CONNECT WITH US  

ದುರುದ್ದೇಶದಿಂದ ಹೋರಾಟಗಾರರ ಬಂಧನ

ಹುಣಸೂರು: ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಆಪಾದಿಸಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಎಲ್ಲಾ ತನಿಖಾ ಸಂಸ್ಥೆಗಳು ಆಯಾ ಸರಕಾರಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ  ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಸಾಮಾಜಿಕ ಹೋರಾಟಗಾರರನ್ನು ಬಂಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬುದ್ಧಿಜೀವಿಗಳ ವಿರುದ್ಧದ ಆರೋಪ ಸತ್ಯಕ್ಕೆ ದೂರವಾಗಿದ್ದು, ಏಕಪಕ್ಷೀಯ ಕ್ರಮವಾಗಿದೆ. ಇವುಗಳು ಲೋಕಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವುದು ದುರುದ್ದೇಶದಿಂದ ಕೂಡಿದೆ ಎಂದು ಕಿಡಿಕಾರಿದರು.

ಮಹಾತ್ಮಗಾಂಧಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪತ್ರಕರ್ತೆ ಗೌರಿಲಂಕೇಶ್‌, ಸಾಹಿತಿ ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್‌ ಮತ್ತಿತರ ವಿಚಾರವಾದಿಗಳನ್ನು ಹತ್ಯೆಗೈದಿರುವುದು ಕ್ರಿಮಿನಲ್‌ಗ‌ಳೇ ಹೊರತು ಬುದ್ಧಿ ಜೀವಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದು, ನೋಟು ನಿಷೇಧ ತೀರ್ಮಾನವು ಕೇಂದ್ರ ವಿತ್ತ ಸಚಿವರಿಗೂ ತಿಳಿದಿರಲಿಲ್ಲ. ಹಾಗೆಯೇ ಜಮ್ಮು-ಕಾಶ್ಮೀರದ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಬೆಂಬಲ ಹಿಂತೆಗೆದುಕೊಳ್ಳುವ ನಿರ್ಧಾರ ಕೂಡ ಕೇಂದ್ರ ಗƒಹಮಂತ್ರಿಗೆ ತಿಳಿದಿರಲಿಲ್ಲ. ಈ ಮೂಲಕ ಮೋದಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಸರ್ವಾಧಿಕಾರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.

ಡಾಲರ್‌ ಎದುರು ರೂಪಾಯಿ ಮೌಲ್ಯ ದಿನೇ ದಿನೆ ಕುಸಿಯುತ್ತಿದೆ. ಪೆಟ್ರೋಲ್‌, ಡೀಸೆಲ್‌ ಮತ್ತಿತರ ಅಗತ್ಯ ವಸ್ತುಗಳ ಬೆಲೆ  ಗಗನಕ್ಕೇರುತ್ತಿದೆ. ಒಳ್ಳೆಯ ದಿನಗಳು ಬರಲಿವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಬಿಜೆಪಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಹರಳಹಳ್ಳಿ ಮಹದೇವೇಗೌಡ ಮತ್ತಿತರರಿದ್ದರು.

Trending videos

Back to Top