CONNECT WITH US  

ಕೊಡಗು ಡ್ರೋಣಾಚಾರ್ಯನ ಕಣ್ಣಿನಿಂದ...

ಈವರೆಗೂ ಕರುನಾಡಿನ ಸ್ವರ್ಗ ಸೀಮೆ ಎಂದೇ ಹೆಸರಾಗಿದ್ದ ಕೊಡಗು ಇದೀಗ ಮಳೆಯ ಹೊಡೆತದಿಂದ ಕಂಗಾಲಾಗಿದೆ. ಮನೆಗಳು ಮಾತ್ರವಲ್ಲ, ಮುಗಿಲೆತ್ತರದ ಮರಗಳೂ ಮುಳುಗಿ ಹೋಗಿವೆ. ನೂರಾರು ಜನ ಕಾಣೆಯಾಗಿದ್ದಾರೆ. ಬದುಕುಳಿದವರಿಗೆ, ಪ್ರಕೃತಿ ದೇವಿಯ ಭೀಭತ್ಸ ಮುಖದ ದರ್ಶನವಾಗಿದೆ. ಇಂಥ ಸಂದರ್ಭದಲ್ಲಿಯೇ, ಆ ಮಹಾಮಳೆಯ ದಿನಗಳಲ್ಲೇ ಡ್ರೋಣ್‌ ಕ್ಯಾಮರಾ ಬಳಸಿ ನಾಗರಿಕರ ರಕ್ಷಣೆಗೆ ಮುಂದಾ ಜನನ್‌ ಜೋಯಪ್ಪ, ತಮ್ಮ ಅನುಭವವನ್ನು ಇಲ್ಲಿ ಹೇಳಿಕೊಂಡಿದ್ದಾರೆ. 

 ಸಂತ್ರಸ್ತರ ಕೇಂದ್ರದ ಮೇಲೆ ಸೂರ್ಯನ ಬೆಳಕು ಯಾವಾಗ ಬೀಳುತ್ತೆ ಎಂಬುದೇ ಎಲ್ಲರ ಕಾತರದ ಪ್ರಶ್ನೆಯಾಗಿತ್ತು.  ಯಾವಾಗ ಮೂಡ್ತಾನೆ ಅನ್ನೋದೆ ಎಲ್ಲರ ಆಸೆ. ಇಡೀ ಮಡಿಕೇರಿ, ಕೊಡಗಿನ ತಲೆ ಮೇಲೆ ನೀರು ಬಿದ್ದರೆ ಸಾಕು, ಜನ ಸುಡು, ಸುಡು ನೀರು ಬಿದ್ದವರಂತೆ ಹೌಹಾರುತಲಿದ್ದರು. ಆ ಹೊತ್ತಿಗೆ ಕೊಡಗಿನ ಆಕಾಶ ಸೀಳಿ, ಭುವಿ ಬಿರಿದು ನಾಲ್ಕು ದಿನ ಕಳೆದಿತ್ತು. ನೆರೆ ಹಾವಳಿಗೆ ತುತ್ತಾಗಿ, ಹೇಗೋ ಪಾರಾದವರನ್ನು ಸಂತ್ರಸ್ತರ ಕೇಂದ್ರಕ್ಕೆ ಕರೆತರುವುದು, ದಿನಸಿಗಳನ್ನು ಬೇರ್ಪಡಿಸುವುದು, ಹಂಚುವುದು, ಕಣ್ಣಾಲಿಗಳನ್ನು ತುಂಬಿ ಕೊಂಡು ಬಂದವರಿಗೆ ಸಮಾಧಾನ ಹೇಳುವುದು, ರಾತ್ರಿ ಕಂಡ ಹೆತ್ತವರು ಬೆಳಗ್ಗೆ ನಾಪತ್ತೆಯಾಗಿ, ಅನಾಥ ಭಾವದ ಮಕ್ಕಳಿಗೆ ಭರವಸೆಯಾಗುವುದು ಹೀಗೆ... ನಾನಾ ಕೆಲಸಗಳನ್ನು ನಾನು ಹಾಗೂ ನನ್ನ ಸ್ನೇಹಿತರು ಮಾಡುತ್ತಿರುವಾಗಲೇ ಡ್ರೋಣ್‌ ಐಡಿಯಾ ಹುಟ್ಟಿದ್ದು. 

 ಇಲ್ಲಿ ಸಾವು ನೋವು, ಆಕ್ರಂಧನಗಳು ಸುರಿದ ಮಳೆಗಿಂತ ಹೆಚ್ಚು ಅಪ್ಪಳಿಸುತ್ತಿದ್ದವು. ಒಂದು ಘಟನೆಗೆ ನಾನಾ ನಮೂನೆಯ ಕಥೆಗಳು, ಅದಕ್ಕೆ ರೆಕ್ಕೆಪುಕ್ಕ, ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ತಿಳಿಯದ ವಾತಾವರಣ. 

 ಬೆಟ್ಟದ ತಪ್ಪಲು, ಅದರೊಳಗೆ ಇನ್ನೂ ಎಷ್ಟೆಷ್ಟು ಜನ ಇದ್ದಾರೋ, ಅವರನ್ನೆಲ್ಲಾ ಹುಡುಕುವುದಕ್ಕೆ, ಸಿಕ್ಕರೆ ಕರೆತರುವುದಕ್ಕೆ ಡ್ರೋಣ್‌ ಬಳಸಿದರೆ ಹೇಗೆ?ಈ ಯೋಚನೆ ಬಂದದ್ದೇ ತಡ, ಮಾರನೆ ದಿನವೇ ಮಡಿಕೇರಿಗೆ ಹಾಗೇ ತೆವಳಿಕೊಂಡು ಹೋಗಿ, ಗೆಳೆಯ ಬೋಪಣ್ಣನ ಹತ್ತಿರವಿದ್ದ ಡ್ರೋಣ್‌ ಅನ್ನು ತರುವ ಹೊತ್ತಿಗೆ ಬೆಳಗ್ಗೆ 11 ಗಂಟೆ.  ಅದರೊಂದಿಗೆ ನಾಲ್ಕೈದು ಜನ ಗೆಳೆಯರು ಸೇರಿ, ನನ್ನ ಜೀಪ್‌ನಲ್ಲಿ ಪ್ರಯಾಣ ಶುರುಮಾಡಿದೆವು. 

ಕಾಲೂರಿನಿಂದ ಮಕ್ಕಳ ಗುಡಿ ಬೆಟ್ಟದ ತನಕ ನಮ್ಮ ಯಾನ. ಬೋಪಣ್ಣ 1,300 ಮೀಟರ್‌ನಷ್ಟು ಮೇಲಕ್ಕೆ ಡ್ರೋಣ್‌ ಬಿಟ್ಟು, ಜೀಪಲ್ಲಿ ಕೂತ. ಜೀಪು ಹಾಗೇ ಕದಲುತ್ತಾ, ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ, ಪುರಿ ಜಗನ್ನಾಥರ ರಥದಂತೆ ಮುಂದೆ ಹೋಯಿತು. 

ನಾವು ಹೋಗಬೇಕಾಗಿದ್ದದ್ದು ಎಲ್ಲವೂ ಒಳ ರಸ್ತೆಗಳು. ರಾಜಮಾರ್ಗಗಳೆಲ್ಲವೂ ಕುಸಿದು ಹೋಗಿದ್ದವು. ಅಲ್ಲಿ ಈ ಮೊದಲು ರಸ್ತೆ ಇತ್ತು ಅಂತಲೂ ಹೇಳಲು ಆಗದ ಪರಿಸ್ಥಿತಿಯಲ್ಲಿತ್ತು. ಕಾಲೂರಿನ ಒಳಗೆ ಹೋಗುತ್ತಿರುವಾಗಲೇ ದೊಡ್ಡ ಕುಸಿತಗಳು ಕಣ್ಣಿಗೆ ರಾಚುತ್ತಾ ಹೋದವು. ಎಷ್ಟೋ ವರ್ಷಗಳಿಂದ ಬೆಳೆಸಿದ ತೆಂಗಿನ ಮರ, ಕಾಫಿ ತೋಟಗಳು ನೆಲಸಮವಾಗಿಬಿಟ್ಟಿದ್ದವು.  ಬೆಟ್ಟ ಬೆಟ್ಟಗಳ ನಡುವಿನಲ್ಲಿ ಉಂಟಾಗಿದ್ದ ಬಿರುಕು, ಆಘಾತಗಳನ್ನು ಡ್ರೋಣ್‌ ತೋರಿಸಲಿತ್ತು. 

ಮಕ್ಕಳಬೆಟ್ಟದ ಹತ್ತಿರ ಹತ್ತಿರ ರಸ್ತೆಯೇ ಪಾತಾಳಕ್ಕೆ ಸೇರಿಬಿಟ್ಟಿತ್ತು. ನಮ್ಮ ಜೀಪಂತೂ ಹೆಜ್ಜೆ ಇಡಲೂ ನಾ ಒಲ್ಲೆ ಎಂದು ನಿಂತುಬಿಟ್ಟಿತ್ತು. ಗೆಳೆಯರೆಲ್ಲ ಸೇರಿ ಒಂದಷ್ಟು ಕಲ್ಲುಗಳನ್ನು ತಂದು, ಸಣ್ಣದಾಗಿ ಕುಸಿದ ಜಾಗವನ್ನು ಹುಡುಕಿ, ಎರಡು ಟೈರು ಮಾತ್ರ ತೆವಳುವಂತೆ ಪುಟ್ಟ ಕಲ್ಲ ಹಾದಿ ಮಾಡಿಕೊಂಡಿದ್ದಾಯಿತು. 

ಜೀಪು ಹಾಗೇ ಮುಂದೆ ಸಾಗುತಿರಲು, ಬೆಟ್ಟದ ಬೆನ್ನೋ, ಮುಖವೋ, ಎದೆಯೋ - ಎಲ್ಲೆಲ್ಲೋ ತರಚಿ, ಕೆಲ ಕಡೆ ಸಿಗಿದು ಹೋಗಿತ್ತು.  ಅದರಿಂದ ಜಿನುಗುತ್ತಿದ್ದ ನೀರು ಕಣ್ಣೀರಂತೆಯೇ ಕಾಣುತ್ತಿತ್ತು. 

 ಕೈಯಲ್ಲಿ ಬಿಸ್ಕೇಟ್‌, ಬ್ರೆಡ್‌. ಅವೆಲ್ಲ ಗೋಣಿಕೊಪ್ಪದಿಂದ ತಂದದ್ದು. ಇಡೀ ದಿನ 6 ಜನಕ್ಕೂ ಇದೇ ಆಹಾರ. ಹಾಗಂತ, ನಮಗೆ ಇದೇನೂ ಹೊಸದಲ್ಲ. ಸಾಮಾಜಿಕ ಸೇವೆಗಳಲ್ಲಿ ತೊಡಗಿ ಕೊಳ್ಳುವ ನಮ್ಮ ತಂಡ ಎಷ್ಟೋ ಬಾರಿ ಊಟ, ನೀರು ಇಲ್ಲದೆ ಬದುಕಿದ್ದೂ ಇದೆ. 

ಹಟ್ಟಿಹೊಳೆ ಬರುವ ಹೊತ್ತಿಗೆ ನಮ್ಮ ಡ್ರೋಣ್‌ ಆಕಾಶದಲ್ಲಿ ಎತ್ತರೆತ್ತರಕ್ಕೆ ಓಡಾಡುತ್ತಿತ್ತು. ಆ ಹಟ್ಟಿ ಹೊಳೆಯಂತೂ  ಬೆನ್ನಟ್ಟಿದ್ದ ಸಾವಿಗೆ ಹೆದರಿ ಧೋ ಎಂದು ಓಡುತ್ತಿದೆ. ಸುತ್ತಮುತ್ತಲ ಕಾಡು ನಿರುಮ್ಮಳ. ಅದನ್ನು ಸೀಳಿಕೊಂಡು ಹರಿಯುವ ತೊರೆಗಳ ಸದ್ದು ಒಂಥರಾ ಭಯ ಉಂಟುಮಾಡುತ್ತಿತ್ತು. 

ಪ್ರತಿ ಬೆಟ್ಟದಲ್ಲೂ ಹತ್ತಾರು ತೊರೆಗಳು. ಇದರಲ್ಲಿ ಎಷ್ಟೋ ತೊರೆಗಳು ಹೊಸದೇ. ಸಿಕ್ಕ ಜಾಗದಲ್ಲಿ ದಾರಿ ಮಾಡಿಕೊಂಡು ಹರಿಯುತ್ತಿದ್ದವು.

ಒಂದು ಬೆಟ್ಟದ ನೆತ್ತಿಯಲ್ಲಿ ಇಷ್ಟೊಂದು ನೀರು ಹರಿದರೆ ಗತಿ ಏನು?

ಎಲ್ಲರೂ ಯೋಚನೆ ಮಾಡಿದೆವು. ಅಷ್ಟರಲ್ಲಿ ಡ್ರೋಣ್‌, ಬೆಟ್ಟದ ಆ ಬದಿಯ ಒಂದಷ್ಟು ಒಂಟಿ ಮನೆಗಳನ್ನು ತೋರಿಸಿತು.  ಆನತಿ ದೂರದಲ್ಲಿ ಬೆಟ್ಟ ಕುಸಿದಿತ್ತು. ಆದರೆ, ಅಲ್ಲಿ ಯಾವ ಜನವಸತಿ ಇರಲಿಲ್ಲ. ಪಕ್ಕದ ಬೆಟ್ಟದ ಜಟೆಯಿಂದ ಒಂದಷ್ಟು ನೀರು ಸೀಳಿಕೊಂಡು ಬರುತ್ತಿತ್ತು. 

ಎಲ್ಲವೂ ತೊರೆಗಳು. ಹೌದು, ಬೆಟ್ಟದಲ್ಲಿ ಇಷ್ಟೊಂದು ತೊರೆಗಳನ್ನು ನಿರ್ಮಾಣ ಮಾಡಿದ್ದು ಯಾರು? ಆಗಸದಿಂದ ಧುಮ್ಮಿಕ್ಕಿದ ಮಳೆನೀರು, ತನ್ನಿಷ್ಟದಂತೆ ಹರಿದು ಹೋಗಲು ತನಗೆ ತಾನೇ ಹಾದಿ ಮಾಡಿಕೊಂಡಿತೇ ಅಥವಾ ಹೊಸ ಹಾದಿಯನ್ನು ಮಳೆನೀರು ಹುಡುಕಿಕೊಂಡಿದ್ದಾದರೂ ಹೇಗೆ? ಹೀಗೆಲ್ಲಾ ಲೆಕ್ಕಾ ಹಾಕುತ್ತಿದ್ದೆವು. ಆಗ ನೆನಪಾಗಿದ್ದೇ, ಎರಡು ತಿಂಗಳ ಹಿಂದೆ ಮಡಿಕೇರಿ ಸುತ್ತ ಸಂಭವಿಸಿದ ಭೂಕಂಪನ.  ನಿಜವಾಗಿ ಇದು ಜೋರು ಮಾತಾಗಬೇಕಿತ್ತು. ಆಗಲೇ ಇಲ್ಲ, ಪಂಚಾಯ್ತಿ, ಜಿಲ್ಲಾಡಳಿತ ಅದೆಂಥದೋ ಮ್ಯಾಪ್‌ ಮಾಡಿ. ಇಲ್ಲಿ ಕಂಪನವಾಗಿದೆ ಅಂತ ಗುರುತಿಸಿ ಕೈ ಬಿಟ್ಟಿತು. ಆಮೇಲೆ ಶುರುವಾಗಿದ್ದು ಈ ಮಳೆ. 

ಕೊಡಗು, ಮಡಿಕೇರಿಗೆ ಇದಕ್ಕಿಂತ ಭೀಕರ ಮಳೆಗಳನ್ನು ತಡದೆಕೊಂಡ ಅನುಭವವಿದೆ. ಆದರೆ, ಇದು ರೌದ್ರವತಾರವಾಗಿ ಪರಿವರ್ತನೆಯಾಗಿದ್ದು, ಭೂಕಂಪ ಬೆಟ್ಟಗಳನ್ನು ಕೊರೆದಿದ್ದರಿಂದ, ಮುಂದೆ, ಅವೇ ದೊಡ್ಡ ದೊಡ್ಡ ತೊರೆಗಳಾಗಿ, ಭೂಮಿಯ ಆಳಕ್ಕೆ ಇಳಿದು, ಕೊಡಗಿನ ಬುಡವನ್ನು ಅಲ್ಲಾಡಿಸಿತು. ಹಟ್ಟಿ ಹೊಳೆ, ಕಾಲೂರುಗಲ್ಲಿ ಸುತ್ತು ಹಾಕಿದಾಗ ಅಪರಿಚಿತ ನೀರ ಹಾದಿಗಳ ದರ್ಶನವಾಯಿತು. 

ಹೀಗೆ ಎಲ್ಲವನ್ನೂ ಸುತ್ತು ಹಾಕಿ ಬರುವಾಗ ಎದೆಯಲ್ಲಿ ಭಯದ ಒಲೆ ಹೊತ್ತಿಕೊಂಡಿತು. ತಲೆಯ ಮೇಲೆ ಮೋಡ, ತುಂತುರು ಹನಿ, ಮಧ್ಯೆ ಮಧ್ಯೆ ದಟ್ಟೈಸುವ ಮೋಡಗಳ ಬೆದರಿಕೆ... ಎಲ್ಲಕ್ಕಿಂತ ಪ್ರಾಣಿ- ಪಕ್ಷಿಗಳ ಕಲರವ ಇಲ್ಲದೇ, ಮಾತು ಬರದೆ ನಿಂತ ಬೆಟ್ಟದ ಆ ಸೈಲೆಂಟ್‌- ಎದೆಯೊಲೆಯ ಭೀತಿಯ ಅಗ್ನಿಕುಂಡದಂತೆ ಮಾಡಿತ್ತು. 

ಜನನ್‌ ಜೋಯಪ್ಪ


Trending videos

Back to Top