CONNECT WITH US  

ಐದು ದಿನ ತುಂತುರು ಮಳೆ

ಮೈಸೂರು: ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಮೋಡ ಕವಿದ ವಾತಾವರಣವಿದ್ದು, ತುಂತುರುನಿಂದ ಕೂಡಿದ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೆ.8ರಿಂದ 12ರವರೆಗೆ ಗರಿಷ್ಠ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ.70ರವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇ.47 ರಿಂದ 53 ಮತ್ತು ಗಾಳಿಯು ಗಂಟೆಗೆ ಸರಾಸರಿ 2 ರಿಂದ 3 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

ರೈತರಿಗೆ ಸಲಹೆ: ನಾಟಿ ಮಾಡಿದ 75 ದಿನದಲ್ಲಿ ಶೇ.30 ರಷ್ಟು ಸಾರಜನಕ ಒದಗಿಸುವ ರಸಗೊಬ್ಬರವನ್ನು ಕೊಡಬೇಕು. ಅಂತರ ಬೇಸಾಯ ಮಾಡುವ ಸಂದರ್ಭದಲ್ಲಿ ರಸಗೊಬ್ಬರವನ್ನು ನೇಗಿಲ ಸಾಲಿನಲ್ಲಿ ಪೈರಿನ ಎರಡು ಬದಿಯಲ್ಲಿ ಕೊಡುವುದರಿಂದ ರಸಗೊಬ್ಬರಗಳ ಸರ್ಮಪಕ ಬಳಕೆ ಸಾಧ್ಯ.

ಇದು ಸಾಧ್ಯವಾಗದಿದ್ದಲ್ಲಿ ಪೈರಿನ ಸುತ್ತಲೂ 4 ರಿಂದ 5 ಅಂಗುಲ ಆಳದ ಗುಳಿಗಳನ್ನು ಮಾಡಿ ಅದರಲ್ಲಿ ರಸ ಗೊಬ್ಬರಗಳನ್ನು ಕೊಡಬಹುದು. ಭತ್ತದ ಬೆಳೆಯಲ್ಲಿ ಎರಡೂವರೆ ಯಿಂದ ಮೂರು ವಾರಗಳ ಅವಧಿಯಲ್ಲಿರುವ ಬೆಳೆಗೆ ಎಕರೆಗೆ 10 ಕೆ.ಜಿ ಸಾರಜನಕ ಒದಗಿಸುವ ಮೇಲು ಗೊಬ್ಬರಗಳನ್ನು ಕೊಡಬೇಕು. ಮೇಲುಗೊಬ್ಬರ ಕೊಡುವ 24 ಗಂಟೆಗಳಿಗೆ ಮುಂಚೆ ಗದ್ದೆಯಲ್ಲಿರುವ ನೀರನ್ನು ಬಸಿದು ಹೊರತೆಗೆಯಬೇಕು ಮತ್ತು ಮೇಲುಗೊಬ್ಬರ ಕೊಟ್ಟ 24 ಗಂಟೆಗಳ ನಂತರ ಮತ್ತೆ ನೀರು ಕೊಡುವುದು ಗೊಬ್ಬರದ ಪರಿಣಾಮಕಾರಿಯಾದ ಬಳಕೆಯ ದೃಷ್ಟಿಯಿಂದ ಸೂಕ್ತ.

ರೈತರು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ಮತ್ತು ಕಾಂಪೋಸ್ಟ್‌ ಗೊಬ್ಬರದ ಪ್ರಮಾಣವನ್ನು ನಿರ್ಧರಿಸಿ ಉಪಯೋಗಿಸಬೇಕು ಎಂದು ನಾಗನಹಳ್ಳಿ ಗ್ರಾಮೀಣ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಪಿ.ಪ್ರಕಾಶ್‌ ತಿಳಿಸಿದ್ದಾರೆ.

Trending videos

Back to Top