CONNECT WITH US  

ಪ್ರಳಯ,ಸೃಷ್ಟಿ ಕಾಲಚಕ್ರದ ನಿಯಮ!

ಸೃಷ್ಟಿಯ ಹಿಂದಿನ ರಹಸ್ಯ

ಸೃಷ್ಟಿಯ ಮೊದಲು ಈ ಜಗತ್ತೆಲ್ಲವೂ ನೀರಿನಲ್ಲಿ ಮುಳುಗಿತ್ತು. ಆಗ ಶ್ರೀಮನ್ನಾರಾಯಣನು ಶೇಷಶಾಯಿಯಾಗಿ ಯಾವ ಸಂಕಲ್ಪವೂ, ಕ್ರಿಯೆಯೂ ಇಲ್ಲದೆ ಆತ್ಮಾನಂದದಲ್ಲಿ ಮಗ್ನನಾಗಿ ಯೋಗನಿದ್ರೆಯಲ್ಲಿದ್ದನು, ಆದರೆ ಆತನ ಜ್ಞಾನಶಕ್ತಿಯು ಮಾತ್ರ ಸಂಪೂರ್ಣವಾಗಿ ಎಚ್ಚರವಾಗಿಯೇ ಇತ್ತು.

ಪಂಚಭೂತಗಳೂ, ಸಕಲ ಜೀವರಾಶಿಗಳೂ ಶ್ರೀಮನ್ನಾರಾಯಣನ ದೇಹದಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿಕೊಂಡಿದ್ದವು. ಎಲ್ಲ ಶಕ್ತಿಗಳನ್ನು ಲಯಗೊಳಿಸಿಕೊಂಡು ಸೃಷ್ಟಿಯಕಾಲ ಬಂದಾಗ ತನ್ನನ್ನು ಯೋಗನಿದ್ರೆಯಿಂದ ಎಚ್ಚರಿಸಲು ಕಾಲಶಕ್ತಿಯೊಂದನ್ನು ಮಾತ್ರ ಅವನು ಎಚ್ಚರವಾಗಿ ಇರಿಸಿಕೊಂಡಿದ್ದನು. ಹೀಗೆ ಶ್ರೀಮನ್ನಾರಾಯಣನು ತನ್ನ ಸ್ವರೂಪವಾದ ಚಿತ್‌ ಶಕ್ತಿಯೊಂದಿಗೆ ಒಂದು ಸಾವಿರ ಚತುರ್ಯುಗಗಳವರೆಗೆ ಯೋಗನಿದ್ರೆಯಲ್ಲಿ ಪವಡಿಸುತ್ತಿದ್ದನು.
ಸೃಷ್ಟಿರಚನೆಯ ಕಾಲ ಸಮೀಪಿಸುತ್ತಿದ್ದಂತೆ ಮಹಾವಿಷ್ಣುವಿನ ನಾಭಿಯಿಂದ ಒಂದು ಸೂಕ್ಷ್ಮವಾದ ಕಮಲದ ಮೊಗ್ಗು ಮೇಲಕ್ಕೆದ್ದು ಸೂರ್ಯನಂತಹ ತೇಜಸ್ಸಿನಿಂದ ಇಡೀ ಜಲರಾಶಿಯನ್ನು ಪ್ರಕಾಶಿಸಿತು. ಆಗ ಶ್ರೀಮನ್ನಾರಾಯಣನು ಅಂತರ್ಯಾಮಿಯಾಗಿ ಆ ಮೊಗ್ಗನ್ನು ಪ್ರವೇಶಿಸಲು ಸರ್ವವೇದಮಯರಾಗಿ, ಸೃಷ್ಟಿಕರ್ತರಾಗಿ  ಸ್ವಯಂಭೂ   ಎಂದು ಜ್ಞಾನಿಗಳಿಂದ ಕರೆಯಲ್ಪಡುವ ಬ್ರಹ್ಮ ದೇವರು ಅದರಿಂದ ಹುಟ್ಟಿಕೊಂಡರು.

ಆ ಕಮಲದ ಮಧ್ಯದಲ್ಲಿ ಕುಳಿತಿದ್ದ ಬ್ರಹ್ಮದೇವರಿಗೆ ಯಾವ ಲೋಕವೂ ಕಾಣದಿರಲು ಅವರು ಆಕಾಶದ ಸುತ್ತ ನಾಲ್ಕು ದಿಕ್ಕಿಗೂ ತಿರುಗಿ ನೋಡಲು, ಅವರಿಗೆ ನಾಲ್ಕು ಮುಖಗಳು ಪ್ರಕಟವಾದವು. ಇದರಿಂದ ಬ್ರಹ್ಮದೇವರು ಚತುರ್ಮುಖರೆಂದು ಲೋಕಪ್ರಸಿದ್ಧರಾದರು. ಆ ನಾಲ್ಕು ಮುಖಗಳಿಂದ ಋಗ್ವೇದಾದಿ ಚತುರ್ವೇದಗಳೂ ಪ್ರಕಟವಾದವು.
ಪ್ರಳಯ ಕಾಲದ ಪ್ರಚಂಡವಾಯುವಿನ ಹೊಡೆತಗಳಿಂದ ಚಿಮ್ಮುತ್ತಿದ್ದ ಜಲರಾಶಿಯಿಂದ ಉದ್ಭವಿಸಿದ ಕಮಲದ ಮಧ್ಯದಲ್ಲಿ ಕುಳಿತಿದ್ದ ಬ್ರಹ್ಮದೇವರಿಗೆ ತಾನು ಯಾರೆಂದೂ, ಸುತ್ತಲೂ ಏನಾಗುತ್ತಿದೆ ಎಂದೂ ಯಾವುದೂ ಅರ್ಥವಾಗಲಿಲ್ಲ.  ಈ ಪದ್ಮವು ನೀರಿನಲ್ಲಿ ಹುಟ್ಟಲು ಕಾರಣವೇನು? ಈ ಕಮಲಕ್ಕೆ ಆಧಾರವಾಗಿರುವ ವಸ್ತು ಯಾವುದೆಂದು ಅವರು  ಆಲೋಚನೆ ಮಾಡಿದರು.

ಹೀಗೆ ಆಲೋಚಿಸಿದ ಅವರು ಆ ಕಮಲದನಾಳವನ್ನು ಒಳಹೊಕ್ಕು ಅಪಾರವಾದ ಕಗ್ಗತ್ತಲೆಯಲ್ಲಿ ನಾಭಿ ಪ್ರದೇಶವನ್ನು ಪ್ರವೇಶಿಸಿದರೂ ತನ್ನ ಮೂಲ ಯಾವುದೆಂದು ತಿಳಿಯಲಿಲ್ಲ. ಹೀಗೇ ಬಹಳ ಕಾಲಗಳು ಕಳೆದವು.  ಎಷ್ಟು ಹುಡುಕಿದರೂ ಮೂಲ ಸ್ಥಾನವು ಸಿಗದಿರುವಾಗ  ವಿಫ‌ಲ ಪ್ರಯತ್ನರಾದ ಬ್ರಹ್ಮ ದೇವರು ನಿರಾಸೆಯಿಂದ ಮರಳಿ ಕಮಲದಲ್ಲಿ  ಪದ್ಮಾಸನಹಾಕಿ  ಕುಳಿತು  ಧ್ಯಾನ ಮಗ್ನರಾದರು. ಪ್ರಾಣವಾಯುವನ್ನು ಜಯಿಸಿ ಸಂಕಲ್ಪ- ವಿಕಲ್ಪಗಳನ್ನು ತೊರೆದು ಸಮಾಧಿಸ್ಥಿತಿ ತಲುಪಿದರು. ಹೀಗೆ ಮನುಷ್ಯನ ನೂರುವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಜ್ಞಾನೋದಯವಾಗಿ ಈ ಹಿಂದೆ ಎಷ್ಟು ಹುಡುಕಿದರೂ ಸಿಗದ ಮೂಲ ಸ್ಥಾನವನ್ನು ತಮ್ಮ ಅಂತರಂಗದಲ್ಲಿ ನೋಡಿದರು.
ಅಲ್ಲಿ, ಮಹಾಪ್ರಳಯ ಜಲದಲ್ಲಿ ವಿಶಾಲವಾದ ಆದಿಶೇಷನ ಹಾಸಿಗೆಯಲ್ಲಿ ಮಲಗಿರುವ ಶ್ರೀಮನ್ನಾರಾಯಣನು ತನ್ನ ಶರೀರದ ಶ್ಯಾಮಲಾಕಾಂತಿಯಿಂದ ನೀಲಮರಕತಮಣಿಪರ್ವತದ ಕಾಂತಿಯನ್ನು ನಾಚಿಸುತ್ತಿದ್ದನು. ಮಹಾ ಜಲರಾಶಿಯಲ್ಲಿ ಶೇಷದೇವರಿಗೆ ಆಶ್ರಯನಾಗಿರುವ ಆದಿದೇವ ನಾರಾಯಣನು ನೀರಿನಿಂದ ಆವೃತವಾಗಿರುವ ಪರ್ವತರಾಜನಂತೆ ಶೋಭಿಸುತ್ತಿದ್ದನು.

ಅಂತಹ ಭಗವಂತನ ಕಂಠದಲ್ಲಿ ವೇದಗಳೆಂಬ ದುಂಬಿಗಳು ಉಲಿಯುತ್ತಿರುವ, ಕೀರ್ತಿ ರೂಪವಾದ ಅಕ್ಷರಗಳು ವನಮಾಲೆಯ ರೂಪದಲ್ಲಿ ರಾರಾಜಿಸುತ್ತಿದ್ದವು. ಮೂರೂ ಲೋಕಗಳಲ್ಲಿಯೂ ಅಡೆ-ತಡೆ ಇಲ್ಲದೆ ಸಂಚರಿಸುವ ಸಾಮರ್ಥ್ಯವುಳ್ಳ ಸುದರ್ಶನ ಚಕ್ರವೇ ಮುಂತಾದ ಆಯುಧಗಳೂ ಭಗವಂತನ ಸುತ್ತಲೂ ಸುತ್ತುತ್ತಿದ್ದವು. ಇದರಿಂದಾಗಿ ಸೂರ್ಯ, ಚಂದ್ರ, ವಾಯು , ಅಗ್ನಿಗಳೇ ಮುಂತಾದ ದೇವತೆಗಳೂ ಅವನ ಬಳಿಗೆ ತಲುಪುವುದು ಕಷ್ಟವಾಗಿತ್ತು.
ಆಗ ವಿಶ್ವ ರಚನೆಯ ಇಚ್ಛೆಯುಳ್ಳ ಲೋಕವಿಧಾತೃ  ಬ್ರಹ್ಮ ದೇವರಿಗೆ ಶ್ರೀಭಗವಂತನ ನಾಭಿಸರೋವರದಿಂದ ಪ್ರಕಟಗೊಂಡ ಕಮಲ (ಪೃಥ್ವಿ), ಜಲ, ಆಕಾಶ, ವಾಯು ಮತ್ತು ತನ್ನ ಶರೀರ (ತೇಜಸ್ಸು) ಎಂಬ ಪಂಚಭೂತಗಳು ಕಾಣಿಸಿದವು. ಹೀಗೆ ಬ್ರಹ್ಮ ದೇವರು ಕಣ್ಣು ತೆರೆದು ನೋಡಲು ಅಂತರಂಗದಲ್ಲಿ ಕಂಡದ್ದನ್ನು ಬಹಿರಂಗದಲ್ಲೂ ಕಂಡರೂ. ಆಗ ನಾರಾಯಣನ ಸೃಷ್ಟಿ ರಚನೆಯ ಇಚ್ಚೆಯು ಬ್ರಹ್ಮ ದೇವರಿಗೆ ತಿಳಿಯಿತು.

ಬ್ರಹ್ಮ ದೇವರು ಲೋಕರಚನೆಗೆ ಮುಂದಾಗಲು ಅವರಿಗೆ ಹೇಗೆ ಸೃಷ್ಟಿ ಮಾಡಬೇಕೆಂಬ ಪ್ರಶ್ನೆಯು ಉಂಟಾಯಿತು. ಏನು ಮಾಡಬೇಕೆಂದು ತಿಳಿಯದೆ ಶ್ರೀಮನ್ನಾರಾಯಣನನ್ನು ಸ್ತುತಿಸಿದರು. ಆಗ ನಾರಾಯಣನು ಯೋಗನಿದ್ರೆಯಿಂದ ಎಚ್ಚೆತ್ತು ಬ್ರಹ್ಮದೇವರಿಗೆ ಸೃಷ್ಟಿ ರಚನೆಯ ವಿವರವನ್ನು ತಿಳಿಸಿದನು.


Trending videos

Back to Top