CONNECT WITH US  

ನಿತ್ಯ ಬದುಕಿನಲ್ಲಿ ದೇವರು ,ಧರ್ಮಗುರುಗಳ ಅಗತ್ಯ ಎಷ್ಟು?

ದೇವರ ಪೂಜೆ ಮಾಡುವುದರಿಂದ, ಸತ್ಸಂಗಕ್ಕೆ ಹೋಗುವುದರಿಂದ ನನಗೆ ಏನೂ ಬದಲಾವಣೆ ಕಾಣಿಸುವುದಿಲ್ಲ ಎಂದಾದರೆ ನಮಗೆ ಇವರ್ಯಾರ ಅಗತ್ಯವೂ ಇಲ್ಲ. ಅಗತ್ಯವಿರುವುದು ನಮ್ಮ ಅಂತಃಶಕ್ತಿಯನ್ನು ಹೆಚ್ಚಿಸುವ ಇನ್ನಾವುದೋ ಒಂದು ಅದೃಶ್ಯ ಶಕ್ತಿಯದು.

"ಊರಿನಲ್ಲಿದ್ದಾಗ ದಿನಕ್ಕೆ ಎರಡು ಹೊತ್ತು ಸಂಧ್ಯಾವಂದನೆ ಮಾಡುತ್ತಿದ್ದೆ. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ ಮೇಲೆ ದಿನಕ್ಕೆ ಒಮ್ಮೆ ಮಾತ್ರ ಮಾಡುತ್ತಿದ್ದೇನೆ. ಒಂದೊಂದು ದಿನ ಅದೂ ತಪ್ಪಿಹೋಗುತ್ತಿದೆ. ಏನು ಮಾಡಲಿ?'

"ದೇವರ ಪೂಜೆಯನ್ನು ಎಷ್ಟು ಹೊತ್ತು ಮಾಡಬೇಕು? ಕಣ್ಮುಚ್ಚಿ ಜಪ ಅಥವಾ ಧ್ಯಾನ ಮಾಡುವ ಮೂಲಕ ದೇವರನ್ನು ಪೂಜಿಸಿದರೆ ಸಾಕೋ ಅಥವಾ ಮಡಿಯುಟ್ಟು ಶಾಸ್ತ್ರೋಕ್ತವಾಗಿಯೇ ಮಾಡಬೇಕೋ?'

"ನನಗೆ ಯಾವ ಮಂತ್ರವೂ ಗೊತ್ತಿಲ್ಲ, ಒಂದಷ್ಟು ಶ್ಲೋಕಗಳು ಮಾತ್ರ ಗೊತ್ತು. ಅವುಗಳನ್ನೇ ಹೇಳುತ್ತ ದೇವರ ಪೂಜೆ ಮಾಡಿದರೆ ತಪ್ಪಾಗುತ್ತದೆಯೇ?'

"ನನಗೆ ಅಧ್ಯಾತ್ಮ ಮಾರ್ಗದಲ್ಲಿ ಬಹಳ ಆಸಕ್ತಿಯಿದೆ. ಆದರೆ, ಸತ್ಸಂಗ ಅಥವಾ ಸ್ವಾಮೀಜಿಗಳ ಪ್ರವಚನ ಕೇಳಲು ಹೋಗುವುದಕ್ಕೆ ಟೈಮಿಲ್ಲ. ನಾನೇನು ಮಾಡಬಹುದು?'

"ದಿನನಿತ್ಯದ ಬದುಕಿನಲ್ಲಿ ನಮಗೆ ದೇವರು, ಧರ್ಮ ಗುರುಗಳು, ಧಾರ್ಮಿಕ ಆಚರಣೆಗಳು, ಜಪ-ತಪ, ಅನುಷ್ಠಾನ ಇತ್ಯಾದಿಗಳ ಅಗತ್ಯ ಎಷ್ಟಿದೆ? ಮಾನಸಿಕವಾಗಿ ಶುದ್ಧನಾಗಿದ್ದರೆ ಇವೆಲ್ಲ ಬೇಕೆ?'

ಇವು ಈ ಅಂಕಣದ ಓದುಗರು ಕೇಳಿದ ಪ್ರಶ್ನೆಗಳು. ನಿಮ್ಮಲ್ಲೂ ಇಂತಹ ಪ್ರಶ್ನೆಗಳಿರಬಹುದು. ಮೊದಲನೆಯದಾಗಿ, ಇವೆಲ್ಲವೂ ವೈಯಕ್ತಿಕ ನಂಬಿಕೆಗೆ ಸಂಬಂಧಪಟ್ಟ ವಿಚಾರಗಳು. ಅಧ್ಯಾತ್ಮವೆಂಬುದು ವಿಶಾಲಾರ್ಥದಲ್ಲಿ ಸಾರ್ವತ್ರಿಕ ಬದುಕಿನ ಪದ್ಧತಿಯೇ ಆಗಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಅದರ ವ್ಯಾಖ್ಯಾನವೂ ಬದಲಾಗುತ್ತದೆ. ನಮ್ಮ ಉನ್ನತಿಗೆ ನಾವೇನು ಮಾಡಿಕೊಳ್ಳಬೇಕೆಂಬುದು ನಮಗೇ ತಿಳಿಯಬೇಕು. ಅಧ್ಯಾತ್ಮ ಮಾರ್ಗದಲ್ಲಿ ಹೋಗುವವರಿಗೆ ಇರಬೇಕಾದ ಮೊದಲ ಅರ್ಹತೆಯದು. ಇದು ತಿಳಿದರೆ ನಮ್ಮಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರಗಳೂ ನಮ್ಮಲ್ಲೇ ಸಿಗಬಹುದು.

ಆತೊದ್ಧಾರಕ್ಕೆ ನಾವೇನು ಮಾಡುತ್ತೇವೋ ಅಥವಾ ಮಾಡ ಬೇಕೋ ಅದೇ ಅಧ್ಯಾತ್ಮ. ಸಂಧ್ಯಾವಂದನೆ ಮಾಡುವುದು, ದೇವರ ಪೂಜೆ ಮಾಡುವುದು, ಶ್ಲೋಕ ಪಠಿಸುವುದು, ಜಪ ಮಾಡುವುದು, ಸ್ವಾಮೀಜಿಗಳ ಪ್ರವಚನ ಕೇಳುವುದು ಇತ್ಯಾದಿಗಳೆಲ್ಲ ನಮ್ಮ ಆಸ್ತಿಕ ನಂಬಿಕೆಯನ್ನು ಪೋಷಿಸುವ ಮಾರ್ಗಗಳಷ್ಟೆ, ಆಸ್ತಿಕತೆಗೂ ಅಧ್ಯಾ ತ್ಮಕ್ಕೂ ವ್ಯತ್ಯಾಸವಿದೆ. ನಾಸ್ತಿಕ ವ್ಯಕ್ತಿಯೊಬ್ಬ ಅಧ್ಯಾತ್ಮಿಯಾಗಿರಬಹುದು. ದೇವರನ್ನು ನಂಬದ ವ್ಯಕ್ತಿ ಆಧ್ಯಾತ್ಮಿಕ ಸಾಧನೆ ಮಾಡಲು ಸಾಧ್ಯವಿದೆ. ನಾವು ಯಾವ ಶಕ್ತಿಯನ್ನು ನಂಬುತ್ತೇವೋ, ಅದು ದೇವರೇ ಆಗಿರಬೇಕಿಲ್ಲ. ಆ ಶಕ್ತಿಗೆ ಸಂಪೂರ್ಣ ಶರಣಾಗುವ ಮೂಲಕ ನಮ್ಮ ದಾರಿ ಕಂಡುಕೊಳ್ಳಬಹುದು.

ಹೀಗೆ ಹೇಳಿದರೆ ಒಗಟಿನಂತೆ ಕೇಳಿಸಬಹುದು. ಆದರೆ, ಅಧ್ಯಾತ್ಮವೂ ಒಂದು ಒಗಟೇ. ಪ್ರತಿಯೊಬ್ಬರೂ ಅದನ್ನು ಬೇರೆ ಬೇರೆ ರೀತಿಯಲ್ಲಿ ಬಿಡಿಸಬಹುದು. 

ದೇವರಿದ್ದಾನೆ ಎಂಬ ಧೈರ್ಯ
ದಿನನಿತ್ಯದ ಬದುಕಿನಲ್ಲಿ ನಮಗೆ ದೇವರು ಹಾಗೂ ಧರ್ಮಗುರುಗಳ ಅಗತ್ಯ ಇದೆಯೇ ಎಂಬುದು ಗಂಭೀರ ಪ್ರಶ್ನೆ. ನಿಮ್ಮನ್ನು ನೀವು ಕಂಡುಕೊಳ್ಳಲು ಹಾಗೂ ಒಳ್ಳೆಯ ಹಾದಿಯಲ್ಲಿ ಮುನ್ನಡೆ ಯಲು ದೇವರು ಹಾಗೂ ಧರ್ಮಗುರುಗಳಲ್ಲಿ ಇರಿಸಿರುವ ಭಕ್ತಿಯನ್ನೇ ಸಾಧನ ಮಾಡಿಕೊಂಡಿದ್ದರೆ ಖಂಡಿತ ಇವರಿಬ್ಬರ ಅಗತ್ಯವೂ ಇದೆ. ದೇವರಿದ್ದಾನೋ ಇಲ್ಲವೋ ಎಂಬುದು ಬೇರೆ ಪ್ರಶ್ನೆ. ಆದರೆ, ದೇವರಿಗಿಂತ ಹೆಚ್ಚು ಶಕ್ತಿಯಿರುವುದು ನಾವು ದೇವರಲ್ಲಿ ಇರಿಸಿರುವ ನಂಬಿಕೆಗೆ. ಆ ನಂಬಿಕೆಯೇ ಎಷ್ಟೋ ಸಲ ನಮಗೆ ಬೇಕಾದ ಚೈತನ್ಯ ನೀಡುತ್ತದೆ. ಉದಾಹರಣೆಗೆ, ಒಬ್ಬ ಬ್ಯುಸ್‌ನಸ್‌ಮನ್‌ ತಿರುಪತಿ ತಿಮ್ಮಪ್ಪನ ಪರಮ ಭಕ್ತ. ಅವನೊಂದು ಹೊಸ ಬ್ಯುಸ್‌ನಸ್‌ ಶುರುಮಾಡಲು ಹೊರಟಿದ್ದಾನೆ. ಅದಕ್ಕೆ 10 ಕೋಟಿ ರೂ. ಬಂಡವಾಳ ತೊಡಗಿಸಬೇಕಿದೆ. 

ಆದರೆ, ಅವನಿಗೆ ಆತಂಕ. ಹೊಸ ಬ್ಯುಸ್‌ನಸ್‌ನಲ್ಲಿ ಲಾಸ್‌ ಆದರೆ? ಇಷ್ಟು ಬಂಡವಾಳ ತೊಡಗಿಸಬೇಕೋ ಬೇಡವೋ? ಈ ಗೊಂದಲ ದಲ್ಲಿ ಅವನು ಶರಣು ಹೊಗುವುದು ತಿಮ್ಮಪ್ಪನಿಗೆ. ನನ್ನ ಮೇಲೆ ಭಾರ ಹಾಕಿ ಧೈರ್ಯವಾಗಿ ಕೆಲಸ ಶುರುಮಾಡುತ್ತೇನೆ ಎಂದು ನಿರ್ಧರಿಸುತ್ತಾನೆ. ವಾಸ್ತವವಾಗಿ ಅವನು 10 ಕೋಟಿ ರೂಪಾಯಿ ಯನ್ನು ಕೇವಲ ದೇವರ ಮೇಲೆ ಭಾರ ಹಾಕಿ ಇನ್ವೆಸ್ಟ್‌ ಮಾಡುವು ದಿಲ್ಲ. ಅದಕ್ಕೆ ಬೇಕಾದ ಪೂರ್ವತಯಾರಿ ಮಾಡಿಕೊಂಡು, ಬ್ಯುಸ್‌ನಸ್‌ ಮುನ್ನಡೆಸಲು ಹೆಣೆಯಬೇಕಾದ ಕಾರ್ಯತಂತ್ರ ಹೆಣೆದೇ ಮುಂದಡಿಯಿಡುತ್ತಾನೆ. ಆದರೆ, ಅವನಲ್ಲಿದ್ದ ಗೊಂದಲ ಬಗೆಹರಿಸಿ ಮುಂದೆ ಹೋಗುವ ಚೈತನ್ಯ ನೀಡಿದ್ದು ತಿಮ್ಮಪ್ಪ. ದೇವರು ನನ್ನ ಹಿಂದಿದ್ದಾನೆ ಎಂಬ ವಿಶ್ವಾಸದಲ್ಲಿ ಅವನು ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಅವನ ಉದ್ದಿಮೆ ಯಶಸ್ಸು ಕಾಣುತ್ತದೆ. ಅದರಲ್ಲಿ ಅವನ ಪರಿಶ್ರಮ, ಅನುಭವ, ಕಾಳಜಿ, ತಂತ್ರಗಾರಿಕೆ, ಮೇಲೆ ಬರಬೇಕೆಂಬ ತುಡಿತ ಎಲ್ಲವುಗಳಿಗೂ ಪಾಲು ಇದೆ. ಆದರೆ, ತಿಮ್ಮಪ್ಪನ ದಯೆಯಿಂದ ಎಲ್ಲವೂ ಸಾಧ್ಯವಾಯಿತು ಎಂದು ಅವನು ನಂಬುತ್ತಾನೆ.

ದೇವರನ್ನು ನಂಬುವವರಿಗೆ ದೇವರು ಏಕೆ ಬೇಕು ಎಂಬುದಕ್ಕೆ ಇದೇ ಉತ್ತರ. ಹಾಗೆಯೇ ಧರ್ಮಗುರುಗಳು ಕೂಡ, ಅವರು ನಿಜವಾಗಿಯೂ ಪ್ರಾಮಾಣಿಕ ಗುರುವಾಗಿದ್ದರೆ, ನಮ್ಮ ಶಕ್ತಿಯನ್ನು ಉದ್ದೀಪನ ಗೊಳಿಸುತ್ತಾರೆ. ಅವರ ಮಾತುಗಳು ನಮ್ಮನ್ನು ಉತ್ತೇಜಿಸುತ್ತವೆ. ನಮ್ಮಲ್ಲಿರುವ ಸಂಶಯಗಳನ್ನು ನಿವಾರಿಸುತ್ತವೆ. ಒಳ್ಳೆಯ ಮಾರ್ಗ ದಲ್ಲಿ ನಡೆಯಲು ದಾರಿದೀಪವಾಗುತ್ತವೆ. ಹಾಗಾದರೆ ಅವರು ಮಾಡುವ ಪ್ರವಚನದಲ್ಲಿರುವ ಸರಳ ಸಂಗತಿಗಳು ನಮಗೆ ಈ ಮೊದಲು ಗೊತ್ತಿರಲಿಲ್ಲವೇ? ಗೊತ್ತಿದ್ದವು. ಆದರೆ, ಅವುಗಳನ್ನು ಇನ್ನೊಬ್ಬರು ಹೇಳಿದಾಗ, ಹಾಗೆ ಹೇಳುವವರು ನಾವು ಸಂಪೂರ್ಣ ವಾಗಿ ನಂಬುವ ವ್ಯಕ್ತಿಯಾಗಿದ್ದಾಗ ಆ ತಿಳಿವಿಗೆ ಹೆಚ್ಚು ಮಹತ್ವವಿದೆ. ತಪ್ಪು ಹೆಜ್ಜೆ ಇಡಲು ಹೊರಟಾಗಲೆಲ್ಲ "ಶೃಂಗೇರಿ ಗುರುಗಳು ಹೀಗೆ ಮಾಡುವುದು ತಪ್ಪು' ಎಂದು ಹೇಳಿದ್ದಾರೆಂಬ ಮಾತು ನಮಗೆ ನೆನಪಾಗಬಹುದು. ವಾಸ್ತವವಾಗಿ ಆ ತಪ್ಪು ಹೆಜ್ಜೆಯನ್ನು ನಾವು ಇಡದೇ ಇರುವುದಕ್ಕೆ ಕಾರಣ ನಮ್ಮಲ್ಲಿರುವ ನೈತಿಕ ಬದ್ಧತೆ. ಆದರೆ, ಅದನ್ನು ಉದ್ದೀಪಿಸಿದ್ದು ಗುರುಗಳು.

ಅಧ್ಯಾತ್ಮ ಎಂಬ ಮಾರ್ಗ
ಅಧ್ಯಾತ್ಮದ ಕೆಲಸವೂ ಇದೇ ಆಗಿದೆ. ಅದು ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವ ಚೋದಕ ಶಕ್ತಿಯಷ್ಟೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ಅಂದರೆ ಮಾನವತೆಯನ್ನು ಅರ್ಥ ಮಾಡಿಕೊಳ್ಳುವುದು. ಮಾನವತೆಯನ್ನು ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಭಾರತೀಯ ಸಂಸ್ಕೃತಿಯ ಪುರಾತನ ಮೌಲ್ಯ ಗಳಲ್ಲೇ ಇದೆ. ದಯೆ, ಭಾÅತೃತ್ವ, ಅಹಿಂಸೆ, ಸರಳ ಜೀವನ, ಪ್ರಾಮಾಣಿಕತೆ, ಸತ್ಯಪಾಲನೆ ಮುಂತಾದ ಮೌಲ್ಯಗಳೇ ಆಧ್ಯಾತ್ಮಿಕ ತೆಗೂ ತಳಹದಿ. ತನ್ನನ್ನು ತಾನು ಅರ್ಥ ಮಾಡಿಕೊಳ್ಳುವ ಮಾರ್ಗ ದಲ್ಲಿರುವ ಅಧ್ಯಾತ್ಮಜೀವಿ ಈ ಎಲ್ಲ ಮೌಲ್ಯಗಳನ್ನು ತನ್ನ ಅರಿವಿಗೆ ಬಾರದಂತೆಯೇ ಅನುಸರಿಸುತ್ತಿರುತ್ತಾನೆ.

ದೇವರೇ ಬೇಕಿಲ್ಲ ಎಂಬ ಸ್ಥೈರ್ಯ
ನಮಗೆ ದೇವರು, ಸ್ವಾಮಿಗಳ ಅಗತ್ಯ ಎಷ್ಟಿದೆ ಎಂಬ ಚಿಂತನೆಗೂ ಉತ್ತರ ಇಲ್ಲೇ ಇದೆ. ನಾವು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ದೇವರು ಮಾಡುತ್ತಾನೆ ಎಂದಾದರೆ ಅವನ ಅಗತ್ಯ ನಮಗಿದೆ. ಗೊಂದಲದಲ್ಲಿದ್ದಾಗ ಸ್ವಾಮಿಗಳು ಹೇಳುವ ಮಾತೇ ನಮಗೆ ಪರಿಹಾರ ನೀಡುತ್ತದೆ ಎಂದಾದರೆ ಅವರ ಅಗತ್ಯ ನಮಗಿದೆ. ನಾನು ಸೋತು ಹೋದೆ ಎಂಬ ಅಭದ್ರ ಭಾವನೆ ಕಾಡಿದಾಗ ಒಮ್ಮೆ ದೇವರು ಹಾಗೂ ನಾವು ನಂಬಿದ ಗುರುಗಳಲ್ಲಿ ಮನಸ್ಸು ನೆಟ್ಟರೆ ಹೊಸ ಭರವಸೆ ಸಿಗುತ್ತದೆ ಎಂದಾದರೆ ಅವರಿಬ್ಬರ ಅಗತ್ಯವೂ ನಮಗಿದೆ. ಆದರೆ, ದೇವರ ಪೂಜೆ ಮಾಡು ವುದರಿಂದ, ಸತ್ಸಂಗಕ್ಕೆ ಹೋಗುವುದರಿಂದ, ದೇವಸ್ಥಾನಗಳಿಗೆ ಹೋಗುವುದರಿಂದ ನನಗೆ ಏನೂ ಬದಲಾವಣೆ ಕಾಣಿಸುವುದಿಲ್ಲ ಎಂದಾದರೆ ನಮಗೆ ಇವರ್ಯಾರ ಅಗತ್ಯವೂ ಇಲ್ಲ. ಅಗತ್ಯವಿರುವುದು ನಮ್ಮ ಅಂತಃಶಕ್ತಿಯನ್ನು ಹೆಚ್ಚಿಸುವ ಇನ್ನಾ ವುದೋ ಒಂದು ಅದೃಶ್ಯ ಶಕ್ತಿಯದು. ಅದನ್ನು ಹುಡುಕಿಕೊಳ್ಳಬೇಕು. ಅದು ಪ್ರೀತಿಯಾಗಿರಬಹುದು, ಸಾಮಾಜಿಕ ಸೇವೆ ಯಾಗಿರಬಹುದು, ಬರವಣಿಗೆಯಾಗಿರಬಹುದು, ಯಾವುದೋ ಒಂದು ನಿರ್ದಿಷ್ಟ ರೀತಿಯಲ್ಲಿ ಬದುಕುವುದಾಗಿರಬಹುದು, ಹಣವಾಗಿರಬಹುದು, ಸಂಬಂಧಗಳಾಗಿರಬಹುದು ಹೀಗೆ ಏನು ಬೇಕಾದರೂ ಆಗಿರಬಹುದು. ಯಾವ ನಿರೀಕ್ಷೆಯನ್ನೂ ಇರಿಸಿ ಕೊಳ್ಳದೆ ಪ್ರತಿದಿನ ಬೆಳಿಗ್ಗೆ ಎದ್ದು ಒಂದು ತಾಸು ಸಾರ್ವಜನಿಕ ಸ್ಥಳದಲ್ಲಿ ಕಸ ಗುಡಿಸಿದರೆ ಮನಸ್ಸಿಗೆ ಸಾರ್ಥಕತೆ ಬರುತ್ತದೆ ಎಂದಾದರೆ ದೇವರ ಜಾಗದಲ್ಲಿ ಆ ಕೆಲಸವನ್ನೇ ಇರಿಸಿಕೊಂಡು ನಂಬಿದರೆ ಸಾಕು!

ರೂಪಾ ಅಯ್ಯರ್‌

Trending videos

Back to Top