CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಗ್ಧರು ರಾಕ್ಷಸರ ನಡುವಿನ ದಂಡು ಯಾತ್ರೆ!

ನರ ರಾಕ್ಷಸ, ನರ ರಾಕ್ಷಸ, ನರ ರಾಕ್ಷಸ ... ಡಿ ಗ್ಯಾಂಗ್‌ ಸದಸ್ಯರನ್ನು ತೋರಿಸುವಾಗಲೆಲ್ಲಾ ಹಿನ್ನೆಲೆಯಲ್ಲಿ ಈ ಹಾಡು ಬರುತ್ತದೆ. ಅವರೆಷ್ಟು ಕ್ರೂರಿಗಳು ಎಂದು ಈ ಹಾಡಿನ ಮೂಲಕ ಹೇಳಲಾಗುತ್ತದೆ. ಚಿತ್ರ ಮುಗಿಯುವ ಹಂತಕ್ಕೆ ಬಂದಾಗ ಮತ್ತೆ ಈ ಹಾಡು ರಿಪೀಟ್‌ ಆಗುತ್ತದೆ. ಆದರೆ, ಈ ಬಾರಿ ಅಲ್ಲಿ ಕಾಣುವುದು ಡಿ ಗ್ಯಾಂಗ್‌ ಅಲ್ಲ, ಪೊಲೀಸರು! ದಂಡುಪಾಳ್ಯ ಗ್ಯಾಂಗ್‌ ಅಲಿಯಾಸ್‌ ಡಿ ಗ್ಯಾಂಗ್‌ ಸದಸ್ಯರನ್ನು ತೋರಿಸುವಾಗ "ನರ ರಾಕ್ಷಸ ...' ಎಂಬ ಹಾಡು ಬರುವುದು ಓಕೆ.

ಪೊಲೀಸರಿಗೇಕೆ ಈ ಹಾಡು ಎಂಬ ಪ್ರಶ್ನೆ ಬಂದರೆ, ನೀವು ಚಿತ್ರ ನೋಡಬೇಕು. ಏಕೆಂದರೆ, ಇಲ್ಲೊಂದು ದೊಡ್ಡ ಟ್ವಿಸ್ಟ್‌ ಇದೆ. ಅಷ್ಟೇ ಅಲ್ಲ, "ದಂಡುಪಾಳ್ಯ' ಚಿತ್ರದ ಸೀರೀಸ್‌ನ ಮೂರನೆಯ ಚಿತ್ರಕ್ಕೆ ವೇದಿಕೆ ಸೆಟ್‌ ಮಾಡಲಾಗಿದೆ. ಹಾಗಾಗಿ "2' ಎಂಬುದು "ದಂಡುಪಾಳ್ಯ' ಸೀರೀಸ್‌ನ ಒಂದು ಪ್ರಮುಖ ಕೊಂಡಿಯಷ್ಟೇ ಅಲ್ಲ, ಒಂದು ವಿಭಿನ್ನ ಪ್ರಯತ್ನ ಕೂಡಾ. ಸಾಮಾನ್ಯವಾಗಿ ಕ್ರೈಮ್‌ ಹಿನ್ನೆಲೆಯ ಚಿತ್ರಗಳಲ್ಲಿ, ಕೃತ್ಯಗಳು, ಶೋಷಣೆಗಳು ಎಲ್ಲಾ ನಡೆದು ಕೊನೆಗೆ ಅವೆಲ್ಲಕ್ಕೂ ಅಂತ್ಯ ಹಾಡಲಾಗುತ್ತದೆ.

ಆದರೆ, "ದಂಡುಪಾಳ್ಯ' ವಿಚಾರದಲ್ಲಿ ಬೇರೆ ತರಹ ನೋಡುವುದಕ್ಕೆ ಪ್ರಯತ್ನಿಸಿದ್ದಾರೆ ನಿರ್ದೇಶಕ ಶ್ರೀನಿವಾಸರಾಜು. ಈ ಸೀರೀಸ್‌ನ ಮೊದಲ ಭಾಗದಲ್ಲಿ ದಂಡುಪಾಳ್ಯದಿಂದ ಬಂದ ಹಂತಕರು ಮತ್ತು ಅವರ ಕೃತ್ಯಗಳ ಕುರಿತು ಹೇಳಿದ್ದರು. ಈಗ ಎರಡನೆಯ ಭಾಗದಲ್ಲಿ ಅದಕ್ಕೆ ತದ್ವಿರುದ್ಧವಾಗಿ, ಪೊಲೀಸರು ದಂಡುಪಾಳ್ಯದ ಮುಗ್ಧ ಜನರನ್ನು ಹೇಗೆ ಅವರಿಗೆ ಸಂಬಂಧವಿಲ್ಲದ 80 ಕೊಲೆ ಮತ್ತು ರಾಬರಿ ಕೇಸುಗಳಲ್ಲಿ ಫಿಟ್‌ ಮಾಡಿದರು ಎಂಬುದನ್ನು ತೋರಿಸುವುದಕ್ಕೆ ಪ್ರಯತ್ನ ಮಾಡಿದ್ದಾರೆ.

ಹಾಗಾದರೆ, ದಂಡುಪಾಳ್ಯ ಗ್ಯಾಂಗ್‌ನವರ ಕೈವಾಡವೇ ಇಲ್ಲವಾ ಅಥವಾ ಇವೆಲ್ಲಾ ಪೊಲೀಸರು ಮಾಡಿರುವ ಷಡ್ಯಂತ್ರವಾ ಎಂಬ ಪ್ರಶ್ನೆ ಬರಬಹುದು. ಇಬ್ಬರಲ್ಲಿ ಯಾರು ಸರಿ ಮತ್ತು ಯಾರದ್ದು ತಪ್ಪು ಎಂಬ ಗೊಂದಲಗಳು ಕಾಡಬಹುದು. ಆದರೆ, ಆ ಪ್ರಶ್ನೆಗೆ ನಿರ್ದೇಶಕ ಶ್ರೀನಿವಾಸರಾಜು ಅದಕ್ಕೆ ಉತ್ತರಿಸಿಲ್ಲ. ಮುಂದಿನ ಭಾಗದಲ್ಲಿ ಉತ್ತರಿಸುವುದಾಗಿ ಹೇಳಿ ಚಿತ್ರವನ್ನು ಅಷ್ಟಕ್ಕೇ ನಿಲ್ಲಿಸಿದ್ದಾರೆ. ಈಗ ಎಲ್ಲವೂ ಮೂರನೆಯ ಭಾಗದ ಮೇಲೆ ಅವಲಂಬಿತವಾಗಿದೆ ಮತ್ತು ಎಲ್ಲಾ ಪ್ರಶ್ನೆಗಳಿಗೂ ಆ ಚಿತ್ರ ನೀಡಬೇಕಿದೆ.

"2' ಚಿತ್ರದ ಕಥೆಯನ್ನು ಹೇಳುವುದು ಕಷ್ಟವೇನಲ್ಲ. ಡಿ ಗ್ಯಾಂಗ್‌ನ ಹಂತಕರಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ಘೋಷಿಸಿರುತ್ತದೆ. ಆ ಸಂದರ್ಭದಲ್ಲಿ ಪತ್ರಕರ್ತೆಯೊಬ್ಬರಿಗೆ, ಈ ಕೇಸಿನಲ್ಲಿ ದಂಡುಪಾಳ್ಯದವರಿಗೆ ಎಲ್ಲೋ ಮೋಸವಾಗಿದೆ ಎಂದನಿಸುತ್ತದೆ. ಅವರನ್ನು ಮಾತನಾಡಿಸಲು ಪ್ರಯತ್ನಿಸಿದಾಗ, ಮೊದಲ ಬಾರಿಗೆ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿದಾಗ, ಪೊಲೀಸರು ತಮಗೆ ಹೇಗೆಲ್ಲಾ ತೊಂದರೆ ಕೊಟ್ಟರು ಎಂಬುದನ್ನು ಬಿಚ್ಚಿಡುತ್ತಾರೆ.

ಪೊಲೀಸರ ಟಾರ್ಚರ್‌ ತಡೆಯಲಾರದೆ, ಡಿ ಗ್ಯಾಂಗ್‌ನ ಸದಸ್ಯರೆಲ್ಲಾ ತಾವು ತಪ್ಪಿತಸ್ಥರು ಎಂದು ಹೇಳುವ ಮೂಲಕ ಚಿತ್ರ ಮುಗಿಯುತ್ತದೆ. ಈ ಚಿತ್ರದಲ್ಲಿ ಕ್ರೈಮು, ರಕ್ತಪಾತ ಇರುವುದಿಲ್ಲ ಎಂದು ಶ್ರೀನಿವಾಸರಾಜು ಹೇಳಿದ್ದರು. ಆದರೆ, ಟಾರ್ಚರ್‌ ಇರುವುದಿಲ್ಲ ಎಂದು ಹೇಳಿರಲಿಲ್ಲ. ಕ್ರಿಮಿನಲ್‌ಗ‌ಳು ಮಾಡಿದರೆ ಕ್ರೈಮು, ಪೊಲೀಸರು ಮಾಡಿದರೆ ಅದು ಟಾರ್ಚರ್‌ ಎನ್ನಲಾಗುತ್ತದೆ ಎಂಬುದು ಅರ್ಥವಾಗಿ ಬಿಟ್ಟರೆ, ಚಿತ್ರದಲ್ಲಿರುವ ಹಿಂಸೆಗೆ ಒಂದು ಮಾಫಿ ಸಿಕ್ಕಿಬಿಟ್ಟಂತಾಗುತ್ತದೆ.

ಪೋಸ್ಟರ್‌ನಲ್ಲಿ ತೋರಿಸಿರುವಂತೆ, ಬಾಯಿಯಲ್ಲಿ ಬೂಟು ಇಟ್ಟಿರುವ ದೃಶ್ಯ, ಬೂಟು ಕಾಲಿನಲ್ಲಿ ಒದಯುತ್ತಿರುವ ದೃಶ್ಯ, ಅರೆಬೆತ್ತಲೆಯಾಗಿ ನಿಲ್ಲಿಸಿರುವ ದೃಶ್ಯಗಳಿಲ್ಲದಿದ್ದರೂ, ಚಿತ್ರದಲ್ಲಿ ಬೇರೆಯದೇ ರೀತಿಯ ಟಾರ್ಚರ್‌ ಇದೆ ಮತ್ತು ಕೆಲವೊಮ್ಮೆ ಅದು ಅತಿಯಾಗಿದೆ ಎಂದನಿಸುವುದೂ ಹೌದು. ಆದರೆ, ಪೊಲೀಸರು ಅಷ್ಟೊಂದು ಟಾರ್ಚರ್‌ ಕೊಟ್ಟಿರದಿದ್ದರೆ, ದಂಡುಪಾಳ್ಯದವರು ಆ ಕೊಲೆಗಳ ಜವಾಬ್ದಾರಿಯನ್ನು ಹೊರುತ್ತಿರಲಿಲ್ಲ ಎಂದು ಕೊನೆಗೆ ಸ್ಪಷ್ಟವಾಗುವುದರಿಂದ, ಅದು ಅನಿವಾರ್ಯವಾಗಿದೆ.

ಆದರೂ ಮೊದಲ ಭಾಗಕ್ಕೆ ಹೋಲಿಸಿದರೆ, ಇಲ್ಲಿ ರಕ್ತಪಾತ ಕಡಿಮೆಯೇ. ಈ ಭಾಗದಲ್ಲಿ ಪಾತ್ರಧಾರಿಗಳ ಪೈಕಿ ಗಮನಸೆಳೆಯುವುದೆಂದರೆ ಅದು ರವಿಶಂಕರ್‌ ಮತ್ತು ಶ್ರುತಿ. ಪೊಲೀಸ್‌ ಅಧಿಕಾರಿಯಾಗಿ ರವಿಶಂಕರ್‌ ಮತ್ತು ಪತ್ರಕರ್ತೆಯಾಗಿ ಶ್ರುತಿ ಅಭಿನಯ ಚೆನ್ನಾಗಿದೆ ಎನ್ನುವುದಕ್ಕಿಂತ, ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇಲ್ಲಿ ಅವರಿಬ್ಬರ ಸಣ್ಣಸಣ್ಣ ಎಕ್ಸ್‌ಪ್ರೆಶನ್‌ಗಳನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಇನ್ನು ಅವಿನಾಶ್‌ ಅವರು ಎರಡೂರು ದೃಶ್ಯಗಳಲ್ಲಿ ಬಂದರೂ ಬೇರೆ ತರಹ ಕಾಣುತ್ತಾರೆ. ಇನ್ನು ಒಂದು ದೃಶ್ಯವನ್ನು ಸೆರೆಹಿಡಿಯುವ ರೀತಿಯೇ ಇಲ್ಲಿ ವಿಭಿನ್ನವಾಗಿದೆ. ನೇರವಾಗಿ ಮುಖಕ್ಕೆ ಕ್ಯಾಮೆರಾ ಹಿಡಿಯದೆ, ದೃಶ್ಯವನ್ನು ಸೆರೆಹಿಡಿದಿರುವ ರೀತಿ ಖುಷಿಕೊಡುತ್ತದೆ. ಇಲ್ಲಿ ವೆಂಕಟ್‌ಪ್ರಸಾದ್‌ ಅವರ ಕೆಲಸವನ್ನು ಮರೆಯುವಂತಿಲ್ಲ. ಅದೇ ರೀತಿ ಅರ್ಜುನ್‌ ಜನ್ಯ ಅವರ ಹಿನ್ನೆಲೆ ಸಂಗೀತ ಕೂಡಾ ದೃಶ್ಯಕ್ಕೆ ಪೂರಕವಾಗಿದೆ. 

ಈ ತರಹದ ಪ್ರಯತ್ನ ಕನ್ನಡದಲ್ಲಿ ಆದ ಉದಾಹರಣೆಗಳಿಲ್ಲ. ಏಕೆಂದರೆ, ಮೊದಲ ಭಾಗದಲ್ಲಿ ದಂಡುಪಾಳ್ಯ ಹಂತಕರ ಕೃತ್ಯಗಳ ಬಗ್ಗೆ ಪೊಲೀಸರ ವರ್ಷನ್‌ ಇದ್ದರೆ, ಎರಡನೆಯ ಭಾಗದಲ್ಲಿ ಪೊಲೀಸರ ಕೃತ್ಯಗಳ ಬಗ್ಗೆ ದಂಡುಪಾಳ್ಯದವರ ವರ್ಷನ್‌ ಇದೆ. ಒಂಥರಾ ಒನ್‌ ಟು ಒನ್‌ ಆಗಿದೆ. ಇಡೀ ಪ್ರಕರಣ ಏನು ಎಂಬುದನ್ನು ಮೂರನೆಯ ಭಾಗ ನೋಡಿ ಜನ ತೀರ್ಮಾನಿಸಬೇಕು.

ಚಿತ್ರ: 2
ನಿರ್ದೇಶನ: ಶ್ರೀನಿವಾಸರಾಜು
ನಿರ್ಮಾಣ: ವೆಂಕಟ್‌
ತಾರಾಗಣ: ರವಿಶಂಕರ್‌, ಪೂಜಾ ಗಾಂಧಿ, ಶ್ರುತಿ, ಮಕರಂದ್‌ ದೇಶಪಾಂಡೆ, ರವಿ ಕಾಳೆ, ಮುನಿ, ಕರಿಸುಬ್ಬು ಮುಂತಾದವರು

* ಚೇತನ್‌ ನಾಡಿಗೇರ್‌

Back to Top