CONNECT WITH US  

ಸಿವಿಲ್‌ ಕೇಸ್‌ಗಳನ್ನು ಮಧ್ಯಸ್ಥಿಕೆ ಕೇಂದ್ರದ ಮೂಲಕ ಬಗೆಹರಿಸಿ

ಮೈಸೂರು: ನ್ಯಾಯಾಲಯಗಳಲ್ಲಿ ಬಾಕಿಯಿರುವ ಸಿವಿಲ್‌ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ನ್ಯಾಯಾಧೀಶರು ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಮೈಸೂರು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಎಸ್‌.ಕೆ. ಒಂಟಿಗುಡಿ ಹೇಳಿದರು. 

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ವತಿಯಿಂದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ನ್ಯಾಯಾಧೀಶರಿಗೆ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಪುನರ್‌ ಚೈತನ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಈವರೆಗೂ 1 ಲಕ್ಷಕ್ಕೂ ಹೆಚ್ಚು ವ್ಯಾಜ್ಯಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿದ್ದು, ಇದರಲ್ಲಿ 45 ಸಾವಿರ ಸಿವಿಲ್‌ ಪ್ರಕರಣಗಳಾಗಿವೆ.

ಇದರಿಂದ ಪ್ರತಿಯೊಬ್ಬ ನ್ಯಾಯಾಧೀಶರಿಗೆ 1200 ವ್ಯಾಜ್ಯಗಳನ್ನು ಬಗೆಹರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕ್ರಿಮಿನಲ್‌ ಪ್ರಕರಣಗಳ ನಡುವೆ ಸಿವಿಲ್‌ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಕಷ್ಟಕರವಾಗಿರುವುದರಿಂದ ಸಿವಿಲ್‌ ಕೇಸ್‌ಗಳನ್ನು ಮಧ್ಯಸ್ಥಿಕೆ ಕೇಂದ್ರದ ಮೂಲಕ ಬಗೆಹರಿಸಬೇಕಿದೆ ಎಂದರು. 

ಮಧ್ಯಸ್ಥಿಕೆ ಕೇಂದ್ರಗಳಿಗೆ ನೀಡಿ: ನ್ಯಾಯಾಧೀಶರು ತಮ್ಮದೇ ನಿರ್ಬಂಧಗಳನ್ನು ಹೊಂದಿರಲಿದ್ದು, ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಕೊಳ್ಳುವಂತೆ ಒತ್ತಡ ಹೇರಲು ಸಾಧ್ಯವಿಲ್ಲ. ಆದ್ದರಿಂದ ವ್ಯಾಜ್ಯಗಳನ್ನು ವಿಚಾರಣೆ, ಸಂಧಾನ, ಲೋಕ ಅದಾಲತ್‌ ಅಥವಾ ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಶೇ.64 ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ.

ಮಧ್ಯಸ್ಥಿಕೆ ಕೇಂದ್ರ ಎಂಬುದು ಹೊರ ರೋಗಿಗಳ ವಿಭಾಗವಿದ್ದಂತೆ, ಹೀಗಾಗಿ ನ್ಯಾಯಾಲಯಕ್ಕೆ ವ್ಯಾಜ್ಯಗಳು ಬಂದ ಸಂದರ್ಭದಲ್ಲಿ ಅವುಗಳನ್ನು ಮಧ್ಯಸ್ಥಿಕೆ ಕೇಂದ್ರದ ಮೂಲಕ ಬಗೆಹರಿಸಬಹುದೇ ಎಂಬುದನ್ನು ಪರಿಶೀಲಿಸಬೇಕಿದೆ. ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಬಹುದಾದ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ನೀಡಬೇಕಿದೆ ಎಂದು ಹೇಳಿದರು. 

ಇತ್ಯರ್ಥಕ್ಕೆ ಸೂಚನೆ: ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕಿ ಶುಭಾ ಗೌಡರ್‌ ಮಾತನಾಡಿ, 2006ರಲ್ಲಿ ಆರಂಭವಾಗಿರುವ ಮಧ್ಯಸ್ಥಿಕೆ ಕೇಂದ್ರದಲ್ಲಿ 6 ಮಂದಿ ಮಾಸ್ಟರ್‌ ಟ್ರೈನರ್‌ಗಳಿದ್ದು, ಅತಂತ್ಯ ಕಠಿಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಕೌಶಲ್ಯವನ್ನು ಹೊಂದಿದ್ದಾರೆ.

ಹೀಗಾಗಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುವ ಮೊದಲೇ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮಧ್ಯಸ್ಥಿಕೆ ಕೇಂದ್ರಕ್ಕೆ ಈವರೆಗೂ ನೀಡಲಾಗಿರುವ 62,017 ಪ್ರಕರಣಗಳಲ್ಲಿ 48,208 ಪ್ರಕರಣಗಳಿಗೆ ಮಧ್ಯಸ್ಥಿಕೆವಹಿಸಿ, 30,863 ಕೇಸ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಕೇಂದ್ರದ ಮೂಲಕ ಇತ್ಯರ್ಥಪಡಿಸಲು ಸೂಚಿಸಬೇಕಿದೆ ಎಂದರು. 

ವಿಲೇವಾರಿ ನೆರವು: ಕೊಡಗು ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ವಿ.ವಿ.ಮಲ್ಲಾಪುರ್‌ ಮಾತನಾಡಿ, ಮಧ್ಯಸ್ಥಿಕೆ ಎಂಬುದು ಹೊಸತೇನಲ್ಲ, ಈ ಹಿಂದೆ ಗ್ರಾಮೀಣ ಭಾಗದಲ್ಲಿ ಅನೇಕ ವ್ಯಾಜ್ಯಗಳನ್ನು ಪಂಚರ ಮೂಲಕ ಇತ್ಯರ್ಥಪಡಿಸಿರುವುದನ್ನು ನೋಡಿದ್ದೇವೆ. ಆದ್ದರಿಂದ ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸುವ ಪ್ರಕರಣಗಳನ್ನು ಗಮನಿಸಿ ಅವುಗಳನ್ನು ಇತ್ಯರ್ಥಪಡಿಸುವುದು ಅನುಕೂಲಕರ. ಇದರಿಂದ ನ್ಯಾಯಾಧೀಶರು ಬೇರೆ ಕೇಸ್‌ಗಳನ್ನು ವಿಲೇವಾರಿ ಮಾಡಲು ನೆರವಾಗಲಿದೆ ಎಂದು ಹೇಳಿದರು. 

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಮಾಸ್ಟರ್‌ ಟ್ರೈನರ್‌ ಪ್ರಸಾದ್‌ ಸುಬ್ಬಣ್ಣ ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳ ಇತ್ಯರ್ಥಪಡಿಸುವ ಕುರಿತ ವಿವಿಧ ವಿಷಯಗಳ ಬಗ್ಗೆ ಎರಡು ಗೋಷ್ಠಿಗಳಲ್ಲಿ ತರಬೇತಿ ನೀಡಿದರು. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮದ್‌ ಮುಜೀರುಲ್ಲಾ, ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ್ಸಾ ಸೇರಿದಂತೆ ಮೈಸೂರು ಹಾಗೂ ಮಡಿಕೇರಿಯ ಜಿಲ್ಲಾ ನ್ಯಾಯಾಧೀಶರು ಇತರರು ಇದ್ದರು.

Trending videos

Back to Top