CONNECT WITH US  

ನಿಜಕ್ಕೂ ಇದು ಧೂಳಿಪಟ ಸಿನಿಮಾ

ಚಿತ್ರ ವಿಮರ್ಶೆ

"ಅವನ್ನ ಮುಟ್ಟಿನೋಡು, "ಧೂಳಿಪಟ' ಆಗೋಗ್ತಿಯ ...' ನಾಯಕಿ ಹೀರೋಗೆ ಹೀಗೆ ಬಿಲ್ಡಪ್‌ ಕೊಡುವವರೆಗೂ, ಪ್ರೇಕ್ಷಕ ತಲೆ ಕೆರೆದು ಕುಳಿತಿರುತ್ತಾನೆ. ಇಷ್ಟಕ್ಕೂ ಈ ಕಥೆಗೂ, "ಧೂಳಿಪಟ' ಎಂಬ ಟೈಟಲ್‌ಗ‌ೂ ಏನು ಸಂಬಂಧ ಎಂದು. ಏಕೆಂದರೆ, ನಾಯಕ ಚಿತ್ರದಲ್ಲಿ ಅದಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ನಟನೆಯಲ್ಲಿ, ಆ್ಯಕ್ಷನ್‌ನಲ್ಲಾಗಲೀ ಯಾರನ್ನೂ "ಧೂಳಿಪಟ' ಮಾಡಿರುವುದಿಲ್ಲ. ಹಾಗಾಗಿ ಹೆಸರಿಗೂ, ಚಿತ್ರಕ್ಕೂ ಸಂಬಂಧವೇನು ಎಂಬುದು ಸ್ಪಷ್ಟವಾಗಿರುವುದಿಲ್ಲ.

ಆ ನಂತರ ಒಂದು ಫೈಟ್‌ ಆಗುತ್ತದೆ. ನಾಯಕ ಎಲ್ಲರನ್ನೂ ಹೊಡೆದುರಿಳಿಸುತ್ತಾನೆ. ಅದನ್ನೇ "ಧೂಳಿಪಟ' ಎಂದುಕೊಳ್ಳಲು ಅಡ್ಡಿಯಿಲ್ಲ. ಹಾಗಾದರೆ, ಚಿತ್ರದ ಕಥೆಯೇನು ಎಂಬ ಪ್ರಶ್ನೆ ಬರಬಹುದು. ಅದು ಹೇಳುವುದು ಕಷ್ಟ. ಏಕೆಂದರೆ, ಚಿತ್ರ ಮುಗಿಯುವ 20 ನಿಮಿಷದವರೆಗೂ ಅದು ಗೊತ್ತಾಗುವುದಿಲ್ಲ. ಎಲ್ಲರನ್ನೂ ಯಾಮಾರಿಸಿಕೊಂಡು ಬಾಳುವ ಯುವಕ ಮೊದಲಾರ್ಧ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಪ್ರಯತ್ನಿಸುತ್ತಾನೆ.

ಇಂಟರ್‌ವೆಲ್‌ ಹೊತ್ತಿಗೆ ಅವನನ್ನು ಒಂದಿಷ್ಟು ಜನ ಹೊಡೆದು ನದಿಗೆ ಬಿಸಾಕುತ್ತಾರೆ. ದ್ವಿತೀಯಾರ್ಧದ ಆರಂಭದಲ್ಲಿ ನದಿ ದಡಕ್ಕೆ ಡ್ಯಾನ್ಸ್‌ ಮಾಡಲು ಬರುವ ಇನ್ನೊಬ್ಬ ನಾಯಕಿ ಮತ್ತು ಆಕೆಯ ಸ್ನೇಹಿತರಿಗೆ ಅವನು ಸಿಗುತ್ತಾನೆ. ಕಟ್‌ ಮಾಡಿದರೆ, ಆ ಹುಡುಗಿಗೂ ಪ್ರೀತಿ ಎಂದು ಯಾಮಾರಿಸಿ, 20 ಲಕ್ಷ ಹೊಡೆದುಕೊಂಡು ಅವನು ಓಡಿಹೋಗಿರುವ ಇನ್ನೊಂದು ವಿಷಯ ಬೆಳಕಿಗೆ ಬರುತ್ತದೆ.

ಇಷ್ಟಕ್ಕೂ ಯಾಕೆ ಅವನು ಹೀಗೆಲ್ಲಾ ಮಾಡುತ್ತಾನೆ ಮತ್ತು ಫ‌ಸ್ಟ್‌ ಹಾಫ್ ಹಾಗೂ ಸೆಕೆಂಡ್‌ ಹಾಫ್ ನಾಯಕಿಯರ ಪೈಕಿ ಯಾರು ಅವನ ಬೆಟರ್‌ ಹಾಫ್ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. "ಧೂಳಿಪಟ' ನೋಡಿ, ಮೆಚ್ಚುವುದಕ್ಕೆ ಸಖತ್‌ ತಾಳ್ಮೆ ಬೇಕು. ಏಕೆಂದರೆ, ನಾಯಕನ ಲೆವೆಲ್‌ಗೆ ಸ್ವಲ್ಪ ಜಾಸ್ತಿಯೇ ಆದ ಬಿಲ್ಡಪ್‌ಗ್ಳಿವೆ. ಇನ್ನು ಸುಸ್ತಾಗಿಸುವ ಸನ್ನಿವೇಶಗಳು, ಕೆಟ್ಟ ಕಾಮಿಡಿ, ನಗು ತರಿಸುವ ಹೊಡೆದಾಟಗಳು, ನಾಯಕ ಮತ್ತು ಸ್ನೇಹಿತನ ಮಂಗಾಟಗಳು ... ಹೀಗೆ ತಾಳ್ಮೆ ಕುಗ್ಗಿಸುವುದಕ್ಕೆ ಹಲವು ಕಾರಣಗಳಿವೆ.

ಗಾಳಿಯಲ್ಲಿ ಕಂಟ್ರೋಲ್‌ಗೆ ಸಿಗದ ಗಾಳಿಪಟದಂತೆ ತೇಲುವ ಚಿತ್ರಕಥೆಯೇ, ಪ್ರೇಕ್ಷಕನನ್ನು ಧೂಳಿಪಟ ಮಾಡಿರುತ್ತದೆ. ಆ ಮಟ್ಟಿಗೆ ಚಿತ್ರಕ್ಕೆ, ಹೆಸರು ಹೇಳಿ ಮಾಡಿಸಿದಂತಿದೆ. ನಾಯಕ ರೂಪೇಶ್‌ ಕುಮಾರ್‌ ಅವರು ಶಶಿಕುಮಾರ್‌ ತರಹ ಮಾತಾಡುತ್ತಾರೆ, ಕೆಲವು ಆ್ಯಂಗಲ್‌ಗ‌ಳಲ್ಲಿ ಅವರ ತರಹ ಕಾಣುತ್ತಾರೆ ಎನ್ನುವುದು ಬಿಟ್ಟರೆ, ಅವರ ಬಗ್ಗೆ ಹೆಚ್ಚೇನೂ ಹೇಳುವುದು ಕಷ್ಟ. ಅವರಿಗೆ ಇಬ್ಬರು ನಾಯಕಿಯರಿದ್ದು, ಅದರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ ಎಂಬ ತೀರ್ಪಿಗೆ ಬರುವುದೂ ಕಷ್ಟ.

ಇನ್ನು ಚಿತ್ರದಲ್ಲಿ ಒಂದಿಷ್ಟು ಹಿರಿಯ ಕಲಾವಿದರಿದ್ದಾರೆ ಮತ್ತು ಅವರೆಲ್ಲಾ ಎಂದಿನಂತೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ದೊಡ್ಡ ಸಸ್ಪೆನ್ಸ್‌ ಏನೆಂದರೆ, ನಟ ಯೋಗಿ ಯಾಕೆ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎನ್ನುವುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಪೋಸ್ಟರ್‌ನಲ್ಲಿ ಅವರನ್ನು ನೋಡಿ ಒಳಬಂದರೆ, ಅವರು ಸಿಗುವುದು ಒಂದು ಹಾಡಿನಲ್ಲಿ ಮಾತ್ರ. ಮಿಕ್ಕಂತೆ ಛಾಯಾಗ್ರಹಣ ಮತ್ತು ಸಂಗೀತದ ಬಗ್ಗೆ ಹೆಚ್ಚು ಹೇಳುವುದಕ್ಕೆ ಏನೂ ಇಲ್ಲ.

ಚಿತ್ರ: ಧೂಳಿಪಟ
ನಿರ್ದೇಶನ: ರಶ್ಮಿ ಪಿ ಕಾರ್ಚಿ
ನಿರ್ಮಾಣ: ಗಿರೀಶ್‌ ಜಿ ರಾಜ್‌, ಶಿರಗಣ್ಣನವರ್‌ ಮತ್ತು ನಿಂಗರಾಜ್‌
ತಾರಾಗಣ: ರೂಪೇಶ್‌ ಕುಮಾರ್‌, ಕುರಿ ರಂಗ, ಅರ್ಚನ, ಐಶ್ವರ್ಯ, ಟೆನ್ನಿಸ್‌ ಕೃಷ್ಣ, ಆಂಜನಪ್ಪ, ರಮಾನಂದ್‌ ಮುಂತಾದವರು

* ಚೇತನ್‌ ನಾಡಿಗೇರ್‌


Trending videos

Back to Top