CONNECT WITH US  

ಮರಕ್ಕೆ ಸೇನಾ ವಿಮಾನ ಢಿಕ್ಕಿ: 10 ಸಿಬಂದಿ ಸಾವು

ಹೊಸದಿಲ್ಲಿ: ಬಿಎಸ್‌ ಎಫ್ ಗೆ ಸೇರಿದ ಲಘು ವಿಮಾನವೊಂದು ಹಾರಾಟ ಕೈಗೊಂಡ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದಾಗಿ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿದೆ. ಮಂಗಳವಾರ ಬೆಳಗ್ಗೆ ಸಂಭವಿಸಿದ ಈ ದುರ್ಘ‌ಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 10 ಮಂದಿ ಸಿಬಂದಿ ಸಜೀವ ದಹನವಾಗಿದ್ದಾರೆ.

ಝಾರ್ಖಂಡ್‌ನ‌ ರಾಂಚಿಯಲ್ಲಿ ಕೆಟ್ಟು ನಿಂತಿದ್ದ ಕಾಪ್ಟರ್‌ ಒಂದನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಅರೆಸೇನಾ ಪಡೆಯ ತಾಂತ್ರಿಕ ಸಿಬಂದಿಯನ್ನು ಹೊತ್ತ ಬಿಎಸ್‌ಎಫ್ ನ ಬೀಚ್‌ಕ್ರಾಫ್ಟ್ ವಿಮಾನ ಬೆಳಗ್ಗೆ  9.37ಕ್ಕೆ ಇಲ್ಲಿನ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿತ್ತು. ಆದರೆ  ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಅದು ನಿಲ್ದಾಣದತ್ತ ಮರಳುವ ಯತ್ನ ಮಾಡಿದೆ. 

ಈ ವೇಳೆ ಅದು ಮರವೊಂದಕ್ಕೆ ಢಿಕ್ಕಿ ಹೊಡೆದು, ವಿಮಾನ ನಿಲ್ದಾಣದ ಹೊರಗೋಡೆಯ ಮೇಲೆ ಅಪ್ಪಳಿಸಿ, ನೀರು ಶುದ್ಧೀಕರಣ ಘಟಕದ ಮೇಲೆ ಬಿದ್ದಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ತತ್‌ಕ್ಷಣವೇ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಅಗ್ನಿಜ್ವಾಲೆ ಚಿಮ್ಮಿದೆ. ಬೆಂಕಿಯ ಕೆನ್ನಾಲಿಗೆಗೆ ಲಘು ವಿಮಾನದಲ್ಲಿದ್ದ ಮೂವರು ಪೈಲಟ್‌ಗಳು ಸೇರಿ 10 ಜನ ಸುಟ್ಟು ಕರಕಲಾಗಿ ಹೋಗಿದ್ದಾರೆ.

ವಿಮಾನದಲ್ಲಿದ್ದ ಸಿಬಂದಿ ಸುಟ್ಟು ಕರಕಲಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಸಿಬಂದಿಗಳ ಕುಟುಂಬ ಸದಸ್ಯರಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಎಸ್‌ಎಫ್ ಪ್ರಧಾನ ನಿರ್ದೇಶಕ ಡಿ.ಕೆ. ಪಾಠಕ್‌ ಪ್ರಕಟಿಸಿದ್ದಾರೆ. ಪ್ರಕರಣದ ಕುರಿತು ತನಿಖೆಗೆ ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿದೆ.

ಮೋದಿ ಸಂತಾಪ
ಇದೇ ವೇಳೆ, ಬಿಎಸ್‌ಎಫ್ ವಿಮಾನ ದುರಂತದಲ್ಲಿ 10 ಮಂದಿ ಸಾವನ್ನಪ್ಪಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ದಿಲ್ಲಿ ಸಿಎಂ ಕೇಜ್ರಿವಾಲ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

Trending videos

Back to Top