CONNECT WITH US  

 ಸಂಚಿ ಹುಳು ತೋರಿಸಿದ ಸುಂದರ ಲೋಕ

ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಹೂವಿನ ಮೇಲಿಂದ ಜಾರಿತು.  ಹೂವಿನ ಅಂಚಿಗೆ ಅಂಟಿಕೊಂಡು ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಹೂವಿನ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. 

ಈ ಕೀಟ ಲೋಕವೇ ಅದ್ಭುತ. ಕಣ್ಣಿಗೆ ಮ್ಯಾಕ್ರೊ ಲೆನ್ಸ್‌ ರೀತಿಯಲ್ಲಿ ಚಿಕ್ಕವೆಲ್ಲ ದೊಡ್ಡವಾಗಿ ಕಾಣುವ ಶಕ್ತಿಯಿದ್ದರೆ, ಇನ್ನೂ ಎಂತೆಂಥ ಅದ್ಭುತಗಳು ಕಣ್ಣಿಗೆ ಕಾಣಿಸುತ್ತಿದ್ದವೋ ಏನೋ ? ಆದರೆ ಕ್ಯಾಮರಾ ತಂತ್ರಜಾnನ ಅಂತಹ ಅವಕಾಶವನ್ನೂ ಒದಗಿಸಿದೆ. ಆ ಮಾತು ಬೇರೆ. ನಾನು ಹೇಳುತ್ತಿರುವುದು, ಪುಟ್ಟ ಕೀಟಗಳ ಲೋಕದಲ್ಲಿ ಏನೆಲ್ಲ ನಡೆಯಬಹುದು ಎಂಬ ಬಗ್ಗೆ.

ಇಷ್ಟೆಲ್ಲ ಪೀಠಿಕೆ ಏಕೆಂದರೆ, ನಮ್ಮ ಮನೆಯ ಸುತ್ತಲೂ ಇರುವ  ಅಲ್ಪ ಜಾಗದಲ್ಲಿಯೇ ನಮ್ಮ ಮನೆಯಾಕೆ ಕೈತೋಟವನ್ನು ಮಾಡಿದ್ದಾಳೆ. ಕೈತೋಟ ಪುಟ್ಟದಾದರೂ ನನ್ನ ಕುತೂಹಲ, ಆಸಕ್ತಿಗಳಿಗೆ ಅದು ದೊಡ್ಡ ತೋಟವೇ. ಒಮ್ಮೊಮ್ಮೆ ನಾನೂ ಎರೆಹುಳುವಾಗಿ, ಪುಟ್ಟ ಚಿಟ್ಟೆಯಾಗಿ, ಪ್ಯೂಪಾ ಆಗಿ ಹೊರಜಗತ್ತನ್ನು ನೋಡಿದಾಗ ಹೇಗೆ ಕಾಣಬಹುದು ಎಂದು ಕಲ್ಪಿಸಿಕೊಳ್ಳುತ್ತೇನೆ.  ಮರುಕ್ಷಣವೇ,  ಹಾಗಾದಾಗ ಶತ್ರುಗಳು ನನ್ನನ್ನು ಬೇಟೆಯಾಡಿದರೆ ಎಂಬ ವಿಚಾರ ಬಂದು ಬೆಚ್ಚಿಬಿದ್ದು, ಮತ್ತೆ ಮರಳಿ ವಾಸ್ತವ ಲೋಕಕ್ಕೆ ಕಾಲಿಡುತ್ತೇನೆ.

 ಹೀಗೇ ಒಮ್ಮೆ ಬೆಳಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಕಡ್ಡಿಗಳ ಕಂತೆಯೊಂದು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಉದ್ದನೆಯ ಕಡ್ಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದಂತಿರುವ ಇದೇಕೆ ಹೀಗೆ ಮೆತ್ತಿಕೊಂಡಿವೆ ಎಂದು ಕುತೂಹಲದಿಂದ ಅದನ್ನು ಮನೆಯ ಕಾಂಪೌಂಡ್‌ ಮೇಲಿಟ್ಟು ನೋಡಿದೆ. ಅದೊಂದು ಪುಟ್ಟ ಗೂಡೆನಿಸಿತು. ನೀರಿನ ಪೈಪನ್ನು ಅಲ್ಲೇ ಬಿಸಾಡಿ ಅದನ್ನು ಸೂಕ್ಷ್ಮವಾಗಿ ನೋಡಿದೆ. ಪುಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು, ಹಾಗೇ ಮೆಲ್ಲನೆ ಗೂಡು ಮುಂದೆ ಸರಿಯತೊಡಗಿದಾಗ ಅಚ್ಚರಿಯೆನಿಸಿತು. ನಿಧಾನವಾಗಿ ಅದನ್ನು ಮನೆಯೊಳಗೆ ತಂದು ಪ್ಲಾಸ್ಟಿಕ್‌ ಹೂಗಳ ಮೇಲೆ ಇರಿಸಿದೆ. ತನ್ನ ಮೈಮೇಲೆ ಉದ್ದನೆಯ ಕಡ್ಡಿಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೇತವೇ ತೆವಳತೊಡಗಿತು. 

ಬೇಗನೇ ಕ್ಯಾಮೆರಾ ತಂದು ಕ್ಲಿಕ್ಕಿಸತೊಡಗಿದೆ. ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಹೂವಿನ ಮೇಲಿಂದ ಜಾರಿತು.  ಹೂವಿನ ಅಂಚಿಗೆ ಅಂಟಿಕೊಂಡು ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಹೂವಿನ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. ಕ್ಯಾಮೆರಾದ ಕಣ್ಣು ಮಿನುಗುತ್ತಲೇ ಇತ್ತು. ಹರ ಸಾಹಸ ಮಾಡಿದ ಪುಟ್ಟ ಹುಳು, ತನ್ನೆಲ್ಲ ಬಲವನ್ನು ಹಾಕಿ ತನ್ನೊಂದಿಗೆ ಪುಟ್ಟ ಗೂಡನ್ನೂ ಮೇಲೆಳೆದುಕೊಂಡಿತು. ಅಬ್ಟಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತೊಡಗಿದಾಗ, ಇದು ಏನು? ಯಾಕೆ ಹೀಗೆ? ಎಂ¸ ಪ್ರಶ್ನೆ ತಲೆ ತಿನ್ನತೊಡಗಿತು. 

ಈ ಕುರಿತು ಮಾಹಿತಿ ಕಲೆಹಾಕಿದಾಗ, ಇದನ್ನು ಬ್ಯಾಗ್‌ ವರ್ಮ್ (ಸಂಚಿ ಹುಳು ಎಂದು ನಾನಿಟ್ಟ ಹೆಸರು)  ಎಂದು ಕೀಟಲೋಕದ ತಜ್ಞರು ಗುರುತಿಸುತ್ತಾರೆ. ಪ್ಸೆ„ಕಿಡಾ ಗುಂಪಿನ ಇದನ್ನು ಚಿಟ್ಟೆ, ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾರ್ವಾ ಹಂತದಲ್ಲಿದ್ದಾಗ ತಮ್ಮ ಮೈಸುತ್ತ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಭೇದದ ಹುಳುಗಳು ತಮ್ಮ ಮೈಸುತ್ತ ಪುಟ್ಟ ಚೀಲವನ್ನು ನೇಯ್ದುಕೊಳ್ಳುತ್ತವೆ. ಇದಕ್ಕೆ ಇಂಥದೇ ಸಾಮಗ್ರಿ ಬೇಕೆಂದಿಲ್ಲ. ಕಡ್ಡಿ, ಮಣ್ಣು, ಉಸುಕು, ಒಣಗಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು. 

ತಮ್ಮ ರೇಷ್ಮೆಯಂಥ  ನಯವಾದ ಜೊಲ್ಲಿನಿಂದ ಗೂಡನ್ನು ಹೆಣೆದುಕೊಂಡು ಜೀವನಪೂರ್ತಿ ಅದರಲ್ಲೇ ಜೀವಿಸುತ್ತವೆ. ಇವುಗಳ ಗೂಡುಗಳು 1 ಸೆಂ.ಮೀ.ನಿಂದ 15 ಸೆಂ.ಮೀ ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದಂತೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ ಎಂಬ ವಿವರಗಳೆಲ್ಲ ತಿಳಿದು ಬಂದವು. ಇವುಗಳ ಆಹಾರ ಗಿಡದ ಎಲೆಗಳೇ.  ಹೀಗಾಗಿ ಗಿಡದ ಕಾಂಡಕ್ಕೋ, ಎಲೆಗೋ ಜೋತುಬಿದ್ದಿರುತ್ತವೆ ಅಥವಾ ಗೋಡೆ, ಬಂಡೆಗಳಿಗೂ ಜೋತುಬಿದ್ದಿರುವುದನ್ನು ಕಾಣಬಹುದು. ಥಟ್ಟನೆ ನೋಡಿದಾಗ ಏನೋ ಹೊಲಸು ಎನಿಸಬಹುದಾದರೂ, ಪಕ್ಷಿ$ಗಳಿಂದ ರಕ್ಷಣೆ ಪಡೆಯಲೂ ಇದು ಸುಲಭ ಉಪಾಯವಾಗಿದೆ.  ಹೆಣ್ಣು ಹುಳು ಅದೇ ಚೀಲದಲ್ಲಿಯೇ ಒಂದು ಸಲಕ್ಕೆ 500ರಿಂದ 1,600ರವರೆಗೂ ಮೊಟ್ಟೆಗಳನ್ನಿಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನೊಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟಿದೆ.  ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡದೆಯೂ ಮೊಟ್ಟೆಗಳನ್ನಿಡಬಹುದು. ಬ್ಯಾಗ್‌ ವಮ್ಸ್‌ì ಅಥವಾ ಕನ್ನಡದ ಸಂಚಿಹುಳುಗಳಲ್ಲಿ ಇಂಥದೇ ರೀತಿಯವಾಗಿರಬೇಕೆಂದಿಲ್ಲ, ಒಣಗಿದ ಎಲೆಗಳಿಂದಲೂ ಅವು ಗೂಡನ್ನು ನಿರ್ಮಿಸಿಕೊಳ್ಳಬಹುದು.

 ಏನೆಂದರೂ ಹುಳುಗಳ ಲೋಕವೇ ಅದ್ಭುತ ಅಲ್ಲವೆ? ನಾನೂ ಒಂದು ಸಂಚಿಹುಳುವಾಗಿ ನನ್ನ ಮನೆಯ ಭಾರವನ್ನೆಲ್ಲ ಹೊತ್ತು ಸಾಗುವ ಕಲ್ಪನೆ ಮಾಡಿಕೊಂಡಾಗ ಅಬ್ಟಾ ! ಎನ್ನಿಸಿತು. ಮನುಷ್ಯರು ಮನೆ ಕಟ್ಟಲು ಸಾಲದ ಭಾರವನ್ನು ಹೊತ್ತಾರೆ, ಈ ಪುಟ್ಟ ಹುಳುಗಳು ತಾವು ಕಟ್ಟಿದ ಮನೆಯನ್ನು ತಾವೇ ಹೊತ್ತು ಓಡಾಡುವುದು ವಿಚಿತ್ರವಾದರೂ ಸತ್ಯ !

ಸಿದ್ಧರಾಮ ಹಿರೇಮಠ  


Trending videos

Back to Top