CONNECT WITH US  

ನೀರೇ ಜೀವನ ಸಾಕ್ಷಾತ್ಕಾರ ! 

ಕಳೆದ ಮೂರು ವರ್ಷಗಳಿಂದ ಮಲೆನಾಡಿನ ಸಾಗರ ತಾಲ್ಲೂಕಿನಲ್ಲಿ ಬರ. ಹೊರಗಿನವರಿಗೆ ಸಾಗರ ತಾಲ್ಲೂಕು ಅಂದರೆ  ಅದಕ್ಕೊಂದೇ ಲಕ್ಷಣ, ಕತೆ, ಘಟನೆ.  ಸಾಗರದಲ್ಲಿ ಭಿನ್ನ ಭಿನ್ನ ಮಳೆ ಪ್ರಮಾಣ ಪಡೆಯುವ ಪ್ರದೇಶಗಳಿವೆ ಎಂಬುದನ್ನು ಊಹಿಸಲೂ ಅವರಿಗೆ ಸಾಧ್ಯವಿಲ್ಲ. ಸಾಗರ ಪೇಟೆಗೆ ಬಂದಿಳಿದು ಕೇಳಿದರೆ, ಈ ವರ್ಷ ಜೋಗದ ಸುತ್ತಮುತ್ತ, ತಾಳಗುಪ್ಪ ಕಡೆ ಸುಮಾರಾಗಿ ಮಳೆ ಸುರಿದಿದೆ. ಈ ಕಡೆ ಇಕ್ಕೇರಿ ಸೀಮೆಯಲ್ಲಿಯೇ ಮಳೆ ಕಡಿಮೆ. ಶಿರಸಿ, ಸಿದ್ಧಾಪುರದಲ್ಲಿ ಸುರಿದ ಮಳೆ ಈ ಕಡೆ ಬಂದಿಲ್ಲ. ಶರಾವತಿ ಹಿನ್ನೀರಿನ ತುಮರಿ ಭಾಗದಲ್ಲೂ ಒಳ್ಳೆ ಮಳೆಯೇ ಸುರಿದಿದೆ. ತ್ಯಾಗರ್ತಿ ಕಡೆ ನೋಡಿ ಭತ್ತದ ಬೆಳೆ ತೆಗೆಯುವುದು ಕೂಡ ಕಷ್ಟ ಎಂಬ ತರಹದ ಸಂಭಾಷಣೆಗಳನ್ನು ಕೇಳಬೇಕಾಗಬಹುದು.

ಮತ್ತೆ ತಾಳಗುಪ್ಪದ ಕಡೆ ಹೊರಳಿದರೆ ಇಲ್ಲಿಂದ ನಾಲ್ಕೈದು ಕಿ.ಮೀ. ಅಂತರದಲ್ಲಿ ಹೊಸಳ್ಳಿ, ಹಂಸಗಾರು, ಗೋಟಗಾರು ಮೊದಲಾದ ಊರುಗಳ ಒಂದು ಸಮುತ್ಛಯ. ಈಗಲೂ ಸಾಕಷ್ಟು ಕಾಡು ಉಳಿಸಿಕೊಂಡಿರುವ ಪ್ರದೇಶ. ಸಾಗರ ನಗರದಿಂದ 15 ಕಿ.ಮೀ. ದೂರದಲ್ಲಿರುವುದು ಕೂಡ ನಗರೀಕರಣದ ಪ್ರಭಾವದಿಂದ ದೂರ ಉಳಿಯಲು ಸಹಕಾರಿಯಾಗಿದೆ.  ಈ ಭಾಗದಲ್ಲಿನ ಬಹುಪಾಲು ಜನರ ನೀರಿನ ಅಗತ್ಯಗಳನ್ನು ನೈಸರ್ಗಿಕವಾಗಿಯೇ ಮನೆ ಬಾಗಿಲಿಗೆ ಹರಿದುಬರುವ ಅಬ್ಬಿ ನೀರು ಪೂರೈಸುತ್ತದೆ. ವರ್ಷದ 365 ದಿನವೂ! 

ಮನೆಗಳಲ್ಲಿ ಬಾವಿಯೂ ಇಲ್ಲ, ಬೋರ್‌ವೆಲ್ಲೂ!

ಹೊಸಳ್ಳಿಯೊಂದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ 20 ಮನೆಗಳಲ್ಲಿ ಬಾವಿಯೇ ಇಲ್ಲ. ಇನ್ನು ಬೋರ್‌ವೆಲ್‌ ಕೊರೆಸುವುದಂತೂ ದೂರದ ಮಾತು. ಮನೆ, ತೋಟ, ಸ್ನಾನ ಪಾನಕ್ಕೆ ಅಬ್ಬಿ ನೀರೇ ಗತಿ. ಸಾಗರ ತಾಲ್ಲೂಕಿನಲ್ಲಿ ಬರ ಎಂದರೂ, ಹಳ್ಳಿಗಳಲ್ಲಿ ನೀರಿನ ಟ್ಯಾಂಕ್‌ ಹೊಡೆಯಲಾಗುತ್ತಿದೆ ಎಂಬ ಸತ್ಯದ ಹೊರತಾಗಿಯೂ ಹೊಸಳ್ಳಿ ಪ್ರಾಂತ್ಯದ ಭಾಗದಲ್ಲಿ ಅಬ್ಬಿ ನೀರು ಕಳೆದ ನಾಲ್ಕು ವರ್ಷಗಳಿಂದಲೂ ಕೈಕೊಟ್ಟಿಲ್ಲ. ಬಾವಿಯಂತೂ ಇಲ್ಲ. ಒಂದೊಮ್ಮೆ ಅಬ್ಬಿ ಕೈ ಕೊಟ್ಟರೆ ಊರ ಕೆರೆಯಿಂದ ನೀರು ತಂದುಕೊಳ್ಳಬಹುದೇನೋ ಎಂದರೆ ಹೊಸಳ್ಳಿ ಹಂಸಗಾರುಗಳಲ್ಲಿ ಔಷಧಿ ತಯಾರಿಕೆಗೆ ಅರ್ಜೆಂಟಾಗಿ ನೀರು ತರಬೇಕು ಎಂದರೂ ಒಂದು ಕೆರೆ ಇಲ್ಲ!

ಬರ ಬಡಿದ ಸಾಗರಕ್ಕೂ, ಇದೇ ತಾಲೂಕಿನ ಭಾಗವಾದ ಹೊಸಳ್ಳಿ, ಹಂಸಗಾರು, ಗೋಟಗಾರು ಭಾಗಕ್ಕೂ ಅಂತರವಿದೆ. ಸಾಗರ ತಾಲ್ಲೂಕಿನಲ್ಲಿ ಕಳೆದ ವರ್ಷ ಶೇ. 51ಕ್ಕಿಂತ ಹೆಚ್ಚಿನ ಮಳೆ ಕಡಿಮೆ ಬಿದ್ದಿದ್ದರೆ ಶೇ. 25ರಿಂದ 30ರಷ್ಟು ಮಾತ್ರ ಮಳೆ ಇಲ್ಲೂ ಕೈಕೊಟ್ಟಿದೆ. ಆದರೆ ನೀರಿಗೆ ತತ್ವಾರ ಎಂಬ ಪರಿಸ್ಥಿತಿ ಮುಂದಿನ ಎರಡು ವರ್ಷಗಳ ನಂತರ ಬರಬಹುದು ಎಂಬ ಭವಿಷ್ಯ ಕಂಡಿರುವ ಈ ಭಾಗದ ಜನ ಆತಂಕಗೊಂಡು ನೀರು ಹಿಡಿದಿಡಲು ಹೊರಟಿದ್ದಾರೆ. ಒಂದರ್ಥದಲ್ಲಿ ಕೆರೆ ಇಲ್ಲದ ಊರವರು "ಕೆರೆ ನಿರ್ಮಾಣ'ದ ಕನಸು ಸಾಕಾರಗೊಳಿಸುವ ದಾರಿಯಲ್ಲಿದ್ದಾರೆ.

ಮೇ ಮೊದಲ ವಾರ. ಊರಿನ ಇಬ್ಬರು ಎಳೆ ಮಧ್ಯವಯಸ್ಕರಾದ ಜಿತೇಂದ್ರ ಹಿಂಡೂಮನೆ ಹಾಗೂ ಗೋಟಗಾರು ಅರುಣ ಒಂದೆಡೆ ಕುಳಿತಾಗ ನಾಳೆ ಸಂಭವಿಸಬಹುದಾದ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಸರ್ಕಾರ ಮಾಡಬೇಕು, ಜನ ಮಾಡಬೇಕು ಎಂಬುದಕ್ಕಿಂತ ನಾನು, ನಾವು ಏನು ಮಾಡಬಹುದು ಎಂಬ ಅಂಶಕ್ಕೆ ಪ್ರಾಧಾನ್ಯತೆ ಸಿಕ್ಕಿತು. ಮೂರು ಊರುಗಳ ಮನೆಮನೆಗೆ ಇವರೇ ಓಡಾಡಿದರು. ತಮ್ಮ ಮನಸ್ಸಿನ ಮಾತುಗಳನ್ನು ಜನರ ಮುಂದಿಟ್ಟರು. ಅದೃಷ್ಟಕ್ಕೆ ಕಲ್ಸೆ ತಿಮ್ಮಪ್ಪ, ಶೇಡಿ ಲಕ್ಷಿ$¾àನಾರಾಯಣ, ಹಿಂಡೂಮನೆ ತಿಮ್ಮಪ್ಪ, ಗಾಲಿ ವಿಶ್ವೇಶ್ವರ, ತುಂಬಳ್ಳಿ ಶ್ರೀಧರ್‌, ಕಂಚಿಕೈ ಗೋಪಾಲಭಟ್‌, ರಾಂ ಭಟ್‌, ಎನ್‌.ಎಸ್‌.ಭಟ್‌, ಪ್ರಭಾಕರ ಮೊದಲಾದವರು ಜೈ ಎಂದರು. ಕಾರ್ಯಸೂಚಿ ತಯಾರಾಯಿತು.

ಗುಡ್ಡದ ತುದಿಗೂ ಮಾಡಿದರಯ್ಯ ಇಂಗುಗುಂಡಿ!
ಈ ಹಳ್ಳಿಗಳ ಬೆಟ್ಟಗಳಿಗೆ ಅಂಟಿಕೊಂಡಂತೆ ದೊಡ್ಡ ಗುಡ್ಡವಿದೆ. ಅಜಮಾಸು 700 ಅಡಿಗಳಷ್ಟು ಎತ್ತರದವರೆಗೆ ವ್ಯಾಪಿಸಿದೆ. ಗುಡ್ಡದ ಮೇಲೆ ಹತ್ತಿ ನಿಂತರೆ ಸುತ್ತ ಹಸಿರು, ಲಿಂಗನಮಕ್ಕಿ ಅಣೆಕಟ್ಟಿನಲ್ಲಿರುವ ಶರಾವತಿ ಹಿನ್ನೀರಿನ ದೃಶ್ಯ, ವಾಹ್‌ ವಾ! ಗುಡ್ಡದಲ್ಲಿ ಅಷ್ಟು ಗಿಡ, ಪೊದೆಗಳಿವೆ. ಈ ಬೆಟ್ಟ, ಗುಡ್ಡದಲ್ಲಿ ಅನುಕೂಲಕ್ಕೆ ತಕ್ಕಂತೆ ಇಂಗುಗುಂಡಿಗಳನ್ನು ರಚಿಸುವುದು, ಸಾಧ್ಯವಾದಷ್ಟೂ ದೊಡ್ಡ ಗಾತ್ರದ ಗುಂಡಿಗಳನ್ನು ನಿರ್ಮಿಸುವುದು ಮತ್ತು ಈ ಗುಂಡಿಗಳಿಗೆ ಹರಿಯುವ ನೀರು ಹೆಚ್ಚಾದಲ್ಲಿ ಮತ್ತಾವುದೇ ಅನಾಹುತವಾಗದಂತೆ ಕೋಡಿ ಹರಿಯುವಂತೆ ಪ್ಲಾನ್‌ ಸಿದ್ಧವಾಯಿತು.  ಈ ಕೆಲಸಕ್ಕೆ ಊರವರೆಲ್ಲ ಸ್ಪಂದಿಸಿದರೇ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ಆದರೆ ಶೇ. 40ರಷ್ಟು ಜನರಂತೂ ಗಟ್ಟಿ ಬೆಂಬಲ ಘೋಷಿಸಿದರು. ಗರಿಷ್ಠ 18 ಸಾವಿರದಿಂದ ಬಹುಸಂಖ್ಯಾತರ 5 ಸಾವಿರಗಳೆಲ್ಲ ಸೇರಿ ಹತ್ತಿರತ್ತಿರ 2 ಲಕ್ಷ ರೂ. ಊರಿನಲ್ಲಿಯೇ ಒಟ್ಟಾಯಿತು.  ಜೆಸಿಬಿ, ಹಿಟಾಚಿಗಳಿಗೆ ಕರೆ ಹೋಯಿತು.

18ರಿಂದ 20 ದಿನ ಹಿಟಾಚಿ ಕೆಲಸ ಮಾಡಿ ಗುಂಡಿಗಳ ಮೇಲೆ ಗುಂಡಿ ತೆಗೆಯಿತು. ಸುಮಾರು 16 ಬೃಹದಾಕಾರದ ಗುಂಡಿಗಳು. ಎರಡು ಸಾವಿರ ಲೀಟರ್‌ ಸಂಗ್ರಹ ಸಾಮರ್ಥ್ಯದ ಸಣ್ಣ ಗುಂಡಿಗಳನ್ನು ಯಾರೂ ಲೆಕ್ಕ ಇಟ್ಟಿಲ್ಲ ಬಿಡಿ. ಸುಮಾರು 40 ಅಡಿ ಉದ್ದ, 30 ಅಡಿ ಅಗಲ ಹಾಗೂ 15 ಅಡಿ ಆಳದ ಇಂಗುಗುಂಡಿಗಳೂ ಇದರಲ್ಲಿವೆ. ಇವುಗಳು ಎರಡರಿಂದ ಮೂರು ಲಕ್ಷ ಲೀಟರ್‌ನ್ನು ಸ್ವಾಹಾ ಮಾಡುತ್ತವೆ. ಹಾಗೆ ನೋಡಿದರೆ ಭವಿಷ್ಯದಲ್ಲಿ ಕೆರೆ ಇಲ್ಲದ ಊರಿನಲ್ಲಿ ಇವೇ ಕೆರೆಗಳಾಗಬಹುದು. ಈ ವರ್ಷ ಈ ಗುಂಡಿಗಳಿಗೆ ಬಿದ್ದ ನೀರು ಸರ್ರನೆ ಇಂಗಿಹೋಗುತ್ತಿದೆ. ಮುಂದೆ ಕೆರೆಯ ತಳದಲ್ಲಿ ಹೂಳು ಪದರಗಟ್ಟಿದರೆ ನೀರಿನ ಇಂಗುವಿಕೆ ನಿಧಾನವಾಗಿ ಮಂದವಾಗುತ್ತದೆ. ಹೀಗಾದರೆ ಮಳೆಯ ನೀರು ತಿಂಗಳುಗಳ ಕಾಲ ನಿಲ್ಲುತ್ತದೆಯೇ? ಹಿಂದಿನವರು ಕೂಡ ತಗ್ಗಾದ ಪ್ರದೇಶದ ದಂಡೆಗಳನ್ನು ಮಾತ್ರ ಬಲಪಡಿಸಿ 
ಇದೇ ರೀತಿ ಸಣ್ಣ ಸಣ್ಣ ಕೆರೆಗಳ ಸೃಷ್ಟಿಗೆ ಕಾರಣರಾಗುತ್ತಿದ್ದರೇ? ಯಾರಿಗೆ ಗೊತ್ತು.....

ಬೆನ್ನಿಗೆ ಕಟ್ಟಿ ಡೀಸೆಲ್‌ ಒಯ್ದರು!
ಹಿಟಾಚಿ ಗುಡ್ಡದ ತುದಿಯವರೆಗೆ ಹೋಗಿ ಗುಂಡಿಗಳನ್ನು ತೆಗೆದದ್ದೇ ಒಂದು ಸಾಹಸ. ಜಿತೇಂದ್ರ ಹೇಳುತ್ತಿದ್ದರು, ಬಹುಶಃ ಹಿಟಾಚಿಯ ಓನರ್‌ ನೋಡಿದ್ದರೆ ಲಕ್ಷಾಂತರ ರೂ. ಬೆಲೆಯ ಯಂತ್ರವನ್ನು ಬಳಸಿ ಈ ಸಾಹಸ ಮಾಡಲು ಬಿಡುತ್ತಿರಲಿಲ್ಲ. ಹಿಟಾಚಿಯನ್ನೇನೋ ಗುಡ್ಡ ಹತ್ತಿಸಿದರು. ಅದರ ಡೀಸೆಲ್‌ ಖಾಲಿಯಾದಾಗ ತಂದು ಹಾಕುವುದು ಕೂಡ ಬ್ರಹ್ಮಾಂಡ ಸರ್ಕಸ್‌. 

ಊರಿನ ಯುವಕ ಮಹೇಶ್‌ಭಟ್‌ 20 ಲೀಟರ್‌ನ ಡೀಸೆಲ್‌ ಕ್ಯಾನ್‌ಅನ್ನು ಬೆನ್ನಿಗೆ ಕಟ್ಟಿಕೊಂಡು ಚಾರಣಿಗರಾಗಿ ಗುಡ್ಡದ ತುದಿಗೆ ತೆರಳಿದ್ದನ್ನು ಹೇಳುವಾಗಲೇ ಊರವರಿಗೆ ಏದುಸಿರು!

ಮಳೆಗಾಲ ಆರಂಭವಾಯಿತು. ಇದ್ದಕ್ಕಿದ್ದಂತೆ ಜುಲೈ ಎರಡನೇ ವಾರ ಬಿಟ್ಟೂಬಿಡದೆ ಧಾರಾಕಾರ ಮಳೆ. ಸಂಜೆಯಾಗುತ್ತಿದ್ದಂತೆ ಹುಳೇಗಾರಿನ ಕೆಲ ಯುವಕರಿಗೆ ಒಂದು ಅನುಮಾನ. ಕೋಡಿಯಲ್ಲಿ ಕಸ ತುಂಬಿ, ಗುಂಡಿಗಳ ನೀರು ತುಂಬಿ ಒಡೆಯುವ ಪರಿಸ್ಥಿತಿ ನಿರ್ಮಾಣವಾದರೆ? ಹೋಗಿ ನೋಡಿದರೆ ಅಂತಹುದೇ ಅನಾಹುತಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಆಗ ರಾತ್ರೋರಾತ್ರಿ ಊರವರೆಲ್ಲ ಬ್ಯಾಟರಿ ಬೆಳಕಲ್ಲಿ ಗುಡ್ಡದಲ್ಲಿ, ಪಿಕಾಸಿ ಬಳಸಿ ಕೋಡಿಗಳನ್ನು ತೆರೆದು ಬಂದ ಘಟನೆಯನ್ನು ಕಲ್ಸೆ ತಿಮ್ಮಪ್ಪ ಕಣ್ಣ ಮುಂದೆ ಬಿತ್ತುತ್ತಾರೆ.

ಇಂಗುಗುಂಡಿಯ ನಂತರದ ಕಾರ್ಯಕ್ರಮವಾಗಿ ಗಿಡ ನೆಡುವುದು ಯೋಜನೆಯ ಭಾಗವಾಗಿತ್ತು. ಅರಣ್ಯ ಇಲಾಖೆಯ ನರ್ಸರಿಯಿಂದ ಸುಲಭ ಬೆಲೆಗೆ ಹಲಸು, ನೆಲ್ಲಿ, ನೇರಳೆ, ಹೆಬ್ಬೇವು ಮೊದಲಾದ ಜಾತಿಯ 800  ಗಿಡ ತಂದು ಶ್ರಮದಾನದ ಮೂಲಕ ನೆಡಲು ಹೊರಟಾಗ ಜನರ ಸ್ಪಂದನೆ ತುಸು ಚಿಗುರತೊಡಗಿತ್ತು. ಇತ್ತ ಗಿಡ ಚಿಗುರತೊಡಗಿದಾಗ, ಜಾನುವಾರುಗಳು ಬಾಯಿ ಹಾಕಿದಾಗ ಮಾತ್ರ ಹೃದಯ ಬಾಯಿಗೆ ಬಂದ ಅನುಭವ. ಮತ್ತೆ ಹಣ ವೆಚ್ಚ ಮಾಡಿ ಕಲ್ಲು, ಮರದ ಕಂಬ, ಪ್ಲಾಸ್ಟಿಕ್‌ ಬಲೆಯ ಸುಲಭ ವೆಚ್ಚದ ಬೇಲಿ ಮಾಡಿದರು. ಅನುಮಾನವಿಲ್ಲ, ಕೈ ಕಚ್ಚುತ್ತಿದೆ, ಹಸಿರು ಹೆಚ್ಚುತ್ತಿದೆ!

ಹಸಿರಿನ ಆಶಯಕ್ಕೆ ಹಣವೂ ಹರಿದೀತು!
ಗೋಟಗಾರು ಅರುಣ, ಸಮಾಧಾನದ ನಿಟ್ಟುಸಿರು ಬಿಡುತ್ತ ಹೇಳುತ್ತಾರೆ. ಇಂಗುಗುಂಡಿಗಳ ಯಶಸ್ಸಿನ ಬಗ್ಗೆ ಅನುಮಾನವಿಲ್ಲ. ಆದರೆ ಕೆರೆ, ನೀರು, ಕಾಡು ವಿಷಯವಿಟ್ಟುಕೊಂಡು ಈಗ ಬನ್ನಿ ಎಂದರೆ ಅರ್ಧ ಘಂಟೆಯಲ್ಲಿ ಊರಿನಲ್ಲಿ 15-20 ಜನರನ್ನು ಒಟ್ಟುಮಾಡಬಹುದು. ಆವತ್ತು ಶ್ರಮದಾನದ ದಿನ ಗಿಡ ನೆಡಲು 50 ಜನ ಸೇರಿದ್ದೆವು. ನಮ್ಮೂರಿನ ಪಡೆಯಲ್ಲಿ ಶ್ರೀಹರ್ಷ, ಹರೀಶ, ಕೃಷ್ಣ, ಅಟ್ಟೆ ಶ್ರೀಕಾಂತ.... ಬಿಡಿ, ಹೆಸರುಗಳು ಮುಖ್ಯವಲ್ಲ.

ಈಗ ನಮ್ಮ ಜನರಲ್ಲೂ ನಂಬಿಕೆ ಮೂಡಿದೆ. ಈ ರೀತಿ ನಮ್ಮಲ್ಲಿ ಒಗ್ಗಟ್ಟು ಮೂಡಲು ಕೂಡ ಈ ಆಂದೋಲನ ನೆರವಾಗಿದೆ. ನಿಜ, ಸವಾಲುಗಳಷ್ಟೂ ಮುಂದೆಯೇ ಇವೆ. ಈ ಕೆಲಸವನ್ನು ಮುಂದುವರೆಸಬೇಕು. ಗ್ರಾಮದವರೆಲ್ಲರಿಂದ ಸಂಗ್ರಹವಾದ ಎರಡು ಲಕ್ಷ ರೂ. ಖಾಲಿಯಾಗಿದೆ. ಮತ್ತೆ ಊರವರಿಂದ ದೊಡ್ಡ ಪ್ರಮಾಣದ ಹಣ ಸಂಗ್ರಹ ಕಷ್ಟ. ಅರಣ್ಯ ಇಲಾಖೆ ಅನುದಾನದ ಸ್ವರೂಪದಲ್ಲಿ ಲಕ್ಷದ ಮಾತನ್ನಂತೂ ಆಡುತ್ತಿದೆ. ಅದು ಕೈಗೆ ಸಿಕ್ಕರಷ್ಟೇ ವಾಸ್ತವ.

ಹಾಗೆಂದು ನಿರಾಶೆಯ ಮಾತೇ ಇಲ್ಲ. ಸದ್ಯದಲ್ಲಿಯೇ ಊರಿಗೆ ಅಂಟಿಕೊಂಡಿರುವ ಅರಣ್ಯ ಇಲಾಖೆಯ ಅಕೇಶಿಯಾ ಪ್ಲಾಂಟೇಶನ್‌ ಕಟಾವಾಗುತ್ತದೆ. ಬರೋಬ್ಬರಿ 25 ಎಕರೆ ಜಾಗ. ಇಷ್ಟೂ ಪ್ರದೇಶವನ್ನು ಜಾನುವಾರುಗಳಿಂದ ರಕ್ಷಿಸಿ ಕಾಡುಪ್ರಾಣಿ, ಪಕ್ಷಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ನೆಟ್ಟರೆ ಹೇಗೆ ಎಂಬ ಕ್ರಿಯಾಯೋಜನೆ ಹೊಸಳ್ಳಿ ಹಂಸಗಾರಿನ ಯುವಕರು, ಎಳೆ ಮಧ್ಯವಯಸ್ಕರಲ್ಲಿ ಹರಿದಾಡುತ್ತಿದೆ. ಊಹೂn, ಹಣ ಒಂದು ಪ್ರಶ್ನೆಯೇ ಅಲ್ಲ, ಇಂಗುಗುಂಡಿ ಸಫ‌ಲತೆಯ ಹಿನ್ನೆಲೆಯಲ್ಲಿ ನಡೆದ ಬೆಳದಿಂಗಳ ಊಟದ ಸಮಯದಲ್ಲಿ ಒಕ್ಕೊರಲಿನ ಧ್ವನಿ ಕೇಳಿದ್ದು, ಪರಿಸರ ಸಂರಕ್ಷಣೆಯ ಯುದ್ಧಕ್ಕೆ ಹೊರಟರೆ ಎಲ್ಲೋ ಒಂದು ಕಡೆಯಿಂದ ಅದೂ ಹರಿದುಬರುತ್ತದೆ! 

ಕೆರೆ ಹೂಳು ತಾತ್ಕಾಲಿಕ; ಕಾಡು ಶಾಶ್ವತ!
ಕೊನೆ ಪಕ್ಷ ಮೂರು ವರ್ಷದ ಬರ ಮಲೆನಾಡು ಸಾಗರ ಜನರಲ್ಲಿ ಕೆಲವರಿಗಾದರೂ ಕೆರೆ ಹೂಳು ತೆಗೆಯುವ ಉಮೇದಿಯನ್ನು ತಂದಿದೆ. ಸರ್ಕಾರದ ಅನುದಾನ, ಯೋಜನೆಗಳಿಗೆ ಕಾಯದೆ ಗೋಳಿಕೊಪ್ಪ, ಸುಳ್ಮನೆ, ಹೆಗ್ಗೊàಡು ಹೊನ್ನೇಸರ ಮೊದಲಾದೆಡೆ ಗ್ರಾಮಸ್ಥರು ಒಂದುಗೂಡಿ ತಾವೇ ಹಣ ಹೊಂಚಿ ಕೆರೆಗಳ ಹೂಳು ತೆಗೆಸಲು ಮುಂದಾಗಿದ್ದಾರೆ. ಹೆಗ್ಗೊàಡಿನ ದ್ಯಾವಾಸ ಕೆರೆ ಅಚ್ಚುಕಟ್ಟಿನ 31 ಕೆರೆಗಳ ಪುನರುಜ್ಜೀವನಗೊಳಿಸಲು ಒಂದು ವ್ಯವಸ್ಥಿತ ಕಾರ್ಯಯೋಜನೆಯನ್ನು ಜನರಿಂದಲೇ ಚಾಲನೆಗೊಂಡಿದೆ. ಸಾಗರ ಜೀವಜಲ ಕಾರ್ಯಪಡೆ ಎಂಬ ಸಂಘಟನೆ ಸಾರ್ವಜನಿಕ ಧನಸಹಾಯದಿಂದ ಚಿಪಿÛ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಬೃಹತ್‌ ಕೆಲಸಕ್ಕೆ ಕೈ ಹಾಕಿದೆ.

ಸದ್ಯ ಜನ ಕೆರೆಗಳ ಹೂಳು ತೆಗೆದರೆ ಸಾಕು, ಮಳೆ ಮರುಕಳಿಸುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ವಾಸ್ತವವಾಗಿ ಹೂಳು ತೆಗೆಯುವುದು ಮತ್ತು ಇಂಗುಗುಂಡಿಗಳ ರಚನೆ ಹಸಿರು ಯಜ್ಞದೆಡೆಗಿನ ತಾತ್ಕಾಲಿಕ ಹೆಜ್ಜೆಗಳಷ್ಟೇ. ಮಳೆಗೂ ಕಾಡಿಗೂ ಸಂಬಂಧವಿಲ್ಲ ಎಂದೂ ಕೆಲವರು ವಾದಿಸಬಹುದು. ಕೊನೆಪಕ್ಷ ಈ ಹಿಂದಿನಿಂದ ದಟ್ಟ ಕಾಡು, ಸಮೃದ್ಧ ಮಳೆ ಪಡೆದಿದ್ದ ಮಲೆನಾಡಿಗರಂತೂ ಸಂಬಂಧ ಇದೆ ಎಂದು ನಂಬಿದ್ದಾರೆ. ಇದೇ ಕಾರಣದಿಂದಾಗಿಯೇ ಹೊಸಳ್ಳಿ, ಗೋಟಗಾರು, ಹಂಸಗಾರಿನ ಗ್ರಾಮಸ್ಥರು ಕಾಡು ಬೆಳೆಸುವ ನಿಟ್ಟಿನಲ್ಲಿ ಅತೀವ ಆಸಕ್ತಿ ಹೊಂದಿದ್ದು ಅತ್ತ ದೃಢ ಹೆಜ್ಜೆ ಇರಿಸಿದ್ದಾರೆ.

-ಮಾ.ವೆಂ.ಸ.ಪ್ರಸಾದ್‌

ಇಂದು ಹೆಚ್ಚು ಓದಿದ್ದು

Trending videos

Back to Top