CONNECT WITH US  

ಕಥಾಮಾಲಿಕೆ 1; ಆತ್ಮನೇತ್ರ ಎಂದರೇನು?

ಮಗನ ಹೆಸರು ವಿಶಿಷ್ಟವಾಗಿರಬೇಕು ಎಂಬ ಯೋಚನೆಯಿಂದ "ಆತ್ಮನೇತ್ರ' ಎಂದು ಹೆಸರಿಟ್ಟರು ಆ ತಂದೆ. ಬೆಳೆದು ನಿಂತ ಮಗನಿಗೆ, ತನ್ನ ಹೆಸರು ಚೆನ್ನಾಗಿಲ್ಲ ಅನ್ನಿಸಿತು. " ಈ ಹೆಸರಿಗೆ ಅರ್ಥವೇನಪ್ಪಾ?' ಎಂದು ಅವನು ತಂದೆಯನ್ನೇ ಕೇಳಿದ. ಅವರು ಗುರುಗಳ ಕಡೆಗೆ ಕೈ ತೋರಿಸಿದರು. 

ಒಮ್ಮೆ ಆತ್ಮನೇತ್ರನಿಗೆ ಈ ಜಗತ್ತಿನಲ್ಲಿ ಎಲ್ಲವೂ ಸುಳ್ಳು, ಎಲ್ಲವೂ ಬರಿಯ ನಾಟಕ ಎಂಬ ಶಂಕೆ ಬಹುವಾಗಿ ಕಾಡಿತು. ಇದೇ ಯೋಚನೆಯಲ್ಲಿದ್ದ ಇವನನ್ನು ಯಾರೋ "ಆತ್ಮನೇತ್ರ.. ಆತ್ಮನೇತ್ರ' ಎಂದು ಎರಡು ಸಲ ಗಟ್ಟಿಯಾಗಿ ಕರೆದಂತಾಯಿತು. ಅವತ್ತು ಮಾತ್ರ ಆತ್ಮನೇತ್ರನಿಗೆ ತನ್ನ ಹೆಸರು ವಿಚಿತ್ರವಾಗಿದೆ ಅನ್ನಿಸತೊಡಗಿತು. ಅವನು ಹುಟ್ಟಿ ಇಪ್ಪತ್ತೈದು ವರುಷಗಳೇ ದಾಟಿದ್ದರೂ ತನ್ನ ಹೆಸರಿನ ಬಗೆಗಾಗಲೀ ಅದರ ಅರ್ಥದ ಬಗೆಗಾಗಲೀ ಆ ಶಬ್ದದ ಉಚ್ಚಾರದ ಕುರಿತಾಗಲೀ ಪ್ರಶ್ನೆ ಉದ್ಭವಿಸಿದ್ದಿಲ್ಲ! ಇವತ್ತು ಮಾತ್ರ ಈ ಹೆಸರೇ ವಿಚಿತ್ರವಾಗಿದೆ ಎಂದು ಅನ್ನಿಸತೊಡಗಿ ನೇರವಾಗಿ ಅಪ್ಪನ ಬಳಿ ಬಂದ.

ಅಪ್ಪ.. ಎಂದು ಕರೆದ. ಅವನ ತಂದೆ ಆಗಷ್ಟೇ ಸ್ನಾನ ಮಾಡಿ ದೇವರಪೂಜೆಗೆ ಅಣಿಯಾಗುತ್ತಿದ್ದರು. ಅವರು ಸ್ನಾನದ ಬಳಿಕ ಪೂಜೆ ಮುಗಿಯುವವರೆಗೆ ತನಕ ಯಾರ ಜೊತೆಗೂ ಮಾತನಾಡುವವರಲ್ಲ.

ಏನು? ಎಂದು ಹುಬ್ಬನ್ನು ಮೇಲಕ್ಕೇರಿಸಿದರು.
ಆತ್ಮನೇತ್ರ, ಅಪ್ಪನ ಪೂಜೆ ಮುಗಿಯುವ ತನಕ ಕಾಯಬೇಕಾಯಿತು. ಅವರ ಪೂಜೆ ಮುಗಿಯುತ್ತಿದ್ದಂತೆ ಅವರ ಬಳಿ ಮತ್ತೆ ಹೋಗಗಿ ಕೇಳಿದ: ಅಪ್ಪಾ, ಆತ್ಮನೇತ್ರ ಅಂತ ಹೆಸರಿಟ್ಟಿದ್ದೀಯಲ್ಲ! ಅದರರ್ಥವಾದರೂ ಏನು?

ಮಗ ಆತ್ಮನೇತ್ರ ಅಂದರೆ ದೇವರು. ಇದಕ್ಕೂ ಹೆಚ್ಚಿನ ಅರ್ಥ ಬೇಕೆಂದರೆ, ನಮ್ಮ ಗುರುಮಠದ ಗುರುವಿನ ಬಳಿ ಹೋಗು ವಿಚಾರಿಸು. ಅವರು ಎಲ್ಲವನ್ನೂ ನಿನಗೆ ವಿವರವಾಗಿ ಹೇಳುತ್ತಾರೆ ಎಂದು ಮರುಮಾತನಾಡದೆ ಸುಮ್ಮನಾದರು.  ಆತ್ಮನೇತ್ರನಿಗೆ, ಅಪ್ಪ ಕೊಟ್ಟ ಉತ್ತರ ಸರಿಯೆನಿಸಲಿಲ್ಲ. ನೇರವಾಗಿ ಗುರುಮಠಕ್ಕೆ ಬಂದ. ಮಠದ ಹೊರಾಂಗಣದಲ್ಲಿ ಗುರುಗಳು ಒಬ್ಬರೇ ಕುಳಿತಿದ್ದರು. ಅವರ ಕಾಲಿಗೆರಗಿದವನೇ ಮಾತಿಗಿಳಿದ.

ನನ್ನಲ್ಲಿ ಹಲವು ಪ್ರಶ್ನೆಗಳಿವೆ, ಅದಕ್ಕೆ ಉತ್ತರಿಸ ಬಲ್ಲಿರಾ?

ಗುರುವಿಗೆ ನಗು ಬಂತು. ಉತ್ತರವಿಲ್ಲದ ಪ್ರಶ್ನೆಯೇ ಇಲ್ಲವೆಂದು ನಾನು ತಿಳಿದುಕೊಂಡಿದ್ದೇನೆ. ಅಂತಹ¨ªೊಂದು ಪ್ರಶ್ನೆಯಿದ್ದರೆ ನನಗೂ ಅದಾವುದು ಎಂಬ ಕುತೂಹಲವಿದೆ. ಕೇಳು, ನಾನು ಉತ್ತರಿಸಬÇÉೆ ಎಂದರು ಶಾಂತಚಿತ್ತದಿಂದ.

ನನ್ನ ಹೆಸರಿನ ಅರ್ಥವೇನು? ಆತ್ಮನೇತ್ರ ಎಂದರೇನು?

ನಿನ್ನ ಹೆಸರು ತುಂಬಾ ಸುಂದರವಾಗಿದೆ. ಆತ್ಮನೇತ್ರ, ಎಂತಹ ಅರ್ಥಗರ್ಭಿತವಾದ ಹೆಸರು. ಆತ್ಮ ಎಂದರೆ ಜೀವ. ಅಂದರೆ ಸ್ವತಃ ನೀನು. ನೀನು ಏನಾಗಿದ್ದಿಯೋ ಅದುವೇ ಆತ್ಮ. ನಿನ್ನನ್ನು ಆಳುವ, ನಿಯಂತ್ರಿಸುವ ಶಕ್ತಿ. ನೇತ್ರ ಎಂದರೆ ಕಣ್ಣು. ಆತ್ಮನೇತ್ರವೆಂದರೆ ಆತ್ಮದ ಕಣ್ಣು. ಆತ್ಮವು ಪ್ರತಿಕ್ಷಣವೂ ಕಣ್ಣನ್ನು ತೆರೆದುಕೊಂಡೇ ವ್ಯವಹರಿಸಬೇಕಾಗುತ್ತದೆ. ಆತ್ಮವು ಅಂತರ್ಮುಖೀಯಾಗಿರಬಾರದು ಎಂಬೆಲ್ಲ ಗಾಢವಾದ ಅರ್ಥವನ್ನು ನಿನ್ನ ಈ ಹೆಸರು ಹೊಂದಿದೆ.

ಆತ್ಮನೇತ್ರನಿಗೆ ಇನ್ನೂ ಪ್ರಶ್ನೆಗಳು ಹುಟ್ಟಿಕೊಂಡವು.

ನನಗೆ ಈ ಜಗತ್ತು ಸುಳ್ಳು ಎಂದು ಅನಿಸುತ್ತಿದೆ. ಅದು ನಿಜವೇ?

ಈ ಜಗತ್ತಿನಲ್ಲಿ ಸುಳ್ಳನ್ನು ನಾವು ಸತ್ಯಕ್ಕಿಂತ ಮಿಗಿಲಾಗಿ ಸೃಷ್ಟಿಸಿದ್ದೇವೆಯೇ ಹೊರತು ಈ ಜಗತ್ತು ಸುಳ್ಳಲ್ಲ. ಆದರೆ ಜಗತ್ತು ನಶ್ವರ ಅಷ್ಟೆ. ಒಳಗಣ್ಣನ್ನು ತೆರೆದು ಆತ್ಮವನ್ನು ಅರ್ಥೈಸಿಕೊಂಡು ಆತ್ಮದಾಜ್ಞಾನುಸಾರ ಜೀವನಕ್ರಮವನ್ನು ಅಳವಡಿಸಿಕೊಂಡರೆ ಇಡೀ ಜಗತ್ತೇ ಪರಮಾತ್ಮನ ಸನ್ನಿಧಾನವಾಗುತ್ತದೆ.

ಆತ್ಮನೇತ್ರನಿಗೆ ಇವರ ಉತ್ತರ ಕಗ್ಗಂಟಾದಂತೆ ಕಾಣಿಸಿತು. ಈ ಆತ್ಮವನ್ನು ಅರಿಯುವುದು ಹೇಗೆ? ಅದರಂತೆ ನಡೆಯುವುದು ಹೇಗೆ? ಅರ್ಥವೇ ಆಗುತ್ತಿಲ್ಲವಲ್ಲ ಎಂಬ ಕಳವಳದಿಂದ ಮತ್ತೆ ಗುರುವನ್ನು ಪ್ರಶ್ನಿಸಿದ.

ಗುರುಗಳೇ, ಈ ಆತ್ಮ ಎಂದರೇನು? ಅದು ಎಲ್ಲಿದೆ?

ಗುರುಗಳು ಮಂದಹಾಸ ಬೀರುತ್ತ ಒಂದು ಸಣ್ಣ ಬಿಂದಿಗೆಯನ್ನು ಆತ್ಮನೇತ್ರನ ಕೈಗೆ ಕೊಟ್ಟು "ನೋಡು, ನಮ್ಮ ಉದ್ಯಾನವನದಲ್ಲಿ ಕೆಲವು ಕೆರೆಗಳಿವೆ. ಈ ಬಿಂದಿಗೆಯಲ್ಲಿ ನನಗೆ ಕುಡಿಯಲು ನೀರನ್ನು ತಂದು ಕೊಡುವೆಯಾ?' ಎಂದರು. ನಾನು ಕೇಳಿದ್ದಕ್ಕೆ ಉತ್ತರಿಸುವುದನ್ನು ಬಿಟ್ಟು, ಮಠದಲ್ಲಿ ಬೇಕಾದಷ್ಟು ಜನರಿದ್ದರೂ ನನ್ನ ಬಳಿ ನೀರು ತರಲು ಹೇಳುತ್ತಿರುವರಲ್ಲ ಎಂದುಕೊಳ್ಳುತ್ತ ಗುರುವಿನ ಬಳಿ ಆಗದು ಎನ್ನಬಾರದು ಎಂದುಕೊಂಡು ತಂಬಿಗೆ ಹಿಡಿದು ಹೊರಟ.

ಮುಂದುವರಿಯುವುದು..

ವಿಷ್ಣು ಭಟ್ಟ, ಹೊಸ್ಮನೆ

Trending videos

Back to Top