CONNECT WITH US  

ನಿಜಕ್ಕೂ ಮಾಟ - ಮಂತ್ರ, ತಂತ್ರ ವಿದ್ಯೆಗಳಿಗೆ ಶಕ್ತಿಯಿದೆಯೇ ?

ಮತ್ತೂಬ್ಬರಿಗೆ ಕೆಡುಕನ್ನು ಬಯಸಿ ಇಷ್ಟೆಲ್ಲಾ ದುಡ್ಡು ಖರ್ಚು ಮಾಡುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಎಷ್ಟೋ ಜನರ ಮನೆಯಲ್ಲಿ ತಂದೆ-ತಾಯಿ ಮಕ್ಕಳ ಮೇಲೆ ಮಾಟ ಮಾಡಿಸಿ ಹಾಸಿಗೆ ಕೆಳಗೆ ಯಂತ್ರ-ನಿಂಬೆಹಣ್ಣು ಇಟ್ಟಿರುತ್ತಾರೆ. ಗಂಡು ಮಕ್ಕಳು ಯಾವ ಹುಡುಗಿಯರನ್ನೂ ಪ್ರೀತಿಸದೆ ಮಾತು ಕೇಳಬೇಕೆಂದು ಹೀಗೆ ಮಾಡುತ್ತಾರಂತೆ, ಕೆಲವರು ದೇವರ ಮನೆಯಲ್ಲಿ ದೇವರ ವಿಗ್ರಹ ಇಡುವ ಬದಲು ಚಿಕ್ಕ ಕುಡಿಕೆಗಳಿಗೆ ಬಟ್ಟೆ ಕಟ್ಟಿ, ಹೆಸರು ಬರೆದು, ಅದಕ್ಕೆ ಶ್ರದ್ಧೆಯಿಂದ ಕೈಂಕರ್ಯಗಳನ್ನು ಮಾಡುತ್ತಾರೆ... 

ಮನುಷ್ಯನ ಹುಟ್ಟು ಸಾವಿನ ಲೆಕ್ಕಾಚಾರವನ್ನು ವಿಧಿ ಏನೇ ಬರೆದಿಟ್ಟಿದ್ದರೂ ಬದುಕಿರುವಾಗ ಕರ್ಮ ಮಾರ್ಗದಲ್ಲಿ ನಮ್ಮ ಹಣೆಬರಹವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸ್ವಾತಂತ್ರ್ಯವನ್ನು ದೇವರು ನಮ್ಮೆಲ್ಲರಿಗೂ ಕೊಟ್ಟಿರುತ್ತಾನೆ. ಈ ಜನ್ಮದಲ್ಲಿ ನಾವು ಏನೆಲ್ಲವನ್ನು ಮಾಡಿ ಮುಗಿಸಬೇಕು. ಎಷ್ಟು ಕ್ವಾಲಿಟಿ ವರ್ಕ್‌ ಮಾಡುತ್ತೇವೆ ಅನ್ನುವುದು ನಮಗೇ ಬಿಟ್ಟಿದ್ದು.

ಮನುಷ್ಯನಿಗೆ ಆಸೆ ಸಹಜವಾಗಿ ಉತ್ಪತ್ತಿಯಾಗುವ ರಸ. ಅದನ್ನು ಈಡೇರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧನಿರು ತ್ತಾನೆ. ಇತ್ತೀಚೆಗಂತೂ ಜನರು ಸಾತ್ವಿಕವಾಗಿ ಮಂತ್ರಗಳಿಗೆ ಮೊರೆ ಹೋಗುವುದಕ್ಕಿಂತ ಯಾರ್ಯಾರು ಏನೇನು ತಂತ್ರಗಳನ್ನು ಹೇಳಿಕೊಡುತ್ತಾರೋ ಅದನ್ನೆಲ್ಲ ಮಾಡುತ್ತಾರೆ. ಪೂಜೆ ಮಾಡಿ ದೇವರನ್ನು ಒಲಿಸಿಕೊಳ್ಳಿ ಅಂದರೆ ನಮಗೆ ಬೇಗ ಬೇಗ ಎಲ್ಲಾ ಸಿಗಬೇಕು. ಅದಕ್ಕೆ ನಾವು ತಂತ್ರ ಗುರುಗಳು ಹೇಳಿದಂತೆ ಕೇಳುತ್ತೇವೆ ಎನ್ನುತ್ತಾರೆ. "ನಮಗೆ ಯಾವಾಗ ಏನೇ ಸಮಸ್ಯೆ ಆದರೂ ಅವರೇ ಪರಿಹಾರ ಮಾಡಿ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಕೊಡುತ್ತಾರೆ. ಆ ವಸ್ತುವನ್ನು ಕ್ಷುದ್ರ ವಿದ್ಯೆಯ ಪ್ರಕಾರ ಮಂತ್ರಿಸಿ ಅದಕ್ಕೆ ಶಕ್ತಿಯನ್ನು ತುಂಬಿರುತ್ತಾರೆ. ಹಾಗಾಗಿ ಅದು ಬೇಗ ಬೇಗ ಕೆಲಸ ಮಾಡುತ್ತದೆ. ಭೌತಿಕ ಜಗತ್ತಿನಲ್ಲಿ ನಾವು ಬದುಕಿರೋದು ಏತಕ್ಕೆ ಮೇಡಂ? ನಮಗೆ ನಾವು ಅಂದುಕೊಂಡಿರುವುದೆಲ್ಲ ಸರಿಯಾದ ಸಮಯಕ್ಕೆ ಸಿಕ್ಕರೆ ತಾನೇ ಸಾರ್ಥಕತೆ? ನಾನು ಇಷ್ಟು ಕಷ್ಟಪಟ್ಟು ದುಡಿದು ಏನು ಪ್ರಯೋಜನ? ಚೆನ್ನಾಗಿರೋರು ಚೆನ್ನಾಗಿಯೇ ಇರುತ್ತಾರೆ. ಕಷ್ಟ ಪಡೋರು ಕಷ್ಟ ಪಡ್ತಾನೇ ಇರ್ತಾರೆ. ಮಂತ್ರಾನೋ, ತಂತ್ರಾನೋ ನಮಗೆ ಅಧಿಕಾರ ಹಣ ಗೌರವ ಸಿಕ್ಕರೆ ಸಾಕು' ಎಂದು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.
ತಂತ್ರ ವಿದ್ಯೆ ಋಣಾತ್ಮಕವೇ?

ತಂತ್ರ ಯಾವಾಗಲೂ ನೆಗೆಟಿವ್‌ ಆಗಿಯೇ ಇರಬೇಕು ಅಂತ ಏನಿಲ್ಲ, ಕೆಲವರು ಮಾನಸಿಕವಾಗಿ ಬುದ್ಧಿಹೀನರಾದರೆ ಅಥವಾ ಅಸ್ತವ್ಯಸ್ತರಾಗಿ ಬುದ್ದಿಯ ಸಮತೋಲನ ಕಳೆದುಕೊಂಡರೆ ತಂತ್ರ ವಿದ್ಯೆ ಒಮ್ಮೊಮ್ಮೆ ಸಹಾಯ ಮಾಡುತ್ತದೆ. ತಂತ್ರ ವಿದ್ಯೆ ಕೂಡ ಒಂದು ವಿದ್ಯೆಯೇ ಆದರೆ ಅದನ್ನು ಎಲ್ಲಿ ಹೇಗೆ, ಯಾಕೆ ಪ್ರಯೋಗ ಮಾಡುತ್ತಾರೆ ಅನ್ನುವುದು ಮುಖ್ಯ. ಆ ಶಕ್ತಿಯನ್ನು ಪಡೆದುಕೊಳ್ಳುವುದು ಸಹ ಅಷ್ಟು ಸುಲಭ ಅಲ್ಲ, ಮಾಯ, ಮಾಟ, ತಂತ್ರದ್ದೇ ಒಂದು ದೊಡ್ಡ ಜಗತ್ತು, ಆ ವಿದ್ಯೆಯನ್ನು ಅರೆದು ಕುಡಿದ ಗುರುಗಳು ತಮ್ಮ ಜೀವನ ಪೂರ್ತಿ ತಂತ್ರ ವಿದ್ಯೆಯ ಸಾಧನೆಗಾಗಿ ಊರೂರು ಅಲೆದು, ಸಂಸಾರ, ಪ್ರೀತಿ, ಸಂಬಂಧ ಗಳು, ಲೌಕಿಕ ಆಕರ್ಷಣೆಗಳಿಂದ ದೂರ ಉಳಿದು, ಎಲ್ಲವನ್ನೂ ತ್ಯಾಗ ಮಾಡಿರುತ್ತಾರೆ. ಆದರೆ ಬೇರೆಯವರ ಲೌಕಿಕ ಆಸೆಗಳನ್ನು ಈಡೇರಿಸಲು ಇವರು ತಂತ್ರ ಪ್ರಯೋಗ ಮಾಡುತ್ತಾರೆ- ತಂತ್ರ, ಕ್ಷುದ್ರವಿದ್ಯೆ, ಮಾಯ ಮಾಟ, ಬಲಿ ಕೊಡುವುದು ವಾಮಾಚಾರ, ಹಿಂಸಾಚಾರ, ವಶೀಕರಣ ಇವೆಲ್ಲಾ...ಅನೇಕರು ತಾತ್ಕಾಲಿಕ ವಶೀಕರಣದ ರುಚಿ ಕಂಡುಕೊಂಡು ಬ್ಲಾಕ್‌ ಮ್ಯಾಜಿಕ್‌ ಹಿಂದೆ ಬಿದ್ದಿದ್ದಾರೆ. ಆದರೆ ಆಚಾರವಂತರ್ಯಾರು ಇವನ್ನೆಲ್ಲ ಮಾಡಿಸಲು ಹೋಗುವುದಿಲ್ಲ.  ಕೆಲವರು ನಿಂಬೆಹಣ್ಣು, ಮೆಣಸಿನಕಾಯಿ, ಮಡಿಕೆ, ಕುಡಿಕೆ, ತೆಂಗಿನಕಾಯಿ, ಮೊಟ್ಟೆ, ಕೂದಲು, ಉಗುರು ಬಟ್ಟೆಗಳನ್ನು ಮಂತ್ರಿಸಿ ಬೇರೆಯವರ ಮನೆಯ ಮುಂದೆ ಬಿಸಾಕುತ್ತಾ¤ರೆ. ಬೆಂಗಳೂರಿನಂತಹ ನಗರದಲ್ಲೂ ರಾತ್ರಿ ಹೊತ್ತು ಅಡ್ಡಾಡಿದರೆ ಮೂರು ರಸ್ತೆ ಕೂಡುವಲ್ಲಿ ಮೊಟ್ಟೆ, ಕುಂಕುಮ, ಮಡಿಕೆ, ಬಟ್ಟೆಗಳನ್ನು ವಾಮಾಚಾರಕ್ಕೆ ಬಳಸಿ ಎಸೆದಿರುವುದು ಕಾಣಿಸುತ್ತದೆ. ತಮ್ಮ ಗಂಡ, ಮಕ್ಕಳು, ಸಂಬಂಧಿಕರ ಮೇಲೂ ಕೆಲವರು ಈ ವಿದ್ಯೆಯನ್ನು ಪ್ರಯೋಗಿಸುತ್ತಾರೆ. ಗಂಡಸರು ಮಾತ್ರ ಇದೆಲ್ಲ ಮಾಡಿಸುತ್ತಾರೆ ಎಂದುಕೊಳ್ಳಬೇಡಿ. ತುಂಬಾ ಜನ ಹೆಂಗಸರು ಮಾಡಲು ಏನೂ ಕೆಲಸವಿಲ್ಲದೆ ದೇವರ ಪೂಜೆ ಮಾಡುವ ಯೋಗ್ಯತೆಯೂ ಇಲ್ಲದೆ, ಅವರಿವರ ಮೇಲೆ ಹೊಟ್ಟೆಕಿಚ್ಚು ದ್ವೇಷ ಬೆಳೆಸಿಕೊಂಡು ಬೇರೆಯವರು ಹಾಳಾಗಲಿ ಎಂದು ಈ ರೀತಿಯ ಕೀಳು ಸಂಚುಗಳನ್ನು ಹೂಡುವುದುಂಟು.

ಕೆಡುಕು ಮಾಡಲು ಅಪಾರ ಖರ್ಚು!
ಪಾಸಿಟಿವ್‌ ಶಕ್ತಿಯ ಅಸ್ತಿತ್ವ ಇರುವಂತೆ ನೆಗೆಟಿವ್‌ ಶಕ್ತಿಯ ಅಸ್ತಿತ್ವ ಕೂಡ ಎಲ್ಲೆಲ್ಲಿಯೂ ಇರುತ್ತದೆ. ಕೆಲವರಿಗೆ ಮೈ ಮೇಲೆ ದೆವ್ವ ಬರುತ್ತದೆ. ಕೆಲವರಿಗೆ ಮೆಡಿಕಲಿ ಏನೂ ತೊಂದರೆ ಇಲ್ಲದಿದ್ದರೂ ಸದಾ ಮೈಕೈ ನೋವು, ತಲೆ ನೋವು, ವಾಂತಿ, ಜ್ವರದಿಂದ ನರಳಾಡುತ್ತಿರುತ್ತಾರೆ. ಇವಕ್ಕೆಲ್ಲ ನೆಗೆಟಿವ್‌ ಎನರ್ಜಿ ಕಾರಣವಾದರೂ, ಎಲ್ಲವನ್ನೂ ಹೋಗಲಾಡಿಸಲು ಪಾಸಿಟಿವ್‌ ಶಕ್ತಿಯನ್ನು ನಮ್ಮ ಸುತ್ತ ಹರಡುವಂತೆ ಮಾಡಿಕೊಳ್ಳಬೇಕೇ ಹೊರತು ವಾಮಾಚಾರದಿಂದ ಮಾಡಿಸುವ ಮಾಟಗಳಿಗೆ ಮೊರೆ ಹೋಗುವುದಲ್ಲ. ದೇವರಿರುವಲ್ಲಿ ಯಾವ ಕಾಟಕ್ಕೂ ಕಾಲೂರಿ ನಿಲ್ಲಲಾಗುವುದಿಲ್ಲ. ಈ ಸತ್ಯ ಗೊತ್ತಿದ್ದರೂ ಜನರು ಯಾಕೆ ವಾಮಾಚಾರಕ್ಕೆ ಮರುಳಾಗುತ್ತಾರೆ! ಅದನ್ನೇನೂ ಉಚಿತವಾಗಿ ಯಾರು ಮಾಡಿಕೊಡುವುದಿಲ್ಲ. ತುಂಬಾ ದುಡ್ಡು ಕೇಳುತ್ತಾರೆ. ಇತ್ತೀಚೆಗೆ ಇದು ದೊಡ್ಡ ವ್ಯಾಪಾರವಾಗಿದೆ. ನಮ್ಮ ಟಾರ್ಗೆಟ್‌ ಯಾರಾಗಿರುತ್ತಾರೋ ಅವರಿಗೆ ಅರ್ಧ ಕೆಟ್ಟದಾದ ನಂತರ, ಅವರಿಗೆ ಅಪಜಯ ಸಿಕ್ಕ ನಂತರ ನಮ್ಮ ಮಾತು ಕೇಳುವ ಹಾಗಾದ ನಂತರ ಇಷ್ಟು ದುಡ್ಡು ಪೂರ್ತಿ ಹಾಳಾದ ಮೇಲೆ ಪೂರ್ತಿ ದುಡ್ಡು ಎಂದು ನಿಗದಿ ಮಾಡಿಕೊಂಡಿರುತ್ತಾರೆ! 

ಮತ್ತೂಬ್ಬರಿಗೆ ಕೆಡುಕನ್ನು ಬಯಸಿ ಇಷ್ಟೆಲ್ಲಾ ದುಡ್ಡು ಖರ್ಚು ಮಾಡುತ್ತಾರಾ ಎಂದು ಇವರನ್ನೆಲ್ಲ ನೋಡಿದರೆ ಆಶ್ಚರ್ಯ ವಾಗುತ್ತದೆ. ಎಷ್ಟೋ ಜನರ ಮನೆಯಲ್ಲಿ ತಂದೆ-ತಾಯಿ ಮಕ್ಕಳ ಮೇಲೆ ಮಾಟ ಮಾಡಿಸಿ ಅವರ ಹಾಸಿಗೆ ಕೆಳಗೆ ಯಂತ್ರ ಮತ್ತು ನಿಂಬೆಹಣ್ಣು ಇಟ್ಟಿರುತ್ತಾರೆ. ತಮ್ಮ ಗಂಡು ಮಕ್ಕಳು ಯಾವ ಹುಡುಗಿಯರನ್ನೂ ಪ್ರೀತಿಸದೆ ತಮ್ಮ ಮಾತು ಕೇಳಬೇಕು ಎಂದು ಹೀಗೆ ಮಾಡುತ್ತಾರಂತೆ, ಇನ್ನು ಕೆಲವರು ತಮ್ಮ ಮನೆಯ ದೇವರ ಮನೆಯಲ್ಲಿ ದೇವರ ವಿಗ್ರಹ ಇಡುವ ಬದಲು ಚಿಕ್ಕ ಚಿಕ್ಕ ಕುಡಿಕೆಗಳಿಗೆ ಬಟ್ಟೆ ಕಟ್ಟಿ ಅದರ ಮೇಲೆ ಹೆಸರನ್ನು ಬರೆದು, ಅದಕ್ಕೆ ಶ್ರದ್ಧೆಯಿಂದ ಕೈಂಕರ್ಯಗಳನ್ನು ಮಾಡುತ್ತಾರೆ. ಇವು ಮಾಟ ಮಡಿಕೆಗಳು. ಇವರೆಲ್ಲ ಮನುಷ್ಯ ರೂಪದಲ್ಲಿರುವ ರಾಕ್ಷಸ ರೆಂದರೆ ತಪ್ಪೇನಿಲ್ಲ, ಅನಾಚಾರಗಳಿಂದಲೇ ಎಲ್ಲರನ್ನು ಒಲಿಸಿ ಕೊಂಡು ಎಲ್ಲವನ್ನು ಗೆಲ್ಲಬೇಕೆಂಬ ಆಸೆ ಇವರಿಗೆಲ್ಲ ಒಂದು ಚಟವಾಗಿಬಿಟ್ಟಿರುತ್ತದೆ. ಒಂದಾದ ನಂತರ ಮತ್ತೂಂದು, ಒಬ್ಬರಿಗೆ ಕೆಟ್ಟದ್ದು ಮಾಡಿದ ಮೇಲೆ ಮತ್ತೂಬ್ಬರು, ಹೀಗೆ ಲಕ್ಷಾಂತರ ರೂ. ಖರ್ಚು ಮಾಡಿ ಎಲ್ಲರನ್ನೂ ಹಾಳು ಮಾಡಿ ಎಲ್ಲರನ್ನೂ ಹಾಳುಮಾಡಿ ತಾನು ಖುಷಿಯಾಗಿರಬೇಕು ಅಂತ ಬಯಸುತ್ತಾರೆ. ಕೆಲವರು ಮನೆ ಮುಂದೆ, ಆಫೀಸ್‌ ಮುಂದೆ ಅಮಾವಾಸ್ಯೆ-ಹುಣ್ಣಿಮೆಯಂದು ನಿಂಬೆಹಣ್ಣು, ಮೆಣಸಿನಕಾಯಿ ಬಿಸಾಕಿರುತ್ತಾರೆ. ದೇವರು ನೆಲೆಸಿರುವ ದೇಹಕ್ಕಾಗಲೀ, ಮನೆಗಾಗಲೀ ಈ ವಾಮಾಚಾರ, ಮಾಯ-ಮಾಟ ಯಾವತ್ತೂ ತಟ್ಟುವುದಿಲ್ಲ. 

ಢೋಂಗಿ ಮಾಂತ್ರಿಕರ ಬಗ್ಗೆ ಎಚ್ಚರ
ನಮ್ಮಲ್ಲಿ ಮಾಟ ಮಂತ್ರ ಮಾಡುವವರಲ್ಲಿ ಅರ್ಧಕರ್ಧ ಜನ ಸರಿಯಾಗಿ ತಂತ್ರ ವಿದ್ಯೆ ಕಲಿತವರಲ್ಲ, ಆ ವಿದ್ಯೆಯನ್ನು ಸರಿಯಾಗಿ ಕಲಿಯಬೇಕು. ಅಂದರೆ ಅಪಾರ ಸಾಧನೆಯ ಅಗತ್ಯವಿದೆ. ಅದಕ್ಕೆ ಸಾಕಷ್ಟು ವರ್ಷಗಳೂ ಹಿಡಿಯುತ್ತವೆ. ಎರಡು ಮೂರು ಕ್ರಿಯೆಗಳನ್ನು ಕಲಿತು ಇದು ವರ್ಕ್‌ ಆಗುತ್ತೆ, ಇಷ್ಟು ಹಣ ಕೊಡಿ ಎಂದು ಕೇಳುವವರೆಲ್ಲ ಢೋಂಗಿ ಗುರುಗಳು, ಅವರುಗಳನ್ನು ಬೆಳೆಸುತ್ತಿರುವವರೂ ಜನರೇ, ನಂಬುತ್ತಿರುವವರೂ ಜನರೇ. ತಪ್ಪು ಅದನ್ನು ಮಾಡಿಕೊಡುವವರಿಗಿಂತ ಮಾಡಿಸಿಕೊಳ್ಳುತ್ತಿರುವ ಜನರದು. ಜಗತ್ತಿನಲ್ಲಿ ಪ್ರೀತಿಯಿಂದ ಶ್ರದ್ಧೆಯಿಂದ, ಶ್ರಮದಿಂದ, ಸತ್ಯದಿಂದ ಏನನ್ನು ಬೇಕಾದರೂ ಗೆಲ್ಲಬಹುದು. ಮೋಸದಿಂದ ವಾಮಾಚಾರ, ಮಾಯ, ಮಾಟ ಮಾಡಿಸಿ ಗೆಲ್ಲುತ್ತೇನೆ ಅಂದುಕೊಂಡರೆ ಅದು ಒಂದಲ್ಲಾ ಒಂದು ದಿನ ನಮಗೆ ವಾಪಸ್ಸು ತಟ್ಟುತ್ತದೆ.

ರೂಪಾ ಅಯ್ಯರ್‌


Trending videos

Back to Top