CONNECT WITH US  

ಸ್ವಾಭಿಮಾನ ಎನ್ನುವ ಸರ್ವನಾಮ ಪದದ ಸುತ್ತ...

ಸ್ವಾಭಿಮಾನಿಯಾದವನು ಹರಿವ ತೊರೆಯ ಪಕ್ಕದ ಶಾಂತ ಕಲ್ಲಿನಂತೆ ಅಚಲವಾಗಿ ತನ್ನ ಪಾಡಿಗೆ ತಾನಿರುತ್ತಾನೆ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ಹಾಗಂತ ಅವನ ಶಾಂತತೆ, ಸೌಜನ್ಯ ದೌರ್ಬಲ್ಯವಲ್ಲ. ಬೇಕೆಂದಾಗ ದಿಟ್ಟ, ಬೇಡವನಿಸಿದಾಗ ಕಟು, ತನ್ನಾವರಣದೊಳಗೆ ಹಾಗೆಲ್ಲಾ ಯಾರಾರಿಗೋ ಜಾಗ ಕೊಡುವುದಿಲ್ಲ. 

ಸ್ವಾಭಿಮಾನ. ಇದು ಧಾರಾವಾಹಿ ಹೆಸರಲ್ಲ, ಮನಸ್ಸಿನ ಮೌಲ್ಯದ ಹೆಸರು. ಎಲ್ಲರೂ ತಾವು ಹಾಗೆಂದೂ, ತಮ್ಮನ್ನು ಜನ ಆ ಗುಣದಿಂದಲೇ ಗುರುತಿಸಬೇಕೆಂದೂ ಇಷ್ಟಪಡುವ ಮೌಲ್ಯ ಅದು. ಹಾಗಂತ ಸ್ವಾಭಿಮಾನ ತೀರ ಸ್ವಾಭಾವಿಕವಾಗಿ, ಚಿಕ್ಕ ವಯಸ್ಸಿನಿಂದ ನಮಗೇ ಗೊತ್ತಿಲ್ಲದ ಹಾಗೆ ಬಂದುಬಿಟ್ಟಿರುತ್ತದಾ? ಇಲ್ಲ. ಸಣ್ಣವರಾಗಿದ್ದಾಗ ಕೆಲವು ಗುಣಗಳು ನಮ್ಮ ಬುದ್ಧಿ ಬೆಳೆಯುತ್ತಿದ್ದಂತೆ ಇನ್ನಷ್ಟು ಪಕ್ವವಾಗಿ, ಸರಿ-ತಪ್ಪುಗಳ ತುಲನೆ ಮಾಡಿ ಪುಟವಿಟ್ಟ ಚಿನ್ನದ ರೀತಿ ಸ್ವಾಭಿಮಾನ ಎಂದು ಕರೆಸಿಕೊಳ್ಳುತ್ತದೆ. ಹಾಗಿದ್ದರೆ ಚಿಕ್ಕವರಾಗಿದ್ದಾಗ ನೀವು ಬೀಗುತ್ತಾ, ಅನುಭವಿಸುತ್ತಾ ಹೋಗಿದ್ದು ಯಾವ ಗುಣವನ್ನು?

ಅಹಂಕಾರವನ್ನು!
ಹೌದು, ಸ್ವಾಭಿಮಾನ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ನಮಗೆ ನಾವೇ ಸಂಪಾದಿಸಿಕೊಳ್ಳುವ ಅಥವಾ ದುಡಿದುಕೊಳ್ಳುವ ಮೇಲರಿಮೆ. ನಿಮ್ಮ ಒಳ್ಳೆಯ ಗುಣಗಳೆಲ್ಲಾ ಮುಪ್ಪುರಿಗೊಂಡು ಆಗಿದ್ದು. ಸ್ವಾಭಿಮಾನ ಕೆಟ್ಟತನವಲ್ಲ. ಆದರೆ ಚಿಕ್ಕಂದಿನಿಂದ ತಮ್ಮನ್ನು ತಾವು ಸ್ವಾಭಿಮಾನಿ ಎಂದು ಎದೆ ತಟ್ಟಿಕೊಂಡು ಹೇಳಿ ಕೊಳ್ಳುವುದೆಲ್ಲಾ ಸ್ವಾಭಿಮಾನವಲ್ಲ, ಅದು ಅಹಂಕಾರ.

ಈಗೊಂದು ಉದಾಹರಣೆ ತೆಗೆದುಕೊಳ್ಳೋಣ. ಕೆಲವರು ದುಡ್ಡಿನ ವಿಚಾರ ಬಂದಾಗ ಹೇಗೆ ನಡೆದುಕೊಳ್ಳುತ್ತಾರೆಂದು ನೋಡೋಣ. ತನ್ನ ಮನೆಯವರಿಗೋ ಅಥವಾ ಗೆಳೆಯರಿಗೋ ಪಾರ್ಟಿ ಕೊಡಿಸಿದ್ದಾರೆ ಎಂದುಕೊಳ್ಳಿ. ಸಣ್ಣ ಪುಟ್ಟ ವಸ್ತುಗಳನ್ನು ಖರೀದಿಸುವ ಸಂದರ್ಭ. ಆಗೆಲ್ಲಾ ಬೇರೆಯವರು ದುಡ್ಡು ಕೊಡದಂತೆ ತಡೆದು ತಾವೇ ಮುಂದಾಗಿ ದುಡ್ಡು ಕೊಡುತ್ತಾರೆ. ಮತ್ತು ನಾನು ಸ್ವಾಭಿಮಾನಿ ಅಂತ ಹೇಳುತ್ತಾರೆ. ಆದರೆ ಇದು ಸ್ವಾಭಿಮಾನದ ಲಕ್ಷಣವಾ? ಇನ್ನೊಬ್ಬರ ಎದುರು ತನ್ನ ಹಣ ಖರ್ಚು ಮಾಡುವುದು, ಇನ್ನೊಬ್ಬರ ಎದುರು ತನ್ನ ಪ್ರತಿಷ್ಠೆ ಮೆರೆಯುವುದು ಸ್ವಾಭಿಮಾನವಾ? ಸ್ವಾಭಿಮಾನಿಯಾದವನಿಗೆ ಎಲ್ಲದರಲ್ಲೂ ಸ್ವಾಭಿಮಾನ ಇರಬೇಕು. ಸಣ್ಣಪುಟ್ಟ ವಿಷಯಗಳಲ್ಲಿ ಮಾತ್ರವಲ್ಲ. ಸ್ವಾಭಿಮಾನ ನಿಮ್ಮ ಒಟ್ಟು ಮೌಲ್ಯ, ನೈತಿಕತೆಗಳೆಲ್ಲಾ ಸೇರಿ ಆಗಿರುವ ಘನತೆ, ಶ್ರೇಷ್ಠತೆ.

ಸ್ನೇಹಿತರ ಬಳಿ ಚರ್ಚೆ ಮಾಡಿದರೆ ಕೆಲವರು ಸ್ವಾಭಿಮಾನಿಗಳನ್ನು ಇಷ್ಟಪಡ್ತಾರೆ, ಕೆಲವರು ಬಾಯಿಗೆ ಬಂದಂತೆ ಬೈಯುತ್ತಾರೆ. ಯಾಕೆಂದರೆ ಎಷ್ಟೋ ಜನರನ್ನು ದಿನನಿತ್ಯ ನೀವೂ ಭೇಟಿ ಮಾಡಿರಿರಾ, ಕೆಲವರ ನಡವಳಿಕೆಯಲ್ಲಿ ಸ್ವಾಭಿಮಾನಕ್ಕಿಂತ ಹೆಚ್ಚಾಗಿ ದುರಹಂಕಾರವೇ ತುಂಬಿರುತ್ತದೆ. ಅದೊಂದು ಪ್ರತಿಷ್ಠೆಯ ತೋರಿಕೆಯಾಗಿರುತ್ತದೆ, ಯಾರೊಡನೆಯೂ ಬೆರೆಯುವುದಿಲ್ಲ, ಹೊಂದಿಕೊಳ್ಳುವುದಿಲ್ಲ, ಗೌರವಿಸುವುದಿಲ್ಲ, ಇನ್ನೊಬ್ಬರ ಅಭಿಪ್ರಾ ಯಕ್ಕೆ ಮನ್ನಣೆಯಿಲ್ಲ, ಪ್ರಾಮಾಣಿಕತೆ ಇಲ್ಲ. ತೋರಿಸಿಕೊಳ್ಳುವುದು ಮಾತ್ರ ಸ್ವಾಭಿಮಾನ ಎಂಬ ಮುಖಭಾವವನ್ನು. ಸ್ವ-ಅಭಿಮಾನಿ ಯಾದವನಿಗೆ ಸ್ವ-ಗೌರವವೂ ಇರುತ್ತದೆ. ಅದಕ್ಕೂ ಅಹಂಕಾರಕ್ಕೂ ಕಿಂಚಿತ್ತೂ ಸಂಬಂಧವೇ ಇಲ್ಲ. ಆದರೆ ಯಾಕೋ ಗೊತ್ತಿಲ್ಲ, ಇಂಥ ಅಹಂಕಾರಿಗಳೆಲ್ಲಾ ತಮ್ಮನ್ನು ತಾವು ಸ್ವಾಭಿಮಾನಿಗಳೆಂದೇ ಹೇಳಿಕೊಂಡು ತಿರುಗುತ್ತಾರೆ.

ಸ್ವಾಭಿಮಾನದಿಂದ ಅಹಂಕಾರವನ್ನು ಬೇರ್ಪಡಿಸಿ, ಇವರು ಅಹಂಕಾರಿಗಳು ಎಂದು ಗುರುತಿಸುವುದು ಹೇಗೆ? ಅಹಂಕಾರಿಗೆ ಎಲ್ಲರಿಗಿಂತ ತಾನೇ ಹೆಚ್ಚು ಎಂಬ ಭಾವನೆ ಇರುತ್ತದೆ. ಅದನ್ನು ಸುಪೀರಿಯಾರಿಟಿ ಕಾಂಪ್ಲೆಕ್ಸ್‌ ಎನ್ನಬಹುದು. ಇನ್ನೊಬ್ಬರನ್ನು ಹೊಗಳಿದರೆ ಸಹಿಸಿಕೊಳ್ಳುವುದಿಲ್ಲ, ಮನಸ್ಸಿನಲ್ಲೇ ಇವರಿಗೆ ಏನು ಕೆಟ್ಟದ್ದು ಮಾಡ್ಲಿ ಎಂಬ ಸಂಚು ಬೆಳೆಯುತ್ತಿರುತ್ತದೆ. ನನ್ನ ಮುಂದೆ ಅವರು ಬೆಳೆಯಬಾರದು ಎಂಬ ಕಿಚ್ಚು ಜ್ವಲಿಸುತ್ತಿರುತ್ತದೆ. ದುರಭಿಮಾನ ಕಿತ್ತು ತಿನ್ನುತ್ತಿರುತ್ತದೆ. ಅವರು ಸ್ವಾಭಿಮಾನದ ಯಾವ ಗುಣವನ್ನೂ, ಲಕ್ಷಣವನ್ನೂ ತೋರಗೊಡುವುದಿಲ್ಲ. ಶಾಂತ ಸರೋವರವನ್ನು ಕಲಕಿದ ಕಲ್ಲಿನಂತೆ ಅವರು ಇದ್ದಲ್ಲೆಲ್ಲಾ, ಬಿದ್ದಲ್ಲೆಲ್ಲಾ ಅಲೆ, ಅಲ್ಲೋಲಕಲ್ಲೋಲ, ಆದರೆ ನಿಜವಾದ ಸ್ವಾಭಿಮಾನಿ ಹಾಗಲ್ಲ, ಕಲ್ಲು ಕಲಕಿದ ಸರೋವರದಲ್ಲೂ ಅವನೊಂದು ತಣ್ಣನೆಯ ಗಾಳಿ ತರುವ ಚೆಂದದ ಅಲೆ. ಅದು ನಿಂತ ನೀರಿಗೊಂದು ನವಿರಾದ ಕಂಪನ ಕೊಡುತ್ತದೆ, ಮನಸ್ಸನ್ನು ಸಂತೋಷಗೊಳಿಸುತ್ತದೆ. 

ಹರಿವ ತೊರೆಯ ಪಕ್ಕದ ಶಾಂತ ಕಲ್ಲಿನಂತೆ ಅಚಲವಾಗಿ ತನ್ನ ಪಾಡಿಗೆ ತಾನಿರುತ್ತಾನೆ. ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ಹಾಗಂತ ಅವನ ಶಾಂತತೆ, ಸೌಜನ್ಯ ದೌರ್ಬಲ್ಯವಲ್ಲ. ಬೇಕೆಂದಾಗ ದಿಟ್ಟ, ಬೇಡವನಿಸಿದಾಗ ಕಟು, ತನ್ನಾವರಣದೊಳಗೆ ಹಾಗೆಲ್ಲಾ ಯಾರಾರಿಗೋ ಜಾಗವಿಲ್ಲ, ಬಹಳ ಬೇಗ ಯಾರೆಡೆಗೂ ಸ್ನೇಹದ ಹಸ್ತ ಚಾಚುವುದಿಲ್ಲ. ಸ್ವಾಭಿಮಾನ ಪ್ರತಿಯೊಬ್ಬರಿಗೂ ಇರಬೇಕು. ಅದೂ ವೈಯಕ್ತಿಕ ಜೀವನಕ್ಕಷ್ಟೇ ಅಲ್ಲ, ನಮ್ಮ ಭಾಷೆ, ನಮ್ಮ ನಾಡು, ನಮ್ಮ ದೇಶ, ನಮ್ಮ ಜನ ಎಂಬಿತ್ಯಾದಿ ವಿಚಾರವಾಗಿಯೂ ಇರಬೇಕು. ಹಾಗೆ ನೋಡಿದರೆ ಸ್ವಾಭಿಮಾನ ಎನ್ನುವುದು ಒಬ್ಬ ವ್ಯಕ್ತಿಯ ತನ್ನತನದ ಪ್ರತೀಕ. ಕೆಲವರನ್ನು ಗಮನಿಸಿ ನೋಡಿ. ಅವರು ಮಹಾ ಸ್ವಾಭಿಮಾನಿಗಳಂತೆ ವರ್ತಿಸುತ್ತಾರೆ, ಪೋಸು ಕೊಡುತ್ತಾರೆ. ಆದರೆ ಅವರಲ್ಲಿ ಎದ್ದು ಕಾಣುವುದು ಒಣಜಂಭ (ಫಾಲ್ಸ್‌ ಪ್ರಸ್ಟೀಜ್‌). ಯಾವಾಗಲೂ ಸುಳ್ಳು ಹೇಳಿಕೊಂಡೇ ಓಡಾಡುತ್ತಾರೆ. ತನ್ನ ಹತ್ತಿರ ಇಂತಿಷ್ಟು ಕೋಟಿ ದುಡ್ಡಿದೆ, ಆ ಊರಲ್ಲಿ ಇಷ್ಟು ಎಕರೆ ಜಮೀನಿದೆ, ಇಷ್ಟು ಕೆ.ಜಿ. ಚಿನ್ನವಿದೆ, ತಾನು ರಾಜಕಾರಣಿಗಳ ಸಂಬಂಧಿ...ಹೀಗೆ ಸುಳ್ಳುಗಳ ಸರಪಳಿ. ಬೆಳಗೆದ್ದರೆ ತೊಟ್ಟುಕೊಳ್ಳುವುದರಿಂದ ಹಿಡಿದು ರಾತ್ರಿ ಮಲಗುವಾಗ ಹೊದ್ದುಕೊಳ್ಳುವವರೆಗೆ ಎಲ್ಲವೂ ಸುಳ್ಳುಮಯ. ಆದರೆ ಅದಕ್ಕೆ ತೊಡಿಸುವ ಮುಖವಾಡಕ್ಕೆ ಮಾತ್ರ ಸ್ವಾಭಿಮಾನದ ಹೆಸರು. ಸುಳ್ಳು ಹೇಳಿ ಏನನ್ನು ಸಾಧಿಸುತ್ತಾರೋ ಗೊತ್ತಿಲ್ಲ. ಇವರಿಗೆಲ್ಲಾ ಸ್ವಾಭಿಮಾನಿ ಗಳಾಗುವ ಯಾವುದೇ ಒಂದು ಲಕ್ಷಣವೂ ಇರುವುದಿಲ್ಲ.

ಸ್ವಂತ ದುಡಿಮೆಯಿಂದ ಜೀವನ ನಡೆಸಿ ಯಾರ ಹಂಗೂ ಇಲ್ಲದೆ, ಯಾರಿಗೂ ಮೋಸ ಮಾಡದೆ, ಯಾರನ್ನೂ ನಿಂದಿಸಿ ಕೆಳಗೆ ತಳ್ಳಿ ತಾನು ಮೇಲೆ ಬರುವ ಪ್ರಯತ್ನ ಪಡದೆ, ಸ್ವ ಗೌರವದಿಂದ ಸಾಧಿಸುವವನೇ ಸ್ವಾಭಿಮಾನಿಯಾಗಲು ಅರ್ಹ. ಉದಾಹರಣೆಗೆ ಕೆಲ ರಾಜಕಾರಣಿಗಳ ಮಕ್ಕಳು ತಮ್ಮ ತಂದೆಯ ಕಪ್ಪು ಹಣದಿಂದ ಆಟ ಆಡಿಕೊಂಡು ತಾವೇ ಕಷ್ಟಪಟ್ಟು ದುಡಿದವರಂತೆ ಎಗರಾ ಡುತ್ತಾ, ನಮ್ಮ ದೇಶ ಹಾಳು ಮಾಡಿದ್ದು ಸಾಲದು ಅಂತ ಬೇರೆ ದೇಶಗಳಿಗೂ ಹೋಗಿ ಅಸಭ್ಯರಂತೆ ವರ್ತಿಸಿ, ದುಡ್ಡಿಗೆ ಬೆಲೆಯನ್ನೇ ಕೊಡದಂತೆ ಶೋಕಿ ಮಾಡುತ್ತಾರೆ. ಇವರೆಲ್ಲ ದುರಹಂಕಾರದ ಪರಮಾವಧಿಗಳು, ಇವರು ಸ್ವಾಭಿಮಾನಿಗಳಾಗಲು ಸಾಧ್ಯವೇ ಇಲ್ಲ! ಸ್ವಾಭಿಮಾನಿಗೆ ಒಂದು ಗತ್ತು-ಗಾಂಭೀರ್ಯ ಎದ್ದು ಕಾಣು ತ್ತದೆ, ಕಂಡವರ ದುಡ್ಡಿನಲ್ಲಿ ಜೀವನ ನಡೆಸುವವರನ್ನು ಸೋಂಬೇರಿ ಅನ್ನಬೇಕೇ ಹೊರತು ಗೌರವಿಸಿ ಸ್ವಾಭಿಮಾನಿ ಎನ್ನುವುದಲ್ಲ.

ಯುವಕರಲ್ಲಿ ನಿಜವಾಗಲೂ ಸ್ವಾಭಿಮಾನ ಇದೆಯಾ ಅಥವಾ ಇರುತ್ತಾ? ಯುವಕರು ಜಾಣರು. ತಮಗೆ ಬೇಕಾದಾಗ ಸ್ವಾಭಿ ಮಾನಿ ಗಳಂತೆ ವರ್ತಿಸುತ್ತಾರೆ, ಬೇಡದೇ ಇದ್ದಾಗ ಜಾಣ ಪೆದ್ದರಂತೆ ಸುಮ್ಮನಾಗುತ್ತಾರೆ. ಅವರು ಸ್ವಾಭಿಮಾನಿಗಳಂತೆ ವರ್ತಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಒಬ್ಬ ಮನಷ್ಯ ಸ್ವಾವಲಂಬಿಯಾಗಿ ತನಗೆ ಮತ್ತು ತನ್ನವರಿಗೆ ಬೇಕಾದ್ದನ್ನು ಒಂದು ಮಟ್ಟಕ್ಕಷ್ಟೇ ತನ್ನದಾಗಿಸಿ ಕೊಂಡು, ವಿದ್ಯಾಭ್ಯಾಸವಾಗಿರಲಿ, ಹಣವಾಗಿರಲಿ, ಸಾಧನೆಯಾಗಿ ರಲಿ, ವ್ಯವಹಾರವಾಗಿರಲಿ ತನ್ನ ಜೀವನಕ್ಕೆ ಬೇಕಾಗಿದ್ದಷ್ಟನ್ನೇ ಅರ್ಜಿಸಿಕೊಂಡು, ಚೌಕಟ್ಟನ್ನು ನಿರ್ಮಿಸಿಕೊಂಡು, ಇದನ್ನೆಲ್ಲಾ ಬೇರೆಯವರಿಗೆ ಮೋಸಮಾಡಿ ಪಡೆದುಕೊಳ್ಳದೇ ತನಗೆ ತಾನೇ ದುಡಿದುಕೊಂಡು, ಅಂಥ ಸ್ಥಿತಿ ಹೊಂದಿದಾಗ ನಿಮ್ಮನ್ನು ನೀವು ಮನಸಾರೆ ಮೆಚ್ಚಿಕೊಳ್ಳುತ್ತೀರೋ ಅವತ್ತು ನಿಮಗೆ ನೀವೇ ನಾನು ಸ್ವಾಭಿಮಾನಿ ಎಂದುಕೊಳ್ಳಬಹುದು. ಬೇರೆಯವರು ನಿಮ್ಮನ್ನು ಸ್ವಾಭಿಮಾನಿ ಅಂತ ಕರೆಯುತ್ತಾರೋ ಬಿಡ್ತಾರೋ? ನೀವು ಕಷ್ಟಪಟ್ಟು ದುಡಿದು, ನಿಮ್ಮದಾಗಿಸಿಕೊಂಡಂಥ ಎಲ್ಲಾ ಸಣ್ಣ ಪುಟ್ಟ ಸಾಧನೆಗಳೂ ನಿಮ್ಮ ಸ್ವಾಭಿಮಾನಕ್ಕೆ ಚಿನ್ನದ ಮೆರುಗು ನೀಡುತ್ತವೆ.

ಹೌದಲ್ಲವಾ, ಸುಮ್ಮನೆ ಯೋಚಿಸಿ, ಎಲ್ಲರೂ ಸ್ವಾಭಿಮಾನಿಗಳಾದರೆ ಎಷ್ಟು ಚೆನ್ನಾಗಿರುತ್ತದೆ! ಆಗ ಒಬ್ಬರು ಇನ್ನೊಬ್ಬರ ಸಂತೋಷವನ್ನು ನೋಡಿ ಹೊಟ್ಟೆಕಿಚ್ಚು ಪಡುವುದಿಲ್ಲ, ಇನ್ನೊಬ್ಬರ ದುಡ್ಡಿಗೆ ಆಸೆ ಪಡುವುದಿಲ್ಲ, ಬೇಗ ಶ್ರೀಮಂತರಾಗಬೇಕು ಅಂತ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ, ಯಾಕೆಂದರೆ ಸ್ವಾಭಿಮಾನಿ ಶ್ರೀಮಂತನೇ ಆಗಿರಬೇಕು ಅಂತೇನೂ ಇಲ್ಲ, ಬಡವನೂ ಸ್ವಾಭಿಮಾನಿಯೇ. ಸ್ವಾಭಿಮಾನಕ್ಕೆ ಲಿಂಗ-ಜಾತಿ ಭೇದವಿಲ್ಲ, ತಾರತಮ್ಯವಿಲ್ಲ, ಮೇಲು ಕೀಳಿಲ್ಲ. ಅದೊಂದು ಸರ್ವನಾಮಪದ!


Trending videos

Back to Top