CONNECT WITH US  

ಶಿಳ್ಳೆ ಹೊಡೆವಂತೆ ಮಾಡುವ  ಶಿರಳೆ ಫಾಲ್ಸ್‌!

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಯಾವಾಗಲೂ ಸುತ್ತಾಡುವ ನಾವು, ನಾಲ್ಕು ಗೋಡೆಗಳ ಮಧ್ಯೆ ಕೂತಲ್ಲೇ  ಕುಳಿತು, ಹೇಗೊ ಇದ್ದಷ್ಟು ದಿನ ಸಮಯ ತಳ್ಳಿ ಜೀವನ ಮುಗಿಸಿದರಾಯಿತು ಎಂಬ ಮನಸ್ಥಿತಿ ಹೊಂದಿದವರಲ್ಲ; ಪ್ರತಿದಿನವೂ ಥ್ರಿಲ್‌ ಇರಬೇಕು, ಸಿಕ್ಕ ಒಂದೇ ಜನುಮವನ್ನು ನೆಮ್ಮದಿಯಿಂದ ಕಳೆಯಬೇಕೆನ್ನುವ ಸಂಚಾರಿ ಮನಸ್ಕರು. ಅದರಂತೆ, ವಾರಾಂತ್ಯ ಬಂತೆಂದರೆ ನಿಸರ್ಗದೊಡಲಿನ ಸುಂದರ ತಾಣಗಳಿಗೆ  ಭೇಟಿ ಕೊಡುವುದು ಮಾಮೂಲಿ. ಅಂದಹಾಗೆ, ನಮ್ಮ ಹಿಂದಿನ ವಾರದ ಭೇಟಿ ಶಿರಳೆ ಫಾಲ್ಸ್‌.

ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಯಲ್ಲಾ ಪುರ ಬಳಿಯಿರುವ ಶಿರಳೆ ಫಾಲ್ಸ…ಗೆ ಸವಾರಿ ಹೊರಟೆವು.

ಪ್ರತಿ ರವಿವಾರವನ್ನು ಕುಂಭಕರ್ಣನ ವಾರವಾಗಿ ಆಚರಿಸುವ ಗೆಳೆಯನೊಬ್ಬನ ವ್ರತ ಭಂಗ ಮಾಡಿ, ರೆಡಿ ಮಾಡಿಸುವಷ್ಟರಾಗಲೇ ಹನ್ನೊಂದರ ಬೆಲ್ಲು ಹೊಡೆದಿತ್ತು! ಹೇಗೋ ಅವಸರವಸರವಾಗಿ ಒಂದು ಗಂಟೆಯ ಕಾಲಾವಧಿಯಲ್ಲಿ ಮುಂಡಗೋಡಿನಿಂದ ಯಲ್ಲಾ ಪೂರ ತಲುಪಿ, ಅಲ್ಲಿನ ಹೋಟೆಲಿನಲ್ಲಿ ಊಟ ಮುಗಿಸಿದ್ದಾಯ್ತು. ನಂತರ, ಸ್ಥಳೀಯರ ತೋರ್‌ ಬೆರಳ ನೇರಕ್ಕೆ ಬೈಕು ಓಡಿಸುತ್ತ ಮುಕ್ಕಾಲು ಗಂಟೆಯಲ್ಲಿ ಶಿರಳೆ ಫಾಲ್ಸ್‌ನ ಟೋಲ… ಗೇಟ… ಬಳಿ ನಿಂತೆವು. ಅಲ್ಲಿಯ ರಕ್ಷಣಾ ಸಿಬ್ಬಂದಿಯ ಜೊತೆ ಮಾತುಕತೆ ನಡೆಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಲ­ಪಾತದ ಆಳ, ಅಗಲ, ಅಪಾಯಕಾರಿ ಪ್ರದೇಶದ ಬಗ್ಗೆ ಮಾಹಿತಿ ಕಲೆ ಹಾಕಿದೆವು. ಮೊದಲೇ ಆತುರದಲ್ಲಿದ್ದ ಮನಕ್ಕೆ ಮತ್ತೆ ಕಾಯಿಸ­ಲಾರದೆ, ಅಲ್ಲಿಂದ ಕಾಲ್ಕಿತ್ತು, ಕಾಡಿನ ಮಧ್ಯ ನಿಸರ್ಗದಚ್ಚರಿಗೆ ಬೆರಗಾಗುತ್ತ ಸಾಗಿದೆವು. ನಾಲ್ಕು ಮೈಲಿ ಸುದೀರ್ಘ‌ ನಡೆಗೆ ಕಾಲು  ನೋವು ಶುರುವಾಗ್ತಿದೆ ಅನ್ನುವ ವೇಳೆಗೆ ಜಲಧಾರೆಯ ಸುನಾದ, ಕಾಲ್ನೋವ ಮರೆಸಿ ಓಡುವಂತೆ ಮಾಡಿತು.

ಅಬ್ಟಾ ! ಹಚ್ಚ ಹಸಿರಿನಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳ ಮಧ್ಯೆ, ಕಲ್ಲು ಕೋರೆಗಳನ್ನು ಕೊರೆದು, ಉಬ್ಬುದಿಣ್ಣೆಗಳನ್ನು ಜಿಗಿದು, ಎತ್ತರದ ಪ್ರದೇಶದಿಂದ ಆಳದ ಕಂದಕಕ್ಕೆ ಧುಮುಕ್ಕುತ್ತಿ­ರುವ, ಹಾಲಿನ ನೊರೆಯಂತೆ ಚಿಮ್ಮುತ್ತಿರುವ ಜಲಧಾರೆ­ಯನ್ನು ಕಂಡಾಕ್ಷಣ ಒಂಥರಾ ಸಾರ್ಥಕ ಭಾವ. ಬಿಡುವಿರದ ಜೀವನದ ಎಲ್ಲ ಕಷ್ಟಗಳು, ಹತಾಶೆಗಳು ಒಮ್ಮೆಲೇ ಮಂಗಮಾಯವಾಗಿ ಹೊಸ ಉತ್ಸಾಹ, ಚೈತನ್ಯ ಮನದಲ್ಲಿ ಚಿಗುರೊಡೆದಂತಹ ಸಂತೃಪ್ತಿ.

ಮನಸೋ ಇಚ್ಛೆ ಕುಣಿದು ಕುಪ್ಪಳಿಸಿ, ಅತ್ತಿಂದಿತ್ತ ಓಲಾಡಿ, ಬಂಡೆಗಳು ತಾಕಿದಾಕ್ಷಣ ವೈಯಾರ­ದಿಂದ ನಾಟ್ಯ ಮಯೂರಿಯಂತೆ ಓಡೋಡಿ ಬರುತ್ತಿರುವ ಜಲಧಾರೆಯನ್ನು ನೋಡಿದಾಗ ಆದ ಋಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಬಿಡಿ. 

ಸುತ್ತಲ ಜಗತ್ತನ್ನೇ ಮರೆತು ಮೈಮನ ತಣಿಯುವರೆಗೂ ನೀರಿನಲ್ಲಿ ಮಿಂದೆದ್ದು, ಮುಂದಿನ ಜನ್ಮಕ್ಕೂ ಸಾಕಾಗುವಷ್ಟು ಖುಷಿಪಡುತ್ತಿದ್ದ ನಮ್ಮನ್ನು ಕಂಡ ಸೂರ್ಯ, ಹೊಟ್ಟೆಕಿಚ್ಚಿನಿಂದ ತಾನೂ ಬೇಗನೆ ಕೆಲಸ ಮುಗಿಸಿ, ಇತ್ತ ಬರಬೇಕೆಂಬ ಆಸೆ ತೋರಿ, ಆಕಾಶದಂಚಿನಿಂದ ಕಣ್ಮರೆಯಾಗಲು ಸಿದ್ಧನಾದ.  ಹಠಾತ್ತನೆ ಸಮಯ ಸರಿದದ್ದು ನೆನಪಾಗಿ ಅಲ್ಲಿಂದ ಮರಳಬೇಕಾಯಿತು.

ಕಿರಣ್‌.ಎಮ್‌.ಜೋತೆಪ್ಪನವರ


Trending videos

Back to Top