಪೂಜಿಸಲು, ಪ್ರೀತಿಸಲು, ಪ್ರೇಮಿಸಲು, ಒಳ್ಳೆಯ ಕೆಲಸ ಆರಂಭಿಸಲು, ಯಾವುದೇ ಕಾರ್ಯಾಚರಣೆ ಮಾಡಲು ಧನುರ್ಮಾಸ ಅತಿ ಶ್ರೇಷ್ಠವಾದ ಮಾಸ. ದೇವರೇ ಪ್ರೀತಿಸಿ ಮದುವೆಯಾದ ತಿಂಗಳಿದು ಅಂದಮೇಲೆ ಈ ತಿಂಗಳೆ ಪ್ರೇಮಿಗಳ ತಿಂಗಳು ಅಲ್ಲವೇ? ನಾವೆಲ್ಲ ಆಂಗ್ಲರ ಪ್ರಕಾರ ಫೆಬ್ರವರಿ ಹದಿನಾಲ್ಕರಂದು ಪ್ರೇಮಿಗಳ ದಿನವನ್ನು ಯಾಕೆ ಆಚರಿಸುತ್ತೇವೆ? ಇಡೀ ಧನುರ್ಮಾಸವನ್ನೇ ಪ್ರೇಮಿಗಳ ಮಾಸವನ್ನಾಗಿ ಮಾಡಬಹುದಲ್ಲವೆ?

ರೂಪಾ ಅಯ್ಯರ್‌


Trending videos

Back to Top