CONNECT WITH US  

ಕೋಟೆಯಲ್ಲಿ ಕಾಂಗ್ರೆಸ್‌ ಅಧಿಪತ್ಯ

ಎಚ್‌.ಡಿ.ಕೋಟೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರ ಬಿದ್ದ ಹಿಂದೆಯೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಮಿಸಲಾತಿ ಪ್ರಕಟಿದ್ದು, ಎಚ್‌.ಡಿ.ಕೋಟೆ ಪುರಸಭೆ ಅಧ್ಯಕ್ಷ ಸ್ಥಾನ (ಪರಿಶಿಷ್ಟ ಜಾತಿ), ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿ ಆದೇಶ ಪ್ರಕಟಿಸಿದೆ. ಎಚ್‌.ಡಿ.ಕೋಟೆ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ನೂತನ ಸರ್ಕಾರ ಮೀಸಲಾತಿ ಹೊರಡಿಸುತ್ತಿದ್ದಂತೆಯೇ ಪುರಸಭೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಮಿಂಚಿನ ಸಂಚಲನವುಂಟಾಗಿದೆ.

ಸ್ವಪಕ್ಷದಲ್ಲೇ ಪೈಪೋಟಿ: ಪುರಸಭೆಯ ಎಲ್ಲಾ 23 ವಾರ್ಡ್‌ಗಳಿಗೆ ಕಳೆದ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್‌ 11 ಸ್ಥಾನಗಳನ್ನು ಪಡೆದಿದೆ. ಜತೆಗೆ ಕ್ಷೇತ್ರದಲ್ಲಿ ಸಂಸದರು ಹಾಗೂ ಶಾಸಕರು ಕಾಂಗ್ರೆಸ್‌ ಪಕ್ಷದವರೇ ಇರುವುದರಿಂದ ಅಧ್ಯಕ್ಷ ಗಾದಿಗೆ ಅವಶ್ಯಕತೆ ಇರುವ ಮ್ಯಾಜಿಕ್‌ ನಂಬರ್‌ 13 ಸ್ಥಾನ ಲಭಿಸಿದೆ. ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಆದರೆ ಸ್ವ ಪಕ್ಷದಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ.

ಅಧ್ಯಕ್ಷ ಗಾದಿಗೆ 4ನೇ ವಾರ್ಡ್‌ ಸದಸ್ಯ ಎಚ್‌.ಸಿ.ನರಸಿಂಹಮೂರ್ತಿ ಮತ್ತು 13ನೇ ವಾರ್ಡ್‌ ಸದಸ್ಯ ಎಂ.ಮಧುಸೂದನ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, 8ನೇ ವಾರ್ಡ್‌ ಸದಸ್ಯೆ ನಾಗಮ್ಮ ಕೂಡ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಇನ್ನು ಉಪಾಧ್ಯಕ್ಷ ಗಾದಿಗೆ 12ನೇ ವಾರ್ಡ್‌ ಕುಲುಮೆ ರಾಜು, 14ನೇ ವಾರ್ಡ್‌ ಎಚ್‌.ಬಿ.ಗೀತಾ, 1ನೇ ವಾರ್ಡ್‌ ಅಸೀಪ್‌ ಇಕ್ಬಾಲ್‌ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕಬ್ಬಣದ ಕಡಲೆಯಂತಾಗಿದ್ದು, ವರಿಷ್ಠರಿಗೂ ತಲೆಬಿಸಿ ಶುರುವಾಗಿದೆ.

ಅನುಭವಿ ರಾಜಕಾರಣಿ: ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಎಚ್‌.ಸಿ. ನರಸಿಂಹಮೂರ್ತಿ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಜೊತೆಗೆ ಅನುಭವಿ ರಾಜಕಾರಣಿಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್‌ ಪಕ್ಷದ ವರಿಷ್ಠರಾದ ಸಂಸದ ಆರ್‌.ಧƒವನಾರಾಯಣ್‌ ಬೆಂಬಲವೂ ಇದೆ. ಮತ್ತೂಬ್ಬ ಆಕಾಂಕ್ಷಿಯಾಗಿರುವ ಎಂ.ಮಧುಸೂದನ್‌ ಮೊದಲ ಬಾರಿ ಪುರಸಭೆಗೆ ಆಯ್ಕೆಯಾಗಿದ್ದಾರೆ. ಯುವ ಮುಖಂಡರಾಗಿರುವ ಇವರಿಗೆ ಅಧ್ಯಕ್ಷ ಗಾದಿ ನೀಡಬೇಕೆಂದು ಇತ್ತೀಚಿಗೆ ಕಾಂಗ್ರೆಸ್‌ ಪಾಳಯದಲ್ಲಿ ಪ್ರಬಲ ಮುಖಂಡ ಎನಿಸಿಕೊಂಡಿರುವ ವ್ಯಕ್ತಿಯೋರ್ವರು ಪಟ್ಟು ಹಿಡಿದಿದ್ದಾರೆ. ಸಂಸದ ಆರ್‌.ಧ್ರುವನಾರಾಯಣ್‌ ಹಾಗೂ ಕ್ಷೇತ್ರದ ಶಾಸಕ ಅನಿಲ್‌ ಚಿಕ್ಕಮಾದು ಜೊತೆ ಉತ್ತಮ ಒಡನಾಟ ಇದೆ.

ತೆರೆಮರೆ ಕಸರತ್ತು: ಇನ್ನು ಬೋವಿ ಸಮಾಜದಿಂದ ಆಯ್ಕೆಯಾಗಿರುವ 8ನೇ ವಾರ್ಡ್‌ ಸದಸ್ಯೆ ನಾಗಮ್ಮ ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬಂದವರಾಗಿದ್ದು, ಇವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರು ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಪುರಸಭೆ ನೂತನ ಅಧ್ಯಕ್ಷ ಗಾದಿ ಯಾರಿಗೆ ಒಲಿಯುವುದೋ ಎಂಬ ಕುತೂಹಲ ಮೂಡಿದೆ. 

ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಉಪಾಧ್ಯಕ್ಷಗಾದಿಗಾಗಿ 12ನೇ ವಾರ್ಡ್‌ ಕುಲುಮೆ ರಾಜು ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಮುಖಂಡ ಹಾಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡರ ಪತ್ನಿ 14ನೇ ವಾರ್ಡ್‌ ಸದಸ್ಯೆ ಎಚ್‌.ಬಿ.ಗೀತಾ  ಕೂಡ ಆಕಾಂಕ್ಷಿಯಾಗಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರ ನಡುವೆ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಜಾಜ್‌ ಪಾಷ ಪುತ್ರ 1ನೇ ವಾರ್ಡ್‌ನ ಸದಸ್ಯ ಅಸೀಪ್‌ ಇಕ್ಬಾಲ್‌  ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು,ಉಪಾಧ್ಯಕ್ಷರ ಆಯ್ಕೆಯೂ ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆ ಹಲವು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಸರ್ಕಾರ ನೂತನ ಮಿಸಲಾತಿ ಅನ್ವಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾಗೆ ಇನ್ನಿಲ್ಲದ ಪೈಪೋಟಿ ಕಂಡು ಬರುತ್ತಿದ್ದು, ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ ಯಾರಿಗೆ ಒಲಿಯಲಿದೆಯೋ ಕಾದು ನೋಡಬೇಕಿದೆ. 

ಕಾದು ನೋಡುವ ತಂತ್ರ:  ಇನ್ನು ಪುರಸಭೆ ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆದ್ದು ಎರಡನೇ ದೊಡ್ಡ ಪಕ್ಷವಾಗಿರುವ ಜೆಡಿಎಸ್‌ ಮುಖಂಡರು ಮತ್ತು ಸದಸ್ಯರು ಸೇರಿ ಇನ್ನಿತರ ಪಕ್ಷಗಳಿಂದ ಆಯ್ಕೆಯಾಗಿರುವ ಸದಸ್ಯರು ಹಾಗೂ ಪಕ್ಷೇತರ ಸದಸ್ಯರು ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗಾಗಿ ಕಾಂಗ್ರೆಸ್‌ ಪಕ್ಷದಲ್ಲಿ ತೀವ್ರ ಪೈಪೋಟಿ ಇರುವುದರಿಂದ ಉಂಟಾಗಬಹುದಾದ ಭಿನ್ನಮತದ ಲಾಭ ಪಡೆಯುವ ದಿಸೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.

Trending videos

Back to Top