ದೊಡ್ಡೋರು ನೋಡಬಹುದಾದ ಮಕ್ಕಳ ಸಿನಿಮಾ | Udayavani - ಉದಯವಾಣಿ
   CONNECT WITH US  
echo "sudina logo";

ದೊಡ್ಡೋರು ನೋಡಬಹುದಾದ ಮಕ್ಕಳ ಸಿನಿಮಾ

ಚಿತ್ರ ವಿಮರ್ಶೆ

ಸಾಮಾನ್ಯವಾಗಿ ಮಕ್ಕಳ ಸಿನಿಮಾವೆಂದರೆ ಮಕ್ಕಳಿಂದ ದೊಡ್ಡ ದೊಡ್ಡ ಸಂದೇಶ ಹೇಳಿಸೋದು ಎಂದೇ ಹಲವರು ನಂಬಿದ್ದಾರೆ. ಅದೇ ಕಾರಣದಿಂದ ಒಂದಷ್ಟು ಮಕ್ಕಳು ಸಿನಿಮಾಗಳು ಬಡತನ, ಕುಡುಕ ತಂದೆ, ಮಗುವಿನ ಆಸೆ, ಕೊನೆಗೊಂದು ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಆದರೆ, "ರಾಮರಾಜ್ಯ' ಚಿತ್ರತಂಡ ಮಾತ್ರ ಕೊಂಚ ಭಿನ್ನವಾಗಿ ಯೋಚಿಸಿದೆ. ಅದೇ ಕಾರಣದಿಂದ ಮಕ್ಕಳ ಸಿನಿಮಾದ "ಸಿದ್ಧಸೂತ್ರ'ಗಳನ್ನು ಬಿಟ್ಟು, ಹೊಸದನ್ನು ಕಟ್ಟಿಕೊಡಲು ಪ್ರಯತ್ನಿಸಿದೆ.

ಮಕ್ಕಳು ಒಗ್ಗಟ್ಟಾದಾಗ ಏನಾಗಬಹುದು, ಸ್ನೇಹಿತನಿಗೆ ಜೊತೆಯಾಗಿ ನಿಂತು ಹೇಗೆ ಸಹಾಯ ಮಾಡಬಹುದೆಂಬ ಅಂಶದೊಂದಿಗೆ ತೆರೆದುಕೊಳ್ಳುವ ಸಿನಿಮಾ, ಮುಂದೆ ಹಲವು ತಿರುವುಗಳೊಂದಿಗೆ ಸಾಗುತ್ತದೆ. ನಾಲ್ವರು ಸ್ನೇಹಿತರಿಂದ ತೆರೆದುಕೊಳ್ಳುವ ಕಥೆ ಮುಂದೆ ಮಕ್ಕಳ ಕನಸು, ದೊಡ್ಡವರ ದುರಹಂಕಾರ, ಮಕ್ಕಳ ಪ್ರತಿಭೆಯೊಂದಿಗೆ ಸಾಗುತ್ತದೆ. ಇಲ್ಲಿ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ಮುಖ್ಯ ಆಶಯವನ್ನಾಗಿಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ.

ಏನೇ ಕಷ್ಟಬಂದರೂ ಸುಳ್ಳು ಹೇಳಬಾರದು, ಎಲ್ಲರೂ ಒಂದಾಗಿ ಬದುಕಬೇಕೆಂಬ ಕಾನ್ಸೆಪ್ಟ್ನಡಿ "ರಾಮರಾಜ್ಯ' ಸಾಗುತ್ತದೆ. ಕೆಲವೇ ಕೆಲವು ಲೊಕೇಶನ್‌ಗಳಿಗೆ ಸೀಮಿತವಾಗುವ ಮಕ್ಕಳ ಸಿನಿಮಾಗಳ ನಡುವೆ "ರಾಮರಾಜ್ಯ' ಮಾತ್ರ ಅದರಿಂದ ಹೊರತಾಗಿದೆ. ಇಲ್ಲಿ ಒಂದಷ್ಟು ಲೊಕೇಶನ್‌ಗಳನ್ನು ಬಳಸಲಾಗಿದೆ, ಜೊತೆಗೆ ಮಜವಾದ ಹಾಡು ಕೂಡಾ ಈ ಚಿತ್ರದಲ್ಲಿದೆ. ಚಿತ್ರದ ಮೊದಲರ್ಧ ಮಕ್ಕಳ ಸ್ನೇಹ, ಶಾಲಾ ದಿನಗಳು, ಅವರ ಮನೆ ಪುರಾಣದ ಮೂಲಕ ಸಾಗಿದರೆ, ದ್ವಿತೀಯಾರ್ಧ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ.

ಇಡೀ ಸಿನಿಮಾದ ಹೈಲೈಟ್‌ ಕೂಡಾ ದ್ವಿತೀಯಾರ್ಧ ಎಂದರೆ ತಪ್ಪಿಲ್ಲ. ಆ್ಯಕ್ಸಿಡೆಂಟ್‌ ಸನ್ನಿವೇಶವೊಂದರ ಮೂಲಕ ಕಥೆ ಹೆಚ್ಚು ಸೀರಿಯಸ್‌ ಆಗುತ್ತಾ ಹೋಗುತ್ತದೆ. ಮುಂದೆ ಇಡೀ ಸಿನಿಮಾ ನಡೆಯೋದು ಕೋರ್ಟ್‌ನಲ್ಲಿ. ಕೇಸ್‌ ಗೆಲ್ಲಬೇಕೆಂಬ ಜಿದ್ದಿಗೆ ಬಿದ್ದ ಮಕ್ಕಳು ಮಾಡಿಕೊಳ್ಳುವ ತಯಾರಿ, ಸಾಕ್ಷಿಯೊಂದನ್ನು ಸಿದ್ಧಪಡಿಸುವ ರೀತಿ, ಆ ಸಾಕ್ಷಿದಾರನಿಗಿರುವ ಸವಾಲುಗಳು ಸಿನಿಮಾದ ಪ್ರಮುಖ ಅಂಶ. ಈ ಅಂಶಗಳನ್ನು ನಿರ್ದೇಶಕರು ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ.

ದೊಡ್ಡವರು ಮತ್ತು ಮಕ್ಕಳ ನಡುವಿನ ಹೋರಾಟ, ಮಕ್ಕಳ ನಿಯತ್ತು, ಸ್ನೇಹಿತನಿಗಾಗಿ ಮರುಗುವ ಪುಟ್ಟ ಹೃದಯ, ಆ ಕಡೆ ಬಡ ತಾಯಿ ... ಈ ಅಂಶಗಳನ್ನು ತೋರಿಸುತ್ತಾ ಹೋಗುವ ನಿರ್ದೇಶಕರು, ತಾಯಿ-ಮಗನ ಸನ್ನಿವೇಶಗಳ ಮೂಲಕ ಸಿನಿಮಾಕ್ಕೊಂದು ಸೆಂಟಿಮೆಂಟ್‌ ಟಚ್‌ ಕೊಟ್ಟಿದ್ದಾರೆ. ಮಕ್ಕಳ ಬಾಯಿಮುಚ್ಚಿಸಲು ಮುಂದಾಗುವ, ಸುಳ್ಳು ಹೇಳುವಂತೆ ಪ್ರೇರೇಪಿಸುವ ದೊಡ್ಡವರು ಒಂದು ಕಡೆಯಾದರೆ ಅದಕ್ಕೆ ವಿರುದ್ಧವಾಗಿ ನಡೆಯುವ ಮಕ್ಕಳು ಇನ್ನೊಂದು ಕಡೆ. ಅದೇ ಕಾರಣದಿಂದ ಇದು ಮಕ್ಕಳ ಹಾಗೂ ದೊಡ್ಡವರ ನಡುವಿನ ಸಂಘರ್ಷದ ಕಥೆಯೇ ಎಂಬ ಭಾವನೆ ಕೂಡಾ ಬರುತ್ತದೆ.

ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ "ರಾಮರಾಜ್ಯ' ಚಿತ್ರ ಒಂದು ಪ್ರಯತ್ನವಾಗಿ ಇಷ್ಟವಾಗುತ್ತದೆ. ಹಲವು ಸೂಕ್ಷ್ಮ ಅಂಶಗಳನ್ನು ಹೇಳುತ್ತಲೇ ಸಾಗುವ ಈ ಸಿನಿಮಾವನ್ನು ಮಕ್ಕಳ ಜೊತೆ ದೊಡ್ಡವರೂ ನೋಡಬಹುದು. ಚಿತ್ರದಲ್ಲಿ ನಟಿಸಿರುವ  ಏಕಾಂತ್‌, ಹೇಮಂತ್‌, ಕಾರ್ತಿಕ್‌ ಹಾಗೂ ಶೋಯೆಭ್‌ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಅಶ್ವಿ‌ನಿ, ಯತಿರಾಜ್‌, ನಾಗೇಂದ್ರಪ್ರಸಾದ್‌ ಪಾತ್ರಗಳು ಇಷ್ಟವಾಗುತ್ತವೆ. ಚಿತ್ರದ "ಓದು ಓದು' ಹಾಡು ಚೆನ್ನಾಗಿ ಮೂಡಿಬಂದಿದೆ.

ಚಿತ್ರ: ರಾಮರಾಜ್ಯ
ನಿರ್ಮಾಣ: ಆರ್‌.ಶಂಕರ್‌ ಗೌಡ 
ನಿರ್ದೇಶನ: ನೀಲ್‌ ಕೆಂಗಾಪುರ
ತಾರಾಗಣ: ಏಕಾಂತ್‌, ಹೇಮಂತ್‌, ಕಾರ್ತಿಕ್‌, ಶೋಯೆಭ್‌, ಅಶ್ವಿ‌ನಿ, ಯತಿರಾಜ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Trending videos

Back to Top