CONNECT WITH US  

ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತೆ ಅಂತ ದಾನ ಮಾಡಬೇಡಿ 

ಮಾನವೀಯತೆ ನಮ್ಮಲ್ಲಿ ಇದ್ದರಷ್ಟೇ ಸಾಲದು. ಅದರಿಂದ ನಾಲ್ಕು ಜನರಿಗೆ ಪ್ರಯೋಜನವೂ ಆಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು, ನಮ್ಮೊಳಗಿರುವ ಮಾನವೀಯತೆಯನ್ನು ವ್ಯಕ್ತಪಡಿಸಲು ಇರುವ ಸುಲಭ ಮಾರ್ಗ. ಸಮಾಜಕ್ಕೆ ಇಂದು ಅಗತ್ಯವಿರುವ ಮಾನವೀಯ ಗುಣಗಳಲ್ಲಿ ಇದು ಮೊದಲನೆಯದು. ಆದರೆ ಬಹಳ ಜನರು ದಾನ ಮಾಡುವಾಗ ಯಾರಿಗೆ ಮಾಡಬೇಕು ಅಂತ ಯೋಚಿಸುವುದಿಲ್ಲ. 

ನಮ್ಮಲ್ಲಿ ಬಹಳಷ್ಟು ಜನ ಜೀವನಕ್ಕೆ ಬೇಕಾದಷ್ಟು ದುಡಿದುಕೊಂಡ ಮೇಲೆ ಇನ್ನೂ ನನಗೆ ಬೇಕು ಎನ್ನತೊಡಗುತ್ತಾರೆ. ಜಗತ್ತಿನ ಅನೇಕ ಶ್ರೀಮಂತರು ಕೇವಲ ಒಂದು ಚಿಟಿಕೆಯಲ್ಲಿ ತಮಗೆ ಬೇಕಾದ್ದನ್ನೆಲ್ಲ ತರಿಸಿಕೊಳ್ಳುವ ತಾಕತ್ತು ಹೊಂದಿದ್ದಾರೆ. ಆದರೆ ಆಪ್ತವಾಗಿ ಕೂರಿಸಿಕೊಂಡು ಕೇಳಿದರೆ ಜೀವನದಲ್ಲಿ ನೆಮ್ಮದಿಯಿಲ್ಲ ಅನ್ನುತ್ತಾರೆ. ಎಲ್ಲಾ ಇದೆ, ನೆಮ್ಮದಿಯಿಲ್ಲ ಅಂದರೆ ಆ ಬದುಕು ಬದುಕಲು ಯೋಗ್ಯವೇ? ಎಷ್ಟೋ ಜನ ನನಗೆ ಹಣ ಬೇಕಿಲ್ಲ, ಬದುಕಿನಲ್ಲಿ ನೆಮ್ಮದಿ ಸಿಕ್ಕರೆ ಸಾಕು ಎನ್ನುತ್ತಾರೆ. 

ಹಣ ಗಳಿಸುವುದು ಕಷ್ಟ, ಆದರೆ ಉಳಿಸುವುದು ಅದಕ್ಕಿಂತ ಕಷ್ಟ. ಆದ್ದರಿಂದಲೇ ಹಣವಂತರೆಲ್ಲ ಸುಖೀಗಳಲ್ಲ. ಸುಖೀಗಳೆಲ್ಲ ಶ್ರೀಮಂತರೂ ಅಲ್ಲ. ಅಂದರೆ ಹಣಕ್ಕೂ ನೆಮ್ಮದಿಗೂ ನೇರವಾದ ಸಂಬಂಧವಿಲ್ಲ. ಒಂದನ್ನೊಂದಕ್ಕೆ ಪೂರಕವಾಗಿ ಬಳಸಿಕೊಳ್ಳುವುದು ನಮಗೆ ಬಿಟ್ಟಿದ್ದು.

ಹಾಗಾದರೆ ನೆಮ್ಮದಿ ಗಳಿಸುವುದು ಹೇಗೆ? 
ಅದಕ್ಕೆ ಇಡಬೇಕಾದ ಮೊದಲ ಹೆಜ್ಜೆಯೆಂದರೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದು. ಮನುಷ್ಯ ಎಷ್ಟೇ ಮುಂದುವರಿದರೂ ಮಾನವೀಯತೆ ಎಂಬ ಮೌಲ್ಯವೇ ಜಗತ್ತನ್ನು ಕೊನೆಯವರೆಗೂ ಆಳುತ್ತದೆ. ಮಾನವೀಯತೆ ಇಲ್ಲದಿದ್ದರೆ ಮನುಷ್ಯನ ಬದುಕಿಗೆ ಅರ್ಥವಿಲ್ಲ. ಮತ್ತೂಬ್ಬ ಮನುಷ್ಯನನ್ನು ಮನುಷ್ಯನಂತೆ ನೋಡುವುದೇ ಮಾನವೀಯತೆ. ಭಿಕ್ಷುಕನನ್ನೂ ನಾವು ಮನುಷ್ಯ ಎಂದೇ ಪರಿಗಣಿಸುತ್ತೇವೆ. ಆದರೆ ಅವನಿಗೆ ಒಂದು ಹೊತ್ತಿನ ಊಟಕ್ಕೆ ಎಷ್ಟು ಜನ ನೆರವು ನೀಡುತ್ತೇವೆ? ಅವನು ಊಟಕ್ಕಿಲ್ಲದೆ ಮಲಗುತ್ತಾನೆ, ನಾವು ಊಟ ಮಾಡಿ ಮಲಗುತ್ತೇವೆ ಮತ್ತು ಇದರಿಂದ ನಮಗೇನೂ ಅನ್ನಿಸುವುದಿಲ್ಲ ಎಂದಾದರೆ ನಾವು ಅವನನ್ನು ಮನುಷ್ಯನಂತೆ ನೋಡಿಲ್ಲ ಎಂದೇ ಅರ್ಥ.

ನಿಜವಾದ ಮಾನವೀಯತೆ ಮೈಗೂಡಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಬಹಳ ಜನ ತಮ್ಮೊಳಗೆ ಮಾನವೀಯ ಗುಣವಿದೆ ಅಂದುಕೊಂಡಿರುತ್ತಾರೆ. ಆದರೆ ಮತ್ತೂಬ್ಬ ಮನುಷ್ಯನಿಗೆ ಸಹಾಯ ಮಾಡುವ ಸಮಯ ಬಂದಾಗ ಬೇರೆ ರೀತಿ ವರ್ತಿಸುತ್ತಾರೆ. ಈ ಭೂಮಿಯಲ್ಲಿ ಯಾರೂ ಸರ್ವತಂತ್ರ ಸ್ವತಂತ್ರರಲ್ಲ. ಪ್ರತಿಯೊಬ್ಬರಿಗೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇನ್ನೊಬ್ಬರ ಸಹಾಯ ಬೇಕೇ ಬೇಕು. ಕೊಡುಕೊಳ್ಳುವ ನೀತಿಯ ಮೇಲೆ ಜಗತ್ತು ನಿಂತಿದೆ. ಇಲ್ಲಿ ಎಲ್ಲವನ್ನೂ ಹಣದಲ್ಲೇ ಅಳೆಯಬೇಕಿಲ್ಲ. ಊರಿನ ಜಾತ್ರೆಯಲ್ಲಿ ನಾಟಕ ಏರ್ಪಾಟಾಗಿರುತ್ತದೆ. ಅದನ್ನು ನೋಡಲು ಟಿಕೆಟ್‌ ಖರೀದಿಸಬೇಕಿಲ್ಲ, ಪುಕ್ಕಟೆ ಹೋಗಿ ಕುಳಿತು ನೊಡುತ್ತೀರಿ. ಅದನ್ನು ಅನುಭವಿಸಿ ಖುಷಿಪಡುತ್ತೀರಿ, ಆ ಖುಷಿಗೆ ನೀವು ಏನನ್ನೂ ಕೊಟ್ಟಿಲ್ಲ. ಆದರೆ ನೀವು ಹೊಡೆದ ಚಪ್ಪಾಳೆಯಲ್ಲಿ ಕಲಾವಿದ ಸಾರ್ಥಕ್ಯ ಕಂಡಿರುತ್ತಾನೆ. ನೀವು ಏನನ್ನೂ ನೀಡದೆಯೂ ಅವನಿಗೆ ಸಿಗಬೇಕಾದ್ದು ಸಿಕ್ಕಿದೆ. ಕೊಡುಕೊಳ್ಳುವುದು ಅಂದರೆ ಇದೂ ಆಗಬಹುದು.

ಯಾರಿಗೆ ಹೇಗೆ ದಾನ ಮಾಡಬೇಕು?
ಮಾನವೀಯತೆ ನಮ್ಮಲ್ಲಿ ಇದ್ದರಷ್ಟೇ ಸಾಲದು. ಅದರಿಂದ ನಾಲ್ಕು ಜನರಿಗೆ ಪ್ರಯೋಜನವೂ ಆಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಯಾವುದೇ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು, ನಮ್ಮೊಳಗಿರುವ ಮಾನವೀಯತೆಯನ್ನು ವ್ಯಕ್ತಪಡಿಸಲು ಇರುವ ಸುಲಭ ಮಾರ್ಗ. ಸಮಾಜಕ್ಕೆ ಇಂದು ಅಗತ್ಯವಿರುವ ಮಾನವೀಯ ಗುಣಗಳಲ್ಲಿ ಇದು ಮೊದಲನೆಯದು. ಆದರೆ ಬಹಳ ಜನರು ದಾನ ಮಾಡುವಾಗ ಯಾರಿಗೆ ಮಾಡಬೇಕು ಅಂತ ಯೋಚಿಸುವುದಿಲ್ಲ. ಯಾರಿಗೆ, ಏನನ್ನು, ಎಷ್ಟು ಕೊಡುತ್ತಿದ್ದೇವೆ ಎಂಬುದನ್ನೂ ಗಮನಿಸುವುದಿಲ್ಲ. ದಾನ ಮಾಡಬೇಕು, ಮಾಡಿದೆ ಅಷ್ಟೆ ಎಂಬುದು ಅವರ ಮನೋಭಾವ. ಕೆಲವು ಸಲ ಕಂಡಕಂಡವರಿಗೆಲ್ಲಾ ದಾನ 

ಮಾಡಿ, ನಿಜವಾಗಲೂ ಯೋಗ್ಯ ವ್ಯಕ್ತಿ ಸಹಾಯ ಕೇಳಿಕೊಂಡು ಬಂದಾಗ ಇವರಲ್ಲಿ ಕೊಡುವುದಕ್ಕೆ ಏನೂ ಉಳಿದಿರುವುದಿಲ್ಲ. 
ಈ ಜನ್ಮದಲ್ಲಿ ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಎಂಬ ಮುಗ್ಧ ನಂಬಿಕೆಯನ್ನೆಲ್ಲ ಬಿಟ್ಟುಬಿಡಿ. ಈಗ ಮಾಡಿದ ದಾನದಿಂದ ಅದನ್ನು ಪಡೆದವರಿಗೆ ಈಗಲೇ ಒಳ್ಳೆಯದಾಗಬೇಕು. ಅದೇ ನಿಜವಾದ ದಾನ. ಭಗವದ್ಗೀತೆ ಇದನ್ನು ಚೆನ್ನಾಗಿ ಹೇಳುತ್ತದೆ: ದಾನಗಳಲ್ಲಿ ಮೂರು ರೀತಿಯಿದೆ. ಸಾತ್ವಿಕ, ರಾಜಸಿಕ, ತಾಮಸಿಕ.

ದಾತವ್ಯಮತಿ ಯದ್ದಾನಂ ದೀಯತೇ ಅನುಪಕಾರಿಣೇ|
ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮತಮ್‌||

ದಾನ ಮಾಡುವುದು ಕರ್ತವ್ಯವೆಂದಷ್ಟೇ ತಿಳಿದು, ಯೋಗ್ಯವಾದ ಸ್ಥಳದಲ್ಲಿ, ಸರಿಯಾದ ಕಾಲದಲ್ಲಿ, ಅದರ ಅಗತ್ಯ ಇರುವವರಿಗೆ, ಅವರಿಂದ ಪ್ರತ್ಯುಪಕಾರ ನಿರೀಕ್ಷಿಸದೆ ಮಾಡುವ ದಾನ ಸಾತ್ವಿಕ ದಾನ. ಇದು ಪರುಮಶ್ರೇಷ್ಠ.

ಯತ್ತು ಪ್ರತ್ಯುಪಕಾರಾರ್ಥಂ ಫ‌ಲಮುದ್ದಿಶ್ಯ ವಾ ಪುನಃ|
ದೀಯತೇ ಚ ಪರಿಕ್ಷಿಷ್ಟಂ ತದ್ದಾನಂ ರಾಜಸಂ ಸ್ಮತಮ್‌||

ಪ್ರತ್ಯುಪಕಾರವನ್ನು ಬಯಸಿ ಅಥವ ದಾನ ಕೊಟ್ಟರೆ ನನಗೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯಿಂದ, ಅರೆ ಮನಸ್ಸಿನಿಂದ ಕೊಡುವ ದಾನ ರಾಜಸ ದಾನ. ಇದು ಮಧ್ಯಮ.

ಅದೇಶಕಾಲೇ ಯದ್ದಾನಂ ಅಪಾತ್ರೇಭ್ಯಶ್ಚದೀಯತೇ|
ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಂ||

ಎಲ್ಲಿ ದಾನ ಮಾಡುವ ಅಗತ್ಯವಿಲ್ಲವೋ ಅಲ್ಲಿ, ಯಾರಿಗೆ ದಾನ ಪಡೆಯುವ ಅರ್ಹತೆಯಿಲ್ಲವೋ ಅವರಿಗೆ, ಕೆಟ್ಟ ಮನಸ್ಸಿನಿಂದ ಅಥವಾ ಹೀಯಾಳಿಸಿ ಕೊಡುವ ದಾನ ತಾಮಸ ದಾನ. ಇದು ಅತ್ಯಂತ ಕೆಟ್ಟದು. ಭಗವದ್ಗೀತೆಯನ್ನು ಹಳಿಯುವವರೂ ಈ ವ್ಯಾಖ್ಯಾನವನ್ನು ಒಪ್ಪುತ್ತಾರೆ! ಈ ಮೂರು ಶ್ಲೋಕಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಬದುಕಿಗೆ ಅನ್ವಯಿಸಿಕೊಂಡರೆ ಯಾರಿಗೆ ಸಹಾಯ ಮಾಡಬೇಕು, ಹೇಗೆ ಮಾಡಬೇಕು ಎಂಬುದು ತಿಳಿಯುತ್ತದೆ. ಹೀಗೆ ಮಾಡುವ ದಾನದಿಂದ ನಮಗೆ ನೆಮ್ಮದಿ ಕೂಡ ಸಿಗುತ್ತದೆ.

ಮಕ್ಕಳಲ್ಲಿ ಈ ಗುಣ ಬೆಳೆಸಿ
ಕೆಲ ಕುಟುಂಬಗಳಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ದಾನ ಮಾಡುವ ಒಳ್ಳೆಯ ಅಭ್ಯಾಸ ಮಾಡಿಸಿರುತ್ತಾರೆ. ಕೆಲವರಂತೂ ತಾವು ಮಕ್ಕಳಿಗೆ ನೀಡುವ ಪಾಕೆಟ್‌ ಮನಿಯಲ್ಲಿ ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸುವಂತೆ ತಾಕೀತು ಮಾಡಿರುತ್ತಾರೆ ಅಥವಾ ಮನೆಯಲ್ಲೇ ಒಂದು ಗೋಲಕ ಇರಿಸಿ ಪ್ರತಿದಿನ ಪಾಕೆಟ್‌ ಮನಿಯಲ್ಲಿ ಇಂತಿಷ್ಟು ಹಣವನ್ನು ಅದಕ್ಕೆ ಹಾಕಬೇಕೆಂದು ಹೇಳಿ, ಕೊನೆಗೆ ಅದನ್ನು ಅವರ ಕೈಯಿಂದಲೇ ಕಷ್ಟದಲ್ಲಿರುವವರಿಗೆ ಕೊಡಿಸುತ್ತಾರೆ. 

ನಮಗೆ ಯಾವ ವಯಸ್ಸಿನಲ್ಲಿ ಏನು ಸಿಗುತ್ತದೆಯೋ ಅದನ್ನು ಹಂಚಿ ತಿನ್ನುವ ಅಭ್ಯಾಸ ಚಿಕ್ಕವರಿದ್ದಾಗಿನಿಂದಲೇ ಬಂದರೆ ನಮ್ಮೊಳಗೆ ಮಾನವೀಯ ಗುಣ ನೆಲೆಸುತ್ತದೆ. ನಮ್ಮ ವ್ಯಕ್ತಿತ್ವದಲ್ಲೇ ಒಂದು ಭಾಗವಾಗಿ ಬೇರೆಯವರಿಗೆ ಸಹಾಯ ಮಾಡುವ ಗುಣ ಮೈಗೂಡಿರುತ್ತದೆ. ಹೀಗೆ ಬೆಳೆದವರಿಗೆ ಯಾವತ್ತೂ ತಮ್ಮೊಳಗಿನ ಮಾನವೀಯತೆಯನ್ನು ಪ್ರಶ್ನಿಸಿಕೊಳ್ಳುವ ಸಂದರ್ಭ ಬರುವುದಿಲ್ಲ. ಎಲ್ಲರ ಸಂತೋಷದಲ್ಲೇ ನಮ್ಮ ಸಂತೋಷ ಕಾಣುವ ದೊಡ್ಡ ಗುಣ ಪ್ರಾಪ್ತವಾಗುತ್ತದೆ. ಮನುಷ್ಯನಿಗೆ ಇದಕ್ಕಿಂತ ಇನ್ನೇನು ಬೇಕು?
ವಯಸ್ಸಿದ್ದಾಗ ಚೆನ್ನಾಗಿ ದುಡಿದು ಕೂಡಿಡೋಣ ವಯಸ್ಸಾದ ಮೇಲೆ ದಾನ ಧರ್ಮ ನೋಡಿಕೊಂಡರಾಯಿತು ಅಂದು ಕೊಳ್ಳುವುದು ತಪ್ಪು. ದುಡಿಯುವಾಗ ಯಾರಿಗೂ ಸಹಾಯ ಮಾಡದವರು ನಿವೃತ್ತರಾದ ಮೇಲೆ ಮಾಡುತ್ತಾರೆಯೇ? ಇಷ್ಟಕ್ಕೂ ನಾವು ವಯಸ್ಸಾಗುವವರೆಗೂ ಬದುಕಿರುತ್ತೇವೆ ಎಂಬ ಗ್ಯಾರಂಟಿ ಯಾದರೂ ಎಲ್ಲಿದೆ? ಯಾವುದೇ ಒಳ್ಳೆಯ ಕೆಲಸ ಮಾಡುವು ದಿದ್ದರೂ ಅದನ್ನು ಇಂದಿನಿಂದಲೇ ಆರಂಭಿಸಬೇಕು. 

100ರೂ. ದುಡಿಯುವ ವ್ಯಕ್ತಿ 10 ರೂ. ದಾನ ಮಾಡುವುದು 1 ಕೋಟಿ ರೂ. ದುಡಿಯುವ ವ್ಯಕ್ತಿ 1 ಲಕ್ಷ ರೂ. ದಾನ ಮಾಡುವುದಕ್ಕೆ ಸಮ. ಆದರೆ ನೆನಪಿರಲಿ, 1 ರೂ. ಕೊಟ್ಟು 100 ರೂ.ನಷ್ಟು ಪ್ರಚಾರ ಪಡೆಯುವುದಿದೆಯಲ್ಲ ಅದರಷ್ಟು ಹೇಯ ಕೆಲಸ 
ಇನ್ನೊಂದಿಲ್ಲ.

ರೂಪಾ ಅಯ್ಯರ್‌

Trending videos

Back to Top