CONNECT WITH US  

ಮೈಸೂರು: ಚುಟುಕು ರತ್ನ, ಹಿರಿಯ ಸಾಹಿತಿ ಡಾ.ಎಂ.ಅಕಬರ ಅಲಿ ಇನ್ನಿಲ್ಲ

ಮೈಸೂರು: ಹಿರಿಯ ಚುಟುಕು ಕವಿ, ಸಾಹಿತಿ ಡಾ.ಎಂ.ಅಕಬರ ಅಲಿ(92ವರ್ಷ) ಭಾನುವಾರ ಬೆಳಗ್ಗೆ ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಗೃಹದಲ್ಲಿ ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಅಲಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನವೋದಯ ಕಾಲದ ಪ್ರಮುಖ ಸಾಹಿತಿಯಾದ ಅಕಬರ್ ಅಲಿ ಅವರು ಮೂಲತಃ ಬೆಳಗಾವಿ(1925, ಮಾರ್ಚ್ 3ರಂದು ಜನನ) ಖಾನಾಪುರ ಜಿಲ್ಲೆಯ ಹುಕ್ಕೇರಿಯ ಉಳ್ಳಾಗಡ್ಡಿ ಖಾನಾಪುರ. ಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯ ಸಂಕಲನವನ್ನು ಪ್ರಕಟಿಸಿದ (1951) ಕೀರ್ತಿ ಸಂಪಾದಿಸಿದ್ದರು. ಆದರೆ ಅಲಿ ಅವರು ಕಳೆದ ಅನೇಕ ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದರು. ಸರ್ವಜ್ಞನ ಕುರಿತು ಪಿಎಚ್ ಡಿ ಮಾಡಿದ ಮೊದಲಿಗರು ಎಂಬ ಕೀರ್ತಿ ಅಕಬರ ಅಲಿ ಅವರದ್ದು. ಬೆಳಗಾವಿ, ಸಾಂಗ್ಲಿ ಹಾಗೂ ಪುಣೆಯಲ್ಲಿ ಶಿಕ್ಷಣ ಪಡೆದು ಬಳಿಕ ಕಾರವಾರದ ಶಾಲೆಯಲ್ಲಿ ಕೆಲವು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83), ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (2009), ಸಂಕೇಶ್ವರದಲ್ಲಿ ಜರುಗಿದ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿ (2011), ಹೀಗೆ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದ್ದರು.

ಸುಮನ ಸೌರಭ ಕೃತಿಗೆ (1967) ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1984), ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1984) ಸೇರಿದಂತೆ ಅನೇಕ ಪ್ರಶಸ್ತಿ,ಪುರಸ್ಕಾರ ಗಳಿಸಿದ್ದರು.

Trending videos

Back to Top