CONNECT WITH US  

ತೇಜಸ್ವಿ ಬರೆದಂತೆ ಬದುಕಿ, ಬದುಕಿದಂತೆ ಬರೆದವರು

ಮೈಸೂರು: ತಮ್ಮ ಉದಾತ್ತ ಚಿಂತನೆ, ಪ್ರಗತಿಪರ ಧೋರಣೆ, ವೈಜ್ಞಾನಿಕ ಬರವಣಿಗೆ, ಸೃಜನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕವನ್ನು ಪೂರ್ಣಚಂದ್ರನಂತೆ ಬೆಳಗಿದ ಸಾಹಿತಿ ಕೆ.ಪಿ.ಪೂರ್ಣ ಚಂದ್ರತೇಜಸ್ವಿ ಅವರು ತಂದೆಗೆ ತಕ್ಕ ಮಗ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ನಗರದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಜಂಟಿಯಾಗಿ ಏರ್ಪಡಿಸಿದ್ದ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಪುತ್ರರಾದ ಪೂರ್ಣಚಂದ್ರತೇಜಸ್ವಿ ಅವರು ಗುರುವನ್ನು ಮೀರಿಸಿದ ಶ್ರೇಷ್ಠ ಶಿಷ್ಯನಂತೆ, ತಂದೆಯನ್ನು ಮೀರಿಸಿದ ಸುಪುತ್ರನಂತೆ ಸಾರಸ್ವತ ಲೋಕದಲ್ಲಿ ಸಾಧನೆಗೈದ ಸವ್ಯಸಾಚಿ. ಮಹಾ ಕವಿ ಎಂದು ಜಗದ್ವಿಖ್ಯಾತರಾಗಿದ್ದ ತಂದೆ ಕುವೆಂಪು ಅವರ ಪ್ರಭಾವಲಯದಿಂದ ಹೊರಬಂದು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದಂತಹ ಹೆದ್ದಾರಿಯನ್ನು ನಿರ್ಮಿಸಿಕೊಂಡು ಅಲ್ಲಿ ವಿಶಿಷ್ಟ ಛಾಪು ಮೂಡಿಸಿದ ದೈತ್ಯ ಪ್ರತಿಭೆ ತೇಜಸ್ವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೇಜಸ್ವಿಯವರು ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಇವರು ಬರೀ ಸಾಹಿತಿಯಷ್ಟೇ ಆಗಿರಲಿಲ್ಲ. ಸಮಾಜಮುಖೀ ವ್ಯಕ್ತಿತ್ವದಲ್ಲರಳಿದ ಬಹುಮುಖ ಸಂಪನ್ನರಾಗಿದ್ದ ಇವರು ಅದ್ಭುತ ಘೋಟೋಗ್ರಾಫ‌ರ್‌, ಅಸಾಧಾರಣ ವನ್ಯಜೀವಿ ಛಾಯಾಗ್ರಾಹಕ, ಅಪ್ರತಿಮ ಸಹಜ ಕೃಷಿಕ, ಅನನ್ಯ ಚಿತ್ರಕಲಾವಿದ, ಅಸಾಮಾನ್ಯ ಬೇಟೆಗಾರ, ಅಪೂರ್ವ ಸಂಗೀತಗಾರ, ಹೋರಾಟಗಾರ, ಕನ್ನಡ ಸಾಫ್ಟ್ವೇರ್‌ ಅಭಿವೃದ್ಧಿಗಾರ,

ಅರಣ್ಯಸುತ್ತುವ ಸಾಹಸಿಗ, ಪರಿಸರ ಸಂರಕ್ಷಕ ಹೀಗೆ ಸರ್ವತೋಮುಖವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ತೇಜಸ್ವಿಯವರು ನಿಸರ್ಗದಲ್ಲೇ ಸ್ವರ್ಗ ಕಾಣುತ್ತಾ, ಜನಾರಣ್ಯದಿಂದ ದೂರವಿದ್ದು ಮಲೆನಾಡಿನ ಕಾಡಿನಲ್ಲಿ ಸಂತನಂತೆ ಬದುಕಿ, ಸಾಧನೆಯ ಶಿಖರವೇರಿ ಎಲ್ಲರಿಗೂ ಮಾದರಿಯಾದವರು ಎಂದು ಬಣ್ಣಿಸಿದರು. ರಂಗಕರ್ಮಿ ಹರೀಶ್‌ ಅವರು ಪೂರ್ಣ ಚಂದ್ರ ತೇಜಸ್ವಿ ಬದುಕು, ಬರಹ, ಸಾಧನೆ, ಸಿದ್ಧಿ ಕುರಿತಂತೆ ಉಪನ್ಯಾಸ ನೀಡಿದರು.

ಇದೇ ವೇಳೆ ಪ್ರಸ್ತುತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ತೇಜಸ್ವಿ ನೆನಪಿನಲ್ಲಿ ಚಿಂತಕ ವೆಂಕಟನಾರಾಯಣ ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೆ.ಕೆಂಪರಾಜ್‌ ಅಧ್ಯಕ್ಷತೆ ವಹಿಸಿದ್ದರು, ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್‌.ಕೆ. ಕಾವೇರಿಯಮ್ಮ, ಲಯನ್ಸ್‌ ಕ್ಲಬ್‌ನ ಮೋಹನ್‌, ಸಹಾಯಕ ಶಿಕ್ಷಣಾಧಿಕಾರಿ ಚಂದ್ರಶೇಖರ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು ಇತರರು ಉಪಸ್ಥಿತರಿದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top