CONNECT WITH US  

ನಮ್ಮ ನಡುವಿನ ಕಥೆಯಿದು

ಚಿತ್ರ ವಿಮರ್ಶೆ

ಇಬ್ಬರೂ ಸಮುದ್ರ ದಡದಲ್ಲಿ ಮಲಗಿರುತ್ತಾರೆ. ಮೇಲೆ ಆಕಾಶದಲ್ಲಿ ಅತ್ತಿಂದತ್ತ ಒಂದು ಶೂಟಿಂಗ್‌ ಸ್ಟಾರ್‌ ಹಾದು ಹೋಗುತ್ತದೆ. ಅದನ್ನು ನೋಡುತ್ತಾ ಏನಾದರೂ ಆಸೆಪಟ್ಟರೆ, ಅದು ನಿಜವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಅದೇ ನಂಬಿಕೆಯಿಂದ ಅವನು ತನಗೊಂದು ಹೊಸ ಜೀವನ ಬೇಕೆಂದು ಬೇಡಿಕೊಳ್ಳುತ್ತಾನೆ. ಅವಳು ತನಗೆ ಹಳೆಯ ಜೀವನ ಬೇಕು ಅಂದುಕೊಳ್ಳುತ್ತಾಳೆ. ಅವರಿಬ್ಬರ ಆಸೆ ಈಡೇರುತ್ತದಾ?

"ಕಥೆಯೊಂದು ಶುರುವಾಗಿದೆ' ಮೂರು ಜೋಡಿಗಳ ಜೀವನದಲ್ಲಿನ ಮೂರು ದಿನಗಳ ಕಥೆಯಷ್ಟೇ. ಇಲ್ಲಿ ಮೂರೂ ಜೋಡಿಗಳು ಮೂರು ಬೇರೆ ವಯೋಮಾನದವರು. ಮೂರು ತಲೆಮಾರಿನವರಿಗೂ ಅವರವರದೇ ಕಷ್ಟ-ಸುಖಗಳು, ಗೊಂದಲಗಳು, ಸಮಸ್ಯೆಗಳು, ಹತಾಶೆಗಳು, ಆತಂಕಗಳು ಇತ್ಯಾದಿ ಇತ್ಯಾದಿ ಇರುತ್ತದೆ. ಈ ಘಟದಲ್ಲಿ ಈ ಮೂರೂ ಜೋಡಿಗಳ ಲೈಫ್ನಲ್ಲೊಂದೊಂದು ಹೊಸ ಕಥೆ ಶುರುವಾಗುವ ಮೂಲಕ ಚಿತ್ರ ಮುಗಿಯುತ್ತದೆ.

ಆ ಮೂರೂ ಜೋಡಿಗಳ ಕಥೆ ಹೇಗೆ ಶುರುವಾಗುತ್ತದೆ ಮತ್ತು ಅದಕ್ಕಿಂತ ಮುನ್ನ ಏನಾಗಿರುತ್ತದೆ ಎಂಬುದು ಗೊತ್ತಾಗಬೇಕಿದ್ದರೆ ಈ ಚಿತ್ರ ನೋಡಬೇಕು. "ಕಥೆಯೊಂದು ಶುರುವಾಗಿದೆ' ರೆಗ್ಯುಲರ್‌ ಆದ ಕಮರ್ಷಿಯಲ್‌ ಸಿನಿಮಾ ಅಲ್ಲ. ಇಲ್ಲಿ ಹಾಡು, ಫೈಟು, ಪಂಚಿಂಗ್‌ ಡೈಲಾಗ್‌ಗಳು, ಮಾಸ್‌ ಅಂಶಗಳು ಯಾವುದೂ ಇಲ್ಲ. ಇನ್ನು ಹೆಜ್ಜೆಹೆಜ್ಜೆಗೂ ಟ್ವಿಸ್ಟ್‌ಗಳು, ಗಿಮಿಗಳು ಬೇಕೆಂದರೆ ಸಿಗುವುದಿಲ್ಲ. ಏಕೆಂದರೆ, ಇದು ಸಾಮಾನ್ಯ ಮನುಷ್ಯರ ಸಿನಿಮಾ.

ಅವರ ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವುಗಳನ್ನಿಟ್ಟುಕೊಂಡೇ ಕಥೆ ಮಾಡಿದ್ದಾರೆ ಸನ್ನ ಹೆಗ್ಡೆ. ಇದು ಯಾರ ಜೀವನದಲ್ಲಾದರೂ ಮತ್ತು ಎಲ್ಲರ ಜೀವನದಲ್ಲೂ ನಡೆಯಬಹುದಾದ ಘಟನೆ. ಅದನ್ನಿಟ್ಟುಕೊಂಡೇ ಕಥೆ ಮಾಡಿದ್ದಾರೆ ನಿರ್ದೇಶಕರು. ಚಿತ್ರ ಮೊದಲು ಇಷ್ಟವಾಗುವುದು ಈ ಕಾರಣಕ್ಕೆ. ಇನ್ನು ಚಿತ್ರ ಇಷ್ಟವಾಗಬಹುದಾದ ಎರಡನೆಯ ಕಾರಣ, ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿ. ಮೊದಲೇ ಹೇಳಿದಂತೆ ಇದು ರೆಗ್ಯುಲರ್‌ ಚಿತ್ರವಲ್ಲ.

ಒಂದು ಹಿತವಾದ ತಂಗಾಳಿ ಬೀಸುವ ರಾತ್ರಿಯಂತೆ ಚಿತ್ರ ಸಾಗುತ್ತದೆ. ತಣ್ಣನೆಯ ರಾತ್ರಿಯಲ್ಲಿ ಎಲ್ಲವೂ ನಿಧಾನವಾಗಿ ಸಾಗುವಂತೆ ಚಿತ್ರವೂ ಬಹಳ ನಿಧಾನವಾಗಿ ಸಾಗುತ್ತದೆ. ಕೆಲವೊಮ್ಮೆ ಖುಷಿಪಡಿಸುತ್ತಾ, ಕೆಲವೊಮ್ಮೆ ಅತಿಯಾಗಿ ಭಾವುಕರಾಗಿಸುತ್ತಾ ನೋಡಿಕೊಂಡು ಹೋಗುತ್ತದೆ. ಇಲ್ಲಿ ನಟನೆಯಲ್ಲಾಗಲೀ, ಮಾತುಗಳಲ್ಲಾಗಲೀ, ಸಂದರ್ಭಗಳಲ್ಲಾಗಲೀ ಅಥವಾ ಸಂಗೀತದಲ್ಲಾಗಲೀ ಎಲ್ಲೂ ಅಬ್ಬರವಿಲ್ಲ.

ಯಾವುದೇ ಏರಿಳಿತಗಳಿಲ್ಲದೆ ತಣ್ಣಗೆ ಹರಿಯುವ ನದಿಯಂತೆ ಚಿತ್ರ ಸಾಗುವುದರಿಂದ, ಕೆಲವೊಮ್ಮೆ ಕಿರಿಕಿರಿಯಾಗುವುದೂ ಉಂಟು. ಇನ್ನು ತಣ್ಣನೆಯ ನೀರು ಮೈ ಸೋಕುವ ಆನಂದ ಅನುಭವಿಸಬೇಕಾದರೆ, ಖಂಡಿತಾ ಚಿತ್ರ ನೋಡಬಹುದು. ಇನ್ನು ನಿರ್ದೇಶಕರು ಎಲ್ಲವನ್ನೂ ತಮ್ಮ ಕಥೆ ಸೂಕ್ತವಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೆ ತಕ್ಕಂತಹ ಪಾತ್ರಧಾರಿಗಳು, ವಾತಾವರಣ ಇಲ್ಲಿದೆ.

ಅದರಲ್ಲೂ ದಿಗಂತ್‌ ಅವರನ್ನು ನೀವು ಈ ಹಿಂದೆ ಆ ತರಹ ನೋಡಿರುವುದಕ್ಕೆ ಸಾಧ್ಯವಿಲ್ಲ. ಇದುವರೆಗೂ ಜಾಲಿಬಾಯ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್‌, ಇದರಲ್ಲಿ ಕನಸಿನ ಹಿಂದೆ ಬಿದ್ದು ತೊಳಲಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪಾತ್ರವನ್ನು ಬಹಳ ಚೆನ್ನಾಗಿಯೂ ನಿಭಾಯಿಸಿದ್ದಾರೆ. ಇನ್ನು ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಪೂಜಾ ಗಮನಸೆಳೆಯುತ್ತಾರೆ.

ಮಿಕ್ಕಂತೆ ಅಶ್ವಿ‌ನ್‌ ರಾವ್‌, ಶ್ರೇಯ, ಆಂಚನ್‌, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್‌, ರಘು ರಾಮನಕೊಪ್ಪ ಎಲ್ಲರೂ ಚೆನ್ನಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ಶ್ರೀರಾಜ್‌ ರವಿಚಂದ್ರನ್‌ ಛಾಯಾಗ್ರಹಣ, ಸಚಿನ್‌ ವಾರಿಯರ್‌ ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಅಭಿಜಿತ್‌ ಮಹೇಶ್‌ ಮಾತುಗಳು ಎಲ್ಲವೂ ಪೂರಕವಾಗಿದೆ. ಎಲ್ಲವನ್ನೂ ಹೊಸಬರು ನಿರ್ವಹಿಸಿದ್ದು, ಒಂದೇ ಚಿತ್ರದಲ್ಲಿ ಹಲವು ಹೊಸ ಪ್ರತಿಭೆಗಳು ಗಮನಸೆಳೆಯುವುದು ವಿಶೇಷ.

ಚಿತ್ರ: ಕಥೆಯೊಂದು ಶುರುವಾಗಿದೆ
ನಿರ್ದೇಶನ: ಸನ್ನ ಹೆಗ್ಡೆ
ನಿರ್ಮಾಣ: ರಕ್ಷಿತ್‌ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನಯ್ಯ, ಜಿ.ಎಸ್‌. ಗುಪ್ತ ಮತ್ತು ವಿನೋದ್‌ ದಿವಾಕರ್‌
ತಾರಾಗಣ: ದಿಗಂತ್‌, ಪೂಜಾ, ಅಶ್ವಿ‌ನ್‌ ರಾವ್‌, ಶ್ರೇಯ, ಆಂಚನ್‌, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌


Trending videos

Back to Top