CONNECT WITH US  

ಮಣ್ಣಿನ ಮಡಕೆಯಲ್ಲಿ ಮೃಷ್ಟಾನ್ನ

ನೀವೆಂದಾದರೂ ಉಡುಪಿಗೆ ಬಂದರೆ ಈ ಸಣ್ಣ ಕ್ಯಾಂಟೀನ್‌ಗೆ ಭೇಟಿ ಕೊಡಲು ಪ್ರಯತ್ನಿಸಿ. ಉಡುಪಿ ಸಿಟಿಬಸ್‌ ನಿಲ್ದಾಣ ಸಮೀಪದ  ಶಿರಿಬೀಡು ಶಾಲೆಯ ಬಳಿ ಒಬ್ಬ ಸಾಮಾನ್ಯ ವ್ಯಕ್ತಿ ನಡೆಸುವ ಕ್ಯಾಂಟೀನ್‌ನಲ್ಲಿ ಮಣ್ಣಿನ ಮಡಕೆಯಲ್ಲಿ ತಯಾರಿಸುವ ಊಟವನ್ನು ಸವಿದು ನೋಡಿ. ಕೇವಲ ಇಷ್ಟಕ್ಕೇ ನಿಲ್ಲದೆ ನಿಮ್ಮ ನಿಮ್ಮ ಊರುಗಳಲ್ಲಿ, ಮನೆಗಳಲ್ಲಿ,  ಹೊಟೇಲ್‌, ಕ್ಯಾಂಟೀನ್‌ನಲ್ಲಿಯೂ  ಇದನ್ನು ಜಾರಿಗೊಳಿಸಲು ಸಾಧ್ಯವೇ ನೋಡಿ. ಇಂತಹ ಆಹಾರ ಕ್ರಮದಿಂದ ನಿಮ್ಮ ಆರೋಗ್ಯದಲ್ಲಿ ಏನಾದರೂ ಉತ್ತಮ ಪರಿಣಾಮ ಬೀರುತ್ತದೋ ನೋಡಿ.  ಬೇರೆ ಬೇರೆ ಕ್ಷೇತ್ರಗಳ ವೈದ್ಯತಜ್ಞರು ಇಂತಹ ಊಟವನ್ನು ರೋಗಿಗಳ ಮೇಲೆ ಪ್ರಯೋಗಿಸಿ ಪರಿಣಾಮ ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬಹುದು, ಇದೇನೂ ಅಪಾಯಕಾರಿ ಪ್ರಯೋಗವಲ್ಲದ ಕಾರಣ ಸ್ವತಃ ರೋಗಿಗಳೇ, ಸಾಮಾನ್ಯ ಆರೋಗ್ಯಕಾಯರೂ ಪರೀಕ್ಷೆಗೆ ಒಡ್ಡಿಕೊಳ್ಳಬಹುದು. ಅಸಿಡಿಟಿ ಇಲ್ಲ ಎನ್ನುವ ಅನುಭವ ತತ್‌ಕ್ಷಣವೇ ಬರುತ್ತದೆ.

ಮಧುಮೇಹಕ್ಕೊಂದು ಸವಾಲು!
 ಒಂದು ವರ್ಷ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ಊಟಮಾಡಿದ ಪರಿಣಾಮ ಮಧುಮೇಹದ ಪ್ರಮಾಣ 480 ಅಂಕಗಳಿಂದ 180ಕ್ಕೆ ಇಳಿದುದನ್ನು ಲಕ್ನೋದ ಸೆಂಟ್ರಲ್‌ ಡ್ರಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಸಿಡಿಆರ್‌ಐ) ವಿಜ್ಞಾನಿಗಳು ಸಂಶೋಧನೆ ಮಾಡಿರುವುದನ್ನು ರಾಜೀವ್‌ ದೀಕ್ಷಿತ್‌ ದಾಖಲಿಸಿ ಜನಪ್ರಿಯಗೊಳಿಸಿದ್ದರು. ಇದೇ ಮಾತನ್ನು ಪತಂಜಲಿ ಸಮಿತಿ ರಾಜ್ಯ ಯೋಗ ವಿಸ್ತಾರಕ ಶಿರಸಿಯ ಅಂಡಾರು ದೇವರಾಜ ಪ್ರಭು ತನ್ನ ಯೋಗ ಪ್ರವಾಸದಲ್ಲಿ ಸವಾಲಾಗಿ ಹೇಳುತ್ತಿದ್ದಾರೆ. 

ಒಂದರಲ್ಲಿ ಬಹುಬಗೆ ಅಡುಗೆ
ಈ ಕ್ಯಾಂಟೀನ್‌ನಲ್ಲಿ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಊಟದ ತಾಕತ್ತನ್ನು ಬಣ್ಣಿಸಲು ಅಂಕಣವನ್ನು ಬಳಸಿಕೊಳ್ಳುತ್ತಿದ್ದೇನಷ್ಟೆ. ಅಕ್ಕಿ, ರಾಗಿ, ಅವರೆ, ಹೆಸರು, ಹುರುಳಿ, ಬಟಾಣಿ, ಅಳಸಂಡೆ, ಕಾಬೂಲಿಕಡ್ಲೆ, ಕಪ್ಪು$ಎಳ್ಳು, ತೊಗರಿಬೇಳೆ, ನವಣೆ ಇತ್ಯಾದಿ ದಾನ್ಯಗಳು, ಕೊತ್ತಂಬರಿ, ಜೀರಿಗೆ, ಶುಂಠಿ, ಅರಶಿನ, ಮೆಂತೆಯಂತಹ ಸಾಂಬಾರು ಪದಾರ್ಥಗಳು, ದ್ರಾಕ್ಷಿ, ಗೋಡಂಬಿಯಂತಹ ಒಣಹಣ್ಣು-ಬೀಜಗಳು, ಏಲಕ್ಕಿ, ಚಕ್ಕೆ, ಲವಂಗದಂತಹ ಪರಿಮಳ ದ್ರವ್ಯ, ಮೂರ್‍ನಾಲ್ಕು ಬಗೆ ಸೊಪ್ಪು, ನಾಲ್ಕೈದು ಬಗೆ ತರಕಾರಿಗಳನ್ನು ಏಕಕಾಲದಲ್ಲಿ ಬೇಯಿಸಿ ಮಾಡುವ ಕಿಚಡಿ ಪಲಾವು ಇದು. ಖಾರಕ್ಕೆ ಕಾಳು ಮೆಣಸು ಬಳಸುತ್ತಾರೆ. ಅಕ್ಕಿಗಿಂತ ಸ್ವಲ್ಪಹೆಚ್ಚೇ ತರಕಾರಿ, ಸೊಪ್ಪುಗಳ ಪ್ರಮಾಣವಿರುತ್ತದೆ. ತುಪ್ಪ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ಚಟ್ನಿ ಹೀಗೆ ಅವರವರ ನಾಲಗೆಗೆ ರುಚಿವರ್ಧಕವಾಗಿ ಬಳಸಬಹುದು. 

ಪುಂಖಾನುಪುಂಖ ಪ್ರಶ್ನೆಗಳು
ಇಷ್ಟು ಹೇಳಿದ್ದೇ ತಡ "ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು' ಎಂಬಂತೆ ಇಷ್ಟೆಲ್ಲಾ ಒಟ್ಟೊಟ್ಟಿಗೆ ಹೇಗೆ ಬೇಯಲು ಸಾಧ್ಯ? ಮಡಕೆ ಒಡೆಯುವುದಿಲ್ಲವೆ? ಮಡಕೆಗೆ ಗ್ಯಾಸ್‌ ಅನಿಲ ಸಾಧ್ಯವೆ? ರುಚಿ ಇರುತ್ತದೋ ಎಂಬ ಹಲವು ಪ್ರಶ್ನೆಗಳು ನಿಮ್ಮನ್ನು ದುತ್ತನೆ ಎದುರಿಸುವುದು ಖಾತ್ರಿ. ಏಕೆಂದರೆ ನಾವು ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದರೂ/ಗೊತ್ತಾದರೂ, ಆಧುನಿಕ ರೀತಿಯ ಆಹಾರಕ್ರಮದಿಂದ ಅನಾರೋಗ್ಯಪೀಡಿತರಾದರೂ ನಮ್ಮ "ಅಹಂ' ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತೊಗರಿಬೇಳೆ, ಅವರೆ, ಹೆಸರು, ಹುರುಳಿಯಂತಹ ಹೆಚ್ಚು ಬೇಯಬೇಕಾದ ಧಾನ್ಯಗಳನ್ನು ನಾಲ್ಕು ಗಂಟೆ ಮುಂಚೆ ನೀರಿನಲ್ಲಿ ನೆನೆ ಹಾಕಿ ಅಕ್ಕಿಯ ಜೊತೆ ಬೇಯಿಸುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಸೊಪ್ಪು, ತರಕಾರಿಗಳನ್ನು ಹಾಕಿದರೆ ಸಾಕು. ಬೆಳ್ತಿಗೆ ಅಕ್ಕಿಯಾದರೆ ಕೇವಲ ಅರ್ಧ ಗಂಟೆ ಸಾಕು. ಸಾವಯವ ಅಕ್ಕಿ, ಸಾವಯವ ಸೊಪ್ಪು, ತರಕಾರಿಯಾದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಈಗ ಜನಪ್ರಿಯಗೊಳ್ಳುತ್ತಿರುವ ಸಿರಿಧಾನ್ಯಗಳನ್ನೂ ಬಳಸಬಹುದು. ಹಿಂದಿನ ರಾತ್ರಿ ತಾಮ್ರದ ಪಾತ್ರೆಯಲ್ಲಿ ಹಾಕಿದ ನೀರನ್ನು ಅಡುಗೆಗೆ ಬಳಸಿದರೆ ಅದರ ಲಾಭವೂ ಬರುತ್ತದೆ. ಇಂತಹ ಸಣ್ಣ ಸಣ್ಣ ಪ್ರಯೋಗಗಳನ್ನು ಧಾರಾಳ ಮಾಡಬಹುದು. ಮನೆ ಸುತ್ತಮುತ್ತ ಬೆಳೆಯುವ ಔಷಧೀಯ ಗಿಡಗಳನ್ನು ಗುರುತಿಸಿ ಅದನ್ನು ಬಳಸಿ ಅದರ ಗುಣವನ್ನು ಇನ್ನಷ್ಟು ಎತ್ತರಿಸಬಹುದು. ಹಿಂದೆ ಪದಾರ್ಥಗಳನ್ನು ತಯಾರಿಸುವಾಗ ತೆಂಗಿನ ಗೆರೆಟೆಗಳನ್ನು ಬಳಸುತ್ತಿದ್ದರು. ಇದರಲ್ಲಿಯೂ ಉತ್ತಮ ಪೌಷ್ಟಿಕಾಂಶಗಳಿವೆ. ಇದನ್ನೂ ಪ್ರಯೋಗಕ್ಕೆ ಒಡ್ಡಬಹುದು. ಒಟ್ಟಾರೆ ಉತ್ತಮ ಅಂಶಗಳನ್ನು ಬೇಯಿಸಿ ಅದು ದೇಹವನ್ನು ಸೇರುವಂತೆ ಮಾಡಬೇಕು. 

ಶೇ.100 ಪೌಷ್ಟಿಕಾಂಶ ಲಾಭ
 ಕೆಲವರ ಮನೆಗಳಲ್ಲಿ ಹಿಂದೆ ಕಲ್ಲು ಮಡಕೆ ಬಳಸುತ್ತಿದ್ದರು. ಈಗ ಕೆಲವೇ ಮನೆಗಳಲ್ಲಿ ಕಲ್ಲು ಮಡಕೆ ವಸ್ತುಸಂಗ್ರಹಾಲಯದ ಸ್ಥಾನವನ್ನು ಅಲಂಕರಿಸಿದೆ. ಏಕೆಂದರೆ ಗ್ರಾಹಕರೂ ಇಲ್ಲ, ಉತ್ಪಾದಕರೂ ಇಲ್ಲವಾದ ಮೇಲೆ ಜೀವಂತಿಕೆಯೂ ಇಲ್ಲ. ಮಣ್ಣಿನ ಮಡಕೆಯಲ್ಲಿ ಮಾಡಿದ ಅಡುಗೆಯಿಂದ ಧಾನ್ಯ, ತರಕಾರಿ, ಮಾಂಸದ ಶೇ.100 ಪೌಷ್ಟಿಕಾಂಶಗಳು ದೇಹಕ್ಕೆ ಲಭಿಸುತ್ತವೆ ಎಂದು ರಾಜೀವ್‌ ದೀಕ್ಷಿತ್‌ ಹೇಳುತ್ತಿದ್ದರು. ಇದರ ಲಾಭ ಜನರಿಗೆ ಸಿಗಬೇಕಾದರೆ ಅನುಷ್ಠಾನ ಆಗಬೇಕು. ಇಲ್ಲವಾದರೆ ಅದೊಂದು ಕೇಳಲು ಕಥೆಯಾಗುತ್ತದೆ ಅಷ್ಟೆ. ಇತ್ತ ಮನುಷ್ಯರಿಗೆ ರೋಗಗಳು, ಈ ರೋಗಗಳನ್ನು ಸೃಷ್ಟಿಸಲು ಸಹಕರಿಸುವ ಅಗ್ಗದ ಮತ್ತು ನಯನಮನೋಹರ ಲೋಹದ ಪಾತ್ರೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಬೇಡಿಕೆ ಇಲ್ಲವಾದ ಕಾರಣ ಅತ್ತ ಮಡಕೆಗಳು ಮಾರುಕಟ್ಟೆಯಿಂದ ಕಣ್ಮರೆಯಾಗುತ್ತವೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಣ್ಣಿನ ಪಾತ್ರೆಗಳಿಗೆ ಯಾರೂ ಪ್ರಚಾರ ಕೊಡುವುದಿಲ್ಲ, ಇನ್ನೊಂದೆಡೆ ಪೌಷ್ಟಿಕಾಂಶಗಳನ್ನು ನಷ್ಟಗೊಳಿಸುವ ಪಾತ್ರೆಗಳು ಪ್ರಚಾರದ ಬಲದಿಂದ ರಂಗುರಂಗಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ದೊಡ್ಡ ಮಟ್ಟದ ಅಡುಗೆ ತಯಾರಿಸುವಾಗ ಮಣ್ಣಿನ ಮಡಕೆ ಅಸಾಧ್ಯವೆನಿಸಿದರೆ ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳು ಎರಡನೆಯ ಪ್ರಾಶಸ್ತ್ಯವಾಗಿ ಬಳಸಬಹುದು. ಉಳಿದೆಲ್ಲವೂ ರೋಗೋತ್ಪಾದಕ, ರೋಗೋತ್ತೇಜಕ, ರೋಗೋದ್ರೇಕದ ಪಾತ್ರೆಗಳು.  

 ಆಗಲೂ ಈಗಲೂ ಸ್ಲೋಪಾಯ್ಸನ್‌ ಪಾತ್ರೆ!
ಬ್ರಿಟೀಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಲಿನಲ್ಲಿ ಊಟ ಕೊಡುತ್ತಿದ್ದ ಅಗ್ಗದ "ಸ್ಲೋ ಪಾಯ್ಸನ್‌' ಲೋಹದ ಪಾತ್ರೆಗಳು ಸ್ವಾತಂತ್ರೊéàತ್ತರದಲ್ಲಿ ಉದ್ಯಮವಾಗಿ, ಅತ್ಯಾಧುನಿಕವಾಗಿ ರೂಪಾಂತರಗೊಂಡು ಬಡವರಿಗೆ ಅಗ್ಗದ ದರದ ನೆಪದಿಂದ, ಹೈಫೈ ಜನರಿಗೆ ಸಮಯ ಉಳಿತಾಯ, ಆಕರ್ಷಣೆ, ಸುಧಾರಣೆ ನೆಪದಿಂದ ಮನೆಮನೆಗಳಲ್ಲಿ ರಾರಾಜಿಸುತ್ತಿವೆ. ಆರ್ಥಿಕ, ಸಾಮಾಜಿಕವಾಗಿ ಉತ್ತರ-ದಕ್ಷಿಣ ಧ್ರುವದಂತಿರುವ ಇವೆರಡೂ ವರ್ಗಗಳು ಸಾಗುವುದು ಒಂದೇ ಕಡೆಗೆ, ಅದೇ ಅನಾರೋಗ್ಯದ ಅಂಗಣಕ್ಕೆ. ಆದರೆ ಬಡ ವರ್ಗ ಖರ್ಚನ್ನು ನಿಭಾಯಿಸಲಾಗದೆ ಸಿರಿವಂತ ವರ್ಗದತ್ತ ಕೈಯೊಡ್ಡುತ್ತದೆ. ಹೀಗೆ ಹೇಳಿದಾಗ ಬಹುತೇಕರಿಗೆ ತಿಳಿಯುವುದಿಲ್ಲ, ಕೆಲವರಿಗೆ ಸಿಟ್ಟೂ ಬರುತ್ತದೆ. ಸರಳವಾಗಿ ಹೇಳುವುದಾದರೆ ಯಾವುದೇ ಪದಾರ್ಥದ ಮೂಲದಲ್ಲಿದ್ದ ಅಂದರೆ ಭೂಮಿಯಿಂದಲೇ ಅದಕ್ಕೆ ಬಂದ 18 ಬಗೆಯ ಪೌಷ್ಟಿಕಾಂಶಗಳಲ್ಲಿ ಬಹುತೇಕ ಅಂಶ ದೇಹಕ್ಕೆ ಸೇರಿದರೆ ಪುಷ್ಟಿ ದೊರಕುತ್ತದೆ. ಹಾಗಾದರೆ ಮಾತ್ರ ಆರೋಗ್ಯ ಇರುತ್ತದೆ. ಪೌಷ್ಟಿಕಾಂಶಗಳು ನಷ್ಟಗೊಂಡರೆ ತಿಂದದ್ದು ಹೊಟ್ಟೆಗೆ ತುಂಬಿಸಿದ ತ್ಯಾಜ್ಯವಾಗುತ್ತದೆ. ಪೌಷ್ಟಿಕಾಂಶಗಳು ಕಡಿಮೆಯಾದರೆ ರೋಗಾಣುಗಳು ದಾಳಿ ಮಾಡುತ್ತವೆ. ಆಗಲೇ ಬರುವುದು ರೋಗ. ವಾಹನಗಳಿಗೆ ಕಲಬೆರಕೆ ಇಂಧನ ತುಂಬಿಸಿದರೆ ಆಗುವ ಅನುಭವ ಸೂತ್ರವನ್ನೇ ದೇಹವೆಂಬ ವಾಹನಕ್ಕೂ ಅನ್ವಯಿಸಿದರೆ ಅರ್ಥವಾಗುತ್ತದೆ. 

ಅಪಾಯಕಾರಿ ಪಾತ್ರೆಗಳು
ಆಧುನಿಕ ಪಾತ್ರೆಗಳಲ್ಲಿ ಬೇಯಿಸಿದ ಪದಾರ್ಥಗಳಲ್ಲಿ ನಾಲಗೆಗೆ ರುಚಿ ಇದ್ದರೂ ಪೌಷ್ಟಿಕಾಂಶ ನಷ್ಟವಾಗಿರುತ್ತದೆ. ಕೆಲವು ಅತ್ಯಾಧುನಿಕ ಅಡುಗೆ ತಯಾರಿ ಉಪಕರಣಗಳಲ್ಲಿ ಆಹಾರ ತಯಾರಿಸುವಾಗ ಹತ್ತಿರ ನಿಂತರೂ ಅದರ ರೇಡಿಯೇಶನ್‌ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ತಜ್ಞರೇ ಒಪ್ಪಿಕೊಳ್ಳುತ್ತಾರೆ, ಇನ್ನು ಅದರ ಊಟ ಏನು ಮಾಡಬಹುದು? ಆದರೆ ಪ್ರಚಾರ, ಹಣಬಲದಿಂದಾಗಿ ಜನರಿಗೆ ಈ ಧ್ವನಿ ಕೇಳಿಸುತ್ತಿಲ್ಲ. 

ತಜ್ಞರ ಮೆಚ್ಚುಗೆ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೌಷ್ಟಿಕಾಂಶ ತಜ್ಞೆ ಸುವರ್ಣಾ ಹೆಬ್ಟಾರ್‌, ಮೆಡಿಸಿನ್‌ ವಿಭಾಗದ ವೈದ್ಯ ಡಾ|ರವಿರಾಜ ಆಚಾರ್ಯ, ಮನಃಶಾಸ್ತ್ರಜ್ಞ ಡಾ|ಪಿ.ವಿ.ಭಂಡಾರಿ, ಉಡುಪಿಯ ಆಯುರ್ವೇದ ವೈದ್ಯರಾದ ಡಾ|ತನ್ಮಯ ಗೋಸ್ವಾಮಿ, ಡಾ| ರವಿರಾಜ ಭಂಡಾರಿ, ಡಾ| ಜಯರಾಮ ಭಟ್‌ ಮೊದಲಾದವರು ಭೇಟಿ ನೀಡಿ "ಇದೊಂದು ಶ್ರೇಷ್ಠ ಸಮತೋಲಿತ ಆಹಾರ. ದೇಹಕ್ಕೆ ಬೇಕಾದ ಎಲ್ಲಾ ಅಂಶಗಳೂ ಇದರಲ್ಲಿವೆ' ಎಂದು ಮೆಚ್ಚುಗೆ ಸೂಚಿಸಿ ವೈಜ್ಞಾನಿಕ, ವೈದ್ಯಕೀಯ ಸಲಹೆಯನ್ನೂ ನೀಡಿದ್ದಾರೆ. ಕೆಲವು ಕ್ಯಾಟರರ್‌ಗಳೂ ಸಾರ್ವಜನಿಕ ಊಟಗಳಲ್ಲಿ ಮಡಕೆ ಊಟ ತಯಾರಿಸಬಹುದೆಂದು ಉತ್ಸಾಹ ತೋರಿದ್ದಾರೆ.  

ವಿಷ ಸೇವಿಸಲೂ ಸ್ಪರ್ಧೆ?
ಈಗ ರಾಸಾಯನಿಕ ಸಂಯೋಗದ ನೀರು (ಬಾಟಲಿ ನೀರು, ಸಿಮೆಂಟ್‌ ರಿಂಗ್‌ನ ಬಾವಿ, ಸಿಮೆಂಟ್‌- ಸಿಂತೆಟಿಕ್‌ ಟ್ಯಾಂಕ್‌ ಸಂಪರ್ಕ ಇತ್ಯಾದಿ), ರಾಸಾಯನಿಕ ಸಂಯೋಗದ ಆಹಾರ (ಕಾಯಿಸಿದಾಗ ವಿಷಕಾರಿ ರಾಸಾಯನಿಕ ಅಂಶಗಳನ್ನು ಆಹಾರಕ್ಕೆ ಬಿಡುವ ಪಾತ್ರೆಗಳು, ರಾಸಾಯನಿಕ ಗೊಬ್ಬರದಿಂದ ತಯಾರಿಸಲಾದ ಧಾನ್ಯ-ತರಕಾರಿಗಳು, ಇಂಜಕ್ಷನ್‌ ಕೊಟ್ಟ, ಕೃತಕ ಆಹಾರ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ತಿಂದ/ ಸಂಪರ್ಕದ ಪ್ರಾಣಿಗಳ ಮಾಂಸ, ಹಾಲು, ಮಜ್ಜಿಗೆ, ತುಪ್ಪ, ಮೀನು, ಕೋಳಿ ಮಾಂಸ ಇತ್ಯಾದಿ), ಸಹಜವಾದ ಗಾಳಿ ಬೆಳಕು ಇಲ್ಲದ/ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತೇ ಪರಿಸರ, ಲೋಕಕಲ್ಯಾಣವೂ ಸೇರಿದಂತೆ ವಿವಿಧ ವಿಷಯಗಳನ್ನು ಮಾತನಾಡುವುದು ಮತ್ತು ಕೆಲಸ ಮಾಡುವುದು ಸರ್ವೇಸಾಮಾನ್ಯ. ವಿಚಿತ್ರವೆಂದರೆ ಈ ಎಲ್ಲಾ ನೆಗೆಟಿವ್‌ ಅಭ್ಯಾಸವನ್ನು ಸಾಮಾಜಿಕ ಅಂತಸ್ತಿನ ನಡುವೆ ಬೆಳೆಸಿಕೊಂಡುಬರುತ್ತಿದ್ದೇವೆ. ಅತ್ತ ಉತ್ತಮ ಪೋಷಕಾಂಶ ಸಂಗ್ರಹವೂ ಇಲ್ಲ, ಇತ್ತ ನಕಾರಾತ್ಮಕ ಭಾವನೆಗಳು ಇರುವುದು ಕೆಟ್ಟದ್ದೆಂದೂ ಗೊತ್ತಿಲ್ಲ. ಹೀಗಿರುವಾಗ ಮಡಕೆ ಅಡುಗೆ ಪವಾಡ ಮಾಡಲು ಸಾಧ್ಯವೆ? ಈಗ ಅನುಭವಿಸುತ್ತಿರುವ ಪರಿಣಾಮಗಳಿಗೆ 50-100 ವರ್ಷಗಳಲ್ಲಿ ಮಾಡಿಕೊಂಡ ದೊಡ್ಡ ದೊಡ್ಡ ಎಡವಟ್ಟುಗಳ ಇತಿಹಾಸವಿದೆ. ಇಷ್ಟು ವರ್ಷಗಳ ಕೆಟ್ಟ ಇತಿಹಾಸವನ್ನು ಒಂದೆರಡು ದಿನಗಳ ಒಳ್ಳೆಯ ಇತಿಹಾಸದಿಂದ ಬದಲಾಯಿಸುವುದು ಕಷ್ಟ. ಕೆಲವು ತಿಂಗಳಾದರೂ ಬೇಕು, ಮತ್ತೂ ಮುಂದುವರಿಸಬೇಕು.  
 
 ಆಹಾರದ ಕೊರತೆಯೆ? ಪ್ರಜ್ಞೆಯ ಕೊರತೆಯೆ?
ಈಗ ಬಡವರಿಗೂ ತಿನ್ನಲು ಕೊರತೆ ಇಲ್ಲ, ಸಿರಿವಂತರಿಗಂತೂ ಇಲ್ಲವೇ ಇಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಲೆಕ್ಕಕ್ಕಿಂತ ಹೆಚ್ಚಿಗೇ ತಿನ್ನುತ್ತಿದ್ದೇವೆ. ತಿಂದಷ್ಟೂ ಉತ್ತಮವೆಂಬ ಒಂದೇ ಪಾಠ ನಮಗೆ ಗೊತ್ತಿರುವುದು. ಏನನ್ನು ತಿಂದರೆ ಉತ್ತಮ, ಯಾವ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ ಎಂಬ ಪಾಠ ಯಾರೂ ಮಾಡೇ ಇಲ್ಲ. ಆದಷ್ಟು ಶೀಘ್ರ ಅಡುಗೆ ಆಗಬೇಕು, ನಾವೇ ಕಲಿಸಿಕೊಟ್ಟಂತೆ ನಾಲಗೆಗೆ ರುಚಿ  ಆಗಬೇಕು, ಸಮಾಜದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲವೆಂಬ ಕಾಲ್ಪನಿಕ ಅಂತಸ್ತಿಗೆ ಎಳ್ಳಷ್ಟೂ ಚ್ಯುತಿ ಆಗಬಾರದು ಈ ಕೆಲವು ಪಾಠ ಮಾತ್ರ ತಲೆಯಲ್ಲಿ ಅಚ್ಚೊತ್ತಿ ಕುಳಿತಿದೆ. ಇದಕ್ಕಾಗಿ ಅನಾರೋಗ್ಯದ ಹೆಸರಿನಲ್ಲಿ ನಾವು ಬೆಲೆ ತೆರುತ್ತಿರುವುದು ಎಷ್ಟೆಂದು ಲೆಕ್ಕ ಹಾಕಿಲ್ಲ. ತಲೆಗೆ ಎಣ್ಣೆಹಾಕದಿರುವುದು, ಟಿವಿ ಹತ್ತಿರ ಕುಳಿತು ವೀಕ್ಷಿಸುವುದು- ಟಿವಿ ನೋಡುತ್ತ ಊಟ ಮಾಡುವುದು, ತಡವಾಗಿ ಮಲಗಿ ತಡವಾಗಿ ಏಳುವುದು, ರಾತ್ರಿ ಭರ್ತಿ ಊಟ ಮಾಡಿ ತೆಪ್ಪಗೆ ಮಲಗುವುದು, ಬೆಳಗೆದ್ದು ನೀರಿನ ಬದಲು ಇನ್ನೇನೋ ಕುಡಿಯುವುದು, ತಪ್ಪಾದ ಆಹಾರ ಕ್ರಮ- ಜೀವನಕ್ರಮ ಅನುಸರಿಸುವುದೇ ಮೊದಲಾದ ಸಣ್ಣಪುಟ್ಟ ದೋಷಗಳಿಂದ ಸಾವಿರಾರು, ಲಕ್ಷಾಂತರ ಜನರು ರೋಗಗ್ರಸ್ತರಾಗುತ್ತಿದ್ದು ಇದರಿಂದಾಗಿ ಕೆಲವೇ ಕೆಲವು ಮಂದಿ ಸೋಕಾಲ್ಡ್‌ ಜನಸೇವಕರು, ಸಮಾಜಸೇವಕರು, ಪ್ರತಿಷ್ಠಿತರು-ಹೈಫೈ ವ್ಯಕ್ತಿಗಳು- ಪ್ರಶಸ್ತಿ ಪುರಸ್ಕೃತರೂ ಆಗುತ್ತಿದ್ದಾರೆ. 
   
  ಪಾರದರ್ಶಕ ಆರೋಗ್ಯ ವಿಜ್ಞಾನ!
ಆರೋಗ್ಯ ವಿಜ್ಞಾನಕ್ಕೆ ಒಳಗೊಂದು, ಹೊರಗೊಂದು ಗೊತ್ತಿಲ್ಲ. ಅದು ಪಾರದರ್ಶಕವಾಗಿ ನಾವು ಕೊಟ್ಟದ್ದನ್ನು ಸ್ವೀಕರಿಸಿ ಅದರ ಪರಿಣಾಮವನ್ನು ನಮಗೇ ವಾಪಸು ನೀಡುತ್ತದೆ. ಊಟದ ಆರ್ಡರ್‌ ಕೊಡುವಾಗ ಗ್ರಾಹಕರೇ ಎಚ್ಚೆತ್ತು "ನಿಮ್ಮ ಪಾತ್ರೆಗಳೇನು?' ಎಂದು ಮೊದಲು ವಿಚಾರಿಸಬೇಕು. ಸ್ವಲ್ಪ$ ಖರ್ಚು ಹೆಚ್ಚಾದರೂ ಪರವಾಗಿಲ್ಲ ನಮ್ಮ ಆರೋಗ್ಯ ಕಾಪಾಡಿ ಎಂಬ ಗ್ರಾಹಕ ಜಾಗೃತಿ ಮೂಡಬೇಕು. ಆರೋಗ್ಯಕರ ಸಮಾಜವನ್ನು ರೂಪಿಸಲು ಇದಕ್ಕಿಂತ ಸುಲಭದ, ಇಷ್ಟು ಅಗ್ಗದ ಮಾರ್ಗ ಬೇರೆ ಇದೆಯೆ? ಗುಣಮಟ್ಟದ ಮಡಕೆಗಳು ಎಲ್ಲಿ ಸಿಗುತ್ತವೆ ಎನ್ನುವ ಕುರಿತು ಪುತ್ತೂರಿನ ಜನಾರ್ದನ್‌ (ದೂ: 9449318792), ಅಡುಗೆ ತಯಾರಿ ಕುರಿತು ಶಿರಿಬೀಡು ಕ್ಯಾಂಟೀನ್‌ನ ನಾರಾಯಣ್‌ (9008865702) ಅವರನ್ನು ಸಂಪರ್ಕಿಸಬಹುದು. 

 ಪಳ್ಳತ್ತಡ್ಕ ಮಾದರಿ
ನನ್ನ ತಂದೆ ಡಾ|ಪಳ್ಳತ್ತಡ್ಕ ಕೇಶವ ಭಟ್ಟರು ದಕ್ಷಿಣ ಅಮೆರಿಕದ ವೆನಿಜುವೆಲ್ಲಾದಲ್ಲಿ ಇಂಥದ್ದೇ ಅಡುಗೆ ತಯಾರಿಸಿ ಅಶ್ವತ್ಥ ಮರವೊಂದರ ಕೆಳಗೆ ರೋಗಿಗಳಿಗೆ ನೀಡುತ್ತಿದ್ದರು. ಕೆಲವು ದಿನಗಳ ಬಳಿಕ ರೋಗಿಗಳಲ್ಲಿ ಉತ್ತಮ ಫ‌ಲಿತಾಂಶ ಕಂಡುಬಂದದ್ದು ಗೊತ್ತಿದೆ. ಈಗ ಶಿರಿಬೀಡು ಕ್ಯಾಂಟೀನ್‌ ಊಟ ಮಾಡಿದಾಗ ನನಗೆ ತಂದೆಯೇ ಊಟ ಬಡಿಸಿದಂತಾಯಿತು. ಅವರು ವಿದೇಶೀಯರಿಗೆ ಬಡಿಸುತ್ತಿದ್ದರು, ಈಗ ಸ್ಥಳೀಯರಿಗೆ ಬಡಿಸಲಾಗುತ್ತಿದೆ. 
- ಪವನ ಆಚಾರ್ಯ (ಹೆಸರಾಂತ ಸಸ್ಯವಿಜ್ಞಾನಿ ದಿ|ಡಾ|ಪಳ್ಳತ್ತಡ್ಕ ಕೇಶವ ಭಟ್ಟರು ಬಹುಕಾಲ ವೆನಿಜುವೆಲಾ, ಮಣಿಪಾಲ, ಉಡುಪಿಯಲ್ಲಿದ್ದು ನಾನಾ ರಾಷ್ಟ್ರಗಳಿಗೆ ಪ್ರವಾಸ ಮಾಡಿ ಸಾವಯವ ಕೃಷಿ, ಸಾವಯವ ಅಡುಗೆಯನ್ನು ಸ್ವತಃ ಅನುಭವಿಸಿ ಜನಜಾಗೃತಿ ಮಾಡಿದ್ದರು)

ಸಂಶೋಧನೆಗೆ ವಿಪುಲ ಅವಕಾಶ
ನಾನು ಒಂದು ದಿನ ಸಂಜೆ ಇದೇ ಊಟವನ್ನು ತೆಗೆದುಕೊಂಡು ಹೋಗಿದ್ದೆ. ಊಟ ಜಾಸ್ತಿಯಾಗಿತ್ತು. ಸ್ವಲ್ಪ$ ಊಟವನ್ನು ಇಟ್ಟೆವು. ಚಿಕಿತ್ಸಕ ದೃಷ್ಟಿಯಿಂದ ಬೆಳಗ್ಗೆ ನೋಡಿದರೆ ಅದು ಹಾಳಾಗಿರಲಿಲ್ಲ. ಹಿಂದಿನ ದಿನ ಮಧ್ಯಾಹ್ನ 11 ಗಂಟೆ ಸುಮಾರಿಗೆ ತಯಾರಾದ ಆಹಾರ ಫ್ರಿಡ್ಜ್ನಲ್ಲಿ ಇಡದೆ ಮರುದಿನ ಬೆಳಗ್ಗೆವರೆಗೂ ಹಾಳಾಗದೆ ಇರಬೇಕಾದರೆ ಅದರ ಶಕ್ತಿ ಏನಿರಬಹುದು? ಆಹಾರ ಹಾಳಾಗದೆ ಇರಲು ಫ್ರಿಡ್ಜ್ನಲ್ಲಿರಿಸಿ ಅದರ ಅಡ್ಡ ಪರಿಣಾಮವನ್ನು ಅನುಭವಿಸುವ ನಾವು ಮಡಕೆ ಅಡುಗೆ ಎಷ್ಟು ಹೊತ್ತು ಹಾಳಾಗದೆ ಉಳಿಯುತ್ತದೆ? ಯಾವ ವೈಜ್ಞಾನಿಕ ಅಂಶ ಇಲ್ಲಿ ಪಾತ್ರ ವಹಿಸುತ್ತದೆ ಎಂಬ ಬಗ್ಗೆ ಸಂಶೋಧನೆ ಮಾಡಬಹುದು. ಆದರೆ ನಮ್ಮ ದುರಂತವೆಂದರೆ ಸಂಶೋಧನೆಗಳು ಸರಕಾರ ಅಥವಾ ಖಾಸಗಿ ಅನುದಾನ ನಿರ್ಧಾರಿತ ಮತ್ತು ಒತ್ತಡ (ಹೈಪ್‌ ಕ್ರಿಯೇಶನ್‌) ಆಧಾರಿತ. ಹಣಕಾಸು ನೆರವು ಪಡೆಯಲು ಲಾಬಿಯೂ ಅಗತ್ಯ. ಅನುದಾನವಿಲ್ಲದೆ ಸಂಶೋಧನೆಗಳು ಹರಸಾಹಸದ ಕೆಲಸ. ಸಂಶೋಧನೆಗಳಾದರೂ ವೈಜ್ಞಾನಿಕ ಪ್ರಕಟನೆಗಳು ಇನ್ನೂ ಕಷ್ಟ. ನಮ್ಮ ಆಹಾರ ದೋಷದಿಂದ ರೋಗ ಬರುತ್ತವೆ ಎಂದು ಗೊತ್ತಿದ್ದರೂ ನಾವೇ ಕಲ್ಪಿ$ಸಿಕೊಂಡ ಅಂತಸ್ತನ್ನು ಬಿಡದ ಸ್ಥಿತಿಯಲ್ಲಿದ್ದೇವೆ. 
- ಪ್ರಭಾತ್‌ ಕಲ್ಕೂರ ಬ್ರಹ್ಮಾವರ

ಕೆಳಗಿಳಿದ ಅಟ್ಟಕ್ಕೇರಿದ್ದ ಪಾತ್ರೆಗಳು!
ನಮ್ಮ ಮನೆಯಲ್ಲಿ ಹಳೆಯ ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳು ಅಟ್ಟಕ್ಕೆ ಸೇರಿದ್ದವು. ಇವುಗಳ ಮಹತ್ವ ತಿಳಿದು ಮತ್ತೆ ಬಳಕೆ ಆರಂಭವಾಗಿದೆ. ಧಾನ್ಯಗಳ ಪೋಷಕಾಂಶಗಳು ಗರಿಷ್ಠವಾಗಿ ದೇಹಕ್ಕೆ ಸಿಗುವುದು ಮತ್ತು ಆಹಾರ ಸಹಜವಾಗಿ ಕೆಡದಂತೆ ದೀರ್ಘ‌ಕಾಲ ಇರುವುದು ಇದಕ್ಕೆ ಕಾರಣ. ಹಿಂದೆ ನಮ್ಮಲ್ಲಿಯೂ ಮಡಕೆಯಿಂದ ಅಡುಗೆ ತಯಾರಿಸುತ್ತಿದ್ದರು. ಈಗ ಮತ್ತೆ ಮಡಕೆಯನ್ನು ಚಾಲ್ತಿಗೆ ತರಲಾಗಿದೆ. ನಾವು ಬುದ್ಧಿ ಇಲ್ಲದೆ ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳನ್ನು ಅಡ್ಡಾದಿಡ್ಡಿ ಬೆಲೆಗೆ ಮಾರಿದ ಬಗ್ಗೆ ವಿಷಾದವೆನಿಸುತ್ತದೆ. 
- ವಿದ್ಯಾಧರಿ, ಗೃಹಿಣಿ, ಉಚ್ಚಿಲ, ಉಡುಪಿ ತಾಲೂಕು

*ಮಟಪಾಡಿ ಕುಮಾರಸ್ವಾಮಿ


Trending videos

Back to Top