CONNECT WITH US  

ಅಧಿಕಾರಿಗಳನ್ನು ಕರೆಸಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವೆ

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ, ಶಾಸಕ ಎಚ್‌.ವಿಶ್ವನಾಥ್‌ ಭರವಸೆ ನೀಡಿದರು. ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರು ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. 

ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದ ಕಾರಣ ಸಮ್ಮಿಶ್ರ ಸರ್ಕಾರ ಪ್ರಕ್ರಿಯೆ ಹಾಗೂ ತಾವು ರಾಜ್ಯಾಧ್ಯಕ್ಷರಾದ ನಂತರ ಕಾರ್ಯದ ಒತ್ತಡದಿಂದ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದು ತಡವಾಗಿದೆ. ಆದ್ಯತೆ ಮೇರೆಗೆ ಗ್ರಾಮದ ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತೇನೆ ಎಂದು ತಿಳಿಸಿದರು.

ಗ್ರಾಮದಲ್ಲಿ ನಿವೇಶನ, ಕಾಲೇಜು ಸ್ಥಾಪನೆ ಮತ್ತಿತರ ಸೌಲಭ್ಯಗಳ‌ ಬಗ್ಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು  ಗ್ರಾಮಕ್ಕೆ ಕರೆಯಿಸಿ, ಕಾಲೇಜು, ಸಮುದಾಯ ಭವನ ಮತ್ತಿತರ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ಅಗತ್ಯ ಕಾಮಗಾರಿಗಳ ಬಗ್ಗೆ ಪರಾಮರ್ಶಿಸಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಗಾವಡಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪರಾವ್‌ ಕಾಳಿಂಗೆ, ತಾಪಂ ಸದಸ್ಯೆ ಪುಟ್ಟಮ್ಮ, ಮುಖಂಡರಾದ ನಿಂಗರಾಜ್‌ ಮಲ್ಲಾಡಿ, ಅಂಜನೇಯ, ಪುಟ್ಟರಾಜು, ದೇವೇಂದ್ರ, ಕೃಷ್ಣಶಟ್ಟಿ, ಕೇಶವಮೂರ್ತಿ, ರಾಮಮೂರ್ತಿ, ಅಂಕಯ್ಯ, ಕೃಷ್ಣೇಗೌಡ, ಅಣ್ಣಯ್ಯನಾಯ್ಕ ಇತರರು ಉಪಸ್ಥಿತರಿದ್ದರು.


Trending videos

Back to Top