CONNECT WITH US  

ಪಾಲಿಕೆ ಮತ್ತೆ ಅತಂತ್ರ: ಕೈ-ತೆನೆ ದೋಸ್ತಿ?

ಮೈಸೂರು: ಮೈಸೂರು ಮಹಾ ನಗರಪಾಲಿಕೆಯಲ್ಲಿ ಈ ಬಾರಿ ಸ್ವಂತ ಬಲದಿಂದ ಅಧಿಕಾರ ಹಿಡಿಯಬೇಕು ಎಂದು ತಮ್ಮದೇ ಆದ ಕಾರ್ಯತಂತ್ರಗಳನ್ನು ಹೆಣೆದು ಚುನಾವಣೆ ಎದುರಿಸಿದ್ದ ಮೂರು ಪಕ್ಷಗಳಿಗೂ ನಗರದ ಮತದಾರ ಮಣೆ ಹಾಕದಿರುವುದರಿಂದ ಪಾಲಿಕೆಯಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಉಂಟಾಗಿದೆ.

65 ಸದಸ್ಯ ಬಲದ ಮೈಸೂರು ಮಹಾ ನಗರಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್‌ 19, ಜೆಡಿಎಸ್‌ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಎಸ್‌ಪಿ ಮೊದಲ ಬಾರಿಗೆ ಖಾತೆ ತೆರೆದಿದ್ದರೆ, ಐವರು ಪಕ್ಷೇತರರು ಜಯಗಳಿಸಿದ್ದಾರೆ. 22 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಕೈಗೆಟುಕದಂತಾಗಿದೆ.

ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರಿಗೂ ಮೇಯರ್‌ ಚುನಾವಣೆಯಲ್ಲಿ ಮತದಾನಕ್ಕೆ ಹಕ್ಕು ಇರುವುದರಿಂದ ಪಾಲಿಕೆ ಅಧಿಕಾರ ಹಿಡಿಯಲು 33 ಸದಸ್ಯರ ಬೆಂಬಲದ ಜೊತೆಗೆ ಮ್ಯಾಜಿಕ್‌ ಸಂಖ್ಯೆ 38 ಬೇಕು. ಆದರೆ, ಯಾವುದೇ ಪಕ್ಷದ ಬಳಿ ಈ ಸಂಖ್ಯಾಬಲ ಇಲ್ಲದಿರುವುದರಿಂದ ಪಾಲಿಕೆಯಲ್ಲಿ ಮತ್ತೂಮ್ಮೆ ಮೈತ್ರಿ ಆಡಳಿತ ಬರುವುದು ಖಚಿತ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲೂ ಅತಂತ್ರ ಪರಿಸ್ಥಿತಿ ಉಂಟಾಗಿದ್ದರಿಂದ ಜೆಡಿಎಸ್‌- ಬಿಜೆಪಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದವು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದರಿಂದ ಮೈತ್ರಿಯ ಮುಂದುವರಿದ ಭಾಗವಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡೂ ಪಕ್ಷಗಳು

ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಎರಡೂ ಪಕ್ಷಗಳ ನಾಯಕರು ತಮ್ಮದು ಫ್ರೆಂಡ್ಲಿಫೈಟ್‌ ಎಂದು ಹೇಳಿರುವುದರಿಂದ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರದಿರುವ ಕಡೆಗಳಲ್ಲಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ಫ‌ಲ ನೀಡದ ಟಾರ್ಗೆಟ್‌: ಈ ಬಾರಿ ಹೇಗಾದರೂ ಸರಿ ಪಾಲಿಕೆ ಅಧಿಕಾರ ಹಿಡಿಯಲೇಬೇಕು ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ನಗರಪಾಲಿಕೆ ವ್ಯಾಪ್ತಿಗೆ ಬರುವ ನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಟಾರ್ಗೆಟ್‌-20 ಗುರಿ ಹಾಕಿಕೊಂಡು ಚುನಾವಣೆ ಎದುರಿಸಲಾಗಿತ್ತು. ಆದರೆ, ಹಾಲಿ ಸದಸ್ಯರಿಗೆ ಟಿಕೆಟ್‌ ನಿರಾಕರಿಸಿ, ವಲಸೆ ಬಂದವರಿಗೆ ಮಣೆ ಹಾಕಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರೆ,

ಬಿಜೆಪಿಯ ರಾಜ್ಯಮಟ್ಟದ ನಾಯಕರ್ಯಾರೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿದ್ದುದು ಟಾರ್ಗೆಟ್‌-20 ಗುರಿ ತಲುಪುವಲ್ಲಿ ಮುಗ್ಗರಿಸಿದೆ. ಜೆಡಿಎಸ್‌ ಅಭ್ಯರ್ಥಿಗಳ ಪರ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಂದು ಪ್ರಚಾರ ನಡೆಸಿ ಮತಯಾಚನೆ ಮಾಡಿದರೆ, ಕಾಂಗ್ರೆಸ್‌ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಸಭೆಗಳನ್ನು ಮಾಡಿ ಕಾರ್ಯತಂತ್ರ ಹೆಣೆದಿದ್ದರು, ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹ ಮತಯಾಚನೆ ಮಾಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಬಿಎಸ್‌ಪಿಯ ಎನ್‌.ಮಹೇಶ್‌ ಅವರು ಸಹ ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದು ಫ‌ಲ ನೀಡಿ ಖಾತೆ ತೆರೆಯುವಲ್ಲಿ ಸಫ‌ಲವಾದರೆ, ಕಳೆದ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎಸ್‌ಡಿಪಿಐ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಸಫ‌ಲವಾಗಿದೆ.


Trending videos

Back to Top