CONNECT WITH US  

ಪ್ರೀತಿಸಿ ಮದುವೆಯಾಗ್ತಾರೆ, ಕೊನೆಗೆ ಭಜಗೋವಿಂದಂ ಅಂತಾರೆ!

ಜೀವನದಲ್ಲಿ ನಮ್ಮನ್ನು ನಾವು ನೋವಿನಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ನಾವೆಲ್ಲ ಮೋಕ್ಷ ಮಾರ್ಗದಲ್ಲಿ ನಿರಂತರ ತಪಸ್ಸಿಗೆ ಕುಳಿತು ಸಂಸಾರದ ಜಂಜಾಟದಿಂದ ದೂರವಾದವರೇನಲ್ಲ. ಸಂಸಾರದಲ್ಲಿ ನೋವಿದೆ ಎಂದು ತಿಳಿದಿದ್ದರೂ ಹೋಗಿ ಹೋಗಿ ಅದರಲ್ಲೇ ಸಿಕ್ಕಿಹಾಕಿಕೊಳ್ಳುತ್ತೇವೆ. 

 ಹುಡುಗಿಗೆ 20 ತುಂಬಿತು ಅಥವಾ ಹುಡುಗನಿಗೆ 25 ತುಂಬಿತು ಅಂದಾಕ್ಷಣ ಮನೆಯವರಿಗೆಲ್ಲ ಯೋಚನೆ ಒಂದೇ, ಅವರ ಮದುವೆ ಮಾಡಿಸಿ ಸೆಟ್ಲ ಮಾಡಬೇಕು. ಎಷ್ಟೋ ಹುಡುಗರಿಗೆ ಇನ್ನೂ ಕೆಲಸ ಕೂಡ ಸಿಕ್ಕಿರುವುದಿಲ್ಲ. ಜೀವನ ನಿರ್ವಹಣೆಗೆ ಆದಾಯವೂ ಇರುವುದಿಲ್ಲ. ಆದರೆ, ಪ್ರೀತಿಸಲು ಹುಡುಗಿ ಸಿಕ್ಕಿದಳು ಎಂದು ಮುಂದಿನ ಸಾಂಸಾರಿಕ ಜವಾಬ್ದಾರಿ ಮರೆತು ಮದುವೆ ಆಗುತ್ತಾರೆ. ಕೆಲವರಂತೂ, ಯಾರಾದರೂ ಮದುವೆ ಆಗದೇ ಇರುವವರನ್ನು ನೋಡಿದ ತಕ್ಷಣ ಯಾವಾಗ ಸಾರ್‌ ನೀವು ಸೆಟ್ಲ ಆಗೋದು? ಅಥವಾ ಯಾವಾಗ ಮೇಡಂ ನೀವು ಸೆಟ್ಲ ಆಗೋದು ಅಂತ ಕೇಳುತ್ತಾರೆ. ಅವರ ಪ್ರಕಾರ ಸೆಟ್ಲ ಆಗೋದು ಅಂದರೆ ಮದುವೆ ಮಾಡಿಕೊಳ್ಳುವುದು ಎಂದೆ ಅರ್ಥ. 

ಆದರೆ ಮದುವೆ ಮಾಡಿಕೊಳ್ಳುವುದು ಎಷ್ಟು ದೊಡ್ಡ ಜವಾಬ್ದಾರಿ? ಅದು ಎಷ್ಟು ಸುಖ ಕೊಡುತ್ತದೆಯೋ ಅಷ್ಟೇ ತೊಳಲಾಟವನ್ನೂ ಕೊಡುತ್ತದೆ. ಒಬ್ಬರ ಜೀವನ ಇಬ್ಬರದ್ದಾಗುತ್ತದೆ. ಇಬ್ಬರಿಂದ ಸಂಸಾರ ಬೆಳೆಯುತ್ತದೆ. ಸಂಸಾರ ಬೆಳೆದಂತೆ ಒಬ್ಬ ತನ್ನ ಪ್ರೀತಿಯನ್ನು ಎಲ್ಲರಿಗೂ ಹಂಚಬೇಕಾಗುತ್ತದೆ. ಒಬ್ಬರಿಗೆ ಕಡಿಮೆಯಾದರೂ ಜಗಳ ಶುರುವಾಗುತ್ತದೆ. ಪ್ರೀತಿಯಿಂದ ಮಾತ್ರ ಸಂಸಾರ ಸಾಗಿಸುವ ಹಾಗಿದ್ದಿದ್ದರೆ ಎಲ್ಲವೂ ಸುಲಭವಾಗಿರುತ್ತಿತ್ತು. ಈಗ ಪ್ರೀತಿಗಿಂತ ಹೆಚ್ಚಾಗಿ ಮನೆಯವರೆಲ್ಲರ ಆಸೆಗಳನ್ನು ಪೂರೈಸುವಷ್ಟರಲ್ಲಿ ಮನೆ ಒಡೆಯನಿಗೆ ಜೀವನ ಸಾಕು ಸಾಕಾಗಿರುತ್ತದೆ. ಹೆಂಡತಿಯಾದವಳು, ಪ್ರೇಯಸಿಯಾಗಿದ್ದಾಗ ಅವಳಿಗೆ ಒಂದು ಮುತ್ತು ಕೊಟ್ಟರೆ ನಾಚಿಕೊಂಡು ಸಂತೋಷವಾಗಿ ಅದನ್ನೇ ನೆನೆಯುತ್ತಾ ಮನೆಗೆ ಹಿಂತಿರುಗಿ ಹೋಗುತ್ತಿದ್ದಳು. ಅದೇ ಪ್ರೇಯಸಿ ಹೆಂಡತಿಯಾದಾಗ ಒಂದು ಮುತ್ತು ಕೊಟ್ಟು ಸಂಸಾರ ನಡೆಸಲು ಸಾಧ್ಯವೇ?! ಅ ಒಂದು ಮುತ್ತು ಅವಳನ್ನು ತೃಪ್ತಿಪಡಿಸಲು ಸಾಧ್ಯವೇ!

ಪ್ರೀತಿಸುತ್ತಿದ್ದಾಗ, ನಿನ್ನ ಪ್ರೀತಿ ಸಾಕು ಈ ಜಗತ್ತನ್ನೇ ಗೆಲ್ಲುವುದಕ್ಕೆ ಎನ್ನುತ್ತಾರೆ. ಆಮೇಲೆ, ನೀನೇ ಬೇಕು ನಾನು ಮದುವೆ ಆಗುವುದಕ್ಕೆ ಎನ್ನುತ್ತಾರೆ. ಕೊನೆಗೆ ನಿನ್ನ ದುಡ್ಡು ಬೇಕು ಸಂಸಾರ ಸಾಗಿಸುವುದಕ್ಕೆ ಎನ್ನುತ್ತಾರೆ. ಪಾಪ ಹುಡುಗರು, ಒಂದು ಸಲ ಪ್ರೀತಿ ಮಾಡಿದ ತಪ್ಪಿಗೆ ಜೀವನ ಪೂರ್ತಿ ತಾನು ಪ್ರೀತಿಸಿದ ಹುಡುಗಿಯನ್ನು ಸಂತೋಷವಾಗಿಟ್ಟುಕೊಳ್ಳಬೇಕು ಅಂತ ಪ್ರಯತ್ನ ಪಡುತ್ತಲೇ ಇರುತ್ತಾರೆ. ಕೆಲ ಹುಡುಗಿಯರಿಗೆ ಏನು ಕೊಟ್ಟರೂ ಸಮಾಧಾನಾನೇ ಆಗುವುದಿಲ್ಲ. ಎಲ್ಲದಕ್ಕೂ ಕಣಿ ಮಾಡುತ್ತಾರೆ. ಅದು ಬೇಕು... ಇದು ಬೇಕು... ಎಲ್ಲಾ ತಮಗೇ ಬೇಕು ಅಂತ ಪೀಡಿಸುತ್ತಾರೆ. ಹೋಗುತ್ತಾ ಹೋಗುತ್ತಾ ತಮ್ಮ ಗಂಡನನ್ನು ಪ್ರೀತಿಸುವುದನ್ನೇ ಮರೆತು ಒಡವೆಗಳನ್ನು ಮತ್ತು ಟಿ.ವಿ.ಯನ್ನು ಪ್ರೀತಿಸಲು ಶುರುಮಾಡುತ್ತಾರೆ. 

ಇತ್ತೀಚೆಗಂತೂ ಕೆಲ ಹೆಂಗಸರಿಗೆ ಟಿ.ವಿ. ಸೀರಿಯಲ್‌ ಜೊತೆ ಇರುವ ನಿಕಟ ಸಂಬಂಧ ತನ್ನ ಗಂಡನ ಮೇಲೂ ಇರುವುದಿಲ್ಲ ಅನ್ನಿಸುತ್ತದೆ. ಗಂಡ ಬೆಳಗ್ಗೆಯಿಂದ ತನ್ನ ಸಂಸಾರಕ್ಕಾಗಿ ದುಡಿದು ಮನೆಗೆ ಬಂದರೂ ಅವನನ್ನು ಗಮನಿಸದೇ ತನ್ನ ಪ್ರಿಯವಾದ ಧಾರವಾಹಿಯ ಒಳ ಹೊಕ್ಕಿರುತ್ತಾರೆ. ಟಿ.ವಿ.ಯನ್ನು ದಿಟ್ಟಿಸಿ ನೋಡುವಷ್ಟು ಸಮಯ ಗಂಡನನ್ನು ನೋಡಿದ್ದಿದ್ದರೆ ಅವನು ಎಷ್ಟು ಖುಷಿಪಡುತ್ತಿದ್ದ ಅಲ್ಲವೇ? ಅವನು ದಿನಪೂರ್ತಿ ಪಟ್ಟ ಕಷ್ಟ ಅವನಿಗೆ ಮರೆತೇ ಹೋಗಿರುತ್ತಿತ್ತೇನೋ. ಇನ್ನು ಆ ಧಾರವಾಹಿಗಳನ್ನು ನೋಡಬೇಡ, ಸ್ವಲ್ಪ ಹೊತ್ತು ನನ್ನ ಜೊತೆ ಮಾತಾಡು ಅಂತ ಹೇಳಿದರೆ ಸಾಕು, ರಾತ್ರಿಯೆಲ್ಲಾ ಜಗಳ ಮಾಡುತ್ತಲೇ ಇರುತ್ತಾರೆ. ಕೆಲ ಹೆಂಗಸರು ಮಲಗಿದ್ದ ಗಂಡನನ್ನು ಎಬ್ಬಿಸಿ ಜಗಳ ಆಡುತ್ತಾರೆ. ಅದಕ್ಕೇ ಪಾಪ, ಕೆಲವು ಗಂಡಂದಿರು ಬಾಯಿ ಮುಚ್ಚಿಕೊಂಡು, ಹೆಂಡತಿ ಏನೇ ಹೇಳಿದರೂ ಅದನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ. 

ಎಲ್ಲಾ ಮನುಷ್ಯರೂ ಪ್ರಪಂಚದಲ್ಲಿ ಪ್ರೀತಿಯ ಹುಡುಕಾಟ ನಡೆಸುತ್ತಿದ್ದಾರೆ. ಯಾರಾದರೂ ಒಬ್ಬರಾದರೂ ನಮ್ಮನ್ನು ಪ್ರೀತಿಸುವವರು ಇದ್ದೇ ಇರಬೇಕು ಅಂತ ಬಯಸುತ್ತಾರೆ. ಪ್ರೀತಿಸಲ್ಪಡುವವನು ಜಗತ್ತಿನಲ್ಲಿ ಪುಣ್ಯವಂತ. ಹಾಗೇ ಪ್ರೀತಿ ತೋರಿಸುವವರೂ ಪುಣ್ಯವಂತರೇ. ಪ್ರೀತಿ ಮಾಡಲು ನಾವೇನೂ ದುಡ್ಡು ಖರ್ಚು ಮಾಡಬೇಕಾಗಿಲ್ಲ. ನಿಸ್ವಾರ್ಥವಾಗಿರಬೇಕಾದ ಪ್ರೀತಿಯನ್ನು ಹಣಕ್ಕಾಗಿ ಮಾರಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ಹಣಕ್ಕಾಗಿ ತೋರುವ ಪ್ರೀತಿ ನಿಜವಾದ ಪ್ರೀತಿಯೇ ಅಲ್ಲ. ಅದು ಶಾಶ್ವತವಾಗಿರಲು ಸಾಧ್ಯವೂ ಇಲ್ಲ.

ಎಷ್ಟೊಂದು ಜನ ಪ್ರೀತಿಸಿ ಮದುವೆಯಾದವರೇ ಮತ್ತೆ ಜೀವನದಲ್ಲಿ ಪ್ರೀತಿಗಾಗಿ ಎದುರು ನೋಡುತ್ತಿರುತ್ತಾರೆ. ಏಕೆ? ಮೊದಲು ಪ್ರೀತಿಸಿ ಮದುವೆಯಾದ ಸಂಗಾತಿ ಅವರಿಗೆ ಪ್ರೀತಿ ತೋರಿಸುವುದನ್ನು ಕಡಿಮೆ ಮಾಡಿದರು ಅಂತಲೇ? ಅಥವಾ ಅವರು ಪ್ರೀತಿಸುವ ಮನಸ್ಥಿತಿಯನ್ನೇ ಕಳೆದುಕೊಂಡುಬಿಟ್ಟರು ಅಂತಲೇ? ಒಂದು ಗುಂಪು ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದರೆ ಮತ್ತೂಂದು ಗುಂಪು ಅದೇ ಪ್ರೀತಿಯನ್ನು ಪಡೆದುಕೊಳ್ಳಲು ಕಾತರದಿಂದ ಕಾಯುತ್ತಿರುತ್ತದೆ. ಪ್ರೀತಿಗಿರುವ ಆಕರ್ಷಣೆ ಮತ್ತಿನ್ಯಾವುದಕ್ಕೂ ಇಲ್ಲ. ಕೆಲವರು ದೈಹಿಕ ಆಕರ್ಷಣೆ ಪ್ರೀತಿಯಲ್ಲ ಎನ್ನುತ್ತಾರೆ. ಹೌದು, ಅದು ನಿಜ. ದೈಹಿಕ ಆಕರ್ಷಣೆ ನಮ್ಮ ತಲೆ ಕೆಡಿಸುತ್ತದೆ. ಆದರೆ, ಪ್ರೀತಿಯ ಆಕರ್ಷಣೆ ನಮ್ಮ ಮನಸ್ಸನ್ನು ಕೆಡಿಸುತ್ತದೆ. ನಿಜವಾದ ಪ್ರೀತಿ ನೂರು ಜನರ ಮಧ್ಯೆ ನಿಂತಿದ್ದರೂ ಸೆಳೆಯುತ್ತದೆ. 

ತನ್ನ ಪ್ರೀತಿಯನ್ನು ತಾನೇ ಗುರುತಿಸಿಕೊಳ್ಳುತ್ತದೆ. ಅಂತರಾಳದಲ್ಲಿ ಕಾಡಲು ಶುರುಮಾಡುತ್ತದೆ. ಹಾಗೇ ಪ್ರೀತಿ ತಾನು ಪ್ರೀತಿಸಿದವರಿಗೆ ಯಾವತ್ತೂ ಕೆಡುಕನ್ನು ಬಯಸುವುದಿಲ್ಲ. ಪ್ರೀತಿಯಿಂದ ಎಲ್ಲವನ್ನೂ ಪಡೆದುಕೊಳ್ಳುತ್ತೇವೆಯೇ ಹೊರತೂ ಏನನ್ನೂ ಕಳೆದುಕೊಳ್ಳುವುದಿಲ್ಲ. ಯಾರಿಗಾದರೂ ನಾನು ಪ್ರೀತಿಸಿ ಎಲ್ಲವನ್ನೂ ಕಳೆದುಕೊಂಡೆ ಅನ್ನಿಸಿದರೆ ಅವರದ್ದು ನಿಜವಾದ ಪ್ರೀತಿಯಾಗಿರಲು ಸಾಧ್ಯವೇ ಇಲ್ಲ. ತಾತ್ಕಾಲಿಕ ಸಂಬಂಧಗಳನ್ನು ಪ್ರೀತಿಗೆ ಹೋಲಿಸಿಕೊಂಡರೆ ಅದು ನಮ್ಮ ತಪ್ಪು. ಪ್ರೀತಿಗೆ ಯಾವುದೇ ರೀತಿಯ ಕಟ್ಟುಪಾಡುಗಳಿಲ್ಲ. ಜೊತೆಯಾಗಿ ಬಾಳುತ್ತಿರುವವರೆಲ್ಲ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂಬದೂ ಸರಿಯಲ್ಲ. ಸಂಸಾರದಲ್ಲಿರುವವರಿಗೇ ಗೊತ್ತು ಸಂಸಾರದಲ್ಲಿರುವ ಜಂಜಾಟ. 

ಆಸೆಪಟ್ಟು ಸಂಗಾತಿ ಬೇಕು ಅಂತ ಹುಡುಕಿಕೊಂಡು ಹೋಗಿ ಸಂಸಾರಕ್ಕೆ ಕಾಲಿಡುತ್ತಾರೆ. ಕೆಲವು ವರ್ಷಗಳ ನಂತರ ಭಜಗೋವಿಂದಂ ಹಾಡುತಾ ದೇವರನ್ನು ಬೇಡಿಕೊಳ್ಳುತ್ತಾರೆ. "ಇಹ ಸಂಸಾರೇ ಖಲು ಸುತಾರೇ ಕೃಪಯಾ ಪಾರೇ ಪಾಹಿ ಮುರಾರೇ...' ದುಃಖಮಯವಾದ ಸಂಸಾರ ಸಾಗರದಿಂದ ನನ್ನನ್ನು ಪಾರು ಮಾಡು ಪರಮಾತ್ಮ! 

ರೂಪಾ ಅಯ್ಯರ್‌


Trending videos

Back to Top