CONNECT WITH US  

ಆತುರ ಪಟ್ಟು ಪಡೆದಿದ್ದೆಲ್ಲ ಕೆಟ್ಟದ್ದನ್ನೇ ಮಾಡುತ್ತದೆ

ಬೇರೆಯವರ ಜೀವನದಂತೆ ನಿಮ್ಮ ಜೀವನ ಇರಬೇಕು ಅಂತ ಬಯಸುವುದು ತಪ್ಪಲ್ಲ. ಆದರೆ ಬೇರೆಯವರ ಜೀವನದಲ್ಲೂ ಅವರಿಗೆ ಅವರದೇ ಆದ ಕಷ್ಟಗಳು ಬೇಕಾದಷ್ಟಿರುತ್ತವೆ. ಅವು ನಿಮಗೆ ಕಾಣಿಸದೇ ಇರಬಹುದು. ಕಷ್ಟಗಳಿಲ್ಲದ ಮನುಷ್ಯನಿಲ್ಲ. ಹಾಗಿರುವಾಗ ನಿಮ್ಮ ಜೀವನವನ್ನು ನೀವೇಕೆ ಬೇರೆಯವರಿಗೆ ಹೋಲಿಸಿ ನೋಡಬೇಕು? 

ಮನೆಯಲ್ಲಿ ದೊಡ್ಡವರು ಯಾವಾಗಲೂ ಆತುರಗಾರನಿಗೆ ಬುದ್ಧಿ ಮಟ್ಟ ಕೆಳಗೆ ಅಂತ ಬೈಯುತ್ತಿರುತ್ತಾರೆ. ಯಾವಾಗಲೂ ನಮ್ಮ ಜೊತೆ ಇರುತ್ತವೆ ಎಂದುಕೊಂಡ ಸಂಗತಿಗಳೇ ಬದುಕಿನಲ್ಲಿ ಎಷ್ಟೋ ಸಲ ಕೈತಪ್ಪಿ ಹೋಗುತ್ತವೆ. ಹಾಗಿರುವಾಗ ಆತುರಾತುರದಿಂದ ನಮ್ಮದಾಗಿಸಿಕೊಂಡ ವಸ್ತುಗಳು, ವ್ಯಕ್ತಿಗಳು ಹೇಗೆ ತಾನೇ ಶಾಶ್ವತವಾಗಿರಲು ಸಾಧ್ಯ?!

ಇತ್ತೀಚೆಗಂತೂ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರಿಗಿಂತ ನಾನು ಶ್ರೀಮಂತನಾಗಬೇಕು, ಎಲ್ಲರಿಗಿಂತ ನಾನು ಉತ್ತಮ ಮಟ್ಟದಲ್ಲಿರ ಬೇಕು ಎಂದು ಯುವಕರು ತುಂಬಾ ಆತುರಪಟ್ಟು ನಂತರ ಪಶ್ಚಾತ್ತಾಪ ಪಡುತ್ತಾರೆ. ನೀವು ಯಾವುದೇ ಸಾಧಕನ ಜೀವನದ ರೇಖೆಯನ್ನು ನೋಡಿದರೆ, ಅವನು ನಿಧಾನವೇ ಪ್ರಧಾನ ಎಂದು ಮುನ್ನಡೆದು ತನ್ನ ಧ್ಯೇಯವನ್ನು ಮರೆಯದೆ ಗುರಿ ಮುಟ್ಟಿರುತ್ತಾನೆ. ಗುರಿ ಮುಟ್ಟಲು ಎಷ್ಟೇ ಸಮಯ ತೆಗೆದು ಕೊಂಡರೂ ಅದು ಶಾಶ್ವತವಾಗಿ ನೆಮ್ಮದಿ, ಹೆಮ್ಮೆ, ಸಾರ್ಥಕತೆ ಎಲ್ಲ ವನ್ನೂ ಕೊಡುತ್ತದೆ. ತಪ್ಪು ಕೆಲಸಗಳನ್ನು ಮಾಡಿ ತಕ್ಷಣ ಶ್ರೀಮಂತ ರಾಗಬೇಕೆಂದು ಆಸೆಪಟ್ಟರೆ ಒಂದಲ್ಲಾ ಒಂದು ದಿನ ನೀವು ನಿಮ್ಮ ಜೀವನವನ್ನು ಸರಿಪಡಿಸಿಕೊಳ್ಳಬೇಕೆಂದು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಕಾಲ ಮೀರಿದ ಮೇಲೆ ನೀವು ಹಿಂದೆ ಮಾಡಿದ್ದು ತಪ್ಪೆಂದು ಅರಿವಾದರೆ ಏನೂ ಪ್ರಯೋಜನವಿಲ್ಲ. 

ಇದು ಎಲ್ಲರಿಗೂ ಗೊತ್ತು-ಹಣ ಜೀವನ ನಡೆಸಲು ಅವಶ್ಯಕವೇ ಹೊರತು ಹಣವೇ ಜೀವನವಲ್ಲ. ಏನಾದರೂ ಮಾಡಿ ದುಡ್ಡು ಮಾಡಲೇಬೇಕು. ಎಲ್ಲರ ಮುಂದೆ ಮೆರೆಯಬೇಕು ಎಂದು ಆತುರ ಪಟ್ಟು ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಾಗಿಲ್ಲ. ಹಾಗೆ ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ನಮ್ಮೊಳಗೆ ನಾವೇ ಹತ್ತು ಸಲ ಪ್ರಶ್ನಿಸಿಕೊಂಡು ನಾನು ಮಾಡುತ್ತಿರುವ ಕೆಲಸ ನನಗೆ ಶ್ರೇಯ ಸ್ಸನ್ನು ತಂದುಕೊಡುತ್ತದೆಯೋ  ಅಥವಾ ಕಳಂಕವನ್ನು ತಂದುಕೊ ಡುತ್ತದೆಯೋ ಎಂಬುದನ್ನು ತುಲನೆ ಮಾಡಿ ಮುಂದುವರೆಯು ವುದು ಉತ್ತಮ. ಆತುರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಸುಲಭ, ಆದರೆ ಅದರ ಪರಿಣಾಮದಿಂದ ಜೀವನ ಪೂರ್ತಿ ಕೆಟ್ಟ ಹೆಸರು ಪಡೆದು ಎಲ್ಲರ ಮಧ್ಯೆ ಬದುಕಿರುವುದು ಕಷ್ಟ. ನಾವು ತೆಗೆದು ಕೊಳ್ಳುವ ನಿರ್ಧಾರದಿಂದ ನಮ್ಮ ಜೀವನ ಮಾತ್ರ ಅಲ್ಲ. ನಮ್ಮ ಸುತ್ತಮುತ್ತಲಿನ ನಮಗೆ ಪ್ರಿಯವಾದವರಿಗೆಲ್ಲಾ ತಲೆ ಎತ್ತಿ ನಡೆಯಲಾಗದಂತೆ ತೊಂದರೆಯಾಗಬಾರದು.

ಕೆಲವರು ಯಾವ ಬುದ್ಧಿ ಮಾತನ್ನೂ ಕೇಳುವುದಿಲ್ಲ. ಅಪ್ಪ-ಅಮ್ಮ, ಸ್ನೇಹಿತರು ಒಳ್ಳೆಯದನ್ನು ಹೇಳಿದರೆ ಅದಕ್ಕೆ ಕಿವಿಗೊಡದೆ ನನ್ನಿಷ್ಟ, ನಾನು ಏನು ಬೇಕಾದ್ರೂ ಮಾಡ್ತೀನಿ, ಇದು ನನ್ನ ಜೀವನ, ನೀವ್ಯಾರು ಕೇಳಲು? ಎಂದೆಲ್ಲಾ ಧಿಮಾಕಿನಿಂದ ಮಾತನಾಡಿ ತಮ ಗಿಷ್ಟ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕೆಲವು ವರ್ಷಗಳ ನಂತರ ತಾವು ಯಾರ ಬುದ್ಧಿವಾದವನ್ನೂ ಕೇಳದೆ ತಪ್ಪು ಮಾಡಿದೆ ವೆಂದು ಪೇಚಾಡುತ್ತಾರೆ. ಆದರೆ ಏನು ಪ್ರಯೋಜನ? ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಬೇಕೆ ಹೊರತು, ಜೀವನ ಹಾಳಾದ ಮೇಲೆ ಯೋಚಿಸಿ ಏನು ಲಾಭ!

ನನ್ನ ಕೆಲವು ಸ್ನೇಹಿತರೂ ಸಹ ಆತುರಕ್ಕೆ ಶ್ರೀಮಂತರಾಗಲು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಮನಃಸಾಕ್ಷಿಗೆ ವಿರುದ್ಧವಾಗಿ ವರ್ತಿಸಿ, ತಮ್ಮತನವನ್ನು ತಾವೇ ಕಳೆದು ಕೊಂಡು, ಎಲ್ಲರ ಕಣ್ಣಿಗೆ ತಾವು ಕೆಟ್ಟವರಾದರೂ ಪರವಾಗಿಲ್ಲ, ಹಣವನ್ನು ಸುಲಭವಾಗಿ ಸಂಪಾದಿಸಬೇಕಷ್ಟೇ ಎಂದು ಹುಂಬತ ನದಿಂದ ಮುಂದೆ ಹೋಗಿದ್ದಾರೆ. ಕೊನೆಗೆ ದುಡ್ಡೇ ಅವರ ಜೀವನದ ಪರಮ ಧ್ಯೇಯವಾಗಿ ಎಲ್ಲವನ್ನೂ ಕಳೆದುಕೊಂಡು ಜೀವನವನ್ನೇ ಬೈಯಲಾರಂಭಿಸಿದ್ದಾರೆ.

ಚಿತ್ರ ನಿರ್ದೇಶಕಿಯಾಗಿ ನಾನು ಸಿನಿಮಾ ಜಗತ್ತನ್ನು ಹತ್ತಿರದಿಂದ ಬಲ್ಲೆ. ಬಣ್ಣದ ಪ್ರಪಂಚದ ಒಳ-ಹೊರಗು ನನಗೆ ಚೆನ್ನಾಗಿ ಗೊತ್ತು. ಈ ಕ್ಷೇತ್ರದಲ್ಲಿರುವವರು ದಿಢೀರ್‌ ದುಡ್ಡು ಮಾಡಲು ಹೋಗಿ ಬದುಕನ್ನೇ ನರಕ ಮಾಡಿಕೊಂಡ ಕತೆಗಳು ನನ್ನ ಕಣ್ಣ ಮುಂದಿವೆ. ನೀವು ತೆರೆಯ ಮೇಲೆ ಆರಾಧಿಸುವ ನಟರ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿ, ಅವುಗಳಲ್ಲಿ ಬರುವುದೆಲ್ಲಾ ನಿಜವಲ್ಲ. 

ಸ್ವಲ್ಪ ಯೋಚಿಸಿದರೆ ಯಾವುದು ನಿಜವೆಂದು ನಿಮಗೇ ತಿಳಿಯುತ್ತದೆ. ಅಂತಹವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಬಹಳ ದೊಡ್ಡ ಹೆಸರು ಮಾಡಿದವರು ಕೂಡ ಹಣದಾಸೆಗೆ ಬಿದ್ದು ಸಣ್ಣವರಂತೆ ವರ್ತಿಸಿ ಬೆಲೆ ಕಳೆದುಕೊಳ್ಳುವುದಿದೆ. ಪ್ರಕೃತಿ ಎಲ್ಲಾ ಮನಷ್ಯನಿಗೂ ಒಂದೇ ರೀತಿಯ ಜೀವನವನ್ನು ಸೃಷ್ಟಿಸಿಕೊಟ್ಟಿದೆ. ಕರ್ಮಾನುಸಾರವಾಗಿ ಕೆಲವರು ಶ್ರೀಮಂತರ ಮನೆಯಲ್ಲಿ ಹುಟ್ಟಿರುತ್ತಾರೆ, ಕೆಲವರು ಬಡವರ ಮನೆಯಲ್ಲಿ ಹುಟ್ಟಿರುತ್ತಾರೆ. ಶ್ರೀಮಂತಿಕೆಯ ವ್ಯತ್ಯಾಸ ಬಿಟ್ಟರೆ ನಮ್ಮೆಲ್ಲರ ಜೀವನದಲ್ಲಿ ಬೇರಾವುದೇ ಹೆಚ್ಚಿನ ವ್ಯಾತ್ಯಾಸ ಕಂಡುಬರುವುದಿಲ್ಲ. ನಾವು ಹುಟ್ಟುವಾಗ ಬಡವರಾಗಿದ್ದರೂ ಸಾಯುವಾಗ ಶ್ರೀಮಂತ ರಾಗಿರಬೇಕು. ಶ್ರೀಮಂತಿಕೆ ಬರುವುದು ಹಣದಿಂದ ಮಾತ್ರವಲ್ಲ. ಶ್ರೀಮಂತಿಕೆಯ ಮೂಲವಿರುವುದು ಜ್ಞಾನದಲ್ಲಿ. ಹಣ ಸಂಪಾದಿಸುವುದು ಮುಖ್ಯವಲ್ಲ, ಆದರೆ ಆ ಹಣವನ್ನು 
ಹೇಗೆ ಸಂಪಾದಿಸುತ್ತೇವೆ ಎಂಬುದು ಮುಖ್ಯ. ಇದು ಗೊತ್ತಿದ್ದರೂ ಕೆಲವು ಸಲ ಹಣದ ವ್ಯಾಮೋಹದಿಂದ ದುಡುಕಿ ಆತುರಪಡುತ್ತಾರೆ. ಹಣಕ್ಕೋಸ್ಕರ ಬೇರೆಯವರಿಗೆ ನೋವಾ ಗುವಂತೆ ನಡೆದುಕೊಳ್ಳಲು ಮುಂದಾಗುತ್ತಾರೆ. ತಂದೆ- ತಾಯಿ ಯನ್ನು ಬೀದಿಗೆ ತಳ್ಳಿ ತಾವು ಮಾತ್ರ ಸಂತೋಷವಾಗಿರ ಬೇಕು ಎಂದುಕೊಳ್ಳುತ್ತಾರೆ. 

ಕೆಲವು ಹುಡುಗಿಯರು ಆತುರಪಟ್ಟು, ಹುಡುಗರ ಜೊತೆ ಓಡಾಡಿ, ಕೊನೆಗೆ ನಾನಂಥ ಕೆಲಸ ಮಾಡಬಾರದಿತ್ತು ಅಂತ ನಿದ್ರೆ ಮಾತ್ರೆ ತೆಗೆದುಕೊಂಡು ಆಸ್ಪತ್ರೆ ಸೇರುತ್ತಾರೆ. ಇನ್ನೂ ಕೆಲವರು ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪಿಗಾಗಿ ಜೀವ ತೆಗೆದುಕೊಳ್ಳುತ್ತಾರೆ. ಇದೆಲ್ಲಾ ಆಗುವುದು ನಾವು ಮನಃಸಾಕ್ಷಿಗೆ ವಿರುದ್ಧವಾಗಿ, ಆತುರಪಟ್ಟು ತೆಗೆದುಕೊಂಡ ನಿರ್ಧಾರಗಳಿಂದ. ಬೇರೆಯವರ ಜೀವನದಂತೆ ನಿಮ್ಮ ಜೀವನ ಇರಬೇಕು ಅಂತ ಬಯಸುವುದು ತಪ್ಪಲ್ಲ. ಆದರೆ ಬೇರೆಯವರ ಜೀವನದಲ್ಲೂ ಅವರಿಗೆ ಅವರದೇ ಆದ ಕಷ್ಟಗಳು ಬೇಕಾದಷ್ಟಿರುತ್ತವೆ. ಅವು ನಿಮಗೆ ಕಾಣಿಸದೇ ಇರಬಹುದು. ಕಷ್ಟಗಳಿಲ್ಲದ ಮನುಷ್ಯನಿಲ್ಲ. ಹಾಗಿರುವಾಗ ನಿಮ್ಮ ಜೀವನವನ್ನು ನೀವೇಕೆ ಬೇರೆಯವರಿಗೆ ಹೋಲಿಸಿ ನೋಡಬೇಕು? ನಿಮ್ಮ ಬಳಿ ಏನಿದೆಯೋ ಅದರಲ್ಲೇ ಸಂತೋಷ ಕಾಣಲು ಸಾಧ್ಯವಿದೆ, ಅದೊಂದು ಕಲೆ. ನಾವೆಲ್ಲರೂ ಜೀವನದಲ್ಲಿ ಒಬ್ಬ ಆದರ್ಶ ವ್ಯಕ್ತಿಯನ್ನು ನೋಡಿ, ನಾನು ಅವರಂತೆ ಆಗಬೇಕು ಅಂತ ಆಸೆ ಪಡುತ್ತೇವೆ. ಅದು ಸರಿಯೇ, ಆದರೆ ಎಲ್ಲವನ್ನೂ ಪಡೆದುಕೊಳ್ಳಬೇಕು ಅಂದರೆ ಅದಕ್ಕೆ ಅದರದೇ ಸಮಯ ಕೊಡಬೇಕು. ಏನನ್ನು ಪಡೆದುಕೊಂಡರೂ ನ್ಯಾಯವಾಗಿ ಪಡೆದುಕೊಳ್ಳಬೇಕು, ಆಗ ಮಾತ್ರ ಅದು ಜೀವನ ಪೂರ್ತಿ ನಿಮಗೆ ಸಂತೋಷ ಕೊಡಲು ಸಾಧ್ಯ.

ಎಣ್ಣೆಯಲ್ಲಿ ಬಂದಿದ್ದು ಬೆಣ್ಣೆಯಲ್ಲಿ ಹೋಯಿತು ಎಂಬ ಗಾದೆಯಿದೆ. ನ್ಯಾಯವಾಗಿ ಬಂದಿದ್ದಷ್ಟೇ ಉಳಿಯುತ್ತದೆ, ಅನ್ಯಾ ಯವಾಗಿ ಸಂಪಾದಿಸಿದ್ದು ದುಪ್ಪಟ್ಟಾಗಿ ಹೋಗುತ್ತದೆ ಎಂಬುದು ಕೇವಲ ವೇದಾಂತಕ್ಕೆ ಹೇಳುವ ಮಾತಲ್ಲ. ಅದು ನಿಮಗೂ ಅನುಭ ವಕ್ಕೆ ಬಂದಿರಬಹುದು. ಶಾರ್ಟ್‌ಕಟ್‌ನಲ್ಲಿ ಸಂಪಾದಿಸಿದ ಹಣ ಬೇಗ ಕಳೆದುಹೋಗುವುದಕ್ಕೆ ಕಾರಣವೂ ಇದೆ. ಆ ಹಣದ ಮೇಲೆ ನಮಗೆ ಪ್ರೀತಿಯಿರುವುದಿಲ್ಲ. ಮೋಹವಿರುತ್ತದೆ. ಕಷ್ಟದಿಂದ ಸಂಪಾದಿಸಿದ್ದನ್ನು ಖರ್ಚುಮಾಡುವಾಗ ಹತ್ತು ಸಲ ಯೋಚಿಸುತ್ತೇವೆ. ಸುಲಭಕ್ಕೆ ಸಿಕ್ಕಿದ್ದನ್ನು ಕಣ್ಣುಮುಚ್ಚಿ ಖರ್ಚು ಮಾಡುತ್ತೇವೆ. ಕೊನೆಗೆ ಅದೇ ಚಟವಾಗಿ ಮೊದಲಿನಿಂದ ನಮ್ಮ ಕೈಲಿದ್ದಿದ್ದನ್ನೂ ಕಿತ್ತುಕೊಂಡು ಹೋಗುತ್ತದೆ.

ಹುಡುಗಿಯಾಗಿರಬಹುದು, ಹಣ ಆಗಿರಬಹುದು, ಅಧಿಕಾರ ಆಗಿರಬಹುದು ಯಾವುದನ್ನಾದರೂ ಆತುರ ಪಟ್ಟು ಕೆಟ್ಟ ದೃಷ್ಟಿಯಿಂದ ನೀವು ಬಯಸಿದರೆ ಅದು ವಾಪಸ್ಸು ಬಂದು ನಿಮಗೆ ಕೆಟ್ಟದ್ದನ್ನೇ ಮಾಡುತ್ತದೆ. ಆದರಿಂದ ನಿಮಗೆ ನೆಮ್ಮದಿಯಂತೂ ಸಿಗುವುದಿಲ್ಲ. ತಾಳ್ಮೆಯಿಂದ, ಮನಸ್ಸಿನ ಅಂತರಾಳದಿಂದ ನೀವು ಬಯಸುವುದು ನಿಮ್ಮದಾದರೆ, ಅದಕ್ಕಿಂತ ಹೆಚ್ಚಿನ ಸುಖ ಮತ್ತೂಂದಿಲ್ಲ. 


Trending videos

Back to Top