CONNECT WITH US  

ಸಮರಿಲ್ಲದ ತ್ರಿವಳಿಗಳು...ಫೆಡರರ್‌, ನಡಾಲ್‌, ಜೊಕೊ

16 ವರ್ಷದಲ್ಲಿ ನಡೆದ 60 ಗ್ರ್ಯಾನ್‌ಸ್ಲ್ಯಾಮ್‌ಗಳಲ್ಲಿ ಈ ಮೂವರಿಗೇ 43 ಕಿರೀಟ

ಇದಕ್ಕೇನೆಂದು ಕರೆಯೋಣ? ವಿಸ್ಮಯವೆನ್ನಬಹುದೇ? ಅದ್ಭುತವೆನ್ನಬಹುದೇ? ಅಚ್ಚರಿಯೆನ್ನಬಹುದೇ? ಕೌತುಕವೆನ್ನಬಹುದೇ? ಹೇಗೆ ಬೇಕಾದರೂ ಕರೆಯಿರಿ ಟೆನಿಸ್‌ ಇತಿಹಾಸದ ಯಾವ ಘಟ್ಟದಲ್ಲೂ ಇಂತಹ ಅದ್ಭುತ ಜರುಗಿರಲಿಲ್ಲ. ಬರೀ ಮೂವರು ಆಟಗಾರರು 16 ವರ್ಷಗಳ ಕಾಲ ಪ್ರಶಸ್ತಿಗಳ ಮೇಲೆ ಬಹುತೇಕ ತಮ್ಮ ಹೆಸರನ್ನಷ್ಟೇ ಬರೆಸಿಕೊಂಡಿದ್ದು ಹಿಂದೆ ಜರುಗಿದ್ದ ಉದಾಹರಣೆಯೇ ಇಲ್ಲ. 

ರೋಜರ್‌ ಫೆಡರರ್‌, ರಫಾಯೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌...2003ರಿಂದ 2018ರ ನಡುವಿನ ಆಸುಪಾಸು 16 ವರ್ಷಗಳ ಅವಧಿಯಲ್ಲಿ ನಡೆದ 60 ಗ್ರ್ಯಾನ್‌ಸ್ಲಾéಮ್‌ಗಳ ಪೈಕಿ 43ನ್ನು ಗೆದ್ದುಕೊಂಡಿದ್ದಾರೆ. ಟೆನಿಸ್‌ ಜಗತ್ತಿನಲ್ಲಿ ಈ ಮೂವರೇ ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿದ್ದಾರೆ. ಈ ಅವಧಿಯಲ್ಲಿ ಈ ಮೂವರು ಅಲ್ಲಲ್ಲಿ ಕೆಲಕಾಲ ಮಸುಕಾದರೂ ಪ್ರಶಸ್ತಿಗಳ ಮೇಲೆ ಇವರಂತೆ ಸ್ವಾಮಿತ್ವವನ್ನು ಸಾಧಿಸಲು ಇನ್ನೊಬ್ಬರಿಗಾಗಲಿಲ್ಲ ಎನ್ನುವುದು ಇವರ ತಾಕತ್ತು.

ಇದೇ ಅವಧಿಯಲ್ಲಿ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ, ಸ್ವಿಜರ್ಲೆಂಡ್‌ನ‌ ಸ್ಟಾನಿಸ್ಲಾಸ್‌ ವಾವ್ರಿಂಕಾ, ಆಸ್ಟ್ರೇಲಿಯಾದ ಲೈಟನ್‌ ಹೆವಿಟ್‌ ಹೀಗೆ ಒಂದಷ್ಟು ಆಟಗಾರರು ಕೆಲವು ಗ್ರ್ಯಾನ್‌ಸ್ಲಾéಮ್‌ಗಳನ್ನು ಗೆದ್ದರು. ಈ ಪೈಕಿ ಮರ್ರೆ ಜೊಕೊ, ಫೆಡ್ಡಿ, ನಡಾಲ್‌ಗೆ ಸವಾಲೊಡ್ಡುತ್ತಾರೆ, ಅವರ ಮಟ್ಟಕ್ಕೆ ಬೆಳೆಯುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಅಂತಹ ಹೊತ್ತಿನಲ್ಲೇ ರೋಜರ್‌ ಫೆಡರರ್‌ ಮತ್ತು ನಡಾಲ್‌ ಮತ್ತೆ ತಮ್ಮ ವೈಭವದ ದಿನಗಳಿಗೆ ಮರಳಿದ್ದಾರೆ. ಮೈಯೆಲ್ಲ ಗಾಯಗೊಂಡು, ಕಸುವು ಕಳೆದುಕೊಂಡು ಇವತ್ತೋ, ನಾಳೆಯೋ ನಿವೃತ್ತಿ ಎಂದು ಅಭಿಮಾನಿಗಳು ಎಣಿಸುತ್ತಿರುವಾಗ ಇವರು ಮತ್ತೆ ದಾಖಲೆಗಳ ಸರಮಾಲೆಯೊಂದಿಗೆ ಪ್ರಶಸ್ತಿ ಗೆಲ್ಲುತ್ತಿದ್ದಾರೆ. ಸದ್ಯದ ಮಟ್ಟಿಗೆ ಗಾಯದ ಕಾರಣ ನೊವಾಕ್‌ ಜೊಕೊವಿಚ್‌ ಕಳೆಗುಂದಿದ್ದಾರೆ. ಅವರು ಮತ್ತೆ ತಮ್ಮ ಸುಂದರ ದಿನಗಳಿಗೆ ಮರಳುತ್ತಾರೋ, ಹಾಗೆಯೇ ಇತಿಹಾಸದ ಪುಟ ಸೇರಿಕೊಳ್ಳುತ್ತಾರೋ ಎನ್ನುವುದಷ್ಟೇ ಈಗಿನ ಕುತೂಹಲ. 

ಫೆಡರರ್‌ ಕಥನ: ರೋಜರ್‌ ಫೆಡರರ್‌ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್‌ ಆಡಿದ್ದು 1998ರಲ್ಲಿ. ಅವರು ಮೊದಲ ಪ್ರಶಸ್ತಿ ಗೆದ್ದಿದ್ದು 2003ರಲ್ಲಿ. ವಿಂಬಲ್ಡನ್‌ ಗೆಲ್ಲುವುದರ ಮೂಲಕ ಅವರ ಅಭಿಯಾನ ಆರಂಭವಾಯಿತು. ಅನಂತರ ನಡೆದಿದ್ದೆಲ್ಲ ಪುರಾಣ ಕಾಲದ ಅಶ್ವಮೇಧ ಸಾಹಸದಷ್ಟೇ ಅಸಾಮಾನ್ಯ. ಅವರನ್ನು ತಡೆಯುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಟ್ಟು 30 ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿರುವ ಅವರು 20 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಸೆಮಿಫೈನಲ್‌ನಲ್ಲಿ ಅವರು ಸೋತಿದ್ದು ಒಂದೆರಡು ಬಾರಿಯಲ್ಲ. ಅವರ ಓಟಕ್ಕೆ ತಡೆ ಬಂದಿದ್ದು 2012ರಿಂದ. ಅವರು ಅಲ್ಲಿ ಒಂದು ವಿಂಬಲ್ಡನ್‌ ಬಿಟ್ಟರೆ ಬೇರೆ ಸ್ಲಾéಮ್‌ಗಳನ್ನು ಗೆಲ್ಲಲಿಲ್ಲ. ಮುಂದಿನ ನಾಲ್ಕುವರ್ಷಗಳ ಕಾಲ ಅವರಿಗೆ ಪ್ರಶಸ್ತಿ ಬರ. ಈ ನಡುವೆ 3 ಬಾರಿ ಫೈನಲ್‌ಗೇರಿ ಸೋತರು. ಅದನ್ನೆಲ್ಲ ನೋಡಿದಾಗ ಫೆಡರರ್‌ ಜಮಾನ ಮುಗಿಯಿತು. ಅವರು ನಿವೃತ್ತಿ ಹೇಳುವುದೇ ಸೂಕ್ತ ಎಂಬ ದಟ್ಟ ಅಭಿಪ್ರಾಯ ಸೃಷ್ಟಿಯಾಯಿತು. ಆಗ ಮತ್ತೆ ಅವರು ಜಾದೂ ಮಾಡಿದರು. 2017, 18ರಲ್ಲಿ ಮೂರು ಗ್ರ್ಯಾನ್‌ಸ್ಲಾéಮ್‌ಗಳನ್ನು ಗೆದ್ದು ವಿಶ್ವ ನಂ.1 ಪಟ್ಟಕ್ಕೆ ಮರಳಿದರು (ಗಾಯದ ಕಾರಣ ಈಗ ಪಟ್ಟದಿಂದ ಕೆಳಗಿಳಿದಿದ್ದಾರೆ). ಈಗ ಗಾಯದ ಕಾರಣ ಕೆಲವೊಮ್ಮೆ ಆಡುವುದು, ಇನ್ನೊಮ್ಮೆ ಆಡದಿರುವುದು ಹೀಗೆಯೇ ಮುಂದುವರಿಯುತ್ತಿದ್ದಾರೆ.

ನಡಾಲ್‌ ಅಬ್ಬರ
 ಗ್ರ್ಯಾನ್‌ಸ್ಲಾéಮ್‌ ಇತಿಹಾಸವನ್ನು ಗಮನಿಸಿದರೆ ರಫಾಯೆಲ್‌ ನಡಾಲ್‌ರಂತಹ ಇನ್ನೊಬ್ಬ ಆಟಗಾರ ಸಿಕ್ಕುವುದಿಲ್ಲ. ಫೆಡರರ್‌ ನಂತರ ಅತಿಹೆಚ್ಚು 17 ಗ್ರ್ಯಾನ್‌ಸ್ಲಾéಮ್‌ ಗೆದ್ದಿರುವುದೇ ಇವರು. ಅಚ್ಚರಿಯೆಂದರೆ 4 ಪ್ರಮುಖ ಗ್ರ್ಯಾನ್‌ಸ್ಲಾéಮ್‌ಗಳ ಪೈಕಿ ಬರೀ ಫ್ರೆಂಚ್‌ ಓಪನ್‌ನಲ್ಲಿ 11 ಬಾರಿ ಗೆದ್ದಿದ್ದಾರೆ. ಉಳಿದೆಲ್ಲ ಸೇರಿ ಇವರ ಸಾಧನೆ 6 ಮಾತ್ರ. ಇದೊಂದು ಸಾರ್ವಕಾಲಿಕ ವಿಶ್ವದಾಖಲೆ. ಪುರುಷರ ಟೆನಿಸ್‌ನಲ್ಲಿ ಯಾವುದೇ ಒಬ್ಬ ಆಟಗಾರ ಒಂದೇ ಗ್ರ್ಯಾನ್‌ಸ್ಲಾéಮನ್ನು ಯಾವುದೇ ಕಾಲಘಟ್ಟದಲ್ಲೂ ಈ ಪ್ರಮಾಣದಲ್ಲಿ ಗೆದ್ದಿರಲಿಲ್ಲ.

ಫೆಡರರ್‌ಗೆ (36) ಹೋಲಿಸಿದರೆ ನಡಾಲ್‌ (32) ಬಹಳ ಕಿರಿಯ. ಫೆಡರರ್‌ 1998ರಲ್ಲೇ ಗ್ರ್ಯಾನ್‌ಸ್ಲಾéಮ್‌ ಪ್ರವೇಶಿಸಿದರೆ ನಡಾಲ್‌ 2003ರಲ್ಲಿ ಪ್ರವೇಶ ಮಾಡಿದರು. ಫ್ರೆಂಚ್‌ ಓಪನ್‌ನಲ್ಲಿ ಗೆಲ್ಲುವ ಮೂಲಕ ಅವರ ಅಭಿಯಾನ ಆರಂಭವಾಯಿತು. 2014ರಿಂದ ನಡಾಲ್‌ ಕಳೆಗುಂದಿದರು. ಅಲ್ಲಿ ಅವರಿಗೆ ಸಿಕ್ಕಿದ್ದು ಒಂದೇ ಒಂದು ಗ್ರ್ಯಾನ್‌ಸ್ಲಾéಮ್‌. ಮುಂದಿನೆರಡು ವರ್ಷ ಪೂರ್ಣ ವೈಫ‌ಲ್ಯ. 2017-18ರಲ್ಲಿ 3 ಪ್ರಶಸ್ತಿ ಗೆದ್ದಿದ್ದಾರೆ. ಸದ್ಯ ವಿಶ್ವ ನಂ.1 ಆಟಗಾರ. ಆದರೂ ಪದೇ ಪದೇ ಗಾಯಕ್ಕೊಳಗಾಗಿದ್ದಾರೆ. ಇನ್ನೆಷ್ಟು ಕಾಲ ಪ್ರಶಸ್ತಿ ಜೈಸುತ್ತಾರೋ ಊಹಿಸುವುದು ಕಷ್ಟ.

ಜೊಕೊ ಬಿರುಗಾಳಿ: ಫೆಡರರ್‌, ನಡಾಲ್‌ಗಿಂತ ಕಿರಿಯ ಜೊಕೊವಿಚ್‌. ಇವರು ಮೊದಲ ಗ್ರ್ಯಾನ್‌ಸ್ಲಾಮ್‌ ಆಡಿದ್ದೇ 2004ರಲ್ಲಿ. 2007ರಲ್ಲಿ ಮೊದಲ ಪ್ರಶಸ್ತಿಯನ್ನು ಆಸ್ಟ್ರೇಲಿಯನ್‌ ಓಪನ್‌ ರೂಪದಲ್ಲಿ ಗೆದ್ದರು. ಮುಂದೆ ವೇಗವಾಗಿ ಗೆಲ್ಲುತ್ತಲೇ ಸಾಗಿದರು. 12 ಗ್ರ್ಯಾನ್‌ಸ್ಲಾéಮ್‌ ಗೆಲ್ಲುವವರೆಗೆ ಇವರ ಓಟ ಮುಂದುವರಿಯಿತು. ಆಗಿನ ಅವರ ಅಬ್ಬರ ಗಮನಿಸಿದಾಗ ಫೆಡರರ್‌ರನ್ನು ಮೀರುವುದು ಸನಿಹದಲ್ಲೇ ಇದೆ ಎನಿಸಿತ್ತು. ಕಳೆದೆರಡು ವರ್ಷಗಳಿಂದ ಹೊಳಪು ಕಳೆದುಕೊಂಡಿದ್ದಾರೆ. ಗೆಲ್ಲಲೂ ಆಗುತ್ತಿಲ್ಲ, ಗಾಯ-ಶಸ್ತ್ರಚಿಕಿತ್ಸೆಯಿಂದ ಹೈರಾಣಾಗಿದ್ದಾರೆ. ಸದ್ಯದ ಇವರ ಸ್ಥಿತಿ ಚಿಂತಾಜನಕ. ಗಾಯದಿಂದ ಮುನ್ನಿನ ವೇಗವಿಲ್ಲ. ಫೆಡರರ್‌, ನಡಾಲ್‌ ಮತ್ತೆ ತಮ್ಮ ವೈಭವಕ್ಕೆ ಮರಳಿದ್ದನ್ನು ಕಂಡಾಗ ಇವರೂ ಮತ್ತೂಮ್ಮೆ ಮುಂಗಾರು ಮಳೆಯ ವೇಳೆ ಅಪ್ಪಳಿಸುವ ಸಿಡಿಲಿನಂತೆ ಸಿಡಿಯಬಹುದೆನ್ನುವ ನಿರೀಕ್ಷೆಯಿದೆ. 

ನಿರೂಪ


Trending videos

Back to Top