CONNECT WITH US  

ಕನ್ನಡದ ಕೃತಿಗಳು ಇತರೆ ಭಾಷೆಗಳಿಗೆ ಹೆಚ್ಚು ಅನುವಾದವಾಗಬೇಕು: ಡಾ. ಲತಾ

ಮೈಸೂರು: ಕನ್ನಡದ ಕೃತಿಗಳನ್ನು ಹೆಚ್ಚಾಗಿ ಬೇರೆ ಭಾಷೆಗಳಿಗೆ ಅನುವಾದಿಸುವ ಮೂಲಕ ಅನುವಾದ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು ಎಂದು ಕವಯತ್ರಿ ಡಾ. ಲತಾ ರಾಜಶೇಖರ್‌ ಹೇಳಿದ್ದಾರೆ.ವಿಸ್ಮಯ ಫೌಂಡೇಷನ್‌ ವತಿಯಿಂದ ಭಾನುವಾರ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ಪ್ರೊ.ಜಿ.ಚಂದ್ರಶೇಖರ್‌ ಅವರು ಅನುವಾದಿಸಿರುವ "ರಾತ್ರಿಯ ಪಯಣ' ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು. 

ಕನ್ನಡದಲ್ಲಿ ಬಹಳಷ್ಟು ಅನುವಾದ ಕಾರ್ಯವಾಗಬೇಕಿದ್ದು, ಕೇವಲ ಶ್ರೇಷ್ಠ ಕೃತಿಗಳನ್ನು
ಕನ್ನಡಕ್ಕೆ ತರುವುದು ಸರಿಯಲ್ಲ. ಬದಲಿಗೆ ಕನ್ನಡದ ಸೃಜನಶೀಲ ಕೃತಿಗಳನ್ನು ಬೇರೆ ಭಾಷೆಗಳಿಗೆ
ಅನುವಾದಿಸಬೇಕಿದೆ. ಕನ್ನಡದ ಸೃಜನಶೀಲ ಹಾಗೂ ಶ್ರೇಷ್ಠ ಕೃತಿಗಳು ಬೇರೆ ಭಾಷೆಗಳಿಗೆ ಹೆಚ್ಚಾಗಿ
ಅನುವಾದವಾಗುವ ಮೂಲಕ ಕನ್ನಡದ ಕಂಪು ಇತರ ಕಡೆಗಳಿಗೂ ಹರಡಬೇಕಿದೆ ಎಂದರು.

ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಆಂಗ್ಲ ಭಾಷೆಗೆ ಅನುವಾದ
ಮಾಡಿದ್ದರೆ ಕನ್ನಡಕ್ಕೆ ನೊಬೆಲ್‌ ಪ್ರಶಸ್ತಿ ಬರುತ್ತಿತ್ತು. ಅನುವಾದವಾಗದ ಕಾರಣ ಕನ್ನಡಕ್ಕೆ ನೊಬೆಲ್‌
ಪ್ರಶಸ್ತಿ ಕೈತಪ್ಪಿದೆ. ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ಅನುವಾದಿಸುವುದು ಸುಂದರವಾದ
ಕಲೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಇಂದು ಅನುವಾದಿಸುವುದು ಕ್ಲಿಷ್ಟಕರ ಕೆಲಸ. ಅಲ್ಲದೆ ಕೃತಿಗಳನ್ನು
ತರ್ಜುಮೆ ಮಾಡುವ ಬದಲಿಗೆ ಪುನರ್‌ ಸೃಷ್ಟಿಸಬೇಕಾಗಿದೆ ಎಂದರು. ಮುಕ್ತ ವಿವಿ ಕುಲಪತಿ ಪ್ರೊ.
ಎಂ.ಜಿ. ಕೃಷ್ಣನ್‌, ಲೇಖಕ ಡಾ. ಹಾಲತಿ ಸೋಮಶೇಖರ್‌, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ
ಪ್ರೊ. ಜಯಪ್ರಕಾಶ್‌ ಗೌಡ, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಹಿಂದಿ ವಿಭಾಗದ ಸಹ
ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್‌ ಹಾಜರಿದ್ದರು.

Trending videos

Back to Top